ಸಿಂಧನೂರು ನಗರದ ಹಳೆಯ ಬಜಾರ್ ರಸ್ತೆಯ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ಮಾತನಾಡಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ಸಿಂಧನೂರು ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ರಂಗಮಂದಿರಕ್ಕೆ ಸ್ಥಳೀಯರಾದ ರಂಗಭೂಮಿ ಕಲಾವಿದರು ಹಾಗೂ ಶ್ರೇಷ್ಠ ಗವಾಯಿಗಳಾದ ಶ್ರೀ ಮೃಢದೇವ ಗವಾಯಿಗಳ ಹೆಸರಿಡಬೇಕೆಂದು ಒತ್ತಾಯಿಸಿದರು .
ಸಿಂಧನೂರು ನಗರದಲ್ಲಿ ಬಹುದಿನಗಳ ಕನಸಾಗಿದ್ದ ರಂಗಮಂದಿರ ನಿರ್ಮಾಣಗೊಂಡಿರುವುದು ಬಹಳ ಸಂತೋಷ,ಈ ರಂಗಮಂದಿರಕ್ಕೆ ಸ್ಥಳೀಯರಿಗೆ ಆದ್ಯತೆ ನೀಡುವ ಮೂಲಕ ಸ್ಥಳೀಯವಾಗಿ ಕಲೆ,ಸಾಹಿತ್ಯ, ರಂಗಭೂಮಿ,ನಾಟಕ,ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳು ಹಲವಾರು ಪುಣ್ಯ ಪುರುಷರಿದ್ದಾರೆ ಅಂಥವರಲ್ಲಿ ಸಿಂಧನೂರು ತಾಲೂಕಿ ಕೆ.ಹೊಸಹಳ್ಳಿ ಗ್ರಾಮದಲ್ಲಿ ಜನಿಸಿದ ಶ್ರೀ ಮೃಢದೇವ ಗವಾಯಿಗಳು ಪಂಡಿತ ಪಂಚಾಕ್ಷರಿ ಗವಾಯಿಗಳ ಪ್ರೀತಿಯ ಶಿಷ್ಯರಾಗಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ಶ್ರೀ ಹಾನಗಲ್ ಕುಮಾರೇಶ್ವರ ನಾಟ್ಯ ಸಂಘದಲ್ಲಿ ರಂಗಭೂಮಿ ಕಲಾವಿದರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಇವರು ಮುಂದೆ ನಾಟಕ ಕಂಪನಿಗಳಲ್ಲಿ ಉತ್ತಮ ನಟರಾಗಿ ಅಭಿನಯಿಸಿ ಪ್ರಸಿದ್ದಿಹೊಂದಿದವರು.ಇವರು ಅಮರೇಶ್ವರ ನಾಟ್ಯ ಸಂಘ ಸಿಂಧನೂರು ಎಂಬ ಕಂಪನಿಯನ್ನು ಆರಂಬಿಸಿದರು. ಉತ್ತರ ಕರ್ನಾಟಕದ ದೊಡ್ಡ ನಾಟಕ ಕಂಪನಿ ಎಂಬ ಹೆಗ್ಗಳಿಕೆ ಹೊಂದಿದೆ.
“ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟ್ಯ ಸಂಘ”ದ ಸ್ಥಾಪನೆಯೊಂದಿಗೆ ತಮ್ಮಕಲಾ ಸೇವೆಯನ್ನು ಅಭಿನಯ, ಗಾಯನ, ವಾದನದೊಂದಿಗೆ ತಮ್ಮನ್ನು ಪ್ರೇಕ್ಷಕರಿಗೆ ಪರಿಚಯಿಸಿಕೊಂಡವರು ಮೃಡದೇವ ಗವಾಯಿಗಳು. ಸಂಗೀತ ಪ್ರೇಮಿಗಳು “ಮೃಡದೇವ” ನನ್ನು ಗವಾಯಿಗಳೆಂದು ಅಭಿಮಾನದಿಂದ ಕರೆದರೆ, ಅವರ ಅಭಿನಯವನ್ನು ಕಂಡು ಮೆಚ್ಚಿದ ರಂಗಭೂಮಿ ಪ್ರೇಮಿಗಳು ಮಹಾನ್ ನಟರೆಂದು ಕರೆದು ಗೌರವಿಸಿದರು. ಸಂಗೀತ ಹಾಗೂ ಅಭಿನಯಗಳೆರಡರಲ್ಲೂ ವಿಶೇಷ ಪರಿಣಿತರಾದ ಮೃಡದೇವ ಗವಾಯಿಗಳು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದವರು. ಅವರೊಬ್ಬ ಸಂಗೀತಗಾರನಾಗಬೇಕೆಂಬ ಇಚ್ಛೆಯಿಂದ ಎಂಟು ವರ್ಷದ ಈ ಬಾಲಕ ಪಂಚಾಕ್ಷರ ಗವಾಯಿಗಳ ಸಂಚಾರ ಸಂಗೀತ ಪಾಠಶಾಲೆಯು ಕೋಟೆಕಲ್ಲಿನಲ್ಲಿದ್ದಾಗ ಪ್ರವೇಶ ಪಡೆದರು. ಬಡಕಲು ಶರೀರ, ಸುಶ್ರಾವ್ಯ ಕಂಠ ಹೇಳಿದ್ದನ್ನು ನುಂಗಿ ಅರಗಿಸಿಕೊಳ್ಳುವ ಗ್ರಹಣ ಶಕ್ತಿಯೊಂದಿಗೆ ಪ್ರಾಥಮಿಕ ಶಿಕ್ಷಣ ಮುಗಿಸಿದ ಮೃಡದೇವನಿಗೆ ಪಂಚಾಕ್ಷರ ಗವಾಯಿಗಳು “ಸಂಗೀತದಲ್ಲಿ ವಿಶೇಷ ಪರಿಣತಿ ಸಾಧಿಸುವುದಕ್ಕೆ ಕಂಠದಂತೆ ದೇಹಕ್ಕೂ ವ್ಯಾಯಾಮಕೊಡು” ಎಂದು ಆಶೀರ್ವದಿಸಿದರು. 1940ರ ಅವಧಿಯಲ್ಲಿ ಮೃಡಯ್ಯನವರು “ಶ್ರೀ ಕುಮಾರೇಶ್ವರ” ಕೃಪಾಪೋಷಿತ ನಾಟ್ಯ ಸಂಘ”ದಲ್ಲಿ ಹಾರ್ಮೋನಿಯಂ ವಾದಕರಾಗಿ ಸೇವೆ ಪ್ರಾರಂಭಿಸಿದರು. ಗವಾಯಿಗಳವರ “ಶ್ರೀಕೃಷ್ಣ ಗಾರುಡಿ” ನಾಟಕದ ಭೀಮನ ಪಾತ್ರಧಾರಿಗಾಗಿ ಶೋಧನ ನಡೆದಾಗ ಮೃಡಯ್ಯನವರನ್ನೇ ಭೀಮನ ಪಾತ್ರಕ್ಕೆ ಪಂಚಾಕ್ಷರ ಗವಾಯಿಗಳು ನಿರ್ಧರಿಸಿ ಪಾತ್ರವನ್ನು ಅಭಿನಯಿಸುವಂತೆ ಅಪ್ಪಣೆ ಮಾಡಿದರು. ಮೃಡದೇವನವರು ಭೀಮನ ಪಾತ್ರದಲ್ಲಿ ಪ್ರೇಕ್ಷಕರನ್ನು ತಮ್ಮ ಅದ್ಭುತ ಅಭಿನಯದೊಂದಿಗೆ ಆನಂದ ಪಡಿಸಿದರು. ರೌದ್ರಾವತಾರದ ಮುಖ, ಭೀಕರತೆಯ ಕಣ್ಣುಗಳು, ಭಯದಿಂದ ರಂಗಭೂಮಿಯನ್ನು ಪ್ರವೇಶಿಸಿ ಗುಡುಗುವ ಮೃಡಯ್ಯನವರ ಅಭಿನಯ ನಾಟಕದಲ್ಲಿ ರೋಮಾಂಚನಕಾರಿ ವಾತಾವರಣವನ್ನೇ ನಿರ್ಮಾಣ ಮಾಡುತ್ತಿತ್ತು.
