ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕನ್ನಡ ಚಿತ್ರರಂಗ (ಭಾಗ 1)


ಸುಮಾರು ಎಂಬತ್ತು ವರ್ಷಗಳಿಗೂ ಅಧಿಕ ಕಾಲದ ಇತಿಹಾಸವನ್ನು ಹೊಂದಿರುವ ಕನ್ನಡ ಚಿತ್ರರಂಗ ಮೂಲತಃ ರಂಗಭೂಮಿಯನ್ನು ಅವಲಂಬಿಸುವುದರ ಮೂಲಕ ತನ್ನ ಕೆಲಸವನ್ನು ಪ್ರಾರಂಭಿಸಿತು. ನಮ್ಮ ಈ ಕನ್ನಡ ಚಿತ್ರರಂಗದ ಕುರಿತು ತಿಳಿಸಿಕೊಡುವ ಉದ್ದೇಶದಿಂದ ಮಾಹಿತಿಯ ಸಂಗ್ರಹಣೆ ಮತ್ತು ಅಧ್ಯಯನದ ಆಧಾರದ ಮೇಲೆ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ.ಆಳೆತ್ತರದ ಜೀವಂತ ಚಿತ್ರಗಳ ಪ್ರದರ್ಶನ, ಸಿನಿಮಾಟೋಗ್ರಫಿಯ ಆರು ಕಿರುಚಿತ್ರಗಳು ಇವುಗಳೆಲ್ಲದರ ಸಂಗಮ ೧೮೯೬ ಜುಲೈ ೭ ರಂದು ಮುಂಬಯಿನ ವಾಟ್ಸನ್ ಹೋಟೇಲ್ ನಲ್ಲಿ ಒಂದು ಸುಂದರ ಪ್ರದರ್ಶನ ನಡೆಯಿತು.ಅಲ್ಲದೇ ಈ ಪ್ರದರ್ಶನವು ಮನೋರಂಜನೆಯ ಹೊಸ ಮಾಧ್ಯಮದ ಅನಾವರಣಕ್ಕೆ ಕಾರಣವೂ ಆಯಿತು. ನಮ್ಮ ದೇಶದಲ್ಲಿ ಮೂಕಿ ಚಿತ್ರಗಳ ಪ್ರದರ್ಶನ ಆರಂಭಗೊಂಡ ಒಂಬತ್ತು ವರ್ಷಗಳ ನಂತರ ಬೆಂಗಳೂರಿನಲ್ಲಿ ಸ್ಥಳೀಯ ಉದ್ಯಮಿಗಳು ಸೇರಿ ೧೯೦೫ ರಲ್ಲಿ ಪ್ಯಾರಾ ಮೌಂಟ್ ಎಂಬ ಚಿತ್ರ ಮಂದಿರವನ್ನು ಕಟ್ಟಿಸಿದ್ದರು.ಈ ಚಿತ್ರಮಂದಿರವು ಚಿತ್ರರಂಗದ ಜೊತೆ ಬೆಸೆದ ಮೊದಲ ಬಾಂಧವ್ಯ ಕೂಡಾ ಆಗಿದ್ದು ಸುಮಾರು ೭೦ ವರ್ಷಗಳ ಕಾಲ ಕಾರ್ಯವನ್ನು ನಿರ್ವಹಿಸಿತ್ತು.ಅಲ್ಲದೇ ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನಾ ಚಿತ್ರವು ಕೂಡಾ ಈ ಚಿತ್ರಮಂದಿರದಲ್ಲಿ ತೆರೆ ಕಂಡಿತ್ತು.ಹಲವಾರು ನಾಟಕಗಳನ್ನು ಪ್ರದರ್ಶಿಸಿ ರಂಗ ಪ್ರೇಮಿಗಳ ಮನಸ್ಸನ್ನು ಗೆದ್ದಿರುವ ಗುಬ್ಬಿ ನಾಟಕ ಮಂಡಳಿಯ ಮಾಲೀಕರಾದ ಜಿ.ಎಚ್.ವೀರಣ್ಣನವರು ಪ್ರಯೋಗಗಳನ್ನು ಮಾಡುವುದರಲ್ಲಿ ನಿಸ್ಸೀಮರು ಆಗಿದ್ದರು. ಆ ಸಮಯದಲ್ಲಿ ಸಿನಿಮಾಗಳು ಅತೀ ಕಡಿಮೆ ಅವಧಿಯಲ್ಲಿ ಜನಪ್ರಿಯತೆಯನ್ನು ಪಡೆದಿದ್ದವು.ಈ ಸಿನಿಮಾದ ಜನಪ್ರಿಯತೆಯನ್ನು ಕಂಡ ಜಿ.ಎಚ್.ವೀರಣ್ಣ ತಾವು ನಟಿಸುತ್ತಿದ್ದ ಭಕ್ತ ಕಬೀರ ನಾಟಕವನ್ನು ಚಿತ್ರವನ್ನಾಗಿ ಮಾಡುವ ಒಂದು ಹೊಸ ವಿನೂತನ ಪ್ರಯೋಗಕ್ಕೆ ಮುಂದಾದರು ಹಾಗೂ ನಾಟಕದಲ್ಲಿ ನಟಿಸುತ್ತಿದ್ದ ನಟರೇ ಚಿತ್ರದಲ್ಲಿ ನಟಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು ಬೆಳಗಿನ ಸಮಯದಲ್ಲಿ ಹೊರಾಂಗಣದಲ್ಲಿ ಚಿತ್ರದ ಚಿತ್ರೀಕರಣ, ಸಂಜೆ ಸಮಯ ಥಿಯೇಟರಿನಲ್ಲಿ ನಾಟಕ ಆದರೆ ವಿಧಿ ಲಿಖಿತ ಬೇರೆಯೇ ಆಗಿತ್ತು ದುರದೃಷ್ಟವಶಾತ್ ಜೋರಾದ ಮಳೆಯ ಪರಿಣಾಮ ರಂಗ ಮಂದಿರವೇ ಕೊಚ್ಚಿ ಹೋಗಿತ್ತು. ಚಿತ್ರೀಕರಣಗೊಂಡ ಫಿಲಂ ನೀರು ಪಾಲಾಗಿತ್ತಲ್ಲದೆ ಚಿತ್ರೀಕರಣದ ಪ್ರಯತ್ನ ಕೂಡಾ ವಿಫಲಗೊಂಡಿತ್ತು.
