ಇತ್ತೀಚೆಗೆ ಅಂದರೆ ಫೆಬ್ರವರಿ 26-27 ನೇ ತಾರೀಖಿನ ಪ್ರಮುಖ ದಿನಪತ್ರಿಕೆಗಳಲ್ಲಿ ರ‍್ಯಾಗಿಂಗ್ ನಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂಬ ವರದಿಯನ್ನು ಬಹುಶಃ ಎಲ್ಲರೂ ಓದಿರುತ್ತಾರೆ, ಹೈದರಾಬಾದ್ ನ ಕಾಕತೀಯ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದ 26 ವರ್ಷದ ಡಿ. ಪ್ರೀತಿ ಸಾವಿಗೀಡಾಗಿರುವ ವಿದ್ಯಾರ್ಥಿನಿ ಎಂಬುದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದನ್ನು ನೋಡಿ ಮನಸ್ಸು ನಿಜಕ್ಕೂ ತಲ್ಲಣಗೊಂಡಿತ್ತಲ್ಲವೆ…?
ಕಾಲೇಜಿನ ಸಿನಿಯರ್ಸ್ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್‍ಗೆ ಒಳಗಾಗಿದ್ದ ಡಿ.ಪ್ರೀತಿಯು ಎಂ.ಜಿ.ಎಂ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ
ಇವರು ಕೆಲ ಸಮಯದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.ತಕ್ಷಣ ಅವರನ್ನು ಹೈದ್ರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನುವ ಸುದ್ದಿಯೂ ಕೂಡಾ ನಮ್ಮೆಲ್ಲರನ್ನೂ ಸ್ತಂಭಿಭೂತರನ್ನಾಗಿ ಮಾಡಿತ್ತು.
ಇದೊಂದು ದೃಷ್ಟಾಂತ ಅಷ್ಟೇ ಇನ್ನೂ ಇಂತಹ ನೂರಾರು ಘಟನೆಗಳು ದಿನನಿತ್ಯವೂ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಲೇ ಇರುತ್ತವೆ. ಮೊದಮೊದಲೆಲ್ಲಾ ಇಂತಹ ಘಟನೆಗಳನ್ನು ನಾವು ವೃತ್ತಿಪರ ಕಾಲೇಜುಗಳಲ್ಲಿ ಮಾತ್ರ ನೋಡುತ್ತಿದ್ದೆವು. ಆದರೆ ಈ ರ‍್ಯಾಗಿಂಗ್ ಎಂಬ ಪಿಡುಗು ಇಂದು ಶಾಲಾ – ಕಾಲೇಜಿನೊಳಕ್ಕೂ ಕೂಡಾ ಎಗ್ಗಿಲ್ಲದೇ ನುಗ್ಗಿ ಹಾಸುಹೊಕ್ಕಾಗಿದೆ ಮುಗ್ಧ,ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾರಕವಾಗಿ ಪರಿಣಮಿಸುತ್ತಿದೆ.
ಈಗಾಗಲೇ ಪಿಯುಸಿ ಪರೀಕ್ಷೆಗಳು ಮುಗಿಯುತ್ತಿದ್ದು, ಪ್ರತಿಭೆಯ ಆಧಾರದ ಮೇಲೆ ತಮ್ಮ ತಮ್ಮ ಊರು, ಹಳ್ಳಿಗಳನ್ನು ತೊರೆದು ನೂರಾರು ಮೈಲು ದೂರ ಹೋಗಿ ಪ್ರತಿಭೆಯ ಆಧಾರದ ಮೇಲೆ ಕಾಲೇಜಿಗೆ ಪ್ರವೇಶ ಪಡೆದುಕೊಂಡು,ಹಾಸ್ಟೇಲ್ ನಲ್ಲಿ ವಾಸ್ತವ್ಯ ಮಾಡುವ ಇಂತಹ ಅಪ್ಪಟ ಪ್ರತಿಭೆಗಳಿಗೆ ಈ ರ‍್ಯಾಗಿಂಗ್ ಎಂಬ ಪೆಡಂಭೂತ ಹೆಚ್ಚಾಗಿ ಬಡಿದುಕೊಳ್ಳುತ್ತದೆ ಎಂಬುದು ನುರಿತ ಹಲವು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.
