ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ನಡೆದಾಡುವ ದೇವರು ನಮ್ಮನ್ನಗಲಿ ಒಂದು ತಿಂಗಳು,ಅನಾಥ ಪ್ರಜ್ಞೆಯಲ್ಲಿ ನಾವು ~ಡಾ.ಮಹಾಂತೇಶ ಬಿರಾದಾರ

ಹೊಸ ವರ್ಷ ಸಂಭ್ರಮಿಸಿದ ಮಾರನೇಯ ದಿನ ಅಸ್ತಂಗತರಾದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಅಂತ್ಯಕ್ರಿಯೆ ಸಂದರ್ಭದಲ್ಲಿ ನಾಡಿನ ಎಲ್ಲಾ ಸುದ್ದಿ ವಾಹಿನಿಗಳು ಜಾಹೀರಾತು ಇಲ್ಲದೆ ದಿನದ 24 ಗಂಟೆಯೂ ಸುದ್ದಿಯನ್ನು ಪ್ರಸಾರ ಮಾಡಿದ ಮೇಲೆ,ಈ ಬಗ್ಗೆ ಗೊತ್ತಿಲ್ಲದವರು ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಎಂಬ ಮಹಾನುಭಾವರಿದ್ದದ್ದು ಗೊತ್ತೇ ಆಗಲಿಲ್ಲವಲ್ಲ! ನಾವು ಹಲವು ಬಾರಿ ವಿಜಯಪುರಕ್ಕೆ ಭೇಟಿ ನೀಡಿದ್ದೇವೆ.ಗೊತ್ತಿದ್ದರೆ, ಅವರ ದರ್ಶನವನ್ನೂ ಪಡೆಯುತ್ತಿದ್ದೇವು ಎಂದು ಹಳಹಳಿಸಿದರು.

ವಿಜಯಪುರ ಜಿಲ್ಲೆಯ ತಿಕೋಟಾ ಹತ್ತಿರದ ಕೃಷಿಕ ಕುಟುಂಬದ ಸಿದ್ಧಗೊಂಡ ಓಗೇಪ್ಪ ಬಿರಾದಾರ ಅವರು, ಸಿದ್ದೇಶ್ವರ ಮಹಾಸ್ವಾಮಿಗಳು ಬೆಳೆದು ಬಂದಿರುವುದು ತಮ್ಮ ಜ್ಞಾನದ ಬೆಳಕಿನಿಂದ ತಾಯಿಯ ತವರು ಮನೆ ಬಸವಣ್ಣನ ಬಾಗೇವಾಡಿ ಹತ್ತಿರದ ನಂದಿಹಾಳದಲ್ಲಿ ಜನಿಸಿ, ಸ್ವಗ್ರಾಮ ಬಿಜ್ಜರಗಿಯಲ್ಲಿ ನಾಲ್ಕನೇ ತರಗತಿಯವರೆಗೆ ಓದಿ ಬಾಲಕನಿದ್ದಾಗಲೇ ಆಧ್ಯಾತ್ಮದ ಒಲವು ಬೆಳೆಸಿಕೊಂಡಾಗ ದೊರತ ಗುರುವೇ ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಗಳವರು. ವಿಜಯಪುರ ಬಸ್ ಸ್ಟ್ಯಾಂಡ್ ಹತ್ತಿರದ ನವಭಾಗದ ಕರಡಿಯವರ ತೋಟದಲ್ಲಿ ಮಲ್ಲಿಕಾರ್ಜುನ ಶ್ರೀಗಳ ವಾಸ್ತವ್ಯ ಅವರೊಂದಿಗೆ ಇದ್ದುಕೊಂಡು, ವಿಜಯಪುರ ಶ್ರೀ ಸಿದ್ದೇಶ್ವರ ಹೈಸ್ಕೂಲ್‍ನಲ್ಲಿ ವಿದ್ಯಾಭ್ಯಾಸ, ಚಿಕ್ಕ ಬಾಲಕನ ಆಧ್ಯಾತ್ಮದ ಹಸಿವನ್ನು ಗುರುತಿಸಿದ ಮಲ್ಲಿಕಾರ್ಜುನ ಶ್ರೀಗಳು ನಂತರ ಚಡಚಣದ ಸಂಗಮೇಶ್ವರ ಹೈಸ್ಕೂಲ್‍ಗೆ ಓದಲು ಕಳುಹಿಸಿದರು ಅಲ್ಲಿಂದ ವಿಜಯಪುರದಲ್ಲಿ ವಿಜಯ ಕಾಲೇಜಿನಲ್ಲಿ ಬಿಎ ಶಿಕ್ಷಣ ಪಡೆದು, ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಫಿಲಾಸಫಿಯಲ್ಲಿ ಎಂ.ಎ ಪದವಿ ಪಡೆದರು

