ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ನಾನು ಕಂಡ ಸಂಚಾರಿ ಸರ್ವಜ್ಞ ಶ್ರೀ ಪರಮೇಶ್ವರಪ್ಪ ಕುಂಬಾರ್ 

ನಾನು ಕಂಡ ಸಂಚಾರಿ ಸರ್ವಜ್ಞ
ಭೂಮಿಯ ಮೇಲಿರುವ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅನುಭವಗಳು ಉಂಟಾಗುತ್ತಲೇ ಇರುತ್ತವೆ, ಇದು ಸಹಜ ಕ್ರಿಯೆ ಕೂಡಾ ಆಗಿದೆ ಆದರೆ ನನ್ನ ಪ್ರಕಾರ ಅನುಭವ ಎಂಬ ಶಿಕ್ಷಣದ ಮುಂದೆ ಯಾವ ಶಿಕ್ಷಣವೂ ದೊಡ್ಡದಲ್ಲ ಮತ್ತು ಜಗತ್ತಿನ ಯಾವ ಶಿಕ್ಷಣ ಸಂಸ್ಥೆಯಲ್ಲಾಗಲಿ ವಿಶ್ವ ವಿದ್ಯಾಲಯದಲ್ಲಿ ಕೂಡಾ  ಕಲಿಸುವುದಿಲ್ಲ ಜೀವನದಲ್ಲಿ ನಡೆಯುವ ಘಟನೆಗಳಿಂದ ಸ್ವಯಂ ಆಗಿ ಕಲಿಯುವ ಏಕೈಕ ಶಿಕ್ಷಣವೆಂದರೆ ಅದು ಅನುಭವ ಮಾತ್ರ ಈಗಾಗಲೇ ಅನುಭವದ ಆಧಾರದ ಮೇಲೆ ಹಲವಾರು ಲೇಖನಗಳನ್ನು ರಚಿಸಿದ್ದು ಇಂದು ಬರೆದಿರುವ ವಿಷಯ ನಾನು ಕಂಡ ಸಂಚಾರಿ ಸರ್ವಜ್ಞ ಶ್ರೀ ಪರಮೇಶ್ವರಪ್ಪ ಕುಂಬಾರ್.
ನನಗೊಂದು ಹವ್ಯಾಸವಿದ್ದು ಬಿಡುವಿನ ವೇಳೆಯಲ್ಲಿ ಹೊಸ ಹೊಸ ಸ್ಥಳ, ವಿಷಯಗಳ ಕುರಿತು ಅನ್ವೇಷಣೆ ಮಾಡುವುದು, ಬರೆಯುವುದು ನಡೆಯುತ್ತಲೇ ಇರುತ್ತದೆ. ಇದೇ ರೀತಿ ಹೊಸ ಸ್ಥಳದ ಅನ್ವೇಷಣೆಯಲ್ಲಿದ್ದಾಗ ನನಗೆ ಹೊಸಪೇಟೆಯ ಚಿತ್ತವಾಡಗಿ ಬಳಿ ಇರುವ ಇಪ್ಪಿತೇರಿ ಮಾಗುಣಿ ಎಂಬ ಗ್ರಾಮದ ಕುರಿತು ಮಾಹಿತಿ ಸಿಕ್ಕಿತು ಅದರಲ್ಲೂ ಕೆಲಸದ ನಿಮಿತ್ತ ಹೊಸಪೇಟೆಗೆ ಅನೇಕ ಬಾರಿ ಹೋಗಿದ್ದರೂ ಅಲ್ಲಿಯೇ ಹತ್ತಿರದಲ್ಲೇ ಇರುವ ಈ ಗ್ರಾಮದ ಕುರಿತು ತಿಳಿದೇ ಇರಲಿಲ್ಲ ಎನ್ನುವುದು ನನಗೂ ಆಶ್ಚರ್ಯ ಉಂಟು ಮಾಡಿದ್ದು ಅಷ್ಟೇ ಸತ್ಯ.