ಕಾಲೇಜಿನ ಹೊಸದಾದ ವಾತಾವರಣಕ್ಕೆ ಹೊಂದಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ನಿಜಕ್ಕೂ ಸವಾಲಿನದ್ದಾಗಿರುತ್ತದೆ ಹೆತ್ತವರ ಕನಸನ್ನು ನನಸು ಮಾಡುವ ಗುರಿಯೊಂದಿಗೆ ಕಾಲೇಜಿಗೆ ಪ್ರವೇಶ ಪಡೆದಾಗ ಅಲ್ಲಿನ ನೈಸರ್ಗಿಕ ಪರಿಸರವೇನೋ ಇವರನ್ನು ಆತ್ಮೀಯತೆಯಿಂದ,ಆದರದಿಂದ ಸ್ವಾಗತಿಸಿ, ವ್ಯಾಸಂಗಕ್ಕೆ ಅಣಿಗೊಳಿಸಬಹುದು ಆದರೆ ಈ ಸೀನಿಯರ್ ವಿದ್ಯಾರ್ಥಿಗಳು ಇವರ ಆಶಾಗೋಪುರವು ಕುಸಿದು ಬೀಳುವಂತೆ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ ಸೀನಿಯರ್ ಎಂಬ ಕ್ರೂರ, ವಿಕೃತ ಮನಸ್ಸಿನ ಕೆಲವು ವಿದ್ಯಾರ್ಥಿಗಳು ಓದಲೆಂದು ಕಾಲೇಜಿಗೆ ಬಂದಿರುವುದಿಲ್ಲವೇನೋ ಎಂದೆನಿಸುತ್ತದೆ. ಇವರು ಜ್ಯೂನಿಯರ್ ವಿದ್ಯಾರ್ಥಿಗಳನ್ನು ಗೋಳು ಹೊಯ್ದುಕೊಳ್ಳಲೆಂದೇ ಕಾಲೇಜಿಗೆ ಬರುತ್ತಾರೆಂಬುದು ವಾಸ್ತವ ಕಹಿಸತ್ಯ ಇವರು ಬಿರುಗಾಳಿಯಂತೆ, ಸುಂಟರಗಾಳಿಯಂತೆ ರಭಸವಾಗಿ ಬಂದು ಆಕಾಶದಲ್ಲಿ ತೇಲಾಡಿಸಿ ದೊಪ್ಪೆಂದು ಕೈಬಿಟ್ಟು ಎಂಜಾಯ್ ಮಾಡೋದ್ರಲ್ಲಿ ಈ ಸಿನಿಯರ್ಸ್ ಸದಾ ಸಿದ್ಧಹಸ್ತರು. ಅಂದರೆ ಈ ರ‍್ಯಾಗಿಂಗ್‍ನ್ನು ಕಾಲೇಜಿನ ಪ್ರತಿಯೊಂದು ಮೂಲೆಮೂಲೆಗಳಲ್ಲೂ ಪಸರಿಸುವುದನ್ನು ಗುರಿಯಾಗಿಸಿಕೊಂಡು ಮುನ್ನುಗ್ಗುವಲ್ಲಿ ಪರಿಣಿತರಾಗಿರುತ್ತಾರೆ.
ಹಾಗಾದ್ರೆ ರ‍್ಯಾಗಿಂಗ್ ಎಂದರೇನು..?ಅದರ ಪ್ರಭಾವವೇನು..?ಎಂಬುದನ್ನು ಕೂಲಂಕುಷವಾಗಿ ನೋಡೋಣ ಬನ್ನಿ ಇದಕ್ಕೆ ನಿಖರವಾದ ಉತ್ತರವನ್ನು ಕೊಡಲಾಗದಿದ್ದರೂ,ಕಾಲೇಜಿನಲ್ಲಿರುವ ಸೀನಿಯರ್ ಗಳು ಜ್ಯೂನಿಯರ್ ಗಳ ಮೇಲೆ ನಡೆಸುವ ಮಾನಸಿಕ ಮತ್ತು ದೈಹಿಕವಾದ ವಿಕೃತವಾದ ಹಿಂಸೆ ಎಂದು ವ್ಯಾಖ್ಯಾನಿಸಬಹುದಾಗಿದೆ.ರ‍್ಯಾಗಿಂಗ್ (Ragging) ಎನ್ನುವುದು ಮಾನವ ಹಕ್ಕುಗಳ ದುರುಪಯೋಗದ ವ್ಯವಸ್ಥಿತ ರೂಪವಾಗಿದೆ.”ಕ್ಯಾಂಪಸ್ ದೃಷ್ಟಿಕೋನ” ಮತ್ತು “ಕಾಲೇಜು ಸಂಪ್ರದಾಯ”ದ ವೇಷದಲ್ಲಿ ಹೊಸ ವಿದ್ಯಾರ್ಥಿಗಳಿಗೆ ವಿಚಿತ್ರ ರೀತಿಯಲ್ಲಿ ಚಿತ್ರಹಿಂಸೆ ನೀಡುವುದನ್ನು ರ‍್ಯಾಗಿಂಗ್ ಎಂದು ಕರೆಯಲಾಗುತ್ತದೆ. ಇದು ವಿಪರೀತ ಕಿರುಕುಳ ನೀಡುವುದರ ಜೊತೆಗೆ ಮನಸ್ಸಿನಲ್ಲಿ ಭಯದ ವಾತಾವರಣವನ್ನೂ ಸಹ ಉಂಟುಮಾಡುತ್ತದೆ.
