ಭದ್ರಾವತಿ: ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ ಕರೆ ನೀಡಿದರು.
ಅವರು ಬುಧವಾರ ಬೆಂಗಳೂರಿನ ನ್ಯಾಬ್‌ಫಿನ್ಸ್ ಕಂಪನಿ ವತಿಯಿಂದ ಸಾಮಾಜಿಕ ಕಾರ್ಯಯೋಜನೆಯಡಿ(ಸಿಎಸ್‌ಆರ್) ಸುಲಬ್ ಅಂತರರಾಷ್ಟ್ರೀಯ ಸೇವಾ ಸಂಸ್ಥೆ ವತಿಯಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಶೌಚಾಲಯ ಮತ್ತು ಸ್ನಾನದ ಗೃಹಗಳ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
ಪ್ರತಿ ದಿನ ಸರ್ಕಾರಿ ಆಸ್ಪತ್ರೆಗೆ ಸಹಸ್ರಾರು ಮಂದಿ ಬಂದು ಹೋಗುತ್ತಾರೆ. ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಸಜ್ಜಿತವಾದ ಶೌಚಾಲಯ ನಿರ್ಮಿಸಲಾಗಿದ್ದು, ಸದುಪಯೋಗ ಪಡೆದುಕೊಳ್ಳಬೇಕೆಂದರು.
ನೈರ್ಮಲ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅವಶ್ಯವಿರುವ ಕಡೆ ಸರ್ಕಾರ ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದ್ದು, ಬಳಕೆಗೆ ಮುಂದಾಗುವ ಸಾರ್ವಜನಿಕರು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸುಲಬ್ ಅಂತರರಾಷ್ಟ್ರೀಯ ಸೇವಾ ಸಂಸ್ಥೆ ನಿರ್ವಾಹಕ ಎಂ. ವಿಶ್ವನಾಥ್ ಮಾತನಾಡಿ, ಸಂಸ್ಥೆ ವತಿಯಿಂದ ದೇಶದಲ್ಲಿ ಇದುವರೆಗೂ 10 ಸಾವಿರ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಈಗಾಗಲೇ 300 ಶೌಚಾಲಯಗಳನ್ನು ನಿರ್ಮಿಸಿ ನಿರ್ವಹಣೆ ಮಾಡಲಾಗುತ್ತಿದೆ. ಇದು ಹಣ ನೀಡಿ ಬಳಸುವ (ಪೇ ಅಂಡ್ ಯೂಸ್) ಶೌಚಾಲಯವಾಗಿದ್ದು, ನೈರ್ಮಲ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯಾರೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡದೆ ಈ ಶೌಚಾಲಯ ಬಳಸುವಂತೆ ಮನವಿ ಮಾಡಿದರು.
ನ್ಯಾಬ್‌ಫಿನ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ. ದಿವಾಕರ್ ಹೆಗಡೆ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಕಂಪನಿ ವತಿಯಿಂದ ಸಾಲಸೌಲಭ್ಯ ನೀಡುತ್ತಿದೆ. ಇದರಿಂದ ಬರುವ ಲಾಭದಲ್ಲಿ ಸ್ವಲ್ಪ ಹಣ ಸಾಮಾಜಿಕ ಕಾರ್ಯಯೋಜನೆ ನಿಧಿ(ಸಿಎಸ್‌ಆರ್)ಯಲ್ಲಿ ಮೀಸಲಿಡಲಾಗುತ್ತಿದೆ. ದೇಶದ 17 ರಾಜ್ಯಗಳಲ್ಲಿ ಕಂಪನಿ ಕಾರ್ಯ ನಿರ್ವಹಿಸುತ್ತಿದ್ದು, ಸುಲಬ್ ಅಂತರರಾಷ್ಟ್ರೀಯ ಸೇವಾ ಸಂಸ್ಥೆ ಜೊತೆ ಕೈಜೋಡಿಸಿರುವ ಕಂಪನಿ ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.
ನಗರಸಭಾಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ನ್ಯಾಬ್ ಫಿನ್ಸ್ ಕಂಪನಿ ಕಾರ್ಯದರ್ಶಿ ಸುಮತಿ ಶರ್ಮ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಶಂಕರಪ್ಪ ಉತ್ತಮ ವೈದ್ಯ ಪ್ರಶಸ್ತಿ ಪುರಸ್ಕೃತ ಡಾ. ಶಿವಪ್ರಕಾಶ್, ತಾಲ್ಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.