ಓ ಹಣವೇ, ಅದೆಷ್ಟು ಹೆಸರು ಬದಲಿಸಿಬಿಟ್ಟೆ…?
ಗುಡಿಯ ಒಳಗೆ ನಿನ್ನ ಹೆಸರು ಕಾಣಿಕೆ – ಹರಕೆ.
ಗುಡಿಯ ಹೊರಗೆ ನಿನ್ನ ಹೆಸರು ಭಿಕ್ಷೆ .
ನೌಕರನಿಗೆ ಕೊಟ್ಟರೆ ನಿನ್ನ ಹೆಸರು ಸಂಬಳ,
ಕಾರ್ಮಿಕರಿಗೆ ಕೊಟ್ಟರೆ ಕೂಲಿ ,
ಬಲಿಷ್ಠರಿಗೆ ಕೊಟ್ಟರೆ ನಿನ್ನ ಹೆಸರು ದೇಣಿಗೆ.
ಕನಿಷ್ಠರಿಗೆ ಕೊಟ್ಟರೆ ದಾನ.
ಸರ್ಕಾರಕ್ಕೆ ಕಟ್ಟಿದರೆ ತೆರಿಗೆ..
ನಿವೃತ್ತಿಯಲಿ ವೃದ್ಧರಿಗೆ ಪಿಂಚಣಿ …
ಕಟಕಟೆಯಲ್ಲಿ ಕಟ್ಟಿದರೆ ದಂಡ…
ಕಾರ್ಯ ನಿಮ್ಮಿತ್ಯ ಕಳ್ಳ ದಾರಿಯಲಿ
ನಿನ್ನ ಹೆಸರು ಲಂಚ…!
ಸಾವಿನ ಮನೆಯಲ್ಲಿ ಸಂಭ್ರಮಿಸುವ
ನಿನ್ನ ಹೆಸರು ಪರಿಹಾರ.
ಹೋಟೆಲ್ ನಲ್ಲಿ ಬಿಲ್…
ಮೋಟಾರ್ ನಲ್ಲಿ ಬಾಡಿಗೆ…
ಕರುಣೆ ಮರೆತ ಕೈಗಳಲ್ಲಿ ನಿನ್ನ ಹೆಸರು ಸುಪಾರಿ…
ಒಟ್ಟಿನಲ್ಲಿ ನೀನು ನಿಜವಿಲ್ಲದ ಸಂಚಾರಿ…!
ಬಡವರಿಗೆ ಬಗ್ಗದ ವ್ಯಾಪಾರಿ…!
ಹಿರಿದಾರಿಯಲಿ ಹಿಗ್ಗುವೆ.
ಕಿರಿದಾರಿಯಲಿ ಕುಗ್ಗುವೆ
ಪ್ರಚಾರಕ್ಕೆ ಅರಳುವೆ,
ವಿಚಾರಕ್ಕೆ ಬಾಡುವೆ.
ತಪ್ಪು ನಿನ್ನದಲ್ಲ ಹಣವೇ,
ನೀ ಆಡಿಸುವವರ, ಕೈ ಬೊಂಬೆಯಾಗಿರುವೆ…
ಸಾವಿರಾರು ಹೆಸರಿರುವ ನಿನಗೆ
ನಿಷ್ಠೆ ಯಾವುದು.? ಪ್ರತಿಷ್ಠೆ ಯಾವುದು? ಎಂದು
ಅರಿಯದ ಅಮಾಯಕರಿಗೆ
ನೀನು ಗಗನ ಕುಸುಮ.
ಬಡಿದುಂಡವನೇ ದೊಡ್ಡಪ್ಪ..
ದುಡಿದುಂಡವನೇ ಚಿಕ್ಕಪ್ಪ…
ನಿನ್ನ ಅವತಾರ ಅರಿಯದವರು ಅಯ್ಯೋ ಪಾಪ….!!
- ನಯನ ಇಂಗಳೇಶ್ವರ.