ಇದರ ಅರ್ಥ ಮತ್ತು ವ್ಯಾಪ್ತಿ ಇನ್ನೂ ವಿಶಾಲವಾಗಿದೆ, ಅಷ್ಟೇ ಕ್ರೂರವಾಗಿದೆ ಕಾಲೇಜಿನಲ್ಲಿ ಸೀನಿಯರ್ ಗಳಿಂದ ಘಟಿಸಿದ ಹಲವಾರು ದುರ್ಘಟನೆಗಳನ್ನು ನೋಡುತ್ತಾ ಹೋದರೆ ನಿಜಕ್ಕೂ ಆತಂಕವಾಗುತ್ತದೆ. ಎತ್ತ ಸಾಗುತ್ತಿವೆ ನಮ್ಮ ಶಿಕ್ಷಣದ ವ್ಯವಸ್ಥೆ. ಗುರಿ- ಉದ್ದೇಶಗಳು ಅಡ್ಡದಾರಿಯಲ್ಲಿ ಹೋಗುತ್ತಿರುವುದನ್ನು ನೋಡಿದಾಗ ಮನಸ್ಸು ಚಿಂತಾಕ್ರಾಂತವಾಗುತ್ತದೆ. ನೈತಿಕತೆಯು ಸಂಪೂರ್ಣವಾಗಿ ಅದಃಪತನವಾಗುತ್ತಿದೆ ಎಂಬುದನ್ನು ನಾವಿಲ್ಲಿ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಪಿಯುಸಿ ಯವರೆಗೂ ಅಷ್ಟೇನೂ ಕಾಡದ ಈ ರ‍್ಯಾಗಿಂಗ್ ನಂತರದ ವ್ಯಾಸಂಗ ಮಾಡುವಲ್ಲಿ ಹೆಚ್ಚಿನ ಪ್ರಭಾವ ಬೀರುತ್ತಿದೆ. ಕಷ್ಟಪಟ್ಟು ಓದಿ ಪಿಯುಸಿಯಲ್ಲಿ ಒಳ್ಳೆಯ ಶ್ರೇಣಿಯನ್ನು ಪಡೆದುಕೊಂಡು ಉನ್ನತ ವ್ಯಾಸಂಗದ ಮಹದಾಸೆಯೊಂದಿಗೆ ಕಾಲೇಜಿಗೆ ಕಾಲಿಟ್ಟ ಅಪ್ಪಟ ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಧದಲ್ಲಿಯೇ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ ಎಂಬುದು ಸರ್ವಕಾಲಿಕ ಸತ್ಯವಾಗಿದೆ. ಇಂತಹ ಕಾಲೇಜಿಗೆ ಒಂದು ದೊಡ್ಡ ನಮಸ್ಕಾರ ಹಾಕಿ ವಿದಾಯ ಹೇಳಿ “ಬಂದ ದಾರಿಗೆ ಸುಂಕವಿಲ್ಲ” ಎಂಬಂತೆ ಮನೆಗೆ ಹಿಂತಿರುಗಿ ಮಾನಸಿಕ ಅಸ್ವಸ್ಥರಾಗುತ್ತಿದ್ದಾರೆ. ಇಷ್ಟು ಸಾಕಲ್ಲವೇ ಈ ರ‍್ಯಾಗಿಂಗ್‍ನ ದುಷ್ಪರಿಣಾಮ ಎಂತದ್ದು ಎಂದು ಅರಿತುಕೊಳ್ಳಲು. ಶ್ರೇಷ್ಠ ಪ್ರತಿಭಾವಂತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ಹೊಸಕಿ ಹಾಕುವ ಈ ಹೇಯ ಕೃತ್ಯವನ್ನು ಎಲ್ಲರೂ ಒಗ್ಗಟ್ಟಾಗಿ ಎದರಿಸಲೇಬೇಕಾಗಿದೆ. ಹೀಗಾಗಿ ಈ ರ‍್ಯಾಗಿಂಗ್ ಶಿಕ್ಷಣದ ಸ್ವಂತಿಕೆಯನ್ನು ಸಂಪೂರ್ಣವಾಗಿ ಕಳೆಯುತ್ತಿದೆ,ನಾಶಮಾಡುತ್ತಿದೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ.