ವೇದಗಳು, ಭಗವದ್ಗೀತೆ, ಯೋಗ ಸೂತ್ರಗಳು, ವಚನ ಸಾಹಿತ್ಯ, ಭೌತಶಾಸ್ತ್ರ ಗಣಿತ ಎಲ್ಲವನ್ನು ಅಭ್ಯಸಿಸಿದ ಸಿದ್ದೇಶ್ವರ ಶ್ರೀಗಳು ವಿಜಯಪುರದ ಹೃದಯ ಭಾಗದ ಶಿವಾನುಭವ ಮಂಟಪದಲ್ಲಿ ಪ್ರವಚನ ಆರಂಭಿಸಿದಾಗ ಜನ ನಿಬ್ಬೇರಗಾದರು.
ಸಂಸ್ಕøತದ ಸೂತ್ರಗಳನ್ನು ಅಚ್ಚ ವಿಜಯಪುರದ ಕನ್ನಡದಲ್ಲಿ ಸಾಮಾನ್ಯ ರೈತನಿಗೂ ತಿಳಿಯುವಂತೆ ಹೇಳುವ ಪರಿ, ಬಹುಬೇಗನೆ ಅವರಿಗೆ ಖ್ಯಾತಿ ತಂದುಕೊಟ್ಟಿತು.
ವಿಜಯಪುರ, ಬೆಳಗಾವಿ, ಕೊಲ್ಹಾಪುರ, ಸಾಂಗ್ಲಿ, ಸೋಲಾಪುರ ಜಿಲ್ಲೆಗಳಲ್ಲಿ ಮನೆಮಾತಾದ ಸಿದ್ದೇಶ್ವರ ಶ್ರೀಗಳು ವಿಜಯಪುರ ಜ್ಞಾನಯೋಗಾಶ್ರಮ ಕೇಂದ್ರವನ್ನಾಗಿಟ್ಟುಕೊಂಡು ನಾಡನ್ನೆಲ್ಲಾ ಸುತ್ತಿದರು. ಕರೆದಲ್ಲೆಲ್ಲಾ ಹೋಗಿ, ತಿಂಗಳುಗಟ್ಟಲೇ ಇದ್ದು, ಪ್ರವಚನ ಮಾಡಿದರು. ಕುಗ್ರಾಮದ ಹಳ್ಳಿಗಳ ತೋಟಗಳಲ್ಲಿ ಅವರ ವಸತಿ. ಅಲ್ಲಿಯೇ ಸುತ್ತಲೂ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್, ಬೆಳಿಗ್ಗೆ 6 ಗಂಟೆಗೆ ಆರಂಭಗೊಂಡ ಪ್ರವಚನ ಸರಿಯಾಗಿ ಏಳು ಗಂಟೆಗೆ ಮುಕ್ತಾಯ. ಸಂಜೆ ಆಸಕ್ತರೊಂದಿಗೆ ವಿವಿಧ ವಿಷಯಗಳ ಕುರಿತು ಚಿಂತನೆ.

