ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪ್ರಜಾಪ್ರಭುತ್ವದ ಮಹತ್ವವನ್ನು ಅರಿತು ಜವಾಬ್ದಾರಿಯಿಂದ ಮತ ಚಲಾಯಿಸೋಣ

ನಮ್ಮ ದೇಶ ಸ್ವತಂತ್ರವಾದ ನಂತರ ದೇಶದ ಜನತೆಯ ಹಿತದೃಷ್ಟಿಯಿಂದ ಮತ್ತು ಸುವ್ಯವಸ್ಥಿತವಾದ ಆಡಳಿತವನ್ನು ಗಮನದಲ್ಲಿಟ್ಟುಕೊಂಡು, ಈ ದೇಶಕ್ಕೊಂದು ನೀತಿ ನಿಯಮಾವಳಿಗಳು ಬೇಕೆನ್ನುವ ಸದುದ್ದೇಶದಿಂದ, ಅಂದಿನ ಹಲವಾರು ಮೇಧಾವಿಗಳು ಹಲವಾರು ದಿನಗಳ ಕಾಲ ಹಲವಾರು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ,ದೇಶದ ಪ್ರತಿಯೊಬ್ಬರ ಸರ್ವಾಂಗೀಣ ಅಭಿವೃದ್ಧಿಗಾಗಿ ಜಗತ್ತೇ ಮೆಚ್ಚುವಂತಹ ಅಚ್ಚುಕಟ್ಟಾದ ಸಂವಿಧಾನವನ್ನು 26ನೇ ಜನವರಿ 1950 ರಂದು ಜಾರಿಗೊಳಿಸಿದರು ಮತ್ತು ಅವರ ಆ ಮಹಾನ್ ಕಾರ್ಯಕ್ಕೆ ನಾವೆಲ್ಲಾ ಎಂದೆಂದಿಗೂ ಗೌರವಪೂರ್ವಕ ನಮನವನ್ನು ಸಲ್ಲಿಸಲೇಬೇಕು.

ಸಂವಿಧಾನವನ್ನು ಒಳಗೊಂಡಂತೆ ಪ್ರಜಾಪ್ರಭುತ್ವ ವ್ಯವಸ್ಥೆಯು ಅಂದಿನಿಂದ ಜಾರಿಯಾಯಿತು ಪ್ರಜಾಸತ್ತಾತ್ಮಕವಾದ ಪರಿಕಲ್ಪನೆಯಡಿಯಲ್ಲಿ ಚುನಾಯಿತವಾದ ಪ್ರತಿನಿಧಿಯು,ಸಾಮಾನ್ಯರ ಧ್ವನಿಯಾಗಿ ಸಮಾಜದಲ್ಲಿರುವಂತಹ ಕುಂದು ಕೊರತೆಗಳನ್ನು ನೀಗಿಸುತ್ತಾ,ಪಕ್ಷ,ಜಾತಿ,ಲಿಂಗ, ಧರ್ಮ,ಭಾಷೆ,ಉಚ್ಛ ನೀಚನೆಂಬ ಬೇಧವನ್ನು ಮರೆತು ಯಾವುದೇ ತಾರತಮ್ಯವಿಲ್ಲದೆ,ಎಲ್ಲಾ ರಂಗದಲ್ಲೂ ಪ್ರತಿಯೊಬ್ಬರನ್ನು ಸಮಾನತೆಯಿಂದ ಕಾಣಬೇಕು ಮತ್ತು ಅವನ ಆಡಳಿತ ನಿಸ್ವಾರ್ಥತೆಯಿಂದ ಕೂಡಿರಬೇಕು ಮತ್ತು ಪ್ರಜೆಗಳ ಹಿತರಕ್ಷಣೆ ಜವಾಬ್ದಾರಿಯಾಗಿರಬೇಕು. 