ಕಾಲೇಜಿನ ಒಳ-ಹೊರಗಿನ ಆವರಣದಲ್ಲಿ ಸೀನಿಯರ್ ಗಳು ಹೊಸದಾಗಿ ಕಾಲೇಜಿಗೆ ಬಂದಿರುವ ಜ್ಯೂನಿಯರ್ ಗಳಿಗೆ ಛೇಡಿಸುವುದು, ಪರಸ್ಪರರನ್ನು ರೇಗಿಸುವುದು,ಕೀಟಲೆ ಮಾಡುವುದು, ದೂಷಿಸುವುದು, ಹಿಯ್ಯಾಳಿಸುವುದು ಇಂದು ಸರ್ವೆಸಾಮಾನ್ಯವಾಗಿಬಿಟ್ಟಿದೆ. ಇದು ವಿಕೋಪಕ್ಕೆ ಹೋದಾಗ ಮಾನಸಿಕ ವೇದನೆಯಾಗಿ ಸಾಕಷ್ಟು ನೋವನ್ನುಂಟು ಮಾಡುತ್ತದೆ. ಅಷ್ಟೇ ಅಲ್ಲ ಇದು ಅಪಮಾನದ ಹಂತವನ್ನೂ ಮೀರಿ ಹೋಗಬಹುದು. ಶಾರೀರಿಕ ಕುಂದು ಕೊರತೆಗಳನ್ನು ಗಮನಿಸಿ ಅಪಮಾನವಾಗುವಂತೆ ಛೇಡಿಸಿದಾಗ ಇಂತಹ ಕೀಟಲೆಗಳು ಖಂಡಿತವಾಗಿಯೂ ದುರಂತಕ್ಕೀಡಾಗಿ ಸಾವಿನಲ್ಲಿ ಕೊನೆಗೊಂಡ ನೂರಾರು ಉದಾಹರಣೆಗಳು ನಮ್ಮ ಕಣ್ಮುಂದೆಯೇ ಕಾಣಸಿಗುತ್ತವೆ.
ಇನ್ನೊಬ್ಬರನ್ನು ಅಸಹ್ಯವಾಗಿ, ವ್ಯಂಗವಾಗಿ ಹಾಗೂ ಮಾರಕವಾಗಿ ಚುಡಾಯಿಸಿದಾಗ ಏನಾಗುತ್ತದೆ ಎಂಬ ಕನಿಷ್ಠ ಜ್ಞಾನವನ್ನೂ ಕೂಡಾ ಕೊಡಲಾಗದ ಸ್ಥಿತಿಗೆ ಶಿಕ್ಷಣದ ವ್ಯವಸ್ಥೆ ಬಂದು ನಿಂತಿದೆಯೇ..? ಈ ರೀತಿಯಲ್ಲಿ ವಿಕೃತವಾಗಿ ಚುಡಾಯಿಸಿ ತಾವು ಮನರಂಜನೆಯ ಲಾಭ ಪಡೆದುಕೊಂಡು, ಇನ್ನೊಬ್ಬರಿಗೆ ಹಿಂಸೆ, ನೋವು, ಹತಾಶೆ ಮತ್ತು ದುಃಖವನ್ನು ನೀಡಿ ತೊಂದರೆ ಕೊಡುವದರಲ್ಲಿ ಅದ್ಯಾವ ಸಂತೃಪ್ತಿ ಇದೆಯೋ ಏನೋ ಎನ್ನುವುದಕ್ಕೆ ಅವರೇ ಉತ್ತರ ಕೊಡಬೇಕು. ಇದು ನ್ಯಾಯೋಚಿತವೇ ಎಂಬುದನ್ನು ಒಮ್ಮೆ ತಮ್ಮಷ್ಟಕ್ಕೇ ತಾವೇ ಪರಾಮರ್ಶನ ಮಾಡಿಕೊಳ್ಳಬೇಕಾದ್ದು ಅತ್ಯಗತ್ಯವಾಗಿದೆ. ಪರಸ್ಪರ ಸಂತೋಷ ನೀಡುವುದಕ್ಕೆ ಬದಲಾಗಿ ನೋವು ನೀಡಿ ಬೇಸರಪಡಿಸಿದರೆ ಆಗುವ ಲಾಭವಾದರೂ ಏನು.? ನಮ್ಮಿಂದ ಸಂತೋಷ ಹಂಚಲಾಗಿದ್ದರೂ ಚಿಂತೆಯಿಲ್ಲ, ಇನ್ನೊಬ್ಬರಿಗೆ ದುಃಖವನ್ನು ಕೊಡುವ ಹೇಯ ಕೃತ್ಯವನ್ನು ಮಾಡಲೇಬಾರದು. ಇದರಿಂದಾಗಿಯೇ ಅದೆಷ್ಟೋ ಸೂಕ್ಷ್ಮ ಮನಸ್ಸಿನವರು ಕಾಲೇಜಿಗೆ ಗುಡ್ ಬೈ ಹೇಳಿದ್ದಾರೆ. ಅಷ್ಟೇ ಏಕೆ ಆತ್ಮಹತ್ಯೆ ಮಾಡಿಕೊಂಡಂತಹ ನೂರಾರು ನಿದರ್ಶನಗಳು ದೊರೆಯುತ್ತವೆ. ಇದನ್ನರಿತುಕೊಂಡು ಇನ್ನು ಮುಂದಿನ ದಿನಗಳಾಲ್ಲದರೂ ಕೂಡಾ ಈ ರ‍್ಯಾಗಿಂಗ್ ಮಾಡುವುದನ್ನು ಮಾನವೀಯತೆಯ ಹಿತದೃಷ್ಟಿಯಿಂದಲಾದರೂ ನಿಲ್ಲಿಸಿಬಿಡಿ ಸೀನಿಯರ್ಸ್. ಆಗ ನೋಡಿ ನಿಮ್ಮ ಕಾಲೇಜು ದಿನಗಳು ಖಂಡಿತವಾಗಿಯೂ ಸುಂದರವಾಗಿ, ಸವಿನೆನಪುಗಳಾಗಿ ಹಚ್ಚಹಸಿರಾಗಿರುತ್ತವೆ.