82 ವರ್ಷಗಳ ಅವರ ಜೀವನದಲ್ಲಿ 60ಕ್ಕೂ ಮಿಕ್ಕಿ ವರ್ಷ ಪ್ರವಚನ ಮಾಡಿದರು. ತಮ್ಮ ಪ್ರವಚನದಲ್ಲಿ ಎಂದು ಯಾರಿಗೂ ಟೀಕೆ ಇಲ್ಲ. ಸದ್ವಿಚಾರ ತಿಳಿಸುವುದು, ನಿಸರ್ಗ ಕುರಿತು ಹೆಚ್ಚಿನ ಪ್ರೀತಿ, ಅದನ್ನೇ ಒತ್ತಿ ಹೇಳುವುದು. ಶರೀರವನ್ನು ದಂಡಿಸುವುದು, ಸರಳವಾಗಿ ಜೀವಿಸುವುದು ಇದು ಅವರ ಜೀವನ ವಿಧಾನ. ಮತ್ತು ಪ್ರವಚನದ ಸಾರವೂ ಹೌದು. ತಮ್ಮ ಪ್ರವಚನದಲ್ಲಿ ದೃಷ್ಟಾಂತಗಳ ಮಧ್ಯೆ ಜಗತ್ತಿನ ಮೇಧಾವಿಗಳ ಜೀವನದ ವಸ್ತು ವಿಷಯಗಳನ್ನು ಸರಳವಾಗಿ ವಿವರಿಸುವುದು. ಕನ್ನಡ, ಮರಾಠಿ, ಹಿಂದಿ, ಇಂಗ್ಲೀಷ್, ಸಂಸ್ಕೃತ ಸೇರಿದಂತೆ ಹಲವು ಭಾಷೆಗಳಲ್ಲಿ ಅಪಾರ ಪಾಂಡಿತ್ಯ.
ಆದರೆ ಎಂದಿಗೂ ತೋರಗೋಡಲಿಲ್ಲ.
ಸಮಯ ಪರಿಪಾಲನೆ, ಶಿಸ್ತು, ಸ್ವಚ್ಛತೆಗೆ ಆದ್ಯತೆ. ಸನ್ಯಾಸಿಗಳಾಗಿದ್ದರೂ ಖಾವಿ ಧರಿಸಲಿಲ್ಲ. ಹತ್ತಿಯಿಂದ ನೇಯ್ದ ಬಿಳಿಯ ಬಟ್ಟೆ, ಹರಿದ ಶರ್ಟ್‍ಗೆ ತಾವೇ ಸೂಜಿ ಮೊನೆ ಪೋಣಿಸುತ್ತಾ ಹೊಲಿಗೆ ಹಾಕುತ್ತಿದ್ದರು.

ಮಿತ ಆಹಾರ, ಮಿತ ಭಾಷೆ, ಹೆಚ್ಚೆಚ್ಚು ಜನರೊಂದಿಗೆ ಬರೆಯುವುದು, ಅವರಿಂದ ಹೊಸ-ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು, ಸದಾ ಓದುವುದು, ಎಂದಿಗೂ ಸಭೆ ಸಮಾರಂಭಗಳಲ್ಲಿ ಹೂಹಾರ ಹಾಕಿಕೊಳ್ಳಲಿಲ್ಲ. ಕೈಯಿಂದ ದುಡ್ಡನ್ನು ಮುಟ್ಟಲಿಲ್ಲ. ಹಿಂಬಾಲಕರಿಂದಲೂ ಪಡೆಯಲಿಲ್ಲ. ಕಾಣಿಕೆ ಪೆಟ್ಟಿಗೆ ಇಡಲಿಲ್ಲ. ಅವರ ಕಟ್ಟಿದ ಜ್ಞಾನಯೋಗಾಶ್ರಮ ಗಾಂಧೀಜಿಯ ಸಾಬರಮತಿ ಆಶ್ರಮದ ಪ್ರತಿರೂಪ. ಆಡಂಬರಕ್ಕೆ ಅಲ್ಲಿ ಜಾಗವಿಲ್ಲ. ಆಶ್ರಮವಾಸಿಗಳು ಸಾಧಕರು, ಶ್ರಮದ ದುಡಿಮೆ, ಸಾಮೂಹಿಕ ಪ್ರಾರ್ಥನೆ, ನಿತ್ಯ ಅಭ್ಯಾಸ, ಯೋಗ, ಸಾಮೂಹಿಕ ಪ್ರಸಾದ. ದಿನವೂ ಹಲವು ವಿಷಯಗಳ ಬಗ್ಗೆ ಚರ್ಚೆ, ನಿತ್ಯಚಿಂತನೆ ಹೀಗೆ ಸಾಗಿತ್ತು ಅವರ ಸುದೀರ್ಘ ಪಯಣ.

