ಹೊತ್ತು ಹೆತ್ತು ಈ ಮಾಯಾ ಲೋಕದೊಳು
ದೂಡಿರುವಳು ಜನ್ಮ ನೀಡಿದ ನಿನ್ನ ಜನನಿ
ನಿನಗೆ ಯಾರಿಲ್ಲ ಇಲ್ಲಿ ನಿನ್ನವರು ತನ್ನವರು
ಬಂದು ನಿನ್ನಿಂದೆ ಬೆನ್ನಿಗೆ ನಿಂತು ಎತ್ತಲು ಧ್ವನಿ..!!
ಕೊಟ್ಟಿಗೆಯ ಕರುವಿಗೆ ಹಾಲುಣಿಸುವರ್ಯಾರು
ಹೊಳೆಯ ದಂಡೆಯ ಎಡಬಲದಲ್ಲಿ ಚಿಗುರಿದ ಹಸಿರು ಗರಿಕೆಯಂತೆ ಮರು ಹುಟ್ಟು ಪಡೆದು
ಕೊಡವಿ ಕೊಸರಿ ನೇಸರನಂತೆ ಮೇಲೆದ್ದೇಳಬೇಕು..!!
ನೀನಗೆ ನೀನೇ ಸ್ಪೂರ್ತಿಯ ಪಡೆದು ನೀ ಬೆನ್ನತ್ತು
ನಿನಗಾಗಿ ದುಡಿದು ದಣಿದು ಸುರಿಸು ಬೆವರ ಹನಿ
ಎಲ್ಲರ ಮನೆ ಮನದಲ್ಲೂ ಬಾಯಲ್ಲೂ ಒಂದೇ
ಪ್ರಕಾಶಿಸಿ ಪ್ರಜ್ವಲಿಸುತಿಹುದು ಹಣದ ಪ್ರತಿಧ್ವನಿ..!!
ಬದುಕಿನ ಸಂತೆಯುದ್ದಕ್ಕೂ ಚಿಂತೆಯು ತಪ್ಪಿದ್ದಲ್ಲ
ಎಡಬಿಡಂಗಿಗಳ ವಕ್ರದೃಷ್ಟಿ ತಪ್ಪಿಸಿಕೊಂಡವರಿಲ್ಲ
ಮುಂಜಾನೆ ಮುಸುಕಿನಲ್ಲಿ ಸೂರ್ಯನ ಹಿಂದಿಕ್ಕಿ ಓಡಬೇಕು ನೀನು ಈ ಬದುಕಿಗಾಗಿ ಮನಸ್ಸುಕ್ಕಿ..!!
ಕಸಿದು ತಿನ್ನುವ ಜಗದ ಮಧ್ಯೆ ಹಸಿದ ಹೊಟ್ಟೆಗೆ
ಮೂರೊತ್ತು ಗಂಜಿಯ ಸುರಿದು ಸಂತೈಸಲು
ಬಿಸಿ ತುಪ್ಪದಂತೆ ಸುಡು ಬಾಳಿಗೆ ನೀನಾಗಬೇಕಿಲ್ಲಿ
ಎಲ್ಲರ ಬಾಯಿಯೊಳು ಯುಗಾದಿ ಹಬ್ಬದ ಹೋಳಿಗೆ..!!
…✍️ ಮಲ್ಲಪ್ಪ ಭೈರಗೊಂಡ
ತಾಂತ್ರಿಕ ಸಹಾಯಕ
ಘಟಕ-07 BMTC ಬೆಂಗಳೂರು