ನೆನ್ನೆ ನಡೆದ ಬಸವನಗುಡಿಯ ವಾರ್ಷಿಕ ಉತ್ಸವ ಕಡ್ಲೆಕಾಯಿ ಪರಿಷೆಯಲ್ಲಿ ಸುಮಾರು ೧೫೦೦ ಕಡಲೆಕಾಯಿ ಮಾರಾಟಗಾರರು ಭಾಗವಹಿಸಿದ್ದು, ನಾನು ನೋಡಿದ ಮಟ್ಟಿಗೆ ಪ್ರತಿ ವರ್ಷಕ್ಕಿಂತ ಈ ವರ್ಷ ಸ್ವಲ್ಪ ಕಮ್ಮಿಯೇ ಇದೆ, ಇದಕ್ಕೆ ಕಾರಣ ಕಳೆದ ಮೂರ್ನಾಲ್ಕು ತಿಂಗಳಿಂದ ಸುರಿದ ಅಕಾಲಿಕ ಭಾರಿ ಮಳೆಯೂ ಇರಬಹುದು..
ಸಾಮಾನ್ಯವಾಗಿ ಈ ಕಡಲೆಕಾಯಿ ಪರಿಷೆ ರಾಮನಗರ, ಕನಕಪುರ, ಕೋಲಾರ, ಮಾಗಡಿ, ತುಮಕೂರುಗಳಿಂದ ಹೆಚ್ಚಾಗಿ ಕಡ್ಲೆಕಾಯಿ ತಂದು ಮಾರಾಲಾಗುತ್ತಿತ್ತು, ಆದ್ರೆ ಈ ವರ್ಷ ಬೆಳೆ ಕೈ ಕೊಟ್ಟ ಕಾರಣದಿಂದ ತಮಿಳುನಾಡಿನಿಂದ ತುಸು ಹೆಚ್ಚಾಗಿಯೇ ಆಮದು ಮಾಡಿಕೊಳ್ಳಲಾಗಿದೆ,
ಬಡವರ ಬಾದಾಮಿ, ಟೈಮ್ ಪಾಸಿಗೆ ಒಳ್ಳೆ ಸಂಗಾತಿ, ಈ ನಮ್ಮ ಗರಂ ಗರಂ ಕಡ್ಲೆಕಾಯ್..
ಬಸವನಗುಡಿಯ ಬೀದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಎಲ್ಲಿ ನೋಡಿದರೂ ರಾಶಿ ರಾಶಿ ಕಡ್ಲೆಕಾಯಿ ಗೋಪುರ. ಕಾರ್ತಿಕ ಮಾಸದ ಕೊನೆಯ ಸೋಮವಾರ ಬಸವನ ಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಬಳಿ ಲೆಕ್ಕ ಮಾಡದಷ್ಟು ರಾಶಿ ರಾಶಿ ಕಡಲೆಕಾಯಿ ಒಂದೆಡೆಯಾದರೆ, ಲೆಕ್ಕಕ್ಕೆ ಸಿಗದಷ್ಟು ಜನಗಳ ಸಾಗರ ಇನ್ನೊಂದೆಡೆ ಹಬ್ಬಕ್ಕೆ ಮೆರಗು ಮೂಡಿಸಿತು, ಅಬ್ಬಬ್ಬಾ…! “ಜನ ಮರುಳೋ ಜಾತ್ರೆ ಮರುಳೋ” ಅನ್ನೋ ಹಾಗೇ ಹಿರಿಯರು, ಕಿರಿಯರು, ಮಕ್ಕಳು, ವಯಸ್ಕರು, ವಯೋವೃದ್ದರು, ದಂಪತಿಗಳು, ಜೋಡಿ ಹಕ್ಕಿಗಳು ಎಲ್ಲರೂ ಸೇರಿ ಜಾತ್ರೆಯಲ್ಲಿ ಸುತ್ತಾಡಿದ್ರು, ಅದರ ನೋಡುವೆ ಕರ್ಕಶ ಶಬ್ದ ಮಾಡುತಿದ್ದ ಪಿಪಿಗಳದ್ದೆ ಕಾರುಭಾರು. ಮೊದ್ಲೇ ಕಡಲೆಕಾಯಿ ಪರಿಷೆ ಅಂದ್ರೆ ಕೇಳ್ಬೇಕೆ..? ಎತ್ತ ನೋಡಿದರೂ ಸುತ್ತ ಕಾಣುತಿದದ್ದು ಜನ ಸಾಗರ ಮಾತ್ರ..
ಸಾವಿರಾರು ಜನರು ಬಸವನ ಗುಡಿಯ ಬಸವನ, ದೊಡ್ಡಗಣಪತಿಯ ಆಶೀರ್ವಾದ ಪಡೆದರು.
ಬ್ಯುಗಲ್ ರಾಕ್ ಮತ್ತು ನರಸಿಂಹ ಸ್ವಾಮಿ ಉದ್ಯಾನವನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತಿದ್ದವು.
ಈ ಭಾರಿ ಥೀಮ್ ಪಾರ್ಕ್ ನಿರ್ಮಾಣ ಮಾಡಿರುವುದು ಈ ವರ್ಷದ ಕಡಲೆಕಾಯಿ ಪರಿಷೆಯಲ್ಲಿ ಪ್ರಮುಖ ಆಕರ್ಷಣೆ.
