ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಭೇಟಿ ನೀಡಿ ಶಿವರಾತ್ರಿ ಜಾತ್ರಾ ಮಹೋತ್ಸವ ವ್ಯವಸ್ಥೆ ವೀಕ್ಷಣೆ ಮಾಡಿದರು.
ಚಾಮರಾಜನಗರ:ವಸತಿ,ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಇಂದು ಭೇಟಿ ನೀಡಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಮಾಡಲಾಗಿರುವ ವ್ಯವಸ್ಥೆಗಳನ್ನು ವೀಕ್ಷಿಸಿದರು.
ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಭಕ್ತಾಧಿಗಳಿಗೆ ಕಲ್ಪಿಸಿರುವ ಸೌಕರ್ಯಗಳನ್ನು ಪರಿಶೀಲಿಸಿದರು.
ಭಕ್ತಾಧಿಗಳಿಗೆ ಯಾವುದೇ ಸೌಲಭ್ಯಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕ್ಷೇತ್ರದ ದೀಪದ ಒಡ್ಡುವಿನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮಲೆ ಮಹದೇಶ್ವರರ ಬೃಹತ್ ಪ್ರತಿಮೆ ಕಾರ್ಯ ಪರಿಶೀಲಿಸಿದ ಸಚಿವರು ಮಾರ್ಚ್ 2 ರೊಳಗೆ ಪ್ರತಿಮೆ ಕಾರ್ಯ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರತಿಮೆ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಹೋಗಿಬರುವ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಲೆಮಹದೇಶ್ವರ ದೇವಾಲಯಕ್ಕೆ ತೆರಳಿದ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಈ ಬಾರಿಯ ಶಿವರಾತ್ರಿ ಜಾತ್ರಾಗೆ ಭಕ್ತಾಧಿಗಳಿಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ.ದಾಸೋಹ ಭವನದ ಮೇಲಿನ ಮಹಡಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಪ್ರಸಾದ ಸೇವೆನೆ ಹಾಲ್ ಅನ್ನು ಸಹ ದಾಸೋಹಕ್ಕೆ ಬಳಸಲಾಗುತ್ತಿದೆ.ಒಂದೇ ಬಾರಿ ಮೂರು ಸಾವಿರಕ್ಕೂ ಹೆಚ್ಚು ಭಕ್ತರು ದಾಸೋಹ ಭವನದಲ್ಲಿ ಪ್ರಸಾದ ಸೇವೆನೆಗೆ ಅವಕಾಶವಾಗುತ್ತಿದೆ ಎಂದು ಉಸ್ತುವಾರಿ ಸಚಿವರು ವಿವರಿಸಿದರು.
ಮಲೆ ಮಹದೇಶ್ವರರ ಪ್ರತಿಮೆ ನಿರ್ಮಾಣ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದ್ದು ಮಾರ್ಚ್ 7 ಅಥವಾ 8 ರಂದು ಮುಖ್ಯಮಂತ್ರಿಯವರಿಂದ ಲೋಕಾರ್ಪಣೆ ಮಾಡಲು ಸಿದ್ದತೆ ಯಲ್ಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಕಾತ್ಯಾಯಿನಿ ದೇವಿ ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ , ಉಪವಿಭಾಗಾಧಿಕಾರಿ ಗೀತಾ ಹುಡೇದ, ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು ಇತರೆ ಅಧಿಕಾರಿಗಳು ಇದ್ದರು.
ಮಲೆ ಮಹದೇಶ್ವರ ಬೆಟ್ಟ ಭೇಟಿಗೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವರು ಕೆಶಿಪ್ ಯೋಜನೆಯಡಿ ಕೊಳ್ಳೇಗಾಲದಿಂದ ಹನೂರುವರೆಗೆ ಪ್ರಗತಿಯಲ್ಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು.
ಕಾಮಗೆರೆ ಬಳಿ ರಸ್ತೆಗಾಗಿ ಭೂಮಿ ಬಿಟ್ಟುಕೊಡುತ್ತಿರುವವರ ಅಹವಾಲು ಆಲಿಸಿದರು.
ರಸ್ತೆಗೆ ಭೂಮಿ ನೀಡುತ್ತಿರುವವರಿಗೆ ಕೂಡಲೆ ಪರಿಹಾರ ನೀಡಬೇಕು.ತ್ವರಿತವಾಗಿ ಕಾಮಗಾರಿ ಮುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವರದಿ ಉಸ್ಮಾನ್ ಖಾನ್