ಮರೆತು ಹೊಂಟಾರ ಮರೆಯದ ವ್ಯಕ್ತಿಯನ್ನ
ತನ್ನ ಬದುಕನ್ನೇ ಜನರಿಗಾಗಿ ಮುಡುಪಿಟ್ಟ ಮಹಾನುಭವರನ್ನ
ಜಗದ ಮಕ್ಕಳೇ ತನ್ನ ಮಕ್ಕಳೆಂದು ಮರುಗಿದ ಮಮಕಾರವನ್ನ
ಅಸಮಾನತೆ ಶೋಷಣೆ ವಿರುದ್ಧಕೆ ಎದ್ದು ನಿಂತ ನಾಯಕನನ್ನ…!!
ಮರೆತು ಹೊಂಟಾರ ಜನಗಳು ನೊಂದ ಮಹಾನಾಯಕನನ್ನ
ಕಷ್ಟದಲಿ ಬೆಂದು ಬದುಕಿ ಬದುಕು ಕಟ್ಟಿಕೊಟ್ಟ ಬಂಧುವನ್ನ
ಹೆಂಡಿರ ಮಕ್ಕಳ ಲೆಕ್ಕಿಸದೇ ಲೋಕಕೆ ದುಡಿದ ದಣಿಯನ್ನ
ತಂದೆ ತಾಯಿ ಪ್ರೀತಿಯ ತೊರೆದು ಶೋಷಿತ ಬದುಕಿಗೆ ದುಡಿದವನನ್ನ…!!
ಮರೆತು ಹೊಂಟಾರ ನನ್ನವರು ನೈಜ ನೀತಿಯನ್ನ
ಪಾಲಿಸುತ ಕುಂತಾರ ಪಾಪ ಪುಣ್ಯಗಳರಿಯದ ಕೆಟ್ಟ ಪುಟಗಳನ್ನ
ಪೂಜಿಸುತಾರ ಮೇಲ್ನೋಟಕ ದುಡಿದು ಮಡಿದ ಮಹಾನರನ್ನ
ನೆನೆದು ಕೂಗುತಾರ ಅನ್ಯಾಯ ಅತ್ಯಾಚಾರವಾದ ಕ್ಷಣದೊಳಗಿನ್ನ..!!
ಮತ್ತೇ ಮೌಢ್ಯತೆಯಲಿ ಮುಳುಗಿ ಕುಂತಾರ ನನ್ನ ಜನ
ಸರಿಸಿ ಸುಮ್ಮನೆ ನಡೆದಾರ ಸರಿ ದಾರಿ ತೋರಿದ ಸರದಾರನನ್ನ
ದ್ವೇಷ ರೋಷಗಳಲಿ ಸಾಗಿದೆ ನನ್ನ ಮುಗ್ದ ಜನಗಳ ಪಯಣ
ಕಣ್ಮುಚ್ಚಿ ಕುಳಿತಾರೋ ರಕ್ಷಿಸದೇ ಸಮಾನತೆಯ ಸಂವಿಧಾನವನ್ನ….!!
- ಹನುಮಂತ ದಾಸರ
ಯುವ ಕವಿ ಸಾಹಿತಿ ಬರಹಗಾರರು ಧಾರವಾಡ.