ಅವನ ಆಡಳಿತ ಪ್ರಜಾಸತ್ತೆಯಾಗಿರಬೇಕೆನ್ನುವುದು ಪ್ರಜಾಪ್ರಭುತ್ವದ ಧ್ಯೇಯ.ಒಟ್ಟಾರೆ ಪ್ರಜೆಗಳೇ ಅಲ್ಲಿ ಪ್ರಭುಗಳು.ಆದರೆ ಇತ್ತೀಚೆಗೆ ಪ್ರಜಾಪ್ರಭುತ್ವದ ಮಾತನ್ನಾಡುವ ರಾಜಕಾರಣಿಗಳು ಅದರ ಆಶಯಗಳ್ಯಾವುದನ್ನಾದರೂ ಗಣನೆಗೆ ತೆಗೆದುಕೊಂಡಿದ್ದಾರಾ…? ಮತ್ತು ಅದರ ಆಶಯದಂತೆ ನಡೆಯುತ್ತಿದ್ದಾರಾ?ಎನ್ನುವ ಪ್ರಶ್ನೆ ಉದ್ಭವವಾಗಿದೆ. 

ಅದ್ಯಾವುದನ್ನು ಪರಿಗಣಿಸದೆ ಅದರ ವಿರುದ್ಧವಾಗಿಯೇ ಈಗಿನ ರಾಜಕಾರಿಣಿಗಳ ಆಡಳಿತ.ತನ್ನ ಸ್ವ-ಇಚ್ಚೆಯಂತೆಯೇ ನಡೆದುಕೊಳ್ಳುತ್ತಾ ಬೇಜವಾಬ್ದಾರಿಯಿಂದ ಸರ್ವಾಧಿಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ.ಜನ ಸಾಮಾನ್ಯರಿಗೆ ಕಿಂಚಿತ್ತೂ ಬೆಲೆ ಇಲ್ಲ.(ಚುನಾವಣೆ ಸಂದರ್ಭವನ್ನು ಹೊರತುಪಡಿಸಿ) ಒಂದು ಕಡೆ ಪ್ರಜಾಪ್ರಭುತ್ವದ ನಾಟಕವಾಡುವುದು,ಇನ್ನೊಂದೆಡೆ ಸಾಮಾನ್ಯರಿಗೆ ಆಮಿಷವೊಡ್ಡುವುದು,  ಇನ್ನೆನಾದರೂ ವಸ್ತುಗಳನ್ನು ಹಂಚುವುದು,ಇಂತಹ ತಂತ್ರದೊಂದಿಗೆ ಮುಗ್ದರನ್ನು ದಾರಿ ತಪ್ಪಿಸುತ್ತಾ ಮತದಾರರನ್ನು ತನ್ನತ್ತ ಸೆಳೆದು ಅವನನ್ನು ಕೊಂಡುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹವಲ್ಲವೆ…?ಮತ್ತು ಅವನ ಈ ಕುತಂತ್ರಕ್ಕೆ ಮಣಿದು ನಮ್ಮ ಅಮೂಲ್ಯವಾದ ಹಕ್ಕನ್ನು ಮಾರಿಕೊಳ್ಳಬೇಕೆ…? 

