ಸೋನ ಪಾಪಡಿ
ಮಕ್ಕಳ ಪದ್ಯಗಳು
ಶ್ರೀ ರಾಜಶೇಖರ ಕುಕ್ಕುಂದಾ ಅವರು ಬರೆದಿರುವ ಸೋನ ಪಾಪಡಿ ಕೃತಿ ಮಕ್ಕಳ ಪದ್ಯಗಳ ಸಂಕಲನವಾಗಿದೆ. ರಾಜಶೇಖರ ಕುಕ್ಕುಂದಾ ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲಕ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕುಕ್ಕುಂದ ಗ್ರಾಮದವರು. ಪ್ರಸ್ತುತ ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿದ್ದಾರೆ. ಈಗಾಗಲೇ ಮಕ್ಕಳ ಸಾಹಿತ್ಯದಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ಮಕ್ಕಳ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರವಾಗಿದೆ.
ಚೆಲುವ ಚಂದಿರ, ಗೋಲಗುಮ್ಮಟ, ಪುಟಾಣಿ ಪ್ರಾಸಗಳು ಇವರ ಪ್ರಕಟಿತ ಮಕ್ಕಳ ಕವಿತ ಸಂಕಲನಗಳಾಗಿವೆ. ಪ್ರಸ್ತುತ ಸೋನ ಪಾಪಡಿ ಮಕ್ಕಳ ಕವನ ಸಂಕಲನ ಕನ್ನಡ ನಾಡು ಪ್ರಕಾಶನ ಕಲಬುರ್ಗಿಯಿಂದ ಪ್ರಕಟವಾಗಿದೆ. 2021 ರಲ್ಲಿ ಪ್ರಕಟವಾದ ಈ ಕೃತಿ 52 ಪುಟಗಳನ್ನು ಹೊಂದಿದೆ.75ರೂಪಾಯಿ ಬೆಲೆ ಇದೆ. ಅಂದವಾಗಿ ಕೃತಿ ಮುದ್ರಣವಾಗಿದೆ.
ಪ್ರಸ್ತುತ ಕವಿತೆ ಸಂಕಲನದಲ್ಲಿ 25 ಮಕ್ಕಳ ಹಾಡುಗಳು ಇವೆ. ವಿದ್ಯಾರ್ಥಿಗಳು ಸುಶ್ರಾವ್ಯ ವಾಗಿ ಹಾಡಲು ಬರುವ ರೀತಿಯಲ್ಲಿ ಕವಿತೆಗಳು ಇವೆ.
ಪೆಟ್ರೋಲ್ ಕುಡಿಯುವುದಿಲ್ಲ
ಹೊಗೆ ಉಗುಳೋವುದಿಲ್ಲ
ಪೋಲಿಸ್ ಹಿಡಿಯೋದಿಲ್ಲ
ಲೈಸನ್ಸ್ ಕೇಳುವುದಿಲ್ಲ
ಪ್ರಸ್ತುತ ಈ ಕವಿತೆಯಲ್ಲಿ ಪರಿಸರ ಸ್ನೇಹಿಯಾದ ವಾಹನ ವಿದ್ಯಾರ್ಥಿಗಳ ಪ್ರೀತಿಯ ಸೈಕಲ್ ಕುರಿತಾದ ಕವಿತೆ ಇದೆ. ಸರಳ ವಾದಂತಹ ಕೈಗೆಟಕುವ ಬೆಲೆಯನ್ನು ಹೊಂದಿರುವ ಸೈಕಲ್ ವಿದ್ಯಾರ್ಥಿಗಳಿಗೆ ತುಂಬಾ ಪ್ರಿಯವಾದದ್ದು. ಯಾವುದೇ ಪೆಟ್ರೋಲ್ ಬೇಕಿಲ್ಲ, ದುಬಾರಿ ವೆಚ್ಚವಿಲ್ಲ, ಪರಿಸರ ಮಾಲಿನ್ಯವನ್ನು ಮಾಡುವುದಿಲ್ಲ ಹೊಗೆ ಉಗುಳುವುದಿಲ್ಲ ಇದು ನನ್ನ ಸೈಕಲ್ ಎಂದು ಕವಿ ಹೇಳುವ ಮೂಲಕ ಸೈಕಲನ ವರ್ಣನೆ ಮಾಡುವುದರ ಜೊತೆಗೆ ಮಕ್ಕಳಿಗೆ ಪರಿಸರ ಪ್ರೇಮವನ್ನು ಹಾಗೂ ಪರಿಸರ ಮಾಲಿನ್ಯವನ್ನು ತಡೆಯುವ ವಿಷಯವನ್ನು ಪ್ರಸ್ತುತ ಕವಿತೆಯಲ್ಲಿ ತಿಳಿಸುವ ಕಾರ್ಯ ಮಾಡಿದ್ದಾರೆ.
ಯಾಕೋ ನಮ್ಗೆ
ಹೀಗನಿಸುತ್ತೆ
ಸ್ಕೂಲೇ ಇಬಾ೯ದು೯
ಸ್ಕೂಲ್ ಇದ್ರೂನು
ತಲೆನೋವಂತ
ಮಿಸ್ಸೇ ಬರಬಾರದ೯!
ಈ ಕವಿತೆಯಲ್ಲಿ ಹಿಂದಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಸಂತೋಷದ ಕ್ಷಣಗಳನ್ನು ಇಂದಿನ ಕಾಲದ ಮಕ್ಕಳು ಕಳೆದುಕೊಂಡಿದ್ದಾರೆ. ಅಧಿಕವಾದ ಮನೆ ಕೆಲಸಗಳು, ಸದಾ ಓದುವುದು, ಬರೆಯುವುದು, ನಿದ್ದೆ ಬಂದರು ಮಲಗಲು ಬಿಡದ ಪಾಲಕರು. ಸ್ಕೂಲ್ ಬ್ಯಾಗ್ ಮತ್ತು ಒತ್ತು ನಮ್ಮ ಬೆನ್ನು ಒಂಟಿ ಡುಬ್ಬ ಆಗಿದೆ. ಅಯ್ಯೋ ದೇವರೇ ಹೇಗಾದರೂ ಮಾಡಿ ನಮ್ಮನ್ನು ಪರೀಕ್ಷೆಯಲ್ಲಿ ಪಾಸ್ ಮಾಡು ಎಂದು ಬೇಡಿಕೊಳ್ಳುವ ಮಗು ಈ ಎಲ್ಲ ಅಂಶಗಳು ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಪ್ರಿಯವಾಗಿಲ್ಲ. ಮಕ್ಕಳಿಗೆ ಪ್ರಿಯವಾಗಿರುವಂತಹ ಶಿಕ್ಷಣ ವ್ಯವಸ್ಥೆ ಬರಬೇಕು ಎಂದು ಕವಿ ಈ ಕವಿತೆಯಲ್ಲಿ ಮಗುವಿನ ಆಶಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.
ನಂಗೊಂಚೂರು
ನಂಗೊಂಚೂರು
ಅಡಿಕೆ ಕೊಡೆಯ ಅಜ್ಜಿ
ಪಟಕ್ ಅಂತ
ಡಬ್ಬಿ ತೆಗೆದು
ಮುಚ್ಚೇ ಬಿಟ್ಳು ಜಜ್ಜಿ!!
ಮಕ್ಕಳಿಗೆ ಅಜ್ಜಿ ಎಂದರೆ ತುಂಬಾ ಇಷ್ಟ. ಮಕ್ಕಳಿಗೆ ಗೆಳತಿಯಾಗಿ ಸ್ನೇಹಿತೆ ಯಾಗಿ ಅಜ್ಜಿ ತುಂಬಾ ಪ್ರೀತಿಯ ವ್ಯಕ್ತಿಯಾಗಿರುತ್ತಾಳೆ. ಅಜ್ಜಿಯೊಂದಿಗೆ ಮೊಮ್ಮಕ್ಕಳು ಕೀಟಲೆ ಮಾಡುತ್ತಾ ಕಾಡಿಸುತ್ತಿರುತ್ತಾರೆ. ಅಜ್ಜಿ ಮೊಮ್ಮಗ ಕವಿತೆಯಲ್ಲಿ ಅಂತಹ ಒಂದು ಕೀಟಲೆ ಪ್ರಸಂಗವನ್ನು ವಿವರಿಸಿದ್ದಾರೆ.
ಅಜ್ಜಿ ಅಜ್ಜಿ ನನಗೆ ಅಡಿಕೆ ಕೊಡೆ ಎಂದು ಮಗು ಕೇಳಿದರೆ ಅಜ್ಜಿ ಅದನ್ನು ಜಜ್ಜಿ ಡಬ್ಬಿ ಒಳಗೆ ಹಾಕಿಬಿಡುತ್ತಾಳೆ. ಅಜ್ಜಿ ಅಜ್ಜಿ ನನಗೆ ಚಾಕ್ಲೇಟ್ ಕೊಡೆ ಅಂತ ಕೇಳಿದಾಗಲೂ ಅಜ್ಜಿ ಅದನ್ನು ಪಟ್ಟಂತ ಬಾವಿ ಒಳಗೆ ಹಾಕಿಕೊಂಡಳು. ಅಜ್ಜಿ ಮತ್ತು ಮೊಮ್ಮಗನ ಪ್ರೀತಿ ತುಂಬಿದ ಕ್ಷಣಗಳನ್ನು ಕವಿತೆಯಲ್ಲಿ ಹಿಡಿದು ಕಾರ್ಯವನ್ನು ಕವಿ ಮಾಡಿದ್ದಾರೆ.
ಗುಬ್ಬೀ ಗುಬ್ಬೀ
ನೀನು ಎಲ್ಲಿದ್ದಿ?
ನಿಂದ್ಯಾವೂರು
ಏನೇನು ಸುದ್ದಿ??
