ಉಡುಪಿ:ಎಂ.ಜಿ.ಎಂ.ಕಾಲೇಜು ಕ್ರೀಡಾಂಗಣ, ಫೆಬ್ರವರಿ 20 :ಒಂದು ರಾಷ್ಟ್ರೀಯ ಪಕ್ಷದ ರಾಷ್ಟ್ರಾಧ್ಯಕ್ಷ ಬೂತ್ ಮಟ್ಟದ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡುವಲ್ಲಿ ಇವತ್ತು ಉಡುಪಿ ಸಾಕ್ಷಿ ಯಾಯಿತು.ಎಂ.ಜಿ.ಎಂ ಕಾಲೇಜಿನ ಮೈದಾನದಲ್ಲಿ ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದ ಕಿಕ್ಕಿರಿದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಶ್ರೀ ಜೆ.ಪಿ .ನಡ್ಡಾ ರವರು 1968 ರಲ್ಲಿ ಜನಸಂಘದ ಪ್ರತಿನಿಧಿಗಳ ಮೊದಲ ಪುರಸಭೆ ಉಡುಪಿ ಆಗಿತ್ತೆಂದು ನೆನಪಿಸಿ ತಮ್ಮ ಮತ್ತು ದಿ. ವಿ.ಎಸ್.ಆಚಾರ್ಯರ ಭಾಂದವ್ಯವನ್ನು ವಿವರಿಸಿಸುತ್ತಾ ಉಡುಪಿ ಬಿ.ಜೆ.ಪಿ ಗೆ ದಕ್ಷಿಣ ಭಾರತದ ಹೆಬ್ಬಾಗಿಲು ಎಂಬ ಬಿರುದು ಕೊಟ್ಟರು.
ಬಿ.ಜೆ.ಪಿ ಪಕ್ಷದ ಉಡುಪಿ ಜಿಲ್ಲಾಮಟ್ಟದ ಬೂತ್ ಕಾರ್ಯಕರ್ತರಿಗೆ ಪಕ್ಷದ ನೂರಾರು ಸಾಧನೆಗಳನ್ನು ನೆನಪಿಸುತ್ತ ಮುಂಬರುವ ವಿಧಾನ ಸಭಾ ಚುನಾವಣೆಯ ಪೂರ್ವ ಭಾವಿ ಪ್ರಚಾರ ಸಂದರ್ಭ ಪ್ರತಿ ಮನೆ-ಮನೆಗೆ ತೆರಳಿ ಜನರಿಗೆ ಮಾಹಿತಿ ತಲುಪಿಸಬೇಕಾಗಿ ವಿನಂತಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಕಳೆದ 9 ವರ್ಷಗಳ ಯಶಸ್ವಿ ಸರಕಾರ ಮತ್ತು ಸಮರ್ಥ ಆಡಳಿತದ ಬಗ್ಗೆ ವಿವರಿಸುತ್ತಾ ಕೊರೋನಾ ನಂತರ ತನ್ನ 100 ಶೇಕಡಾ ಪ್ರಜೆಗಳಿಗೆ ಉಚಿತ ಲಸಿಕೆ ಕೊಡಿಸಿದ್ದು ಜಗತ್ತಿಗೆ ಮಾದರಿಯಾಗಿದೆ,ಅಷ್ಟೇ ಅಲ್ಲದೆ ಜಗತ್ತಿನ ಹಲವಾರು ದೇಶಗಳಿಗೆ ಭಾರತ ಲಸಿಕೆ ರಫ್ತು ಮಾಡಿದ್ದು ವಿಶ್ವದ ಗಮನ ಭಾರತದತ್ತ ಸೆಳೆಯುವಂತೆ ಮಾಡಿತ್ತು.
ಇತ್ತೀಚಿನ ರಷ್ಯಾ – ಉಕ್ರೇನ್ ಯುದ್ಧ ಕಾಲದಲ್ಲಿ ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳು ತಮ್ಮ ಪ್ರಜೆಗಳನ್ನು ಸ್ವ ದೇಶಕ್ಕೆ ಕರೆತರುವ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದ ಸಂದರ್ಭ ಭಾರತ ಕೆಲವು ಗಂಟೆಗಳ ಕಾಲ ಯುದ್ಧ ನಿಲ್ಲಿಸುವಲ್ಲಿ ಯಶಸ್ವಿಯಾಗಿ ತನ್ನ ಪ್ರಜೆಗಳನ್ನು ಹಾಗೂ ಹಲವಾರು ವಿದೇಶಿಯರನ್ನು ಭಾರತದ ರಾಷ್ಟ್ರ ಧ್ವಜದ ನೆರಳಿನಲ್ಲಿ ರಕ್ಷಿಸಿ ಸುರಕ್ಷಿತವಾಗಿ ಅವರವರ ದೇಶ ತಲುಪುವಲ್ಲಿ ಸಹಾಯ ಹಸ್ತ ಚಾಚಿತ್ತು.
ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಶ್ರೀ. ನರೇಂದ್ರ ಮೋದಿಜಿಯವರ ಅಯುಷ್ಮಾನ್ ಯೋಜನೆಯು ವಿಶ್ವದ ಅತಿ ದೊಡ್ಡ ಅರೋಗ್ಯ ವಿಮೆ ಯೋಜನೆಯು ಜಗತ್ತಿಗೆ ಮಾದರಿಯಾಗಿದೆ.ಬಿ ಜೆ ಪಿ ಪಕ್ಷದಲ್ಲಿ ಈಗಾಗಲೇ ಬೂತ್ ಮಟ್ಟದಲ್ಲಿ ಸಂಘಟಿತರಾಗಿ ಚುನಾವಣೆಗೆ ಹೋಗಲು ತಯಾರಾಗಿದ್ದೇವೆ ಎಂದು ಹೇಳಿ ಕಾರ್ಯಕರ್ತರಿಗೆ ಶುಭ ಕೋರಿದರು.
ವೇದಿಕೆಯ ಮೇಲೆ ರಾಜ್ಯ ಉಸ್ತುವಾರಿ ಶ್ರೀ ಅರುಣ್ ಸಿಂಗ್, ಉಡುಪಿ ಸಂಸದೆ ಹಾಗೂ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ, ಇಂಧನ ಸಚಿವ ಶ್ರೀ ಸುನಿಲ್ ಕುಮಾರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ .ಅಂಗಾರ, ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ . ಸಿ .ಟಿ .ರವಿ , ಉಡುಪಿ ಶಾಸಕ ಶ್ರೀ .ರಘುಪತಿ ಭಟ್, ಶಾಸಕ ಶ್ರೀನಿವಾಸ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ಯಶಪಾಲ್ ಸುವರ್ಣ ಹಾಗೂ ಹಲವಾರು ಶಾಸಕರು ಮತ್ತು ಜಿಲ್ಲಾಮಟ್ಟದ ಮುಖಂಡರು ಉಪಸ್ಥಿತರಿದ್ದರು.
ವರದಿ:ಚಂದ್ರಶೇಖರ ಹೆಬ್ಬಾರ್ ಕೊಲ್ಯ