ಕೊಪ್ಪಳ/ಕಾರಟಗಿ: ನೈಸರ್ಗಿಕ ಸಂಪನ್ಮೂಲಗಳ ಹೆಚ್ಚಳಕ್ಕೆ ಮಹತ್ವ ನೀಡಿದ ನರೇಗಾ:ಗೋಪಾಲ ಕೃಷ್ಣ
ರೈತರಿಗೆ ನೀರಿನ ಸೌಲಭ್ಯ ಒದಗಿಸುವ ದ್ಯೇಯೋದ್ದೇಶದಿಂದ ಜೊತೆಗೆ ಗ್ರಾಮದ ಸಂಪತ್ತುಗಳು ಉಳಿಸಿ ನೈಸರ್ಗಿಕ ಸಂಪನ್ಮೂಲಗಳ ಹೆಚ್ಚಳಕ್ಕೆ ನರೇಗಾ ಯೋಜನೆಯು ಮಹತ್ವ ನೀಡಲಾಗಿದೆ ಎಂದು ಕೋಟಯ್ಯ ಕ್ಯಾಂಪ್ ಶ್ರೀರಾಮ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಗೋಪಾಲ ಕೃಷ್ಣ ಅವರು ಹೇಳಿದರು.
ತಾಲೂಕಿನ ಹೋಸಕೇರಾ ಗ್ರಾಮ ಪಂಚಾಯತಿ ವತಿಯಿಂದ ಕೋಟಯ್ಯ ಕ್ಯಾಂಪ್ ನಲ್ಲಿನ ಅಮೃತ ಸರೋವರ ದಡದಲ್ಲಿ ಆಯೋಜಿಸಿದ 74 ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನರೇಗಾ ಯೋಜನೆಯಡಿ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರವು ಮುಂದಾಗಿದೆ ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.
ನಂತರ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ನಾಗೇಶ್ ಕುರಡಿ ಅವರು ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ನೇ ವರ್ಷದ ಆಚರಣೆಯ ಸವಿ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಹಾತ್ವಕಾಂಕ್ಷಿ ಯೋಜನೆಯಾದ ಅಮೃತ ಸರೋವರ ಕೆರೆ ಅಭಿವೃದ್ಧಿ ಹಾಗೂ ಕಲ್ಯಾಣಿಗಳ ಪುನಶ್ಚೇತನ ಕಾರ್ಯಕ್ರಮ ಚಾಲನೆ ನೀಡಿದ್ದು ಇಂದು ದೇಶದೆಲ್ಲೆಡೆ ಸಾಕಷ್ಟು ಕೆರೆಗಳನ್ನು ನರೇಗಾದಡಿ ಅಭಿವೃದ್ಧಿಗೊಳಿಸಿ, ದಡದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ತಾ.ಪಂ,ಗ್ರಾ.ಪಂ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಅಮೃತ ಸರೋವರಕ್ಕೆ ಬಾಗಿನ ಅರ್ಪಿಸಿದರು. ಸರೋವರ ದಡದಲ್ಲಿ ಕೋಟಯ್ಯ ಕ್ಯಾಂಪ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ, ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿ ಮಕ್ಕಳಿಗೆ ಬಹುಮಾನ ವಿತರಣೆಯನ್ನು ಗ್ರಾಮ ಪಂಚಾಯತಿ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಂಕಾಳಿ ಮಾರೆಪ್ಪ, ಉಪಾಧ್ಯಕ್ಷರಾದ ಜೆ. ರತ್ನಮ್ಮ ಓಂಕಾರಪ್ಪ, ಸರ್ವ ಸದಸ್ಯರು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕಿರಣ್ ಕುಮಾರ್, ಐಇಸಿ ಸಂಯೋಜಕ ಸೋಮನಾಥ ನಾಯಕ, ಗ್ರಾಮ ಪಂಚಾಯತಿ ಕಾರ್ಯದರ್ಶಿ ವಿರುಪಯ್ಯ ಸ್ವಾಮಿ, ಗ್ರಾಮದ ಪ್ರಮುಖರು, ಶಾಲಾ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಸೇರಿ ಗ್ರಾ.ಪಂ ಸಿಬ್ಬಂದಿಗಳು ಇದ್ದರು.