ಕಡ್ಲೆಕಾಯಿ, ಕಡ್ಲೆಪುರಿ, ಬತ್ತಾಸು, ನನ್ನಿಷ್ಟದ ಬೊಂಬೆ ಮಿಠಾಯಿ, ಬಗೆ ಬಗೆಯ ತಿಂಡಿ ತಿನಿಸುಗಳು, ಗೃಹಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಬಣ್ಣ ಬಣ್ಣದ ಆಟಿಕೆ ವಸ್ತುಗಳು, ಕಿವಿ ಓಲೆ, ಗೊಂಬೆ, ಕಲಾಕೃತಿಗಳು, ಬಲೂನು, ಸೇರಿದ್ದ ಜನರನ್ನ ಆಕರ್ಷಸುತ್ತಿತ್ತು, ಅಷ್ಟೇ ಅಲ್ಲದೆ ಪಿಪಿಯ ಸದ್ದು ಕಿವಿಗೆ ಹಿಂಸೆಯನ್ನು ನೀಡಿತ್ತು, ಇಡೀ ಬಸವನ ಗುಡಿಯೇ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತಿತ್ತು..
ಕಡ್ಲೆಕಾಯಿ ತಿನ್ನುತ್ತಾ ಅಲ್ಲಿಯೇ ಪರಿಚಯರಾದ ಅಂಟಿಯ ಜೊತೆ ಮಾತಿಗೆ ಇಳಿದಾಗ ಅವರು ಹೇಳಿದ ಪ್ರಕಾರ ಬಸವನಗುಡಿಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ರೈತರು ಕಡಲೆಕಾಯಿ ಬೆಳೆಯುತ್ತಿದ್ದರಂತೆ, ಪ್ರತಿ ಹುಣ್ಣಿಮೆಯ ದಿನದಂದು ಬಸವ ಬಂದು ಕಡಲೆಕಾಯಿಯನ್ನು ತಿಂದು ಹೋಗುತ್ತಿದ್ದನಂತೆ, ಇದರಿಂದ ಬೇಸತ್ತು, ರೈತರು ತಾವೇ ಆಹಾರ ನೀಡುವುದಾಗಿ ಮಾತುಕೊಡುತ್ತಾರಂತೆ. ಇದಲ್ಲದೆ ಬಸವ ಇಲ್ಲೇ ಉಳಿದುಕೊಂಡ ಅನ್ನೋ ನಂಬಿಕೆ ಕೂಡ ಇದೆ, ಹಾಗಾಗಿಯೇ ರಾಶಿ ರಾಶಿ ಕಡಲೆಕಾಯಿಯನ್ನ ತಂದು ಇಲ್ಲಿ ಅರ್ಪಿಸುತ್ತಾರೆ.. ಅಂತ ಪುಟ್ಟದಾಗಿ ಒಂದೊಳ್ಳೆ ಮಾಹಿತಿ ಅನ್ನು ಅಚ್ಚಿಕೊಂಡರು.
ರುಚಿ ಮತ್ತು ಗಾತ್ರದಲ್ಲಿ ಮಾತ್ರ ಕಡ್ಲೆಕಾಯಿ ಭಿನ್ನವಾಗಿ ಕಾಣಲಿಲ್ಲ, ಅದರ ಜೊತೆಗೆ ಅಲ್ಲಿ ನೆರೆದಿದ್ದ ಜನರು ಕೂಡ..
ಹೆಗಲ ಮೇಲೆ ಮಕ್ಕಳನ್ನ ಕೂರಿಸ್ಕೊಂಡು ಇಡೀ ಪರಿಷೆಯನ್ನ ತೋರುದಿದ್ದ ಅಪ್ಪಂದಿರು..
ಮಗುವನ್ನ ತೊಡೆಯ ಮೇಲೆ ಮಲಗಿಸಿಕೊಂಡು ರಸ್ತೆ ಬದಿ ಆಟಿಕೆ ಮಾರುತಿದ್ದ ಮಹಿಳೆ..
ಮುಳ್ಳಿದ್ದರು ಪರಿಮಳ ಸೂಸುವ ಹೂವುಗಳಂತೆ, ನೋವಿದ್ದರೂ ನಗುವ ಬೀರಿ ಆಡೋ ವಯಸ್ಸಲ್ಲಿ ಅಲಂಕಾರಿಕ ವಸ್ತುಗಳ ಎದುರು ಕೂತು ಹೂ ಗುಚ್ಛ ಮಾರುತಿದ್ದ ಹುಡುಗಿ..
ಬಲೂನು ಮಾರುತ್ತಾ ಇದ್ದವನೊಬ್ಬ ತನ್ನ ಮಡದಿಗೆ ಅಲ್ಲಿಯೇ ಇದ್ದ ಚುರುಮುರಿ ಕೊಂಡು ಕೈ ತುತ್ತು ತಿನ್ನಿಸಿದ ಪರಿ..
ವ್ಯಾಪಾರ ಮಾಡಲು ಎಲ್ಲೇಲ್ಲಿಂದಲೋ ಬಂದು ಕಡ್ಲೆಕಾಯಿ ರಾಶಿಯ ಎದುರು ಹಸಿದ ಹೊಟ್ಟೆಯಲ್ಲಿ ಕುಳಿತಿದ್ದ ವೃದ್ಧ ದಂಪತಿಗಳು..
ಹೀಗೆ ಬದುಕಿನ ಸಾರವನ್ನ ಅತ್ತಿರದಿಂದ ತುಂಬಿಕೊಂಡದ್ದು ಅದ್ಯಾವುದೋ ಜನ್ಮದ ಅದ್ಯಾವ ಪುಣ್ಯದ ಫಲವೋ ನಾ ಕಾಣೆ..
- ಚೇತನ್ ಗವಿಗೌಡ