ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹನಗಂಡಿ ದೇಸಾಯಿ ವಾಡೆ!

ನಾಡಿನ ವಿವಿಧ ಊರುಗಳಲ್ಲಿರುವ ಬೃಹತ್ತಾದ ವಾಡೆಗಳು ಹಲವಾರು ಚಲನಚಿತ್ರ, ಧಾರವಾಹಿಗಳ ಚಿತ್ರೀಕರಣ ಕಂಡ ಸ್ಥಳಗಳಾಗಿ ಪ್ರಸಿದ್ಧವಾಗಿವೆ. ಅದರಲ್ಲೂ ಬಾಗಲಕೋಟೆ ಜಿಲ್ಲೆಯ ವಿವಿಧ ಊರುಗಳಲ್ಲಿನ ವಾಡೆಗಳಿಗೆ ಅತಿಹೆಚ್ಚು ಬೆಳ್ಳಿತೆರೆಯ ನಂಟಿದೆ. ಜಿಲ್ಲೆಯ ಲೋಕಾಪುರ ಪಟ್ಟಣದ ದೇಸಾಯಿ ವಾಡೆಯಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ರವರ ‘ಜೋಕುಮಾರ ಸ್ವಾಮಿ’, ಕೆರಕಲಮಟ್ಟಿ ಊರಿನ ನಾಡಗೌಡರ ವಾಡೆಯಲ್ಲಿ ‘ಹುಲಿಯಾ’, ‘ವೀರ ಮದಕರಿ’, ‘ಭೀಮಾ ತೀರದ ಹಂತಕರು’ ಸದ್ಯ ಮುಳುಗಡೆಯಾಗಿರುವ ಹೊನ್ನಿಹಾಳ ಊರಿನ ಸರ್ನಾಯಕರ ವಾಡೆಯಲ್ಲಿ ‘ನಾಗಮಂಡಲ’ ಹೀಗೆ ವಿವಿಧ ಚಲನಚಿತ್ರಗಳ ಹೆಸರು ಮತ್ತು ಚಿತ್ರೀಕರಣ ಕಂಡ ವಾಡೆಗಳನ್ನು ಇಲ್ಲಿ ಉದಾಹರಿಸಬಹುದಾಗಿದೆ. ಹೀಗೆ ಇದೇ ಸಾಲಿನಲ್ಲಿ ಮತ್ತೊಂದು ಭವ್ಯ ವಾಡೆಯು, ಬಾಗಲಕೋಟೆ ಜಿಲ್ಲೆಯ ಹನಗಂಡಿ ಊರಿನ ದೇಸಾಯಿ ವಾಡೆಯಾಗಿದ್ದು, ಚಿತ್ರೀಕರಣಕ್ಕೆ ಹೇಳಿಮಾಡಿಸಿದ ಪ್ರಶಸ್ತ ಮನೆಯಾಗಿದೆ.

ರಬಕವಿ-ಬನಹಟ್ಟಿಯಿಂದ ತೆರದಾಳ ಮಾರ್ಗದ ಮೇಲೆ ಬರುವ ಗ್ರಾಮ ಹನಗಂಡಿ. ಈ ಊರಿನ ದೇಸಾಯಿ ವಾಡೆಯಲ್ಲಿ ಗಿರೀಶ ಕಾಸರವಳ್ಳಿ ನಿರ್ದೇಶನದ, ಜಯಮಾಲಾ ನಟಿಸಿದ ೧೯೯೭ರಲ್ಲಿ ತೆರೆಕಂಡ ‘ತಾಯಿಸಾಹೇಬ’ ಚಲನಚಿತ್ರವು ಚಿತ್ರೀಕರಣ ಕಂಡಿರುವುದು ಗಮನಾರ್ಹವಾಗಿದೆ.