ಹಿಟ್ನಾಳ ಗ್ರಾಮದ ಒಬ್ಬ ಹಿರಿಯ ರೈತರಾದ ಖಾಸಿಂ ಅಲಿ ಎಂಬುವವರಿಂದ ನನಗೆ ಮೊದಲ ಬಾರಿಗೆ ಈ ಗ್ರಾಮದ ಕುರಿತು ಮಾಹಿತಿ ಸಿಕ್ಕಿತು.ಅದು ಕೂಡಾ ಹೇಗೆ ಗೊತ್ತಾ? ಅಗಸ್ಟ್ 9 ನೇ ತಾರೀಖು ರಾತ್ರಿ 10.15 ಅನಿಸುತ್ತೆ,ಆದರೆ ಖಚಿತವಾದ ಸಮಯ ನನಗೆ ನೆನಪಾಗುತ್ತಿಲ್ಲ. ಇವರು (ಖಾಸಿಂ ಅಲಿ) ನನ್ನ ತಂದೆಗೆ ಪೋನ್ ಮಾಡಿ ನಿಮ್ಮ ಮನೆಗೆ ಬರುತ್ತಿರುವ ವಿಷಯ ತಿಳಿಸಿದರು.ಏಕೆಂದರೆ ಇವರು ನಮಗೆ ಸುಮಾರು 20 ವರ್ಷಗಳಿಂದ ಪರಿಚಯವಿದ್ದು ನನ್ನ ತಂದೆ ಅಗ್ರಿಕಲ್ಚರ್ ಸೈಂಟಿಸ್ಟ್ ಕೆಲಸದಲ್ಲಿದ್ದ ಸಮಯದಲ್ಲಿ ಇವರ ಹೊಲಕ್ಕೆ ಭೇಟಿ ನೀಡಿ ಬೇಕಾದ ಮಾರ್ಗದರ್ಶನ, ಮತ್ತು ಸಹಾಯವನ್ನು ಮಾಡುತ್ತಿದ್ದರು.ಆಗಿನಿಂದಲೇ ಉಂಟಾದ ಪರಿಚಯ ಈಗಲೂ ಸಂಪರ್ಕದಲ್ಲಿ ಹಾಗೆಯೇ ಮುಂದುವರೆದಿದೆ. ಈ ಟೈಂ ನಲ್ಲಿ ಯಾಕೆ ಬರ್ತಾರೆ ಎನ್ನುವ ಪ್ರಶ್ನೆ, ಆದರೂ ಹೇಳಿದ್ದ ಟೈಂ ಗೆ ಬಂದಿದ್ದರೂ ಒಬ್ಬರೇ ಬಂದಿರಲಿಲ್ಲ. ಜೊತೆಗೆ ಶ್ರೀ ಮಹಾಶಿವಶರಣೆ ಮಾತೃಶ್ರೀ ಅನುರಾಧೇಶ್ವರಿ ಅಮ್ಮನವರನ್ನು ಕರೆದುಕೊಂಡು ಬಂದಿದ್ದರು. ಹಾಗೆಯೇ ಮಾತನಾಡುತ್ತ ಪರಿಚಯವಾದ ನಂತರವೇ ಆ ತಾಯಿ ಇಳಿ ವಯಸ್ಸಿನಲ್ಲಿ ಕೂಡಾ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ವಿಷಯ ತಿಳಿದು ಆಶ್ಚರ್ಯವಾಯಿತು. ಏಕೆಂದರೆ ನಮ್ಮ ಮನೆಗೆ ಭೇಟಿ ಕೊಡುವವರೆಗೂ ಇವರ ಪರಿಚಯ ಕೂಡ ನಮಗೆ ಇರಲಿಲ್ಲ. ಬಹುಶಃ ವಿಧಿ ಲಿಖಿತವೋ ಅಥವಾ ದೈವ ನಿರ್ಣಯವೋ ಗೊತ್ತಿಲ್ಲ ಆ ತಾಯಿ ನಮ್ಮ ಮನೆಗೆ ಅನಿರೀಕ್ಷಿತ ರೀತಿಯಲ್ಲಿ ಭೇಟಿ ನೀಡಿದ್ದು