ನಮಗೆ ಸಂಪೂರ್ಣವಾದ ಸ್ವತಂತ್ರವಿದೆ ಯಾವುದೇ ಜಾತಿ,ಮತ,ಹಣ,ಆಸ್ತಿ ಅಂತಸ್ತನ್ನು ನೋಡದೇ, ಸಾಮಾನ್ಯನ ಅಹವಾಲನ್ನು ಆಲಿಸುವಂತಹ, ಸಮಾಜದ ಒಳಿತನ್ನು ಬಯಸುವ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಅತ್ಯದ್ಭುತವಾದ ಅವಕಾಶವನ್ನು ನಮ್ಮ ಸಂವಿಧಾನ ಒದಗಿಸಿ ಕೊಟ್ಟಿದೆ ಮತ್ತು ಆ ಹಕ್ಕನ್ನು ಬಹಳ ಗಂಭಿರವಾಗಿ ಚಲಾಯಿಸಿ ಪ್ರಜಾಪ್ರಭುತ್ವದ  ಆಶಯವನ್ನು ಎತ್ತಿ ಹಿಡಿಯುವಂತಹ ಬಹು ದೊಡ್ಡ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಇಂತಹ ಅದ್ಭುತವಾದ ಹಕ್ಕನ್ನು ಸದುಪಯೋಗಪಡಿಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ಈ ಹಕ್ಕಿನ ಮಹತ್ವವೆಷ್ಟಿದೆ ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ.ಆದರೆ, ವಿಷಾದದ ಸಂಗತಿಯೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಿ ಏಳು ದಶಕಗಳೇ ಕಳೆದರೂ ಅದರ ವೈಶಿಷ್ಟಗಳನ್ನು ಅರಿತುಕೊಳ್ಳುವಲ್ಲಿ ಸೋತಿದ್ದೀವಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಪಕ್ಷಗಳನ್ನು ಕಟ್ಟಿಕೊಂಡಿರುವ ರಾಜಕಾರಣಿಗಳು,ಅಧಿಕಾರ ಹಿಡಿಯುವ ತವಕದಲ್ಲಿ ಚುನಾವಣಾ ಪ್ರಚಾರದಲ್ಲಿ ಒಬ್ಬರನ್ನೊಬ್ಬರು ದೂರುತ್ತಾ, ಪ್ರಜಾಪ್ರಭುತ್ವದ ಆಶಯಗಳನ್ನು ಮರೆ ಮಾಚುತ್ತಿದ್ದಾರೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರಿಗೆ ಈಗಲೂ ಈ ವ್ಯವಸ್ಥೆಯ ವಿಶೇಷತೆಗಳು ತಿಳಿದಿಲ್ಲ ರಾಜಕೀಯ ಪಕ್ಷಗಳು ವೋಟು ಪಡೆಯುವ ತಂತ್ರದೊಂದಿಗೆ, ಆಯಾ ಕ್ಷೇತ್ರದಲ್ಲಿನ ಪ್ರಬಲ ಜಾತಿಯ ಅಭ್ಯರ್ಥಿಯನ್ನು ಗುರುತಿಸಿ ಟಿಕೆಟ್ ಹಂಚಿಕೆ ಮಾಡುವ ಮೂಲಕ ಜಾತಿ ರಾಜಕಾರಣಕ್ಕೆ ಪುಷ್ಟಿ ನೀಡಿ,ಪ್ರಜಾ ಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ನಡೆದು,ಪ್ರಬಲರ ಪ್ರಭಾವ ದುರ್ಬಲರ ಮೇಲೆ ಮತ್ತಷ್ಟು ಹೆಚ್ಚಿಸಿ,ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಸೌಹಾರ್ದತೆಗೆ ದಕ್ಕೆ ತಂದಿವೆ ಅದಕ್ಕೆ ಪೂರಕವೆಂಬಂತೆ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯವನ್ನಾಳುವ ಎರಡು ರಾಷ್ಟ್ರೀಯ ಪಕ್ಷಗಳು ಸಹ,ಅಧಿಕಾರ ಹಿಡಿಯುವ ಆತುರದಲ್ಲಿ ಒಂದು ಪಕ್ಷ ಒಂದು ಜಾತಿಯನ್ನು ಒಲೈಸಿದರೆ,ಮತ್ತೊಂದು ಪಕ್ಷ ಇನ್ನೊಂದು ಜಾತಿಯನ್ನು ಒಲೈಸುತ್ತಾ,ಈ ಒಲೈಕೆ ರಾಜಕಾರಣದ ಮಧ್ಯದಲ್ಲಿ ಕೋಮು ಸಂಘರ್ಷಕ್ಕೆ ಎಡೆ ಮಾಡಿ ಕೊಟ್ಟಿವೆ.