ಹೊರ ದೇಶಗಳಿಂದ ಬಂದ ಮೂಕಿ ಚಿತ್ರಗಳ ಜೊತೆಗೆ ಮುಂಬಯಿ, ಪೂನಾ, ಕೊಲ್ಲಾಪುರ ಮತ್ತು ಕೊಲ್ಕತ್ತಾ ಸೇರಿ ಅನೇಕ ಪ್ರದೇಶಗಳಲ್ಲಿ ಮೂಕಿ ಚಿತ್ರಗಳ ತಯಾರಿಕೆಯಲ್ಲಿ ಚೇತರಿಕೆ ಕಂಡು ಬಂದಿತ್ತು ಅನಂತರ ಬೆಂಗಳೂರಿನಲ್ಲಿ ಚಲನಚಿತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಆರಂಭಗೊಂಡಿತಲ್ಲದೆ ಅತೀ ಕಡಿಮೆ ಅವಧಿಯಲ್ಲಿ ಬೆಳವಣಿಗೆಯನ್ನು ಕಂಡಿತ್ತು. ಚಲನಚಿತ್ರಗಳ ವಿತರಣೆಯಲ್ಲಿ ದಕ್ಷಿಣ ಭಾರತಕ್ಕೆ ಕೇಂದ್ರ ಸ್ಥಾನವಾಗಿ ಬೆಂಗಳೂರು, ಅಲ್ಲದೇ ಮದ್ರಾಸ್, ವಿಜಯವಾಡ, ತಿರುಚನಾಪಳ್ಳಿ ಪ್ರದೇಶ ಮತ್ತು ಸಿಂಹಳಕ್ಕೆ ಕೂಡ ಬೆಂಗಳೂರಿನಿಂದಲೇ ಚಿತ್ರಗಳನ್ನು ಪೂರೈಸಲಾಗುತ್ತಿತ್ತು.
ಆಗಿನ ಕಾಲದಲ್ಲಿ ಮುಂಬಯಿ, ಗುಜರಾತ್ ಮೂಲದ ಹರಿಭಾಯಿ ದೇಸಾಯಿ ಪ್ರಸಿದ್ದ ವಾಣಿಜ್ಯೋದ್ಯಮಿ ಅಲ್ಲದೇ ಮುಂಬಯಿಯ ಲಕ್ಷ್ಮಿ ಫಿಲಂ ಕಂಪನಿಯ ಪಾಲುದಾರರು ಕೂಡಾ ಆಗಿದ್ದರು ಒಂದು ದಿನ ಹರಿಭಾಯಿ ದೇಸಾಯಿ ಮತ್ತು ಸ್ನೇಹಿತರು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ ಇಲ್ಲಿಯ ಪರಿಸರಕ್ಕೆ ಆಕರ್ಷಿತಗೊಂಡು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿದ್ದ ದಿವಾನ್ ಮಿರ್ಜಾ ರವರಿಗೆ ಸೇರಿದ ಒಂದು ಬಂಗಲೆಯಲ್ಲಿ ಒಂದು ಸ್ಟುಡಿಯೋವನ್ನು ಆರಂಭಿಸಿದರು ವಿದೇಶದಲ್ಲಿ ತರಬೇತಿಯನ್ನು ಕೂಡ ಪಡೆದುಕೊಂಡು ಬಂದಿದ್ದ ಹರಿಭಾಯಿ ದೇಸಾಯಿಯವರು ತಮ್ಮ ಸೂರ್ಯ ಫಿಲಂ ಕಂಪನಿಯನ್ನು ವ್ಯವಸ್ಥಿತ ರೀತಿಯಲ್ಲಿ ರೂಪಿಸಿದ್ದರು ಮತ್ತು ತಂಡವು ಉತ್ತಮ ತಂತ್ರಜ್ಞರಿಂದ ಕೂಡಿತ್ತಲ್ಲದೆ ಚಿತ್ರಗಳ ಗುಣಮಟ್ಟವು ಉತ್ತಮವಾಗಿತ್ತು. ೧೯೨೯ ರಿಂದ ೧೯೩೧ ರವರೆಗೆ ಎರಡು ವರ್ಷಗಳ ಅವಧಿಯಲ್ಲಿ ೩೯ ಮೂಕಿ ಚಿತ್ರಗಳನ್ನು ನಿರ್ಮಿಸಿದ್ದರಿಂದ ಬೇಡಿಕೆ ಕೂಡ ಇತ್ತು. ಅದೇ ಸಮಯದಲ್ಲಿ ೧೯೩೦ ರ ದಶಕದಲ್ಲಿ ಸಂಚಾರಿ ಚಿತ್ರಮಂದಿರಗಳು