ವಿಜಯಪುರ ಸಮೀಪದ ಕಲ್ಯಾಣ ಕಾಖಂಡಕಿಯಲ್ಲಿ ಕಳೆದ ನವೆಂಬರನಲ್ಲಿ 40 ದಿನಗಳ ಕಾಲ ನಡೆದ ಅವರ ಪ್ರವಚನ ಸುಧೀರ್ಘ ಪಯಣಕ್ಕೆ ವಿರಾಮ ಹೇಳುವ ಸಮಯ ಬಂದಿದೆ ಎಂಬುದು ಇಚ್ಛಾಮರಣಿಗಳಾದ ಅವರಿಗೆ ತಿಳಿದಂತಿತ್ತು.
ಬಳಲಿದ ದೇಹ ಇನ್ನು ಪ್ರವಚನ ಹೇಳಲಾರದು, ನಡೆಯಲಾರದು… ಎಂದು ತಿಳಿಯುತ್ತಲೇ, ತಮ್ಮ ನೆಚ್ಚಿನ ಜ್ಞಾನಯೋಗಾಶ್ರಮಕ್ಕೆ ಹೊಸ್ತಿಲ ಹುಣ್ಣಿಮೆ ದಿನ ಆಗಮಿಸಿ,
ತಮ್ಮ ಅಂತಿಮ 27 ದಿನಗಳ ಕಾಲ ತಂಗಿ, ಎಲ್ಲಾ ಪರಮಪೂಜ್ಯರನ್ನು, ಗಣ್ಯರನ್ನು ಹಾಗೂ ಸಾವಿರ-ಸಾವಿರ ಸಂಖ್ಯೆಯ ಶಿಷ್ಯರನ್ನು, ಭಕ್ತರನ್ನು ಭೇಟಿ ಮಾಡಿ, ಅವರೊಂದಿಗೆ ನಗು-ನಗುತ್ತಲೇ ಸರಿಯಾಗಿ 27ನೇ ದಿನ ವೈಕುಂಠ ಏಕಾದಶಿ ಸೋಮವಾರದಂದು ಸೂರ್ಯಾಸ್ತವಾಗುವ ಸಮಯದಲ್ಲಿಯೇ ಜ್ಞಾನದ ಸೂರ್ಯ ಮರೆಯಾಯಿತು.

ಇದ್ದಾಗಲೇ, ಗದ್ದುಗೆ ಕಟ್ಟಿಸಿಕೊಂಡು, ನಮ್ಮನ್ನು ಇಲ್ಲಿಯೇ ಅಂತ್ಯಕ್ರಿಯೆ ಮಾಡಿ, ಮೂರು ಹೊತ್ತು ಪೂಜಿಸಬೇಕು ಎಂಬ ಸನ್ಯಾಸಿಗಳೇ ಹೆಚ್ಚಿರುವ ಈ ಕಾಲದಲ್ಲಿ ತಮ್ಮ ಅಂತ್ಯದ ನಂತರವೂ ಸಿದ್ಧೇಶ್ವರ ಶ್ರೀಗಳು ಇಡೀ ಸ್ವಾಮಿ ಕುಲಕ್ಕೆ ಮಾದರಿಯಾಗಿದ್ದಾರೆ.
2014 ರಲ್ಲಿ ಅವರು ಬರೆದಿಟ್ಟ ವಿಲ್ ಪ್ರತಿ ಬಾರಿ ಓದಿದಾಗಲೂ ಹೊಸ ಅರ್ಥವನ್ನು ನೀಡುತ್ತದೆ. ಅವರ ಇಡಿ ಪ್ರವಚನದ ವಸ್ತು ವಿಷಯಗಳ ಸಾರ ರೂಪ “ಅಂತಿಮ ಅಭಿವಂದನ ಪತ್ರ” ವಾಗಿದೆ.
ಅದು, ಈ ರೀತಿಯಾಗಿದೆ.

