ಕೃಷಿ ಇಲಾಖೆಯ ಅಧಿಕಾರಿಗಳೇ ನೆನಪಿಡಲು ಸಾಧ್ಯವಿರದಷ್ಟು ಇಲಾಖೆಯ ಯೋಜನೆಗಳು ಇದ್ದರೂ ಕೂಡ, ರೈತರು ಪರಾವಲಂಬಿಗಳಾಗಿ ಅವರ ಸಾಲ ಹೆಚ್ಚಾಗುತ್ತಿರುವುದಕ್ಕೆ ಮೂಲ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲೇಬೇಕಾದ ಸಂದರ್ಭ ಬಂದೊದಗಿದೆ. ಎಲ್ಲ ಯೋಜನೆಗಳ ನಿಜವಾದ ಉದ್ದೇಶ ರೈತರನ್ನು ಸಶಕ್ತರನ್ನಾಗಿ ಮಾಡುವುದೇ ಆಗಿದ್ದರೆ, ಖಂಡಿತ ಯೋಜನೆಗಳು ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಸಾಲ ಮುಕ್ತರನ್ನಾಗಿ ಮಾಡುತ್ತಿದ್ದವು.
ಇಂದು 90 ಪ್ರತಿಶತ ರೈತರು ಬಿತ್ತನೆ ಬೀಜಕ್ಕೂ ಕೂಡ ಬೇರೆಯವರನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗೂ 50 ಪ್ರತಿಶತಕ್ಕಿಂತ ಹೆಚ್ಚು ರೈತರು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದರ ಜೊತೆಗೆ ಹಲವು ಬೆಳೆಗಳ ಇಳುವರಿ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿವೆ. ಹಾಗಾದರೆ, ಮುಂದಿನ ದಿನಗಳಲ್ಲಿ ರೈತರಿಗೆ ಒಳ್ಳೆಯ ಭವಿಷ್ಯವಿದೆಯೇ? ಎಂಬುದು ಮೂಲ ಪ್ರಶ್ನೆಯಾಗಿದೆ.
ಈ ಪ್ರಶ್ನೆಗೆ ಉತ್ತರವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ನೀಡಲು ಅರ್ಹರು. ಏಕೆಂದರೆ,
ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಅದೇ ಕ್ಷೇತ್ರದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸುತ್ತಿರುವುದರಿಂದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಭವಿಷ್ಯದ ಕುರಿತು ಸ್ಪಷ್ಟತೆ ನೀಡಬಲ್ಲರು.
ಇಂದು ಅನೇಕ ಕೃಷಿ ಯೋಜನೆಗಳು ರೈತರನ್ನು ಸ್ವಾವಲಂಬಿಗಳನ್ನಾಗಿಸುವ ಬದಲು, ಕೇವಲ ಚುನಾವಣೆ ಸಂದರ್ಭದಲ್ಲಿ ಅವರ ಮತ ಪಡೆಯಲು ಸಫಲವಾಗುತ್ತಿವೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.
ರಾಜಕೀಯ ವ್ಯಾಪಾರೀಕರಣ ವಾಗುತ್ತಿರುವುದೇ ಇದಕ್ಕೆ ಮೂಲ ಕಾರಣವೇ…?
ರೈತ ಉಳಿದರೆ ಮಾತ್ರ ಮುಂದಿನ ಪೀಳಿಗೆ ಉಳಿಯಲು ಸಾಧ್ಯ. ಹಾಗಾಗಿ, ಅವರವರ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸಮಸ್ಯೆಯ ಮೂಲ ಕಾರಣವನ್ನು ಭೇದಿಸಲೇಬೇಕಾದ ಸಂದರ್ಭ ಬಂದೊದಗಿದೆ.
ಬಸವರಾಜ (ಅಭೀಃ)
ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.