ಆರಂಭಗೊಂಡವು. ಇತ್ತ ಕಡೆ ಸೂರ್ಯ ಫಿಲಂ ಕಂಪನಿ ಮುಂಬಯಿಯ ಕಲಾವಿದರ ಜೊತೆಗೆ ಸ್ಥಳೀಯ ಪ್ರತಿಭೆಗಳಿಗೂ ಅವಕಾಶವನ್ನು ಕೊಟ್ಟಿತ್ತು. ಲಕ್ಷ್ಮಿ ಬಾಯಿ, ಕಮಲಾಬಾಯಿ, ಅನ್ನಪೂರ್ಣಮ್ಮ ಮತ್ತು ಸುಂದರ್ ರಾವ್ ನಾಡಕರ್ಣಿ ಸೇರಿ ಅನೇಕ ಕಲಾವಿದರು ಸೂರ್ಯ ಫಿಲಂ ಕಂಪನಿಯ ಮೂಲಕ ತಾರಾ ಪಟ್ಟವನ್ನು ಅಲಂಕರಿಸಿದ್ದರು.
ಬೆಂಗಳೂರಿನಲ್ಲಿ ಸಿನಿಮಾದ ಚಟುವಟಿಕೆಗಳು ಚುರುಕುಗೊಂಡ ಸಮಯದಲ್ಲಿ ಉತ್ಸಾಹಿತರಾದ ಗುಬ್ಬಿ ವೀರಣ್ಣನವರು ದೇವುಡು ನರಸಿಂಹ ಶಾಸ್ತ್ರಿ ಮತ್ತು ಓರಿಯೆಂಟಲ್ ಬ್ಯಾಂಕ್ ನ ಶ್ರೀನಿವಾಸ ಜೊತೆ ಸೇರಿ ಕರ್ನಾಟಕ ಫಿಲಂ ಕಾರ್ಪೋರೇಷನ್ ಎಂಬ ಕೂಡು ಬಂಡವಾಳ ಸಂಸ್ಥೆಯನ್ನು ಸ್ಥಾಪಿಸಿದರು ತಮ್ಮ ಬಳಿಯಿದ್ದ ರೂ ೨,೫೦೦ ಜೊತೆಯಲ್ಲಿ ತಮ್ಮ ಪ್ರಭಾವವನ್ನು ಬಳಸಿ ಇತರರಿಂದ ರೂ ೪೦,೦೦೦ ಹಣವನ್ನು ಸಂಗ್ರಹಿಸಿ ಮುಂಬಯಿ ಮೊದಲಾದ ಅನೇಕ ಸ್ಥಳಗಳಲ್ಲಿ ಸಂಚರಿಸಿ ಅಗತ್ಯವಿದ್ದ ಹಳೆಯ ಯಂತ್ರಗಳನ್ನು ಖರೀದಿಸಿ ಮಲ್ಲೇಶ್ವರಂನಲ್ಲಿ ಒಂದು ಸ್ಟುಡಿಯೋವನ್ನು ನಿರ್ಮಿಸಿದ್ದರು.೧೯೩೦ ರಿಂದ ೩೨ ರ ಎರಡು ವರ್ಷಗಳ ಅವಧಿಯಲ್ಲಿ ದೇವುಡು ಅವರ ಕಳ್ಳರ ಕೂಟ ಕಥೆಯಾಧಾರಿತ ಹೀಸ್ ಲವ್ ಅಫೇರ್, ಸಾಂಗ್ ಆಫ್ ಲೈಫ್ ಮತ್ತು ಹರಿಮಾಯಾ ಎಂಬ ಮೂರು ಮೂಕಿ ಚಿತ್ರಗಳನ್ನು ನಿರ್ಮಿಸಿದ್ದರು. ಮುಖ್ಯವಾಗಿ ಇವರು ಕಂಪನಿಯ ಜೊತೆಯಲ್ಲಿ ಪ್ರವಾಸ ಮಾಡುತ್ತಿದ್ದರಿಂದ ಮತ್ತು ಸಮಯದ ಕೊರತೆಯಿಂದ ಸ್ಟುಡಿಯೋ ಆಡಳಿತದ ನಿರ್ವಹಣೆಯನ್ನು ತಮ್ಮ ಸ್ನೇಹಿತರಿಗೆ ವಹಿಸಿದ್ದರು. ಆದರೆ ವಿಧಿಯಾಟ ಕಾಲವು ಒಂದೇ ರೀತಿಯಾಗಿರುವುದಿಲ್ಲ, ಬದಲಾಗುತ್ತಲೇ ಇರುತ್ತದೆ ಎಂಬುದಕ್ಕೆ ಸಾಕ್ಷಿಯೆಂಬಂತೆ ಉತ್ತಮವಾಗಿ ನಡೆಯುತ್ತಿದ್ದ ಇವರ ಸ್ಟುಡಿಯೋ ದಕ್ಷ ಆಡಳಿತದ ಕೊರತೆಯಿಂದ ತೀವ್ರ ನಷ್ಟಕ್ಕೊಳಗಾಗಿ ಮುಚ್ಚಲ್ಪಟ್ಟಿತು. ಆದ ಈ ಆಘಾತದಿಂದ ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ತಮ್ಮ ಮೆಡಲುಗಳನ್ನು,ಕುಟುಂಬದ ಸದಸ್ಯರ ಒಡವೆಗಳನ್ನು ಮಾರಿ ಸಾಲವನ್ನು ತೀರಿಸಿದ ನಂತರವೂ ಕೂಡ ಒಂದು ಲಕ್ಷ ರೂಪಾಯಿ ಸಾಲದ ಹೊರೆಯು ಇತ್ತೆಂದು ತಮ್ಮ ಆತ್ಮ ಕಥೆಯಲ್ಲಿಯೂ ಹೇಳಿಕೊಂಡಿದ್ದರು.ಚಿತ್ರ ತಯಾರಿಕೆ ವೀರಣ್ಣನವರ ಪಾಲಿಗೆ ಕೆಟ್ಟ ಕನಸಾಗಿದ್ದರೂ ಛಲ ಬಿಡದೆ ನಾಟಕದ ಜೊತೆಗೆ ಚಿತ್ರರಂಗದಲ್ಲಿ ಕೂಡ ಉತ್ತಮ ಕೆಲಸವನ್ನು ನಿರ್ವಹಿಸಿ ಆರ್ಥಿಕತೆಯಲ್ಲಿ ಸಧೃಡರಾದರಲ್ಲದೆ ಕೀರ್ತಿಯನ್ನು ಗಳಿಸಿದ್ದರು.
ಹಲವಾರು ಬುದ್ಧಿ ಜೀವಿಗಳು ಆರಂಭದ ಕಾಲದಿಂದಲೂ ಚಲನಚಿತ್ರ ಮಾಧ್ಯಮದಲ್ಲಿ ಆಸಕ್ತಿಯನ್ನು ಹೊಂದಿದ್ದರು ಇದಕ್ಕೆ ಸಾಕ್ಷಿಯೆಂಬಂತೆ ಕೆ.ಶಿವರಾಮ ಕಾರಂತರು ಜನರಲ್ಲಿ ಜಾಗೃತಿಯನ್ನು ಮೂಡಿಸಲು ಮನೋರಂಜನೆಯ ಮಾಧ್ಯಮವನ್ನು ಆರಿಸಿಕೊಂಡರಲ್ಲದೆ ರಷ್ಯಾ ದೇಶದಿಂದ ಚಲನಚಿತ್ರಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ತರಿಸಿಕೊಂಡು ಅಧ್ಯಯನವನ್ನು ಮಾಡಿದರು ಇದೇ ಸಮಯದಲ್ಲಿ ಬಾಲಿವುಡ್ ಚಿತ್ರರಂಗದ ಮೊದಲ ವಾಕ್ಚಿತ್ರ ಆಲಂ ಆರಾ ಚಿತ್ರವು ತೆರೆ ಕಂಡಿತ್ತು ಇತ್ತ ಕಡೆ ಶಿವರಾಮ್ ಕಾರಂತರು ಫಿಲಂ ಸಂಸ್ಕರಣಾಲಯಕ್ಕೆ ಹೋಗಿ ಫಿಲಂ ಸಂಸ್ಕರಣೆಗೆ ಸಂಬಂಧ ಪಟ್ಟ ಮಾಹಿತಿಯನ್ನು ಪಡೆದುಕೊಂಡು ಕ್ಯಾಮರಾವನ್ನು ಖರೀದಿಸಿ ತಾವೇ ಚಿತ್ರೀಕರಿಸಿ ೧೯೩೨ ರಲ್ಲಿ ಭೂತರಾಜ್ಯ ಎಂಬ ಒಂದು ಹೊಸ ಅಲೆಯ ಚಿತ್ರವನ್ನು ಸಿದ್ಧಪಡಿಸಿದ್ದರು ಆ ವೇಳೆಗೆ ಮೊದಲೇ ಆಲಂ ಆರಾ ಚಿತ್ರವು ತೆರೆ ಕಂಡಿದ್ದರಿಂದ ಮೂಕಿ ಚಿತ್ರಗಳಿಗೆ ಬೇಡಿಕೆಯು ಕುಸಿದಿತ್ತು. ಮುಖ್ಯವಾಗಿ ಪೌರಾಣಿಕ ಚಿತ್ರಗಳಿಗೆ ಹೊಂದಿಕೊಂಡಿದ್ದ ಜನರು ಈ ಸಾಮಾಜಿಕ ಚಿತ್ರಕ್ಕೆ ಆಸಕ್ತಿಯನ್ನು ತೋರಿಸಲಿಲ್ಲ. ಅಲ್ಲದೇ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲು ಮುಂದೆ ಬಂದಿದ್ದ ಮಿತ್ರರಿಂದಲೂ ಕಾರಂತರಿಗೆ ಸಹಕಾರ ಸಿಗಲಿಲ್ಲ.
