ಉತ್ತರ ಕರ್ನಾಟಕ ತನ್ನದೇ ಆದ ಆಚರಣೆ ಸಂಸ್ಕೃತಿಯಿಂದ ಕರ್ನಾಟಕದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ಭಾವೈಕ್ಯತೆಯ ಸಾರವನ್ನು ಸಾರುವ ಮೋಹರಂ ಆಚರಣೆ ವಿಶಿಷ್ಟವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಗೌರಿ ಹುಣ್ಣಿಮೆಯ ಆಚರಣೆಯು ಹಲವಾರು ವಿಶಿಷ್ಟವಾದ ವಿಶೇಷತೆಗಳನ್ನು ಹೊಂದಿದೆ. ಗೌರಿ ಹುಣ್ಣಿಮೆಯ ದಿನ ಸಕ್ಕರೆ ಆರತಿಗಳನ್ನು ಬೆಳಗುವುದು ಯುವತಿಯರಿಗೆ ಹಾಗೂ ಮಹಿಳೆಯರಿಗೆ ಸಂಭ್ರಮದ ಕ್ಷಣ
ಮದುವೆಯಾಗಿ ತವರು ಮನೆಗೆ ಬಂದ ಗೌರಿಯನ್ನು ಅಲಂಕಾರ ಮಾಡಿ ಮಹದೇವನ ವಾಸವಾದ ಗಂಡನ ಮನೆ ಕೈಲಾಸಕ್ಕೆ ಕಳುಹಿಸಿ ಕೊಡುವ ಪೌರಾಣಿಕ ಹಿನ್ನೆಲೆ ಕಥೆಯನ್ನು ಒಳಗೊಂಡ ಗೌರಿ ಹುಣ್ಣಿಮೆ ವಿಶೇಷವಾಗಿದೆ. ಈಗಲೂ ಗ್ರಾಮೀಣ ಭಾಗದಲ್ಲಿ ಹಾಗೂ ನಗರ ಪ್ರದೇಶದಲ್ಲಿ ಗೌರಮ್ಮನನ್ನು ಕೂರಿಸಿ 5 ದಿನಗಳ ಕಾಲ ರಾತ್ರಿಯ ಸಮಯದಲ್ಲಿ ಆರತಿ ಬೆಳಗಿ ಗೌರಿಯ ಕುರಿತಾದ ಹಾಡುಗಳನ್ನು ಹಾಡುವ ಮೂಲಕ ಗೌರಿ ಹಾಗೂ ಶಿವನನ್ನು ಸ್ತುತಿಸುವ ಕಾರ್ಯ ನಡೆಯುತ್ತಿದೆ.
ಈಗ ನಗರ ಪ್ರದೇಶಗಳಲ್ಲಿ ಗೌರಿ ಹುಣ್ಣಿಮೆ ಕೇವಲ ಆರತಿ ಬೆಳಗಲು ಮಾತ್ರ ಸೀಮಿತವಾಗಿದೆ. ಆದರೂ ಸಕ್ಕರೆ ಆರತಿಯನ್ನು ತಟ್ಟೆಯಲ್ಲಿಟ್ಟುಕೊಂಡು ಆರತಿ ಬೆಳಗಳಲು ಹೋಗುವುದು ಯುವತಿಯರಿಗೆ ಹಾಗೂ ಮಹಿಳೆಯರಿಗೆ ಸಂಭ್ರಮವೋ ಸಂಭ್ರಮ.
ಗೌರಿ ಹುಣ್ಣಿಮೆಯು ಐದು ದಿನಗಳ ಹಬ್ಬವಾಗಿದೆ. ಗೌರಮ್ಮನನ್ನು ಪ್ರತಿಷ್ಠಾಪನೆ ಮಾಡಿ ಗೌರಿಯನ್ನು ಪೂಜಿಸಿ ಗೌರಿಯ ಕುರಿತಾಗಿ ಹಾಡುಗಳನ್ನು ಹಾಡಿ ಸಕ್ಕರೆಯಿಂದ ಮಾಡಿದ ಗೊಂಬೆಗಳನ್ನು ತಟ್ಟೆಯಲ್ಲಿಟ್ಟು ಆರತಿ ಮಾಡುವರು. ಆನೆ, ಕುದುರೆ, ತಟ್ಟೆ ,ತೇರು,ರಾಜ,ಸೈನಿಕರು, ಗೋಪುರ ಮುಂತಾದ ಚಿತ್ರಗಳನ್ನು ಆರತಿ ರೂಪದಲ್ಲಿ ನಾವು ಕಾಣಬಹುದು. ವಿವಿಧ ಬಣ್ಣಗಳಲ್ಲಿ ಸಕ್ಕರೆ ಆರತಿಗಳು ಮಾರುಕಟ್ಟೆಯಲ್ಲಿ ಈಗ ಲಭ್ಯ.
