ಕುಡಿಯಬೇಡ ನೀ
ಕುಡಿದು ಕೆಡಬೇಡ ನೀ
ಬಿಡದಿದ್ದರೆ ಕುಡಿಯುವದು ನೀ
ನಿನ್ನ ಸಂಸಾರವೇ ಕೈ ಬಿಡುವುದು
ಮೊದಲು ತಿಳಿಯೋ ನೀ….!!
ದುಡಿದು ಕುಡಿಯುವೆ ಏಕೆ ನೀ
ಕುಡಿದರೆ ಮಡದಿ ಮಕ್ಕಳು
ಮತ್ತೇಕೆ ಇಟ್ಟೆ ಹೇಳು ನೀ
ಬಿಟ್ಟೂ ಬಿಡದಂತೆ ಕುಡಿದರೆ ನೀ
ಕಟ್ಟಿದೇಕೆ ದೈವದಲಿ ತಾಳಿಯ ನೀ..!!
ಸುರಪಾನ ಧೂಮಪಾನ
ಎರಡೂ ಜೊತೆ ಸೇರಿ
ಹೊತ್ತಿಗೂ ಮುನ್ನ ಮತ್ತೇರಿ
ಗುಡಿಯ ಗೋಪುರದಂತೆ ಕಂಡ
ಗಟಾರ ತಿಪ್ಪೆಯ ನೀ ಏರಿ
ಅತ್ತಿತ್ತ ತೂಗಿದೆ ಶರೀರದ ಜೋಕಾಲಿ..!!
ನಶೆಯ ನರ್ತನಕ್ಕೆ ನೀ ಜಾರಿ
ಸ್ವರ್ಗದ ಬಾಗಿಲನಂತೆ ಕಂಡಡೆ
ಮತ್ತೇಕೆ ಹಿಡಿಯುವೆ ನೀ
ಬಾರ್ ಎನ್ನುವ ಜಗಮಗಿಸುವ
ದೀಪದೀ ಕಂಗೊಳಿಸಿ ಕೈ ಬೀಸಿ
ಕರೇವ ಗಾಜಿನರಮನೆಯ ದಾರಿ..!!
ಮಡದಿ ಕೂಡಿಟ್ಟ ಪುಡಿಗಾಸು ನೀ
ತುಡುಗ ಬೆಕ್ಕಿನಂತೆ ಕುಳಿತು
ಹೊಂಚಾಕಿ ಸದ್ದು ಮಾಡದೆ ಕದ್ದು
ಬೆದರಿಸಿ ಬಾಯಿ ಮುಚ್ಚಿಸಿ ಕುಡಿದರೆ
ಬೀದಿಗೆ ಬರುವ ಸಂಸಾರ
ಯಾರದು…? ತಿಳಿದಿತೆ ನೀನಗದು..!!
ಬದುಕು ಒಂದು ಬಯಲಾಟ
ತಿಳಿದು ಬದುಕಬೇಕಿಲ್ಲಿ ಕುಡುಕ
ನಿದ್ದೆಗೆಟ್ಟು ಕಾಯುತಿಹರು ಸುತ್ತಲೂ
ನಿನ್ನವರೇ ನಿನ್ನ ಕೆಡುಕ
ನಿನ್ನಿತವ ಬಯಸುವವರು
ಯಾರೆಂದು ನೀ ಹುಡುಕ…!!
ಹೊಲ ಮನೆಯು ಉಳಿದಿಲ್ಲ
ಬ್ಯಾಂಕು ಬಡ್ಡಿಯು ತೀರಿಲ್ಲ
ತಲೆಯ ಮೇಲೊಂದು ಸೂರಿಲ್ಲ
ಬೀದಿಗೆ ಚಂದಿರ ನೀನಾದೆಯಲ್ಲ
ಆದರೂ ನೀ ಊರಿಗೆ ಪಟೇಲ
ಸೋಲಿಲ್ಲದ ಮೀಸೆ ಸರ್ದಾರ…!!
-ಮಲ್ಲಪ್ಪ ಭೈರಗೊಂಡ
ತಾಂತ್ರಿಕ ಸಹಾಯಕರು ಘಟಕ-07 BMTC ಬೆಂಗಳೂರು