“ಬದುಕು ಅನುಭವಗಳ ಪ್ರವಾಹ, ಅದರ ಸಿರಿವಂತಿಕೆಯು ವಿಶ್ವ-ಚಿಂತನ ಹಾಗೂ ಸತ್ಯಶೋಧನೆಗಳಿಂದ. ಅದರ ಸೌಂದರ್ಯವು ರಾಗದ್ವೇಷರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ಸಾಧನೆ. ಅಂಥ ಜೀವನದ ಉಪಯುಕ್ತವಾದ ಅನುಭಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಧರ್ಮ, ಅದು ಸ್ವ-ಪರ ನೆಮ್ಮದಿಗೆ ಕಾರಣ”

“ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು. ಅದನ್ನು ರೂಪಿಸಿದವರು ಗುರುದೇವರು. ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸ-ಹೃದಯರು, ಸಾಧಕರು ಹಾಗೂ ಶ್ರೀ ಸಾಮಾನ್ಯರು. ನಿಸರ್ಗವು ಮೈ ಮನಸ್ಸುಗಳಿಗೆ ತಂಪನಿತ್ತಿದೆ. ತಾತ್ತ್ವಿಕ ಚಿಂತನೆಗಳು ತಿಳಿಬೆಳಗ ಹರಡಿವೆ. ಜಾಗತಿಕ ತತ್ತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಟಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ”

“ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ ಉಪಕೃತ. ಬದುಕು ಮುಗಿಯುತ್ತದೆ; ದೀಪ ಆರಿದಂತೆ; ತೆರೆ ಅಡಗಿದಂತೆ; ಮೇಘ ಕರಗಿದಂತೆ. ಉಳಿಯುವುದು ಬರಿ ಬಯಲು. ಮಹಾಮೌನ ಶೂನ್ಯಸತ್ಯ! ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ; ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು; ಅದಕ್ಕಾಗಿ ಈ ‘ಅಂತಿಮ ಅಭಿವಂದನ-ಪತ್ರ’!”

“ದೇಹದ ವಿಷಯದಲ್ಲಿ ಒಂದೆರಡು ಆಶಯಗಳು: ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯರ್ಪಿತ ಮಾಡುವುದು. ಶ್ರಾದ್ಧಿಕ ವಿಧಿ-ವಿಧಾನಕರ್ಮಗಳು ಅನಗತ್ಯ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು. ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು”

“ಅಂತಿಮ ನೆನಹು: ಸತ್ಯವು ಇಲ್ಲ, ಅಸತ್ಯವೂ ಇಲ್ಲ. ಸಹಜವೂ ಇಲ್ಲ, ಅಸಹಜವೂ ಇಲ್ಲ. ನಾನೂ ಇಲ್ಲ, ನೀನೂ ಇಲ್ಲ, ಇಲ್ಲ, ಇಲ್ಲ ಎಂಬುದು ತಾನಿಲ್ಲ. ಗುಹೇಶ್ವರನೆಂಬುದು ತಾ ಬಯಲು. ಅಂತ್ಯಃ ಪ್ರಣಾಮಾಂಜಲಿಃ!”

  • ಸ್ವಾಮಿ ಸಿದ್ದೇಶ್ವರ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