ಒಂದು ರೀತಿಯಲ್ಲಿ ನನ್ನ ಕುಟುಂಬಕ್ಕೆ ಒಳ್ಳೆಯದೇ ಆಗಿದೆ. ಇವರ ಗ್ರಾಮದಲ್ಲಿ ಅಜ್ಜಯ್ಯ ತಾತಾ ಎಂಬ ಚಿಕ್ಕ ದೇವಸ್ಥಾನವಿದ್ದು ಅಲ್ಲಿಯ ಪ್ರಾಮುಖ್ಯತೆ ಮತ್ತು ಪವಾಡಗಳ ಬಗ್ಗೆ ತಿಳಿಸಿಕೊಟ್ಟು ಜಾತ್ರೆಗೆ ಕೂಡ ನಮ್ಮನ್ನು ಆಹ್ವಾನಿಸಿದರು. ಆ ತಾಯಿ ಈಗಲೂ ಕೂಡ ತಮ್ಮ ಗ್ರಾಮವನ್ನು ಒಂದು ಪುಣ್ಯ ಕ್ಷೇತ್ರವನ್ನಾಗಿ ಮಾಡಬೇಕೆಂದು ಹಗಲು ರಾತ್ರಿ ಎನ್ನದೆ ಶ್ರಮವಹಿಸಿ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ ಈಗಲೂ ಕೂಡ ಮಹಾರಾಷ್ಟ್ರ ರಾಜ್ಯದ ಪಂಡರಾಪುರದ ನಿವಾಸಿಗಳೇ ಈ ದೇವಸ್ಥಾನಕ್ಕೆ ಹೆಚ್ಚು ಭೇಟಿ ನೀಡುತ್ತಿದ್ದಾರೆ.
 ನನ್ನದೋ ಎಷ್ಟೇ ಆದರೂ ರೈಟರ್ ಬುದ್ಧಿ, ಹೊಸದನ್ನು ಹುಡುಕಿಕೊಂಡು ಹೋಗಿ ಬರುವ ಕ್ಯೂರಿಯಾಸಿಟಿ ಹೆಚ್ಚೇ ಇರುವುದರಿಂದ ಬರೆಯುವುದಕ್ಕೆ ಒಂದು ಹೊಸ ವಿಷಯವೂ ಸಿಗುತ್ತದೆ ಜೊತೆಗೆ ದೇವರ ದರ್ಶನವೂ ಆಗುತ್ತದೆ ಎಂದುಕೊಂಡು ಅಲ್ಲಿಗೆ ಹೋಗಲು ನಿರ್ಧರಿಸಿದೆ. ಆದರೆ ನಾವೇನೇ ಯೋಜನೆ ಹಾಕಿಕೊಂಡಿದ್ದರೂ ದೈವ ಲಿಖಿತ ಎನ್ನುವುದು ಇದ್ದೇ ಇರುತ್ತದೆ. ಅದೇನೆಂದರೆ ಒಂದು ಉದ್ದೇಶವನ್ನು ಇಟ್ಟುಕೊಂಡು ಅಲ್ಲಿಗೆ ಹೋಗಿದ್ದರೂ ಅಲ್ಲಿ ಬದಲಾಗಿ ಇನ್ನೊಂದು ಘಟನೆ ನಡೆಯಿತು.ನನಗೆ ಗೊತ್ತಿಲ್ಲದ ಗ್ರಾಮವನ್ನು ಅದು ಕೂಡ ಅಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಹುಡುಕಿಕೊಂಡು ಹೋದಾಗ ಮೊದಲು ನನಗೆ ಅಲ್ಲಿ ಪ್ರತಿ ಮನೆ ಬಳಿ ತಿರಂಗವೇ ಕಂಡಿತ್ತು. ಚಿಕ್ಕ ಗ್ರಾಮವಾದರೂ ನನಗೆ ಹೊಸತು, ಯಾರ ಪರಿಚಯವೂ ಇರಲಿಲ್ಲ. ಹುಡುಕುತ್ತಿದ್ದ ದೇವಸ್ಥಾನ ಸಿಕ್ಕಿದ್ದರೂ ಆ ದಿನವೇ ಜಾತ್ರೆ ಇದ್ದು ಮೆರವಣಿಗೆ ಹೋಗಿದ್ದು ಹಿಂತಿರುಗಿ ಬರುವುದು ಕೂಡ ತಡವಾಗುವ ಸಂಗತಿ ತಿಳಿಯಿತು. ಆದರೆ ಬೇರೆ ದಾರಿಯೇ ಇರಲಿಲ್ಲ, ಕಾಯಲೇಬೇಕಾದ ಅನಿವಾರ್ಯತೆ, ಅಲ್ಲಿಯೇ ಒಂದು ಕಟ್ಟೆಯ ಮೇಲೆ ಕುಳಿತಿದ್ದೆ. ಅದೇ ಸಮಯದಲ್ಲಿ ಅಲ್ಲಿಗೆ ಒಬ್ಬ ವಯಸ್ಸಾದ ಹಿರಿಯ ವ್ಯಕ್ತಿ ಬಂದು ನನ್ನನ್ನು ಮಾತನಾಡಿಸಿದರು. ಯಾರು ನೀವು, ಎಲ್ಲಿಂದ ಬಂದಿದ್ದು ಎನ್ನುವುದನ್ನು ವಿಚಾರಿಸಿದರು. ಸುಮಾರು 8 ವರ್ಷಗಳಿಂದ ಅಲ್ಲಿಯ ಅಜ್ಜಯ್ಯ ತಾತನಿಗೆ ನಡೆದುಕೊಳ್ಳುತ್ತಿದ್ದು ನಾನು ಬಂದ ಉದ್ದೇಶವನ್ನು ತಿಳಿದುಕೊಂಡರು. ಅವರ ಪರಿಚಯ ನನಗೂ ಇಂಟ್ರೆಸ್ಟಿಂಗ್ ಬಂದಿದ್ದರಿಂದ ಮೆರವಣಿಗೆ ಕೂಡ ಹಿಂತಿರುಗಿ ಬರುವುದು ತಡವಾಗುವುದರಿಂದ ಇವರ ಬಗ್ಗೆ ಬರೆಯಬೇಕೆಂದು ಆ ಕ್ಷಣವೇ ನಿರ್ಧರಿಸಿದೆ.
ಇವರ ಹೆಸರು ಪರಮೇಶ್ವರಪ್ಪ ಕುಂಬಾರ್ ಸುಮಾರು 80 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು ಪ್ರಸ್ತುತ ಮುನಿರಾಬಾದ್ ಬಳಿ ಇರುವ ನಿಂಗಾಪುರ ಎಂಬ ಗ್ರಾಮದಲ್ಲಿ ವಾಸವಾಗಿದ್ದಾರೆ ವೃತ್ತಿ ಹೋಟೆಲ್ ಉದ್ಯಮ, ಆದರೆ ಇವರ ದಿನಚರಿ ತುಂಬಾ ಆಶ್ಚರ್ಯಕರವಾಗಿದ್ದರೂ ಒಂದು ರೀತಿಯಲ್ಲಿ ನೀತಿ ಮತ್ತು ಧರ್ಮ ಎರಡೂ ಇದೆ ಇವರ ದಿನಚರಿ ಹೇಗಿದೆಯೆಂದರೆ ಮೊದಲಿನಿಂದಲೂ ಬೆಳಿಗ್ಗೆ 4 ಗಂಟೆಗೆ ಏಳುವ ಅಭ್ಯಾಸವನ್ನು ಹೊಂದಿದ್ದು ಎದ್ದ ತಕ್ಷಣವೇ ಭೂಮಿ ತಾಯಿಗೆ ನಮಸ್ಕಾರವನ್ನು ಮಾಡುವುದರ ಮೂಲಕ ತಮ್ಮ ನಿತ್ಯ ದಿನಚರಿಯನ್ನು