ಬಂದಿದ್ದು ಒಬ್ಬನೇ, ಹೋಗೋದು ಕೂಡ ನೀನ್ ಒಬ್ಬನೇ, ಅವನಿವ್ನು ಬರ್ತನೆ ಕೆಲ್ಸ ಆಗೋವರೆಗೂ ಜೊತೆಗ್ ಇರ್ತನೆ ಅನ್ನೋ ರಾಹುಲ್ ಡಿಟೋ ಅವರ ಹಾಡಿನ ಸಾಲು ಎಷ್ಟು ಅರ್ಥ ಗರ್ಭಿತವಾಗಿದೆ ಅಲ್ವಾ..!
ಮನುಷ್ಯ ಹುಟ್ಟಿದಾಗಿನಿಂದ ಹಿಡಿದು, ಸಾಯುವವರೆಗೂ.. ಒಂದಲ್ಲ ಒಂದು ಮುಖಗಳ ಪರಿಚಯ ಆಗುತ್ತಲೆ ಇರುತ್ತವೆ, ಮನುಷ್ಯ ಸಂಘಜೀವಿ ಅಲ್ವೇ.. ಒಬ್ಬಂಟಿಯಾಗಿ ಕಾಲ ಕಳೆಯುವುದಕ್ಕಿಂತ ನಿರಂತರವಾಗಿ ಬೇರೊಬ್ಬರ ಮೇಲೆ ಅವಲಂಬನೆ ಆಗಿರುತ್ತಾನೆ..
ಬದುಕಿನಲ್ಲಿ ಪ್ರತಿಯೊಂದು ಘಟ್ಟಕ್ಕೂ ಒಂದೊಂದು ವಯಸಿದೆ, ಆಯಾ ವಯಸಿನಲ್ಲಿ ಆಯಾ ಘಟ್ಟಗಳನ್ನು ಪೂರೈಸಿದರೆ ಬದುಕು ಚಂದ ಕಾಣುತ್ತೆ.. ಪ್ರತಿಘಟ್ಟದಲ್ಲೂ ಹೊಸ ಹೊಸ ಮುಖಗಳ ಪರಿಚಯ, ಹೊಸ ಹೊಸ ಅನುಭವ, ಹೊಸದೊಂದು ಲೋಕವೇ ಸೃಷ್ಟಿಯಾದಂತೆ ಆಗುತ್ತದೆ..
ಬಾಲ್ಯ,ಕಲಿಕೆ,ಯವ್ವನ,ಭವಿಷ್ಯ,ಸ್ನೇಹ, ಪ್ರೀತಿ,ವಿವಾಹ, ಮಕ್ಕಳು,ಭವಿಷ್ಯಕ್ಕೆ ಒಂದು ನೆಲೆ,ವೃದ್ಧಪ್ಯಾ, ಕೊನೆಗೆ ಸಾವು..
ಇಷ್ಟೆಲ್ಲದರ ನಡುವೆ “ಜೀವ ಮತ್ತು ಜೀವನ” ಒಂಟಿತನ, ಎಂಕಾಂಗಿಯಾಗಿ ಇರುವುದಕ್ಕೆ ಬಯಸುತ್ತದೆ..
ಒಂಟಿಯಾಗಿರುವುದು ಜೀವನದಲ್ಲಿ ಬೇಸರ ತರಿಸುತ್ತದೆ ನಿಜ.. ಆದ್ರೆ ಕೆಲವೊಮ್ಮೆ ಒಂಟಿತನವೇ ಗಟ್ಟಿತನವಾಗಿ ಉಳಿದುಬಿಡುತ್ತದೆ, ನನಗೂ ಕೆಲವೊಮ್ಮೆ ಒಂಟಿತನವೇ ಹೆಚ್ಚು ಸುಖವನ್ನು ನೀಡಿದ್ದು ಉಂಟು..!
ಕೆಲವರು ಹತ್ತಾರು ವರ್ಷದಿಂದ ಒಂಟಿಯಾಗಿ ಇರುವವರು ಎಷ್ಟೋ ಸಂತೋಷದಿಂದ ಇರುತ್ತಾರೆ, ಆದ್ರೆ ಇನ್ನೂ ಕೆಲವರು ಹತ್ತು ನಿಮಿಷ ಕೂಡ ಏಕಾಂಗಿಯಾಗಿ ಇರಲಾರರು.
ಒಂಟಿಯಾಗಿ ಇರುವುದು ಸಂಬಂಧಗಳ ನಡುವೆ ಹುಟ್ಟಿಕೊಳ್ಳುವ ಸಂಘರ್ಷ, ಉದ್ವೇಗ ಮತ್ತು ಒತ್ತಡಗಳಿಂದ ಕೆಲವೊಮ್ಮೆ ಮುಕ್ತಿಯನ್ನು ನೀಡುತ್ತವೆ.
ಯಾರಿಲ್ಲದ ಊರಿನಲಿ ಏಕಾಂತ ನನಗಿರಲಿ, ಯಾರೇಷ್ಟೇ ಹುಡುಕಿದರೂ ಆ ಊರು ಸಿಗದಿರಲಿ ಅನ್ನುವ ಹಾಗೇ ಏಕಾಂತವೇ ಒಮೊಮ್ಮೆ ಸಂಗಾತಿಯಾಗಿ ಬಿಡುತ್ತದೆ..
ಯಾವತ್ತೋ ಒಂದು ದಿನ ಒಂಟಿಯಾಗ್ತೀನಿ ಅಂತ ಗೊತ್ತಿತ್ತು ಆದರೆ ಎಷ್ಟು ಬೇಗ ಆ ಸಮಯ ಬರುತ್ತೆ ಅಂತ ಊಹೆ ಕೂಡ ಮಾಡಿರಲಿಲ್ಲ, ಕಾಲಕ್ಕೆ ತಕ್ಕಂತೆ ಇರೋಣ ಅಂದ್ರೆ ಕಾಲ ಸರಿ ಇಲ್ಲ, ನಮ್ ಪಾಡಿಗೆ ನಾವ್ ಇರೋಣ ಅಂದ್ರೆ ಈ ಜನ ಬಿಡಲ್ಲ ಸ್ವಾಮಿ…
ದೂರದ ಒಬ್ಬಂಟಿ ಪಯಣ ನೂರಾರು ರೀತಿಯ ಸಹಾಯ ಹಾಗೂ ನಮಗೆ ಬೇಕಾದ ಎಲ್ಲಾ ಅನುಭವ ಮತ್ತು ಅರ್ಹತೆಗಳನ್ನು ನೀಡುತ್ತದೆ.
ಜೀವನದ ಎಷ್ಟೋ ಪಾಠಗಳನ್ನು ಕಲಿಸಿ ಬಿಡುತ್ತದೆ, ಧೈರ್ಯವನ್ನು ತುಂಬಿಬಿಡುತ್ತದೆ.
ಪ್ರೀತಿಸಿದ ಹೃದಯ ಮರೆಯಾದಾಗ ಪ್ರೀತಿಸುವ ಮನಸು ಮೌನವಾಗಿ ಬಿಡುತ್ತದೆ ಎನ್ನುವುದು ಸತ್ಯಕ್ಕೆ ಬಹಳ ಹತ್ತಿರ ಅಲ್ವಾ..
ಹಾಗೆ ಮನಸು ಒಂಟಿಯಾಗಿ ಇರಲು ಬಯಸುತ್ತದೆ,
ಇಂತಿ ನಿಮ್ಮ ಕನ್ನಡ್ದವ್ನು-ಚೇತನ್ ಗವಿಗೌಡ