ಗುಬ್ಬೀ ಗುಬ್ಬೀ ಮಕ್ಕಳ ಕವಿತೆಯಲ್ಲಿ ಇಂದು ಕಣ್ಮರೆಯಾಗುತ್ತಿರುವ ಗುಬ್ಬಿಗಳ ಕುರಿತಾದ ಕವಿತೆಯಲ್ಲಿ ಗುಬ್ಬಿಗಳ ವರ್ಣನೆ ಇದೆ. ಅಂದು ಮಕ್ಕಳು ಗುಬ್ಬಿಗಳನ್ನು ನೋಡುತ್ತಾ ಊಟ ಮಾಡುತ್ತಿದ್ದರು. ಆದರೆ ಇಂದು ಗುಬ್ಬಿಗಳೇ ಕಾಣಿಸುವುದಿಲ್ಲ. ಆಧುನಿಕತೆಯ ಕೈಗಾರಿಕರಣದ ಪ್ರಭಾವದಿಂದ ಗುಬ್ಬಿಗಳು ಮರೆಯಾಗುತ್ತಿವೆ.
ಗುಬ್ಬಿಯೊಂದಿಗೆ ಮಗು ಮಾತನಾಡುವ ಸನ್ನಿವೇಶವನ್ನು ಧಾರ್ಮಿಕವಾಗಿ ಈ ಕವಿತೆಯಲ್ಲಿ ಸೃಷ್ಟಿ ಮಾಡಿದ್ದಾರೆ. ನಿನಗೆ ಹೇಳುವರಿಲ್ಲ ಕೇಳುವವರಿಲ್ಲ ನಿನ್ನದೇ ರಾಜ್ಯ. ನೀನು ಓದುವುದಿಲ್ಲ ಬರೆಯುವುದಿಲ್ಲ ಶಾಲೆಗಂತೂ ಹೋಗೋದಿಲ್ಲ. ದೇವರೇ ನನ್ನನ್ನು ಮುಂದಿನ ಜನ್ಮದಲ್ಲಿ ಗುಬ್ಬಿಯನ್ನಾಗಿ ಮಾಡು ಎಂದು ದೇವರಲ್ಲಿ ಕೇಳಿಕೊಳ್ಳುವ ಮೂಲಕ ಮಗು ಸ್ವಾತಂತ್ರವನ್ನು ಆಶಿಸುತ್ತದೆ.
ಬೆಕ್ಕಿನ ಮರಿ ಬಂತು
ಇಲಿ ಮರಿ ತಿಂತು
ದೇವರ ಮನೆ ಜಗಲಿ ಮೇಲೆ
ಕಣ್ಮುಚ್ಚಿ ಕುಂತು!!
ಈ ಹಾಡಿನಲ್ಲಿ ಬೆಕ್ಕಿನ ಕುರಿತಾದ ವರ್ಣನೆ ಇದೆ. ಮಕ್ಕಳಿಗೆ ಬೆಕ್ಕು ಹಾಗೂ ನಾಯಿಗಳೆಂದರೆ ತುಂಬಾ ಇಷ್ಟ. ಬೆಕ್ಕು ತುಂಟತನಕ್ಕೆ ಹೆಸರುವಾಸಿ. ತಪಸ್ಸಿನ ತರ ಕಾದು ಕುಳಿತು ಇಲಿಮರಿಯನ್ನು ತಿನ್ನುವ ಬೆಕ್ಕು ಅದು ಅದರ ಸಾಧನೆ.
ಮನೆಯಲ್ಲಿರುವ ಹಾಲನ್ನು ಕುಡಿದು ಮೊಸರನ್ನು ತಿಂದು ಏನು ತಿಂದಿಲ್ಲ ಎನ್ನುವಂತೆ, ಸುಮ್ಮನೆ ಕುಳಿತು ಬಿಡುವುದು ಬೆಕ್ಕಿನ ಗುಣ. ಈ ಶಿಶು ಪ್ರಾಸದಲ್ಲಿ ಬೆಕ್ಕಿನ ಸ್ವಭಾವದ ವರ್ಣನೆ ಇದೆ.
ಒಟ್ಟಾರೆ ಈ ಸಂಕಲನದಲ್ಲಿ ಮಕ್ಕಳ ಮನಸ್ಸಿಗೆ ಮುಟ್ಟುವಂಥ ಹಲವಾರು ಕವಿತೆಗಳನ್ನು ,ಶಿಶು ಪ್ರಾಸಗಳನ್ನು ರಾಜಶೇಖರ ಕುಕ್ಕುಂದಾ ಅವರು ರಚಿಸಿದ್ದಾರೆ. ಮಕ್ಕಳ ಸಾಹಿತ್ಯ ಲೋಕಕ್ಕೆ ಇಂತಹ ಹಲವಾರು ಕೃತಿಗಳು ಶ್ರೀಯುತರಿಂದ ರಚಿತವಾಗಬೇಕು.
ಶಂಕರ ದೇವರು ಹಿರೇಮಠ
ಸಾಹಿತಿಗಳು ಸಿಂಧನೂರು
9886002383