ಹನೂರು : ತಾಲ್ಲೂಕಿನ ಪಿ.ಜಿ ಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ವೈದ್ಯಕೀಯ ಸೇವೆ ದೊರಕುತ್ತಿಲ್ಲ ಎಂದು ಆಗ್ರಹಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಇಂದು ಗ್ರಾಮಸ್ಥರ ಜತೆಗೂಡಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಪಿ.ಜಿ ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಜಮಾಯಿಸಿದ ಪಟ್ಟಣಕಾರರು ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಆರೋಗ್ಯ ಕೇಂದ್ರದಲ್ಲಿನ ವೈದ್ಯರು ಚಿಕಿತ್ಸೆ ನೀಡುವಲ್ಲಿ ತಾರತಮ್ಯ ಮಾಡುತ್ತಾರೆ. ಹಣ ಕೊಟ್ಟರೆ ಮಾತ್ರ ಇಲ್ಲಿ ಚಿಕಿತ್ಸೆ ಇಲ್ಲದಿದ್ದರೆ ಮುಟ್ಟಿಯೂ ನೋಡಲ್ಲ. ಮಾತೆತ್ತಿದರೆ ಆ ಸ್ಕ್ಯಾನಿಂಗ್, ಈ ಸ್ಕ್ಯಾನಿಂಗ್ ಅಂತಾ ಚೀಟಿ ಬರೆದು ಖಾಸಗಿ ಲ್ಯಾಬ್‍ಗಳಿಗೆ ಕಳಿಸುತ್ತಾರೆ.
ಇದುವರೆಗೂ ಯಾವ ರೋಗಿಯನ್ನು ಕನಿಷ್ಟ ಕುಳಿತುಕೊಳ್ಳಿ ಎಂದು ಹೇಳಿ ಪರೀಕ್ಷೆ ಮಾಡಿಲ್ಲ. ಕೂಡಲೇ ಇಲ್ಲಿನ ವೈದ್ಯರನ್ನು ಅಮಾನತ್ತು ಮಾಡಬೇಕು.ಸುತ್ತಮುತ್ತಲಿನ ಗ್ರಾಮದ ಬಡ ಜನರು ಈ ಆಸ್ಪತ್ರೆಯನ್ನೇ ನಂಬಿದ್ದಾರೆ. ರಾತ್ರಿ ವೇಳೆಯಲ್ಲಂತೂ ಯಾರು ನೋಡೋದಿಲ್ಲ. ಅಕಸ್ಮಾತ್ ಹೆರಿಗೆ ನೋವೆಂದು ಬಂದರೆ ಚಾಮರಾಜನಗರಕ್ಕೆ ಹೋಗಿ ಎನ್ನುತ್ತಾರೆ ಗರ್ಭಿಣಿ ಮಹಿಳೆಯರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದರು.
ಆರ್.ಟಿ.ಐ ಕಾರ್ಯಕರ್ತ ಅಪ್ಪಾಜಿ ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ಆಂಬುಲೆನ್ಸ್ ಇದೆ. ಆದರೆ ವರ್ಷದಿಂದಲೂ ಇದು ಚಾಲಕನಿಲ್ಲದೆ ಹಾಗೆಯೇ ನಿಂತಿದೆ. ಈ ಬಗ್ಗೆ ಈ ಭಾಗದ ಶಾಸಕರಾಗಲೀ, ತಾಲ್ಲೂಕು, ಜಿಲ್ಲಾ ಆರೋಗ್ಯಾಧಿಕಾರಿಗಳಾಗಲೀ ತಲೆ ಕೆಡಿಸಿಕೊಂಡಿಲ್ಲ.
ಇತ್ತೀಚೆಗೆ ಈ ಭಾಗದಲ್ಲಿ ನಡೆದ ಅಪಘಾತದಲ್ಲಿ ಆಂಬುಲೆನ್ಸ್ ಇಲ್ಲದ ಕಾರಣ ಸಮಯಕ್ಕೆ ಸರಿಯಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಆಗದೆ ನಾಲ್ಕು ಜನ ಪ್ರಾಣ ಬಿಟ್ಟಿದ್ದಾರೆ. ಗರ್ಭಿಣಿ ಮಹಿಳೆಯರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ ಈ ಭಾಗದ ಸಾರ್ವಜನಿಕರಿಗೆ ಆಸ್ಪತ್ರೆಯಲ್ಲಿ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಬೆಳಿಗ್ಗೆ 11 ಗಂಟೆಗೆ ಆಸ್ಪತ್ರೆಗೆ ಬರುವ ವೈದ್ಯರು 3 ಗಂಟೆಗೆ ಜಾಗ ಖಾಲಿ ಮಾಡುತ್ತಾರೆ. ನಮಗೆ ದಿನದ 24 ಗಂಟೆಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಬೇಕು ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ವಿಶ್ವೇಶ್ವರಯ್ಯ ಅವರು ಮಾತನಾಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಈಗಾಗಲೇ ಇರುವ ವೈದ್ಯರ ಜೊತೆ ಮತ್ತೊಬ್ಬ ವೈದ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು. ಸಕಾಲಕ್ಕೆ ಆಂಬುಲೆನ್ಸ್ ಸೇವೆ ಸಿಗುವಂತೆ ಮಾಡಲಾಗುವುದು ಜನರು ಇಲಾಖೆ ಅಧಿಕಾರಿಗಳ ಜೊತೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರುನಾಡ ಸೇನೆ ಕಾರ್ಯಕರ್ತರು ಗ್ರಾಮ ಪಂಚಾಯತಿ ಅಧ್ಯಕ್ಷ ನಂಜಪ್ಪ, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ನಿಂಗಯ್ಯ, ವೆಂಕಟೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಮಹದೇವಸ್ವಾಮಿ ಮುಖಂಡರಾದ ಶಿವಸ್ವಾಮಿ, ಪ್ರಭುಸ್ವಾಮಿ ಸೇರಿದಂತೆ ಗ್ರಾಮಸ್ಥರು ಇದ್ದರು.
[1:50 PM, 11/10/2022] Usman Khan Kollegal: ವರದಿ ಉಸ್ಮಾನ್ ಖಾನ್ ಬಂಡಳ್ಳಿ.