ಸುಮಾರು ಮುನ್ನೂರು ವರ್ಷಗಳಷ್ಟು ಹಳೆಯದಾದ ಈ ವಾಡೆಯು ವಾರಸುದಾರರ ಕಾಳಜಿಯಿಂದಾಗಿ, ತನ್ನ ವೈಭವವನ್ನು ಇನ್ನು ಕಾಪಾಡಿಕೊಂಡು ಬಂದಿದೆ. ವಾಡೆಯು ಸುಮಾರು ಎಕ್ಕರೆಗಳಷ್ಟು ವಿಶಾಲವಾದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು, ಇದರ ರಚನೆ , ವಿನ್ಯಾಸ, ಗೋಡೆ, ಕಂಬ ಹೀಗೆ ಪ್ರತಿಯೊಂದನ್ನು ನೋಡಿದಷ್ಟು ಮತ್ತೆ ಮತ್ತೆ ನೋಡಬೇಕೆನ್ನಿಸುತ್ತದೆ. ವಾಡೆಯ ಸುತ್ತಲೂ ಕೋಟೆ ಮಾದರಿಯ ಎತ್ತರದ ಗೋಡೆ, ನಾಲ್ಕು ಮೂಲೆಗಳಲ್ಲಿ ಬರುಜುಗಳನ್ನು ನಿರ್ಮಿಸಲಾಗಿದೆ. ವಾಡೆಗೆ ಪ್ರವೇಶಿಸಲು ಎತ್ತರದ ಮಹಾದ್ವಾರವಿದ್ದು, ಒಳಗಡೆ ಪೂರ್ವಾಭಿಮುಖವಾಗಿ ನಿರ್ಮಿಸಿದ ಎರಡು ಅಂತಸ್ತಿನ ಎರಡು ಮನೆಗಳು ಹಾಗೂ ಒಂದು ಜೈನ ಮಂದಿರ ಕಂಡುಬರುತ್ತವೆ. ಎರಡೂ ಮನೆಗಳಲ್ಲಿ ದೇಸಾಯಿ ಮನೆತನದವರು ವಾಸವಿರುವರು. ಎರಡೂ ಮನೆಗಳು ಸಹ ರಚನೆಯಲ್ಲಿ ಒಂದಕ್ಕೊಂದು ಭಿನ್ನವಾಗಿವೆ. ಬಲಭಾಗದಲ್ಲಿರುವ ಮನೆಯ ಪ್ರವೇಶ ದ್ವಾರ ವಿಶಿಷ್ಟವಾಗಿದ್ದು,ಇಲ್ಲಿ ಕಲಬುರಗಿ ಬೀದರ್ ಜಿಲ್ಲೆಯ ಮನೆಗಳ ತಲ್ಬಾಗಿಲಿನಲ್ಲಿ ಕಾಣಸಿಗುವ ಜೋಡು ಕುದುರೆ ಮುಖದ ಕಾಷ್ಠ ಕೆತ್ತನೆಯ ಅಲಂಕಾರಗಳನ್ನು ಅಳವಡಿಸಿರುವುದು ಕುತೂಹಲಕಾರಿಯಾಗಿದೆ. ಇನ್ನೊಂದು ಮನೆಯ ಬಾಗಿಲಿನ ಪಕ್ಕ ನೆಲಮಟ್ಟದಲ್ಲಿ ನಿರ್ಮಿಸಿದ ಬಾವಿಯು ಸಹ ಕುತೂಹಲ ಕೆರಳಿಸುವಂತಿದೆ.

ಮನೆಯ ಬಾಲ್ಕನಿಗಳು, ಒಳಭಾಗದ ಪಡಸಾಲೆ, ಕಂಬಗಳು, ಕೊಠಡಿಗಳು ಇವುಗಳಲ್ಲದೇ ಜೈನ ಮತೀಯರಾದರು ಶಿವಶರಣ ಅಲ್ಲಮಪ್ರಭು ದೇವರಿಗೆ ನಡೆದುಕೊಳ್ಳುವ ಮನೆತನದ ಸಂಪ್ರದಾಯ ಹೀಗೆ ಎಲ್ಲವೂ ಸಹ ನೋಡುಗರನ್ನು ಮೂಕವಿಸ್ಮಯಗೊಳಿಸುತ್ತವೆ!
-ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್ಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