ರ‍್ಯಾಗಿಂಗ್‍ಗೆ ಸಾಮಾನ್ಯ ಕಾರಣಗಳು:-
1)ನೈತಿಕ ಶಿಕ್ಷಣದ ಕೊರತೆ.
2)ಪರಸ್ಪರ ಭಾವನಾತ್ಮಕ ಒಡನಾಟ ಇಲ್ಲದಿರುವುದು.
3) ಬಾಲ್ಯದಲ್ಲಿ ಮಕ್ಕಳಿಗೆ ಸರಿಯಾದ ಮತ್ತು ಸೂಕ್ತವಾದ ಸಂಸ್ಕೃತಿಯು ಇಲ್ಲದಿರುವುದು.
4) ಶ್ರೀಮಂತಿಕೆಯ ಅಮಲಿನಲ್ಲಿ ಸಂಬಂಧಗಳ ಅರಿವು ಮೂಡದಿರುವುದು.
5) ಬಾಲ್ಯದಲ್ಲೇ ದುಶ್ಚಟಗಳ ದಾಸರಾಗಿರುವುದು.
6) ಸಿನಿಮಾ ಮತ್ತು ದೂರದರ್ಶನದಲ್ಲಿ ಬಿತ್ತರಿಸುವ ಕೆಲವು ಕ್ರೌರ್ಯ, ಸಾಹಸಗಳನ್ನು ತಮ್ಮ ದಿನನಿತ್ಯದಲ್ಲಿ ಅಳವಡಿಸಿಕೊಳ್ಳಲು ಶುರುಮಾಡಿದಾಗ.
7) ಹಣದ ವ್ಯಾಮೋಹಕ್ಕೆ ಒಳಗಾದಾಗ.
8) ವಿಕೃತ ಸ್ವಭಾವವನ್ನು ಮೈಗೂಡಿಸಿಕೊಂಡಾಗ.
10) ಸ್ನೇಹತರ ಗುಂಪಿನಲ್ಲಿ ಮನರಂಜನೆ ಪಡೆಯುವ ದುರದ್ದೇಶದಿಂದ
10) ಹಿಂಸೆ,ನೋವು,ಕಷ್ಟ, ದುಃಖಗಳ ಅರಿವು ಇಲ್ಲದಿರುವುದು.
ಹೀಗೆ ಇಂತಹ ಹತ್ತು, ಹಲವಾರು ಕಾರಣಗಳು ವಿದ್ಯಾರ್ಥಿಗಳಿಗೆ ಕಾಲೇಜಿನ ದಿನಗಳಲ್ಲಿ ರ‍್ಯಾಗಿಂಗ್ ಮಾಡಲು ಪ್ರೇರಣೆ ನೀಡುತ್ತವೆ ಎನ್ನಬಹುದು.
ರ‍್ಯಾಗಿಂಗ್ ತಡೆಗಟ್ಟುವಲ್ಲಿ UGC ಹೊರಡಿಸಿರುವ ಕೆಲವು ಕಟ್ಟುನಿಟ್ಟಾದ ನೀತಿ- ನಿಯಮಗಳು ಈ ಕೆಳಗಿನಂತಿವೆ.
1)ವಿವಿಧ ಮಾಧ್ಯಮಗಳ ಮೂಲಕ ಸಾಕಷ್ಟು ಪ್ರಚಾರ ಮಾಡುವುದು.
2) ರ‍್ಯಾಗಿಂಗ್ ವಿರೋಧಿ ಸಮಿತಿ ಮತ್ತು ಆ್ಯಂಟಿ ರ‍್ಯಾಗಿಂಗ್ ಸ್ಕ್ವಾಡ್ ಅನ್ನು ರಚಿಸುವುದು.
3) ರ‍್ಯಾಗಿಂಗ್ ವಿರೋಧಿ ಸೆಲ್ ಅನ್ನು ಹೊಂದಿಸುವುದು.
4) ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು.
5) ರ‍್ಯಾಗಿಂಗ್ ವಿರೋಧಿ ಕಾರ್ಯಾಗಾರ ಮತ್ತು ವಿಚಾರ ಸಂಕೀರಣಗಳನ್ನು ನಡೆಸುವುದು.
6) ನೋಡಲ್ ಅಧಿಕಾರಿಗಳ ಸಂಪೂರ್ಣ ವಿವರಗಳೊಂದಿಗೆ ವೆಬ್‌ಸೈಟ್‌ಗಳನ್ನು ನವೀಕರಿಸಲಾಗುತ್ತಿದೆ.
ವೆಬ್‌ಸೈಟ್‌ನಲ್ಲಿ ಮತ್ತು ಕ್ಯಾಂಪಸ್‌ನಲ್ಲಿ (ಪ್ರವೇಶ ಕೇಂದ್ರ, ಇಲಾಖೆಗಳು, ಗ್ರಂಥಾಲಯ, ಕ್ಯಾಂಟೀನ್, ಹಾಸ್ಟೆಲ್, ಇತ್ಯಾದಿ) ರ‍್ಯಾಗಿಂಗ್ ವಿರೋಧಿ ಸಮಿತಿಯ ನೋಡಲ್ ಅಧಿಕಾರಿಯ ಇಮೇಲ್ ವಿಳಾಸ ಮತ್ತು ಸಂಪರ್ಕ ವಿವರಗಳನ್ನು ತಿಳಿಸುವುದು.
7) ಎಚ್ಚರಿಕೆಯ ಗಂಟೆಗಳನ್ನು ಅಳವಡಿಸುವುದು.
8) ವಿದ್ಯಾರ್ಥಿಗಳೊಂದಿಗೆ ನಿಯಮಿತ ಸಮಾಲೋಚನೆ ಮತ್ತು ಸಂವಹನ.
9) ತೊಂದರೆ-ಪ್ರಚೋದಕಗಳ ಗುರುತಿಸುವಿಕೆ.
10) ಕಾಲೇಜಿನ ಆವರಣದಲ್ಲಿ ರ‍್ಯಾಗಿಂಗ್ ವಿರೋಧಿ ಪೋಸ್ಟರ್ ಹಾಕುವಂತೆ ಆದೇಶ ಮಾಡಿದೆ.
ಇದರ ಜೊತೆಗೆ ಬ್ರೋಷರ್‌ಗಳು, ಇ-ಪ್ರಾಸ್ಪೆಕ್ಟಸ್, ಇ-ಮಾಹಿತಿ ಕಿರುಪುಸ್ತಕಗಳಲ್ಲಿ ಆ್ಯಂಟಿ ರ‍್ಯಾಗಿಂಗ್ ಎಚ್ಚರಿಕೆಗಳನ್ನು ಪ್ರಕಟಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. ಹಾಸ್ಟೆಲ್‌ಗಳು, ವಿದ್ಯಾರ್ಥಿಗಳ ವಸತಿ, ಕ್ಯಾಂಟೀನ್‌ಗಳು, ವಿಶ್ರಾಂತಿ ಮತ್ತು ಮನರಂಜನಾ ಕೇಂದ್ರಗಳು, ಶೌಚಾಲಯಗಳು, ಬಸ್ ನಿಲ್ದಾಣಗಳು ಇತ್ಯಾದಿಗಳಲ್ಲಿ ಹಠಾತ್ ತಪಾಸಣೆ ನಡೆಸಲು ಮತ್ತು ಎಲ್ಲಾ ಸ್ಥಳಗಳಲ್ಲಿ 8’x6′ ರ ರ‍್ಯಾಗಿಂಗ್ ವಿರೋಧಿ ಪೋಸ್ಟರ್‌ಗಳನ್ನು ಹಾಕುವಂತೆಯೂ ಅವರಿಗೆ ನಿರ್ದೇಶನ ನೀಡಲಾಗಿದೆ.
ಪ್ರತಿ ಶೈಕ್ಷಣಿಕ ವರ್ಷದಲ್ಲಿ ಪ್ರತಿ ವಿದ್ಯಾರ್ಥಿ ಮತ್ತು ಪೋಷಕರು ಆನ್‌ಲೈನ್ ಅಂಡರ್ಟೇಕಿಂಗ್ ಅನ್ನು antiragging.in ನಲ್ಲಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕೆಂದು ಯುಜಿಸಿ ಎಲ್ಲಾ ಕಾಲೇಜು ಸಂಸ್ಥೆಗಳಿಗೆ ವಿನಂತಿಸಿದೆ.