ಸ್ವಾತಂತ್ರ್ಯಾ ನಂತರದ ಆರಂಭದಲ್ಲಿ ಇದ್ದಂತ ರಾಜಕಾರಣಿಗಳು ಹೋರಾಟದ ಮೂಲಕ ಜನಪರವಾದ ತತ್ವ ಸಿದ್ಧಾಂತಗಳಡಿಯಲ್ಲಿ,ಅನೇಕ ಕ್ರಾಂತಿಕಾರಕ ಬದಲಾವಣೆ ತಂದು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದದನ್ನು ಸ್ಮರಿಸಲೇಬೇಕು ಅಂತಹ ಸೈದ್ದಾಂತಿಕ ರಾಜಕಾರಣಿಗಳ ಹೆಸರನ್ನೆಳಿಕೊಂಡು ಭ್ರಷ್ಟಾಚಾರ ಮಾಡುತ್ತಿರುವುದು ಖಂಡನೀಯ ಬದಲಾದ ಈ ರಾಜಕೀಯ ಪರಿಸ್ಥಿತಿಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಂಡು ನಮ್ಮ ಅಮೂಲ್ಯವಾದ ಹಕ್ಕಿನ ದುರುಪಯೋಗಕ್ಕೆ ಅವಕಾಶ ಕೊಡಬಾರದು. ರಾಜಕಾರಣವನ್ನೆ ವೃತ್ತಿ ಮಾಡಿಕೊಂಡಿರುವ ಸೋಕಾಲ್ಡ್ ಜನಪ್ರತಿನಿಧಿಗಳಿಗೆ ಅಧಿಕಾರದ ಧಾಹವೇ ಹೊರತು,ನಿಸ್ವಾರ್ಥ ಸೇವೆಯಂತೂ ಶೂನ್ಯ.ಹಾಗಾಗಿ,ಅವರಿವರ ಮಾತಿಗೆ ಕಿವಿಗೊಡದೆ ಮುಂಬರುವ ಚುನಾವಣೆಯಲ್ಲಿ ಸ್ವ-ಇಚ್ಛೆಯಿಂದ, ಅಳೆದು ತೂಗಿ ನಮಗಿಷ್ಟವಾದ  ಮತ್ತು ಜನಪರ ಕಾಳಜಿ ಇರುವ ಪ್ರಜ್ಞಾವಂತ ನಾಯಕನನ್ನು ಆಯ್ಕೆ ಮಾಡಿಕೊಂಡು ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯನ್ನು ತಿಳಿಗೊಳಿಸುವ ದಿಕ್ಕಿನಲ್ಲಿ ಹೆಜ್ಜೆ ಹಾಕುವ ಪ್ರಯತ್ನ ಮಾಡೋಣ ಮತ್ತು ಪ್ರಜಾಪ್ರಭುತ್ವವೆಂದರೇನು,ಅದರ ಮಹತ್ವವೇನು ಮತ್ತು ಅದರ ಆಶಯದಲ್ಲೆನಿದೆ ಎನ್ನುವುದರ ಬಗ್ಗೆ ಈ ದೇಶದ ಪ್ರಜೆಗಳಾದ ನಾವು ತಿಳಿದುಕೊಳ್ಳುವುದು ಅತಿ ಮುಖ್ಯವಾಗಿದೆ ನಮ್ಮ ಮತವನ್ನು ಪಡೆದುಕೊಂಡು ಭ್ರಷ್ಟಾಚಾರವೆಸಗುವ ಮತ್ತು ಕೊಬ್ಬಿನಿಂದ ವರ್ತಿಸುವ ರಾಜಕಾರಿಣಿಗಳಿಗೆ ಪಾಠ ಕಲಿಸುತ್ತಾ,ಈ ಸಮಾಜದಲ್ಲಿ ಪರಿವರ್ತನೆಯ ಗಾಳಿ ಬೀಸಲು ಇದೊಂದು ಉತ್ತಮ ಅವಕಾಶ ಆ ಮೂಲಕ ಪ್ರಜಾಪ್ರಭುತ್ವದ ಮಹತ್ವವೇನು ಎನ್ನುವುದನ್ನು ಸಾರೋಣ.

-ಶಿವಾನಂದ ಎಂ ದೊಡ್ಡಮನಿ

ಯಲಬುರ್ಗಾ ತಾಲೂಕು

ಕೊಪ್ಪಳ ಜಿಲ್ಲೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