ಆರಂಭಿಸಿ ದೇವರ ಪೂಜೆ ಮುಗಿಸುವವರೆಗೂ ಒಂದು ಹನಿ ನೀರನ್ನು ಕೂಡ ಮುಟ್ಟುವುದಿಲ್ಲ. ಅಷ್ಟರ ಮಟ್ಟಿಗೆ ತಮ್ಮದೇ ಆದ ಶಿಸ್ತನ್ನು ಬೆಳೆಸಿಕೊಂಡಿದ್ದಾರೆ. ಕಾರಣವೇನು ಎಂದು ಕೇಳಿದಾಗ ನಾನು ಇಷ್ಟು ವರ್ಷಗಳ ಕಾಲ ಬದುಕಿದ್ದೇನೆಂದರೆ ಕಾರಣವೇ ಈ ಭೂಮಿ ತಾಯಿಯ ಆಶೀರ್ವಾದ, ಎಲ್ಲವೂ ಆ ತಾಯಿಗೆ ಸೇರಿದ್ದು ನಮ್ಮದು ಅಂತ ಏನು ಇಲ್ಲ. ಏನಿಲ್ಲವೆಂದರೂ ನಿತ್ಯ 8 ರಿಂದ 10 ಗಂಟೆಗಳ ಕಾಲ ಪುಸ್ತಕವನ್ನು ಓದುವ ಹವ್ಯಾಸ ಹೊಂದಿದ್ದು ಇವರ ಬಳಿ ಪುಸ್ತಕಗಳ ಲೈಬ್ರರಿಯೇ ಇದೆ. ಆದರೆ ಇವರ ಒಂದು ಸ್ವಭಾವ ನನಗೆ ಬಹಳ ಆಶ್ಚರ್ಯವನ್ನುಂಟು ಮಾಡಿತ್ತು. ಸಾಮಾನ್ಯವಾಗಿ ಹೊರಗೆ ಬರಬೇಕಾದರೆ ಅಥವಾ ಯಾವುದೇ ಕೆಲಸಕ್ಕೆ ಹೋಗಬೇಕಾದರೂ ದೇವರಿಗೆ ನಮಸ್ಕರಿಸಿ ಹೋಗುವುದು ಮೊದಲಿನಿಂದಲೂ ಬಂದ ಪದ್ಧತಿ ಕೂಡ ಆಗಿದೆ. ಆದರೆ ಇವರು ಹಾಗಿಲ್ಲ, ಈಗಲೂ ಕೂಡ ಹೊರಗೆ ಬರಬೇಕಾದರೆ ಅಥವಾ ಯಾವುದೇ ಕೆಲಸಕ್ಕೆ ಹೋಗಬೇಕಾದರೆ ತಮ್ಮ ಪತ್ನಿಗೆ ನಮಸ್ಕಾರ ಮಾಡಿ ಹೋಗುತ್ತಾರೆ. ಆಶ್ಚರ್ಯ ಅನಿಸುತ್ತದೆ ಅಲ್ಲವೇ? ಆದರೂ ಇದು ಸತ್ಯ. ಇವರ ಪತ್ನಿ ಹೆಸರು ಈರಮ್ಮ ಸುಮಾರು 50 ಕ್ಕೂ ಅಧಿಕ ವರ್ಷಗಳಿಂದ ದಾಂಪತ್ಯದ ಜೀವನ ನಡೆಸುತ್ತಿದ್ದು ತಮ್ಮ ಪತ್ನಿಯಲ್ಲಿ ತಾಯಿಯನ್ನು ಕಾಣುತ್ತಿದ್ದಾರೆ. ಯಾಕೆ ಎಂದು ಕೇಳಿದಾಗ ಅವರು ಹೇಳಿದ್ದು ಒಂದೇ ಮಾತು, ಜನ್ಮ ಕೊಟ್ಟ ತಾಯಿ ಒಬ್ಬರಾದರೆ, 50 ಕ್ಕೂ ಅಧಿಕ ವರ್ಷಗಳ ದಾಂಪತ್ಯದ ಜೀವನದಲ್ಲಿ ಎದುರಾದ ನನ್ನ ಪ್ರತಿ ಕಷ್ಟ ಸುಖದಲ್ಲಿ ಆಸರೆಯಾಗಿ ಬಂದ ಕಷ್ಟಗಳನ್ನು ನುಂಗಿ ಬದುಕಿದರು. ಮೊದಲನೇ ಸಲ ವಚನದ ಕಾರ್ಯಕ್ರಮದಲ್ಲಿ ನನಗೆ ಸನ್ಮಾನ ಮಾಡಿದಾಗ ಅವರು ಪಟ್ಟ ಸಂತೋಷ ಅಷ್ಟಿಷ್ಟಲ್ಲ, ಪ್ರತಿ ಕಷ್ಟ ಸುಖದಲ್ಲಿ ಭಾಗಿಯಾಗಿ ಇಷ್ಟು ವರ್ಷಗಳಿಂದ ನನ್ನನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದ ಇವರು ಕೂಡ ನನ್ನ ತಾಯಿಯೇ ಅಲ್ವಾ ನೀವೇ ಹೇಳಿ ಎಂದಾಗ ನನಗೆ ಒಂದು ಕ್ಷಣ ಮಾತೇ ಹೊರಡಲಿಲ್ಲ. 80 ವರ್ಷದ ಹಿರಿಯ ವ್ಯಕ್ತಿ ಎಂತಹ ಅರ್ಥಗರ್ಭಿತ ಆಲೋಚನೆ, ಮಾತು, ಕೇವಲ 4 ನೇ ತರಗತಿಯವರೆಗೆ ಓದಿರುವ ಇವರ ಪ್ರತಿಭೆಗೆ, ಬುದ್ದಿ ಶಕ್ತಿಗೆ ನಾನು ಆಗಲೇ ಶರಣಾಗಿ ಬಿಟ್ಟಿದ್ದೆ. ಈ ವಚನಗಳ ಅಭ್ಯಾಸ ಬಂದಿದ್ದಾದರೂ ಹೇಗೆ ಎಂದು ಕೇಳಿದಾಗ ಚಿಕ್ಕ ವಯಸ್ಸಿನಲ್ಲೇ ಇವರ ಮಾವ ಹೇಳಿಕೊಟ್ಟ 5 ವಚನಗಳಿಂದ ಆರಂಭವಾಗಿದ್ದು ಪ್ರಸ್ತುತ 5000 ಕ್ಕೂ ಅಧಿಕ ವಚನಗಳನ್ನು ಕಂಠ ಪಾಠ ಮಾಡಿದ್ದು ಅದರಲ್ಲೂ ಪುಸ್ತಕವನ್ನು ನೋಡದೇ ಹೇಳುತ್ತಾರೆ.
   ಸಾಮಾನ್ಯವಾಗಿ ಮನುಷ್ಯನಿಗೆ 60 ವರ್ಷ ದಾಟಿದ ನಂತರ ಅರವು ಮರಿವು ಎಂದು ಹೇಳುವ ಈಗಿನ ಕಾಲದಲ್ಲಿ ಇವರದು ತದ್ವಿರುದ್ಧ ಪ್ರಕೃತಿ. ಸುಮಾರು 80 ವರ್ಷ ವಯಸ್ಸಾಗಿದ್ದರೂ ದೋಷವಿಲ್ಲದೇ ಮಾತನಾಡುವ ಸ್ಪಷ್ಟ ಮಾತು, ಕುಗ್ಗದ ನೆನಪಿನ ಶಕ್ತಿ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಮಾನಸಿಕವಾಗಿ ಚುರುಕಾಗಿರುವ ವ್ಯಕ್ತಿಯಾಗಿದ್ದರೂ ವಯಸ್ಸಿಗೆ ಅನುಗುಣವಾಗಿ ನಡೆದಾಡಲು ಕಷ್ಟ ಪಡುತ್ತಿದ್ದಾರೆ ಎನ್ನುವುದು ಕೂಡ ಅಷ್ಟೇ ಸತ್ಯ. ಕುತೂಹಲಕ್ಕೆ ಕೆಲವು ವಚನಗಳನ್ನು ಹೇಳಿ ನೋಡೋಣ ಎಂದು ಟೈಂ ಹಚ್ಚಿದ್ದೇ ತಡ ಆರಂಭವಾದ ಸರ್ವಜ್ಞನ ವಚನ, ಅದು ಕೂಡ ಮನುಷ್ಯನ ಶರೀರದ ಮೇಲೆ ವಚನಗಳನ್ನು ಅರ್ಥ ಸಹಿತ ಬಿಡಿಸಿ ಹೇಳಿದ್ದರಲ್ಲದೇ ಒಂದು ಗಂಟೆಯಲ್ಲಿ 50 ಕ್ಕೂ ಅಧಿಕ ವಚನಗಳನ್ನು ಸ್ವಲ್ಪ ವೂ ದೋಷವಿಲ್ಲದೇ ಸ್ಪಷ್ಟ ಉಚ್ಚಾರದಲ್ಲಿ ಹೇಳಿದ್ದರು. ನನಗೆ ಒಂದು ಹವ್ಯಾಸವಿದ್ದು ನಾನು ಯಾರನ್ನಾದರೂ ಮಾತನಾಡಿಸುವ ಸಮಯದಲ್ಲಿ ಹೆಚ್ಚಾಗಿ ಅವರ ಕಣ್ಣುಗಳನ್ನೇ ಗಮನಿಸುತ್ತಿರುತ್ತೇನೆ. ಇದೇ ರೀತಿ ಇವರು ವಚನ ಹೇಳುತ್ತಿದ್ದ ಸಮಯದಲ್ಲಿ ಇವರ ಕಣ್ಣುಗಳನ್ನು ಹೆಚ್ಚು ಗಮನಿಸಿದ್ದರೂ ಇವರ ಕಣ್ಣುಗಳಲ್ಲಿ ನನಗೆ ಆಯಾಸ ಕಾಣಲೇ ಇಲ್ಲ. ಬದಲಾಗಿ ವಚನಗಳ ಮೇಲೆ ಅವರಿಗಿರುವ ಪ್ರೀತಿಯೇ ಅವರಿಗೆ ಆಯಾಸ ಬರಲು ಬಿಡುತ್ತಿಲ್ಲವೆಂದರೆ ಆ ವಚನಗಳ ಸಾಮರ್ಥ್ಯ ಎಷ್ಟಿರ ಬೇಡ? ನೀವೇ ಹೇಳಿ, ಏಕೆಂದರೆ ಈ ವಚನಗಳ ಸಾಮರ್ಥ್ಯದ ಅನುಭವ ನನಗೂ ಆಗಿದೆ, ಇದೊಂದೇ ಅಲ್ಲ ಪ್ರತಿ ಪುಸ್ತಕಗಳು ಒಂದಲ್ಲ ಒಂದು ರೀತಿಯಲ್ಲಿ ಸಾಮರ್ಥ್ಯವನ್ನು ಹೊಂದಿದ್ದು ಅವುಗಳನ್ನು ನಾವುಗಳು ತಿಳಿದುಕೊಳ್ಳಲು ಆಗದೇ ಸೋಲುತ್ತಿದ್ದೇವೆ ಅಷ್ಟೇ. ಇವರು ಮೂಲತಃ ಪಂಡರಾಪುರದ ಪಾಂಡುರಂಗನ ಭಕ್ತರಾಗಿದ್ದು ಗಂಗಾವತಿ, ಮೈಲಾಪುರ, ಹೊಸಪೇಟೆ ಮತ್ತು ಹಿಟ್ನಾಳ ಸೇರಿ ಅನೇಕ ಕಾರ್ಯಕ್ರಮಗಳಲ್ಲಿ ಸರ್ವಜ್ಞನ ವಚನಗಳನ್ನು ಹೇಳಿದ್ದರ ಫಲ ದೊರೆತ ಸನ್ಮಾನ ಇವರಿಗೆ ಕನ್ನಡದ ಮುತ್ತು ಮತ್ತು ಸಂಚಾರಿ ಸರ್ವಜ್ಞ ಎಂಬ ಬಿರುದು ದೊರೆತಿದ್ದು ಇಂದಿಗೂ ಬಹಳಷ್ಟು ಜನ ಇವರನ್ನು ಸಂಚಾರಿ ಸರ್ವಜ್ಞ ಎಂದೇ ಕರೆಯುತ್ತಾರೆ. ಸಂಭಾವನೆ ವಿಷಯವನ್ನು ಕೇಳಿದಾಗ ಕೂಡ ಅವರು ಕೇಳಿದಷ್ಟು ಕೊಡ್ತಾರೆ, ಆದರೆ ಕಾಲ ಹಾಗಿಲ್ಲ, ಇವತ್ತು ಇದ್ದವರು ನಾಳೆ ಇರ್ತೇವೆ ಎನ್ನುವ ಗ್ಯಾರಂಟಿಯೂ ಇಲ್ಲ. ಅಷ್ಟು ಹಣ ತೆಗೆದುಕೊಂಡು ಏನು ಮಾಡಲಿ? ಎಂದಾಗ ಈ ಹಿರಿಯ ವ್ಯಕ್ತಿ ಹತ್ತಿರ ಏನು ಮಾತನಾಡಬೇಕೆಂದೇ ಗೊತ್ತಾಗಲಿಲ್ಲ. ಈಗಲೂ ಕೂಡ ಅವರು ಸಂಭಾವನೆಯ ವಿಷಯದಲ್ಲಿ ಹೆಚ್ಚಿನದನ್ನು ಅಪೇಕ್ಷಿಸದೇ ಸಿಕ್ಕಿದರಲ್ಲೇ ತೃಪ್ತಿಯಿಂದ ಜೀವನವನ್ನು ನಡೆಸುತ್ತಿದ್ದಾರೆ. ನಿಜ ಹೇಳಬೇಕೆಂದರೆ ನಾನು ಅಲ್ಲಿಗೆ ಆ ಕ್ಷೇತ್ರದ ಬಗ್ಗೆ ಬರೆಯಲು ಹೋಗಿದ್ದರೂ ಬರೆಯಲಾಗದೇ ವಿಧಿ ಲಿಖಿತವು ಸಂಚಾರಿ ಸರ್ವಜ್ಞನ ಕುರಿತು ಬರೆಯುವಂತೆ ಮಾಡಿತು. ಅದಕ್ಕೆ ಈ ಲೇಖನದ ಆರಂಭದಲ್ಲಿ ನಾವು ಏನೇ ಯೋಜನೆಯನ್ನು ಮಾಡಿಕೊಂಡರೂ ಕೊನೆಗೆ ವಿಧಿ ಲಿಖಿತದಂತೆ ಏನು ನಡೆಯಬೇಕೋ ಅದೇ ನಡೆಯುತ್ತದಲ್ಲದೇ ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯವಾಗಿದೆ ಎಂದು ಸಂಕ್ಷಿಪ್ತವಾಗಿ ಬರೆದಿದ್ದೇನೆ. ನನಗೆ ಈಗಲೂ ಕೂಡ ಇಪ್ಪಿತೇರಿ ಮಾಗುಣಿ ಕ್ಷೇತ್ರದ ಬಗ್ಗೆ ಬರೆಯುವ ಉದ್ದೇಶವಿದೆಯಾದರೂ ಸಮಗ್ರ ಮಾಹಿತಿ ದೊರೆಯದ ಕಾರಣ ಈ ವಿಷಯದ ಕುರಿತು ಬರೆಯುವ ಲೇಖನವನ್ನು ಸ್ವಲ್ಪ ದಿನಗಳ ಕಾಲ ಮುಂದೂಡಿದ್ದೇನೆ. ಏಕೆಂದರೆ ಸಮಗ್ರ ಮಾಹಿತಿಯಿಲ್ಲದೇ ಯಾವುದೇ ಲೇಖನವನ್ನು ಬರೆಯುವುದು ಅಷ್ಟು ಶ್ರೇಯಸ್ಕರವಲ್ಲ ಎನ್ನುವುದು ನನ್ನ ಅಭಿಪ್ರಾಯ ಕೂಡ ಆಗಿದೆ.
-ಸಂದೀಪ ಜೋಶಿ
ಗಂಗಾವತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