ರ‍್ಯಾಗಿಂಗ್ ವಿರೋಧಿ ಅಫಿಡವಿಟ್:-
ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ರ‍್ಯಾಗಿಂಗ್ ವಿರೋಧಿ ಅಫಿಡವಿಟ್ ಸಲ್ಲಿಸಲು ಸಂಸ್ಥೆಗಳು ಪರಿಷ್ಕೃತ ವಿಧಾನವನ್ನು ಜಾರಿಗೆ ತರಬೇಕು. ವಿದ್ಯಾರ್ಥಿಯು ತಮ್ಮ ನೋಂದಣಿ ಸಂಖ್ಯೆಯೊಂದಿಗೆ ಇಮೇಲ್ ಅನ್ನು ಸ್ವೀಕರಿಸುತ್ತಾರೆ, ನಂತರ ವಿದ್ಯಾರ್ಥಿಯು ಆ ಇಮೇಲ್ ಅನ್ನು ತಮ್ಮ ವಿಶ್ವವಿದ್ಯಾನಿಲಯದ ನೋಡಲ್ ಕಚೇರಿಗೆ ಅವರ ಇಮೇಲ್‌ನಲ್ಲಿ ರವಾನಿಸುತ್ತಾರೆ.
ಒಟ್ಟಿನಲ್ಲಿ ಒಬ್ಬ ಶಿಕ್ಷಕನಾಗಿ ನನ್ನ ವಿನಂತಿಪೂರ್ವಕ ಮನವಿಯೇನೆಂದರೆ ಈ ರ‍್ಯಾಗಿಂಗ್ ಎಂಬ ಮಹಾಪಿಡುಗು ತೊಲಗಲೇಬೇಕು. ಶಿಕ್ಷಣಕ್ಕೆ ಶಿಕ್ಷೆಯಾಗಿ ಮಾರಕವಾಗುತ್ತಿರುವ ರ‍್ಯಾಗಿಂಗ್ ಹೇಳಹೆಸರಿಲ್ಲದಂತೆ ಮಾಯವಾಗಬೇಕು. ಈ ದುಷ್ಕೃತ್ಯದಲ್ಲಿ ಹದಿಹರೆಯದವರೆ ಹೆಚ್ಚಾಗಿ ಪಾಲ್ಗೊಳ್ಳುತ್ತಿರುವುದರಿಂದ ಇಂತಹ ವಿಕೃತ ಮನಸುಗಳಿಗೆ ಕೌನ್ಸಿಲಿಂಗ್ ಮೂಲಕ ಸರಿದಾರಿಗೆ ತರುವ ಶತಪ್ರಯತ್ನ ಆಗಬೇಕು. ಒಟ್ಟಿನಲ್ಲಿ ಹರೆಯದ ತುಂಟಾಟಗಳಲ್ಲಿ ಮನರಂಜನೆಯ ಅಟ್ಟಹಾಸದಲ್ಲಿ ಮತ್ತೊಬ್ಬರಿಗೆ ನೋವುಂಟು ಮಾಡದೆ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುವ ಮಾನವೀಯತೆಯು ಎಲ್ಲೆಡೆಯಲ್ಲೂ ಪ್ರಸರಣವಾಗಬೇಕು.
ನಾವು ನಗುತ್ತ ಇತರರನ್ನು ನಗಿಸುತ್ತಾ ನಮ್ಮ ನಡುವೆ ಇರುವ ಎಲೆ ಮರೆಯಂತಹ ಸೂಕ್ತ ಪ್ರತಿಭೆಗಳಿಗೆ ಮತ್ತಷ್ಟು ಹೊಳಪು ತುಂಬಿ ಅವರ ಜೀವನವು ಜ್ಯೋತಿಯಂತೆ ಪ್ರಖರವಾಗಿ ಬೆಳೆಯುವಂತೆ ಮಾಡುವ ಹೊಣೆ ಯುವಜನಾಂಗದ ಇಂದಿನ ಆದ್ಯಕರ್ತವ್ಯವಾಗಿದೆ. ಯಾವುದಾದರೂ ಕೂಡಾ ಮಿತಿಯಲ್ಲಿದ್ದರೆ ಚೆನ್ನ ಅಲ್ಲವೇ..? ಅತಿಯಾದರೆ ಅಮೃತವೂ ಕೂಡಾ ವಿಷವಾಗುತ್ತದೆ. ಚೇಷ್ಟೆ, ತುಂಟಾಟ, ತರಲೆಗಳು ಹಿತಮಿತವಾಗಿರಬೇಕು. ಇದು ವಿಕೋಪಕ್ಕೆ ಹೋದಾಗ ಸೂಕ್ಷ್ಮಮತಿಯಂತಹ ತರುಣ- ತರುಣಿಯರು ಆತ್ಮಹತ್ಯೆಗೆ ಶರಣಾಗುತ್ತಾರೆ ಎನ್ನುವುದಾದರೆ ಈ ಹಾಳಾದ ರ‍್ಯಾಗಿಂಗ್ ಯಾಕೆ ಬೇಕು..? ಮತ್ತೊಬ್ಬರಿಗೆ ನೋವು,ಹಿಂಸೆ,ಹತಾಶೆ, ಕಷ್ಟ, ದುಃಖ ಮತ್ತು ಸಂಕಟಗಳೆಲ್ಲವನ್ನು ಕೊಟ್ಟು ಸಂತೋಷ,ಮನರಂಜನೆ ಪಡುವುದರಲ್ಲಿ ಅದೆಂತಹ ಸಂತೃಪ್ತಿ ಸಿಗುತ್ತದೆ. ಸರ್ಕಾರವು ಕೂಡಾ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವಲ್ಲಿ ರೂಪುರೇಷೆಗಳನ್ನು ತರಬೇಕು. ಪ್ರಾಥಮಿಕ ಹಂತದಿಂದಲೇ ಇಂತಹ ಕೃತ್ಯವನ್ನು ಮಾಡದಂತಹ ಪ್ರಭಾವಶಾಲಿ ಪಠ್ಯಕ್ರಮ ಜಾರಿಗೆ ಬರಬೇಕಾದದ್ದು ಅನಿವಾರ್ಯವಾಗಿದೆ.