ಪೌರಾಣಿಕ ನಾಟಕಗಳಾದ “ರೇಣುಕಾ ಮಹಾತ್ಮೆ”ಯಲ್ಲಿ ಪರಶುರಾಮನಾಗಿ, “ಹರಗಿರಿಜೆ”-ನಾಟಕದಲ್ಲಿ ತಾರಕಾಸುರನಾಗಿ, ಶ್ರೀ ಕೃಷ್ಣ ಗಾರುಡಿಯಲ್ಲಿ ಭೀಮನಾಗಿ, ಪ್ರಪಂಚ ಪರೀಕ್ಷೆಯಲ್ಲಿ – ಭತ್ಯಹರಿಯಾಗಿ ಪಾತ್ರವಹಿಸಿದರು. “ಹರಗಿರಿಜೆ” ನಾಟಕದ ತಾರಕಾಸುರನ ಅಭಿನಯವು ಮೃಡದೇವರಿಗೆ ಹೆಚ್ಚಿನ ಕೀರ್ತಿಯನ್ನು ತಂದು ಕೊಟ್ಟಿತು. ಸಾಮಾಜಿಕ ನಾಟಕಗಳಾದ “ಕುಲಪುತ್ರ”ದಲ್ಲಿ ಹಾಲಪ್ಪನಾಗಿ; “ಪಣಕ್ಕಿಟ್ಟ ಪ್ರಮಾಣ”ದಲ್ಲಿ – ಸೈನಿಕನಾಗಿ; ಪಾತ್ರವಹಿಸಿ ಅಭಿನಯಿಸಿದ ಮೃಡಯ್ಯನವರಲ್ಲಿ ಉತ್ತಮ ರಂಗಭೂಮಿಯ ಕಲಾವಿದನೊಬ್ಬನಿಗೆ ಇರಬೇಕಾದ ಎಲ್ಲ ಅರ್ಹತೆಗಳಿದ್ದವು. ಗವಾಯಿಗಳವರ ನಾಟಕ ಮಂಡಳಿಯಲ್ಲಿಯೇ ಅತಿ ಸುಂದರ ಕಲಾವಿದರು. ಸುಪ್ರಸಿದ್ದ ನಟರಾಗಿ ಸೇವೆಸಲ್ಲಿಸಿದ ಮೃಡಯ್ಯನವರು “ನಟ ಶೇಖರ” ಬಿರುದು ಪಡೆದಿದ್ದರು. ಕೆಲವು ಕಾಲ “ಶ್ರೀ ಅಮರೇಶ್ವರ ನಾಟ್ಯ ಸಂಘ ಹೊಸಹಳ್ಳಿ” ಸ್ಥಾಪಿಸಿ, ಅದರ ಮೂಲಕ ಹಲವಾರು ರಂಗಪ್ರಯೋಗಗಳನ್ನು ಪ್ರದರ್ಶಿಸಿದ ನಾಟಕ ಸಂಘದ ಒಡೆಯಾಗಿದ್ದರು. “ತಮ್ಮ ಜೀವಮಾನವನ್ನೇ ರಂಗಭೂಮಿಯಲ್ಲಿ ನಟರಾಗಿ ಅಭಿನಯಿಸುವದರೊಂದಿಗೆ ಗಂಧದಂತೆ ಕಾಯವನ್ನು ದುಡಿಸಿದ ಮೃಡದೇವ ಗವಾಯಿಗಳು ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿ ಪಡೆದ ಅಪರೂಪದ ನಟರಾಗಿದ್ದಾರೆ:. 1967ರಲ್ಲಿ ಪಟ್ಟದಕಲ್ಲಿನಲ್ಲಿ ಬಸವಯ್ಯನವರ ಕಂಪನಿಯು ಲಿಂಗದ ಹೊಳೆ ಜಾತ್ರೆಯಲ್ಲಿ ಕ್ಯಾಂಪ್ ಮಾಡಿತ್ತು. “ಪಣಕ್ಕಿಟ್ಟ ಪ್ರಮಾಣ” ನಾಟಕ ಜನದಟ್ಟಣೆಯಲ್ಲಿ ಪ್ರಯೋಗಗೊಳ್ಳುತ್ತಿತ್ತು.
ಇಂತಹ ಒಬ್ಬ ಉತ್ತಮ ರಂಗಭೂಮಿ ಕಲಾವಿದರನ್ನು ಗೌರವಿಸಿ ಅವರ ಹೆಸರನ್ನು ಸಿಂಧನೂರಿನಲ್ಲಿ ನಿರ್ಮಾಣಗೊಳ್ಳುತ್ತಿರು ನೂತನ ರಂಗಮಂದಿರಕ್ಕೆ ಹೆಸರಿಡುವ ಮೂಲಕ ಅವರ ಹೆಸರನ್ನು ಅಜರಾಮರಗೊಳಿಸಬೇಕು.
ಈಗಾಗಲೇ ನಗರ ಸಭೆಯಿಂದ ವಿವಿಧ ಸ್ಥಳಗಳಿಗೆ ಗೌರವಾನ್ವಿತ ಹೆಸರುಗಳಿದ್ದ ಅವುಗಳನ್ನು ಪರಿಶೀಲಿಸಿ ಹೊಸದಾಗಿ ಇಂತಹ ಮಹಾನ್ ರಂಗಭೂಮಿ ಕಲಾವಿದ,ಸಂಗೀತ ದಿಗ್ಗಜ ನಮ್ಮ ಸಿಂಧನೂರು ತಾಲೂಕಿನವರು ಅಭಿಮಾನದ ಸಂಗತಿ.ಅವರ ಸಾಧನೆ ಗುರುತಿಸಿ ಅವರ ನೆನಪು ಸದಾ ಉಳಿಯಲು ದಯವಿಟ್ಟು ಸಿಂಧನೂರು ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಂಗಮಂದಿರಕ್ಕೆ ಸ್ಥಳೀಯ ಮಹಾನ್ ರಂಗಭೂಮಿ ಕಲಾವಿದರಾದ” ಶ್ರೀ ಮೃಢದೇವ ಗವಾಯಿ ಮಂದಿರ” ಎಂದು ಹೆಸರಿಡಬೇಕು ಎಂದು ಒತ್ತಾಯಿಸಿದರು.