ಆದರೆ ಕನ್ನಡ ನಾಡಿನ ಮೂಕಿ ಚಿತ್ರಗಳ ಇತಿಹಾಸದಲ್ಲಿ ವಸಂತ ಸೇನಾ ಚಿತ್ರವು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದು ಹಲವಾರು ವಿಶೇಷತೆಗಳನ್ನು ಹೊಂದಿದೆ.
೧) ಸದಭಿರುಚಿಯ ಚಿತ್ರಗಳ ನಿರ್ಮಾಪಕರು ಎಂಬ ಬಿರುದನ್ನು ಪಡೆದಿದ್ದ ಮುಂಬಯಿ ಮೂಲದ ಮೋಹನ್ ಭವನಾನಿ ಜರ್ಮನಿಯಲ್ಲಿ ತರಬೇತಿಯನ್ನು ಪಡೆದಿದ್ದರು. ಮೈಸೂರು ದಸರಾ ಉತ್ಸವ ಹಾಗೂ ಆನೆಗಳನ್ನು ಹಿಡಿವ ಖೆಡ್ಡಾ ಕಾರ್ಯಕ್ರಮದ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದರು.
೨) ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ ಮತ್ತು ಅಜಂತಾ ಮೊದಲಾದ ಕಡೆ ಚಿತ್ರದ ಚಿತ್ರೀಕರಣವನ್ನು ಮಾಡಲಾಗಿತ್ತು.
೩) ಏಣಾಕ್ಷಿ ರಾಮರಾವ್, ಜಿ.ಕೆ.ನಂದಾ, ಕೈಲಾಸಂ, ಡಾ.ಎನ್.ಎಸ್.ನಾರಾಯಣ ಶಾಸ್ತ್ರಿ, ಕಮಲಾದೇವಿ ಚಟ್ಟೋಪಾಧ್ಯಾಯ, ಡಿ.ಕೆ.ಭಾರದ್ವಾಜ ಮತ್ತು ‌ಬಿ.ಕೃಷ್ಣ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು.
೪) ಜಟ್ಟಿ.ತಾಯಮ್ಮ ಈ ಚಿತ್ರಕ್ಕೆ ನೃತ್ಯ ನಿರ್ದೇಶನವನ್ನು ಮಾಡಿದ್ದರು.
೫) ಸುಮಾರು ೧ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಚಿತ್ರವು ಅಭೂತಪೂರ್ವ ಯಶಸ್ಸನ್ನು ಪಡೆಯಿತಲ್ಲದೆ ೫ ಲಕ್ಷ ರೂಪಾಯಿ ಹಣವನ್ನು ಗಳಿಸಿತು.ಮತ್ತು ವಿದೇಶದಲ್ಲಿ ಕೂಡ ಪ್ರದರ್ಶನವನ್ನು ಕಂಡಿತ್ತು.
ಈ ರೀತಿಯಾಗಿ ಭಾರತೀಯ ಮೂಕಿ ಚಿತ್ರರಂಗದ ಇತಿಹಾಸದಲ್ಲಿ ಈ ಚಿತ್ರವು ಸುವರ್ಣ ಇತಿಹಾಸವನ್ನು ಬರೆಯಿತು.
೧೯೩೧, ಮಾರ್ಚ್ ೧೪ ರಂದು ಭಾರತದ ಮೊದಲ ವಾಕ್ಚಿತ್ರ ಆಲಂ ಆರಾ ತೆರೆ ಕಂಡ ನಂತರ ಮೂಕಿ ಚಿತ್ರಗಳ ನಿರ್ಮಾಣ ಗಣನೀಯ ಪ್ರಮಾಣದಲ್ಲಿ ಕುಸಿತವನ್ನು ಕಂಡಿತು. ಸೂರ್ಯ ಫಿಲಂ ಕಂಪನಿಯು ಕೂಡ ಇದೇ ಮಾರ್ಗವನ್ನು ಅನುಸರಿಸಿತು. ಮುಂಬಯಿಗೆ ಹಿಂತಿರುಗಿದ ಹರಿಭಾಯಿ ದೇಸಾಯಿ  ಮಾತೃಭಾಷೆಯ ಚಿತ್ರಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಲಂ ಆರಾ ಚಿತ್ರವು ತೆರೆ ಕಂಡ ವರ್ಷವೇ ತೆಲುಗು ಚಿತ್ರರಂಗದ ಮೊದಲ ವಾಕ್ಚಿತ್ರ ಕನ್ನಡಿಗರೇ ಆದ ಎಚ್.ಎಮ್.ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದ ಭಕ್ತ ಪ್ರಹ್ಲಾದ ಮತ್ತು ತಮಿಳು ಚಿತ್ರರಂಗದ ಮೊದಲ ವಾಕ್ಚಿತ್ರ ಕಾಳಿದಾಸ ಚಿತ್ರವು ಕೂಡ ತೆರೆ ಕಂಡಿತ್ತು. ಹರಿಭಾಯ್ ಹಿಂತಿರುಗಿ ಹೋಗುವ ಸಮಯದಲ್ಲಿ ಸ್ಥಳೀಯ ಉದ್ಯಮಿಗಳಿಗೆ ಚಿತ್ರರಂಗ ಆಕರ್ಷಣೀಯ ಎನಿಸಲಿಲ್ಲ. ಬೆಂಗಳೂರಿನಲ್ಲಿ ನೆಲೆಸಿದ್ದ ಹಿಂದಿ ಮತ್ತು ಗುಜರಾತಿ ಹಂಚಿಕೆದಾರರು ಕೂಡ ತಮ್ಮ ಮಾತೃ ಭಾಷೆಯ ಚಿತ್ರಗಳನ್ನು ತಯಾರಿಸಲು ಆದ್ಯತೆ ನೀಡಿದ್ದರಲ್ಲದೆ ತಮ್ಮ ಕೆಲಸಕ್ಕೆ ಮುಂಬಯಿಯನ್ನು ಆಯ್ಕೆ ಮಾಡಿಕೊಂಡರು. ಮೂಲತಃ ಕನ್ನಡಿಗರೇ ಆಗಿದ್ದ ಎಚ್.ಎಮ್.ರೆಡ್ಡಿ ಮದ್ರಾಸ್ ಮತ್ತು ಕೋಲ್ಕತಾ ನಿರ್ಮಾಣ ಕೇಂದ್ರಗಳ ನೆರವನ್ನು ಪಡೆದು ತೆಲುಗು, ತಮಿಳು ಚಿತ್ರಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಕನ್ನಡ ಚಿತ್ರರಂಗದಲ್ಲಿ ೧೯೩೦ ರ ‌ದಶಕದಲ್ಲಿ  ಚಿತ್ರೀಕರಣವನ್ನು ಮಾಡುವುದು ಸುಲಭವಾಗಿರಲಿಲ್ಲ.  ಯಾವುದೇ ರೀತಿಯ ಅತ್ಯಾಧುನಿಕ ತಂತ್ರಜ್ಞಾನ ಇರಲಿಲ್ಲ. ಕಲಾವಿದರು ಸ್ವತಃ ತಾವೇ ಹಾಡಿಕೊಂಡು ಅಭಿನಯಿಸುತ್ತಿದ್ದರು. ಜೊತೆಯಲ್ಲಿ ವಾದ್ಯವರು ತಮ್ಮ ವಾದ್ಯಗಳನ್ನು ಸ್ವಲ್ಪ ದೂರದಲ್ಲಿ ನುಡಿಸಿಕೊಂಡು ಇವರನ್ನು ಹಿಂಬಾಲಿಸುತ್ತಿದ್ದರು. ಇವರನ್ನು ಹಿಂಬಾಲಿಸಿ ಮೈಕ್ ಹಿಡಿದುಕೊಂಡು ತಂತ್ರಜ್ಞರು ಧ್ವನಿಯನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಈ ರೀತಿಯಾಗಿ ಚಿತ್ರೀಕರಣವನ್ನು ಮಾಡಲಾಗುತ್ತಿತ್ತು.ಆದರೆ ಆ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಯಾವುದೇ ವಾಕ್ಚಿತ್ರ ಗಳು ತೆರೆ ಕಂಡಿರಲಿಲ್ಲ. ಪಾರಿಜಾತ ‍ಹರಣಂ,ಕೋವಲನ್ ಸೇರಿ ಅನೇಕ ತಮಿಳು ಚಿತ್ರಗಳಲ್ಲಿ ನಟಿಸಿದ್ದ ನಾಗೇಂದ್ರ ರಾಯರು ಕನ್ನಡ ಭಾಷೆಯಲ್ಲಿಯೂ ಒಂದು ವಾಕ್ಚಿತ್ರವನ್ನು ತಯಾರಿಸಲು ಆಲಂ ಆರಾ ಚಿತ್ರವನ್ನು ನಿರ್ಮಿಸಿದ್ದ ಆದ್ಮೇಶಿರ್ ಇರಾನಿಯವರನ್ನು ಸಂಪರ್ಕಿಸಿ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ರಾಜಸ್ಥಾನಿ ಮೂಲದ ಷಾ ಚಮನ್ಲಾಲ್ ಡುಂಗಾಜಿ ಮತ್ತು ಷಾ ಚಮನ್ಲಾಲ್ ಡುಂಗಾಜಿ ಮತ್ತು ಷಾ ಭೂರ್ ಮಲ್ ‍ಚಮನ್ಲಾಲ್ ಎಂಬ ಇಬ್ಬರು ಪಾತ್ರೆ ವ್ಯಾಪಾರಿಗಳಿದ್ದರು. ಕನ್ನಡ ಭಾಷೆಯ ಚಿತ್ರಗಳ ನಿರ್ಮಾಣದಲ್ಲಿ ಆಸಕ್ತಿಯನ್ನು ಹೊಂದಿದ್ದ ಇವರು ನಾಗೇಂದ್ರ ರಾಯರನ್ನು ಸಂಪರ್ಕಿಸಿದರು. ಸುಮಾರು ೪೦,೦೦೦ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಚಿತ್ರವನ್ನು ಕೊಲ್ಲಾಪುರದ ಛತ್ರಪತಿ ಸಿನಿಟೋನಿನಲ್ಲಿ ಚಿತ್ರೀಕರಣವನ್ನು ಮಾಡಲಾಗಿತ್ತು. ಬೆಂಗಳೂರಿನಲ್ಲಿ ೧೯೩೪, ಮಾರ್ಚ್ ೩ ರಂದು ತೆರೆ ಕಂಡ ವೈ.ವಿ.ರಾವ್ ನಿರ್ದೇಶನದಲ್ಲಿ ಮೂಡಿ ಬಂದ ೧೭೩ ನಿಮಿಷಗಳ ಮೊದಲ ವಾಕ್ಚಿತ್ರದಲ್ಲಿ ಎಂ.ವಿ.ಸುಬ್ಬಯ್ಯ ನಾಯ್ಡು, ನಾಗೇಂದ್ರರಾವ್, ತ್ರಿಪುರಾಂಭಾ ಮತ್ತು ಲಕ್ಷ್ಮಿ ಬಾಯಿ ಸೇರಿ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದರು.ಮತ್ತು ನಿರ್ದೇಶಕ ವೈ.ವಿ.ರಾವ್ ಕೂಡ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಹಳ್ಳಿಗಳಿಂದ ಜನರು ಗಾಡಿಯನ್ನು ಕಟ್ಟಿಕೊಂಡು ಬಂದು ಈ ಚಿತ್ರವನ್ನು ನೋಡಿ ಸಂಭ್ರಮಿಸಿದ್ದರು.ಈ ರೀತಿಯಾಗಿ ಕನ್ನಡ ಚಿತ್ರರಂಗದಲ್ಲಿ ಮೊದಲ ವಾಕ್ಚಿತ್ರವನ್ನು ತಯಾರಿಸಲು ಮೂರು ವರ್ಷಗಳ ಸಮಯ ಹಿಡಿಯಿತು. ಈ ಚಿತ್ರವು ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಭಕ್ತ ಧ್ರುವ ಚಿತ್ರವು ತೆರೆ ಕಂಡಿತ್ತು. ಮೂಕಿ ಚಿತ್ರಗಳ ಕಾಲದಿಂದಲೂ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ  ಗುಬ್ಬಿ ವೀರಣ್ಣನವರಿಗೆ ವಾಕ್ಚಿತ್ರಗಳ ಆಕರ್ಷಣೆಯಿಂದ ದೂರ ಉಳಿಯಲು ಸಾಧ್ಯವಾಗಲಿಲ್ಲ. ಆಗಿನ ಕಾಲದಲ್ಲಿ ಗುಬ್ಬಿ ಕಂಪನಿಯ ಸದಾರಮೆ ನಾಟಕವು ತುಂಬ ಪ್ರಸಿದ್ಧಿಯನ್ನು ಪಡೆದಿತ್ತು. ಕೋಯಮತ್ತೂರಿನ ಷಣ್ಮುಗಂ ಚಿಟ್ಟಿಯಾರ್ ಸಹಾಯದಿಂದ ಸದಾರಮೆ ನಾಟಕವನ್ನು ಚಿತ್ರವನ್ನಾಗಿ ತಯಾರಿಸಿದರು. ಗುಬ್ಬಿ ವೀರಣ್ಣ ನಾಟಕದಲ್ಲಿ ನಟಿಸಿದ್ದ ಆದಿಮೂರ್ತಿ ಮತ್ತು ಕಳ್ಳನ ಪಾತ್ರವನ್ನು ಚಿತ್ರದಲ್ಲಿ ಕೂಡ ನಿರ್ವಹಿಸಿದ್ದರೆ, ಗಾಯಕಿ ಅಶ್ವತ್ಥಮ್ಮ ‍ಸದಾರಮೆಯ ಪಾತ್ರವನ್ನು ವಹಿಸಿದ್ದರು. ೧೯೩೫ ರಲ್ಲಿ ತೆರೆ ಕಂಡ ಈ ಚಿತ್ರವು ಕೂಡ ಜನಪ್ರಿಯತೆಯನ್ನು ಪಡೆದಿತ್ತು.