ತವರು ಮನೆಯಿಂದ ತಂದೆ ಅಥವಾ ಸಹೋದರರು ಬಂದು ಸಕ್ಕರೆ ಆರತಿ ಹಾಗೂ ಹಣ್ಣುಗಳನ್ನು ಕೊಟ್ಟು ಹೋಗುವುದು ವಾಡಿಕೆ. ತವರು ಮನೆಯಿಂದ ಆರತಿ ಬರುವುದನ್ನು ಮಹಿಳೆಯರು ಆಸೆಗಣ್ಣಿನಿಂದ ಕಾಯುತ್ತಿರುತ್ತಾರೆ. ಈ ಕಾರಣದಿಂದ ತಮ್ಮ ತಂದೆ ಅಥವಾ ಸಹೋದರರನ್ನು ಭೇಟಿ ಆಗಬಹುದು ಎಂಬುವುದು ಸಹ ಒಂದು ಕಾರಣವಾಗಿದೆ.
ಗೌರಿ ಹುಣ್ಣಿಮೆಯ ಮೊದಲ ದಿನ ಹಾಗೂ ಕೊನೆಯ ದಿನದಂದು ಹೂರಣದ ಹೋಳಿಗೆಯನ್ನು ನೈವೇದ್ಯ ಮಾಡಿ ಹೂರಣದ ದೀಪಗಳನ್ನು ಬೆಳಗುವರು. ನಡುವಿನ ದಿನಗಳಲ್ಲಿ ಬಾಳೆ ಹಣ್ಣು, ಸೇಬು, ಪೇರಲೆ ಹಣ್ಣುಗಳಿಂದ ದೀಪಗಳನ್ನು ಬೆಳಗುವರು. ಸಕ್ಕರೆ ಆರತಿಗಳನ್ನು ಚೆನ್ನಾಗಿ ,ಹೂರಣವಾಗಿ ಜೋಡಿಸಿಕೊಂಡು ಆರತಿ ಬೆಳಗಲು ಹೋಗುವ ಮಹಿಳೆಯರಿಗೆ ಸಂತೋಷ ಹಾಗೂ ಆನಂದ.
ಚಿಕ್ಕ ಮಕ್ಕಳು ,ಯುವತಿಯರು ಹಾಗೂ ಮಹಿಳೆಯರು ಇಂದಿನ ದಿನಗಳಲ್ಲಿ ಮರೆಯಾಗುತ್ತಿರುವ ಹಬ್ಬಗಳ ಸಾಲಿನಲ್ಲಿ ಗೌರಹುಣ್ಣಿಮೆಯನ್ನು ಸೇರಲು ಬಿಟ್ಟಿಲ್ಲ. ಸಕ್ಕರೆ ಆರತಿಗಳನ್ನು ಬೆಳಗುವ ಮೂಲಕ ಗೌರಿಹುಣ್ಣಿಮೆಯನ್ನು ಜೀವಂತವಾಗಿಟ್ಟಿದ್ದಾರೆ. ಮಹಿಳೆಯರ ಪಾಲಿಗೆ ಸಂಭ್ರಮದ ಹಬ್ಬ ಗೌರಿ ಹುಣ್ಣಿಮೆ.ಹಬ್ಬದ ಮೆರೆಗು ನೀಡುತ್ತಿರುವುದು ಮಾತ್ರ ಬಣ್ಣ ಬಣ್ಣದ ಸಕ್ಕರೆ ಆರತಿಗಳು.
ಶಂಕರ ದೇವರು ಹಿರೇಮಠ
ಸಾಹಿತಿಗಳು ಸಿಂಧನೂರು