ಒಟ್ಟಾರೆ ಎಲ್ಲಾ ಕಿರಿಯ ವಿದ್ಯಾರ್ಥಿಗಳು ನೆಮ್ಮದಿಯಿಂದ, ಖುಷಿಯಿಂದ, ಹೆಮ್ಮೆಯಿಂದ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಕಾಲೇಜಿಗೆ ಬರುವಂತಾಗಬೇಕು. ಸುರಕ್ಷಿತವಾಗಿ ವ್ಯಾಸಂಗ ಮಾಡಲು ಈ ಸೀನಿಯರ್ ಗಳು ಸದ್ಭಾವನೆಯಿಂದ, ಮನುಷ್ಯತ್ವದಿಂದ ಎಲ್ಲರೂ ಒಂದಾಗಿ ” ನಾವು ಇನ್ಮೇಲೆ ರ‍್ಯಾಗಿಂಗ್ ಮಾಡೋದಿಲ್ಲ..!!!” ಎನ್ನುವ ಘನಘೋರ ಭೀಷ್ಮ ಪ್ರತಿಜ್ಞೆ ಮಾಡಿ ಮಾನವೀಯತೆಯನ್ನು ಎತ್ತಿ ಹಿಡಿದು ಒಂದಾದಾಗ ಮಾತ್ರ,ಪ್ರತಿಭೆಗಳ ತವರೂರಾದ ನಮ್ಮ ಭಾರತ ದೇಶವು ಸದೃಢ, ಪ್ರಗತಿಪರ ರಾಷ್ಟ್ರವಾಗಿ ರೂಪುಗೊಳ್ಳುತ್ತದೆ. ಎಲ್ಲವೂ ಈ ಯುವಶಕ್ತಿಯ ಮೇಲೆಯೇ ನಿಂತಿದೆಯಾದ್ದರಿಂದ ಈ ರ‍್ಯಾಗಿಂಗ್‍ನ್ನು ಬೇರುಸಮೇತ ಕಿತ್ತೆಸೆದು ಸಾಧನಾಶೀಲರಾಗಲು ಪ್ರಯತ್ನಿಸಿ.ಭ್ರಾತೃತ್ವದ ಬೀಜವನ್ನು ಬಿತ್ತಿ ಎಲ್ಲರೂ ಒಂದಾಗಿ ನಕ್ಕು ನಲಿಯೋಣ. ಶಿಕ್ಷಣಕ್ಕೆ ಶಿಕ್ಷೆಯಾಗಿ, ಮುಗ್ದ ಪ್ರತಿಭೆಗಳಿಗೆ ಮಾರಕವಾಗಿ ಕಾಡುತ್ತಿರುವ ಈ ರ‍್ಯಾಗಿಂಗ್‍ನ್ನು ಬುಡ ಸಮೇತ ಕಿತ್ತೆಸೆದು ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡೋಣ ಬನ್ನಿ..!! ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯಪ್ರವೃತ್ತರಾಗೋಣ ಬನ್ನಿ..!!!
– ಶ್ರೀನಿವಾಸ.ಎನ್.ದೇಸಾಯಿ,ಶಿಕ್ಷಕರು.
ಮೊ.ನಂ- 9845808941
ವಿಳಾಸ:- ಶ್ರೀನಿವಾಸ.ಎನ್.ದೇಸಾಯಿ,ಶಿಕ್ಷಕರು.
ಸಾ|| ತಲ್ಲೂರು. ತಾ|| ಯಲಬುರ್ಗಾ.
ಜಿ|| ಕೊಪ್ಪಳ. 583236