ಕೊಪ್ಪಳ//ಮಾರ್ಚ್ 14.ಕನಕಗಿರಿ:
ಕನಕಗಿರಿ ಉತ್ಸವವು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕನಕಗಿರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಹಬ್ಬವಾಗಿದೆ.
ಕನಕಗಿರಿ ಉತ್ಸವವನ್ನು ಮಾರ್ಚ್ ತಿಂಗಳಲ್ಲಿ ಆಚರಿಸಲಾಗುತ್ತದೆ.ಕನಕಾಚಲಪತಿ ದೇವಸ್ಥಾನವು ಕನಕಗಿರಿಯಲ್ಲಿನ ಪ್ರಮುಖ ದೇವಾಲಯ ಮತ್ತು ಕನಕಗಿರಿ ಉತ್ಸವದ ಕೇಂದ್ರ ಬಿಂದುವಾಗಿದೆ.
‘ಕಣ್ಣಿದ್ದವರು ಕನಕಗಿರಿ ನೋಡಬೇಕು ಕಾಲಿದ್ದವರು ಹಂಪಿ ನೋಡಬೇಕು.ಇದು ಉತ್ತರ ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಮಾತು.
‘ಬಡವರ ತಿರುಪತಿ’ ಎಂದು ಕರೆಯುವ ಕನಕಗಿರಿಯ ಕನಕಚಲಾಪತಿ ದೇಗುಲದಲ್ಲಿ ತಿರುಪತಿಯಲ್ಲಿರುವಂತೆ ಒಂಬತ್ತು ದಿನಗಳು ಕೂಡಾ ದಿನಕ್ಕೊಂದರಂತೆ ಪ್ರತಿ ದಿನವೂ ಒಂದೊಂದು ಉತ್ಸವಗಳು ನಡೆಯುತ್ತವೆ. ಪುಷ್ಟಾರೋಹಣ,ಸಿಂಹಾರೋಹಣ,ಅಶ್ವಾರೋಹಣ, ಹನುಮಂತೋತ್ಸವ,ಶೇಷೊತ್ಸವ,ಗರುಡೋತ್ಸವ, ಗಜತೋತ್ಸವ,ನಂತರ ರಥೋತ್ಸವ ಅದ್ಧೂರಿಯಿಂದ ಜರುಗುತ್ತದೆ.
ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರದ ರಥ ಎಂಬ ಹೆಗ್ಗಳಿಕೆ ಹೊಂದಿದ್ದು.400 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ರಥವು 78 ಅಡಿ ಎತ್ತರ ಇದ್ದು, ಗಾಲಿಗಳನ್ನು ಆಗಾಗ ಬದಲಿಸಿದ್ದನ್ನು ಬಿಟ್ಟರೆ ರಥದ ಮೂಲಸ್ವರೂಪ ಹಾಗೆಯೇ ಇದೆ.
ಕನಕಗಿರಿ ಇತಿಹಾಸ:
ವಾರಾಣವಾತಿ ಎಂಬ ಹೆಸರಿನ ಈ ಪ್ರದೇಶದವು ಪುಷ್ಪ ಮತ್ತು ಜಯಂತಿ ಎಂಬ ನದಿಗಳೆರಡರ ಸಂಗಮದ ತಾಣವಾಗಿತ್ತು ಮತ್ತು ಈ ಪ್ರದೇಶವು ದಟ್ಟವಾದ ಕಾಡಿನಿಂದ ಆವೃತ್ತಗೊಂಡಿತ್ತು ಇಲ್ಲಿ ಜಯಂತ ನರಸಿಂಹ ಎಂಬ ದೇವರು ನೆಲೆಸಿದ್ದನು.ಈ ನದೀತೀರದಲ್ಲಿ ‘ಕನಕಮುನಿ’ ಎಂಬುವರು ತಪಸ್ಸನ್ನು ಮಾಡಿ,ಕನಕವೃಷ್ಟಿ, ಅಂದರೆ ಚಿನ್ನದ ಮಳೆ ತರಿಸಿದರು ಎನ್ನುವ ಐತಿಹ್ಯವಿದೆ ಕಾಲಕ್ರಮೇಣ ಪಕೃತಿಯ ವಿಕೋಪಕ್ಕೆ ಒಳಗಾಗಿ,ಜಯಂತ ನರಸಿಂಹ ಲಿಂಗಾಕಾರದ ಸಾಲಿಗ್ರಾಮವು ಮಣ್ಣಿನಲ್ಲಿ ಸೇರಿತಂತೆ.
ನಂತರದಲ್ಲಿ ಗುಜ್ಜಲವಂಶದ ಮೊದಲ ದೊರೆ ಪರಸಪ್ಪ ಈ ಪ್ರದೇಶಕ್ಕೆ ಬಂದು ನೆಲೆಸಿದ್ದನು.ಒಮ್ಮೆ ಹಾಲು ಕೊಡುವ ಹಸುವೊಂದು ಹುತ್ತಕ್ಕೆ ಹಾಲುಗರೆಯುವುದನ್ನು ಕಂಡ ಇದರಿಂದ ಆಶ್ಚರ್ಯನಾದ ಪರಸಪ್ಪ ಉಡಚಿನಾಯಕ ಹುತ್ತವನ್ನು ಕೀಳಿಸಿದನು,ಹುತ್ತ ಕೀಳುವ ಆಳು ಮೂರ್ಛೆಹೋದ,ಇದರಿಂದ ಚಿಂತಿತನಾಗಿದ್ದ ಪರಸಪ್ಪನಿಗೆ ಕನಸಿನಲ್ಲಿ ಕಾಣಿಸಿಕೊಂಡು ತಿರುಪತಿ ವೆಂಕಟೇಶ ಕನಕಗಿರಿಯಲ್ಲಿ ಸಾಲಿಗ್ರಾಮ ರೂಪದಲ್ಲಿ ಲಕ್ಷ್ಮೀನರಸಿಂಹನಾಗಿ ತಾನು ನೆಲೆಸಿ ಭಕ್ತರ ಬೇಡಿಕೆ ಈಡೇರಿಸುವುದಾಗಿ ತಿಳಿಸಿದ ಇಲ್ಲಿಯೇ ದೇವಾಲಯ ನಿರ್ಮಾಣ ಮಾಡಲು ಸೂಚಿಸಿದ ವಿಜಯನಗರ ಅರಸ ಪ್ರೌಢದೇವರಾಯನಿಗೆ ಈ ವಿಷಯವನ್ನು ತಿಳಿಸಿ ಅವನ ಸಹಾಯದಿಂದ ದೇವಾಲಯ ನಿರ್ಮಾಣ ನಡೆಯಿತಂತೆ ಎಂಬ ಉಲ್ಲೇಖವಿದೆ.
ಇನ್ನು ಕನಕಗಿರಿಯ ಕನಕಾಚಲಪತಿ ದೇವಸ್ಥಾನದ ಜಾತ್ರೆ ಹಿನ್ನಲೆಯಲ್ಲಿ ನಿನ್ನೆ ರಥೋತ್ಸವ ಅದ್ಧೂರಿಯಾಗಿ ಜರುಗಿತು ದೇವಸ್ಥಾನದಲ್ಲಿ ಪೂಜೆಯ ನಂತರ ನಡೆದ ಅದ್ದೂರಿ ರಥೋತ್ಸವದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಸಾವಿರಾರು ಭಕ್ತರು ಭಾಗಿಯಾಗಿದ್ದರು ಕನಕಗಿರಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿದ ರಥೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು. ಇನ್ನು ರಥೋತ್ಸವ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.
-ಕರುನಾಡ ಕಂದ