       ೧೯೩೬ ರಲ್ಲಿ ತೆರೆ ಕಂಡ ಎಚ್.ಎಲ್.ಎನ್ ಸಿಂಹ ನಿರ್ದೇಶನದ ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ ಮತ್ತು ಡಿಕ್ಕಿ ಮಾಧವರಾವ್ ಸೇರಿ ಅನೇಕ ಕಲಾವಿದರು ನಟಿಸಿದ ಸಂಸಾರದ ನೌಕೆ ಚಿತ್ರವು ದಕ್ಷಿಣ ಭಾರತದ ಪ್ರಥಮ ಸಾಮಾಜಿಕ ಚಿತ್ರವಾಯಿತು. ಪ್ರಸಿದ್ದ ಉದ್ಯಮಿಯಾಗಿದ್ದ ವಿ.ತಿಮ್ಮಯ್ಯ  ೧೯೩೬ ಜೂನ್ ತಿಂಗಳು ಬೆಂಗಳೂರಿನಲ್ಲಿ  ಮೈಸೂರು ಸೌಂಡ್ ಸ್ಟುಡಿಯೋ ಆರಂಭಿಸಿದರಲ್ಲದೆ ಟಿ.ದ್ವಾರಕ್ ನಾಥ್, ಎಂ.ವಿ.ರಾಮನ್ ಮತ್ತು ಬೊಮ್ಮನ್ ಇರಾನಿ ಸೇರಿ ಅನೇಕ ತಂತ್ರಜ್ಞರ ಸಹಕಾರದಿಂದ ರಾಜಸೂಯ ಯಾಗ ಎಂಬ ಚಿತ್ರವನ್ನು ನಿರ್ಮಿಸಿದ್ದರು.ತೆರೆ ಕಂಡ ನಂತರ ಈ ಚಿತ್ರವು ಯಶಸ್ಸನ್ನು ಪಡೆಯಿತಲ್ಲದೆ ಗಳಿಕೆಯಲ್ಲಿ ಕೂಡ ಸಾಧನೆಯನ್ನು ಮಾಡಿತ್ತು.
      ಆರಂಭ ಕಾಲದ ಚಿತ್ರಗಳಿಗೆ ರಂಗಭೂಮಿಯೇ ಪ್ರಮುಖ ಹಿನ್ನೆಲೆಯಾಗಿತ್ತು. ಅಲ್ಲದೇ ಪರಭಾಷೆಯ ಚಿತ್ರಗಳಿಗೂ ಬಿಡಲಾಗದ ನಂಟು, ಒಂದು ರೀತಿಯಲ್ಲಿ ಇಕ್ಕಟ್ಟಿನ ಪರಿಸ್ಥಿತಿ, ೧೯೩೭ ರಲ್ಲಿ  ತೆರೆ ಕಂಡ ಕನ್ನಡದ ಐದನೇ ವಾಕ್ಚಿತ್ರ ಚಿರಂಜೀವಿ. ಚಿತ್ರ ಪ್ರದರ್ಶಕರಾದ ವಿ.ಎ.ಮುಧೋಳ್ಕರ್ ಕ್ಯಾನರೀಸ್ ಟಾಕೀಸ್ ನಿರ್ಮಿಸಿದ ಈ ಚಿತ್ರಕ್ಕೆ ಚಿತ್ರಕಥೆ, ಸಾಹಿತ್ಯವನ್ನು ನೀಡಿದ್ದ ದೇವುಡು ನರಸಿಂಹ ಶಾಸ್ತ್ರಿಗಳೇ ಮೃಕಂಡು ಮುನಿ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲದೇ ಪುಣೆಯ ಸರಸ್ವತಿ ಸಿನಿಟೋನಲ್ಲಿ ಚಿತ್ರೀಕರಣಗೊಂಡ ಈ ಚಿತ್ರವನ್ನು ಕೆ.ಪಿ.ಭಾವೆ ನಿರ್ದೇಶಿಸಿದ್ದರು. ಆಸಕ್ತಿಕರ ವಿಷಯವೇನೆಂದರೆ ಈ ಚಿತ್ರದ ನಿರ್ಮಾಣ ಉತ್ತರ ಕರ್ನಾಟಕದವರ ಪ್ರಥಮ ಪ್ರಯತ್ನ ಕೂಡ ಆಗಿತ್ತು. ಚಿತ್ರಕಥೆಯ ನಿರೂಪಣಾ ಶೈಲಿ, ಪಾತ್ರಗಳ ಗಾನ ಲಹರಿ, ಇಂದ್ರ ಸಭೆಯ ನೃತ್ಯ, ಮಾರ್ಕಂಡೇಯನ ತಪಸ್ಸಿನಿಂದ ತಲ್ಲಣಗೊಳ್ಳುವ ಇಂದ್ರನ ಸಿಂಹಾಸನ, ಸಂತಾನಾಪೇಕ್ಷಿಗಳಾದ ಋಷಿ ಮುನಿಗಳ ಮೊರೆಯು ಕೈಲಾಸ ಮುಟ್ಟುವ ತಂತ್ರ ವೈಭವ ಇವುಗಳೆಲ್ಲ ಕನ್ನಡ ಚಿತ್ರರಂಗದ ಮೊದಲ ನಡೆ,ನುಡಿಗಳಾಗಿವೆ.
ಮುಂದುವರೆಯುತ್ತದೆ…
 ವಿಶೇಷ ಸೂಚನೆ:ಈ ಲೇಖನವು ಸುಧೀರ್ಘವಾಗಿದ್ದು ಓದುಗರಿಗೆ ಕೂಡ ಅನುಕೂಲವಾಗಬೇಕೆಂಬ ಉದ್ದೇಶದಿಂದ 30 ಕ್ಕೂ ಅಧ್ಯಾಯಗಳನ್ನು ಮಾಡಿ ಡಿಸೆಂಬರ್ 2022 ರವರೆಗೆ ದೊರೆತ ಮಾಹಿತಿ, ಅಧ್ಯಯನದ ಆಧಾರದ ಮೇಲೆ ರಚಿಸಿದ್ದೇನೆ.
ಧನ್ಯವಾದಗಳು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