ಮೈಸೂರು:- ಮಾ19. ಕನ್ನಡ ಚಲನಚಿತ್ರರಂಗ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಅತ್ಯಂತ ಚಿಕ್ಕವಯಸ್ಸಿಗೇ ಜಾಗತಿಕ ದಾಖಲೆ ಸ್ಥಾಪಿಸಿರುವ ಡಾ.ಪುನೀತ್ ರಾಜಕುಮಾರ್ ನಮ್ಮ ಕೆ.ಆರ್.ನಗರ ತಾಲ್ಲೂಕಿನ ಮಗನಾಗಿದ್ದು ಹೆಮ್ಮೆಯ ವಿಷಯ.
ಪುನೀತ್ ಪ್ರತಿಮೆಯನ್ನು ಕೆ.ಆರ್.ನಗರ ಹಾಗೂ ಸಾಲಿಗ್ರಾಮ ಪಟ್ಟಣಗಳ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಬೇಕು ಎಂದು ಹಿರಿಯ ಸಾಹಿತಿ ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ನುಡಿದರು.
ಮೈಸೂರು ಜಿಲ್ಲೆ ಕೆ.ಆರ್.ನಗರ ಟೌನ್ ನ ಅರ್ಕೇಶ್ವರ ನಗರ (ಕಂಠೇನಹಳ್ಳಿ ) ಬಡಾವಣೆಯಲ್ಲಿ ಡಾ.ಪುನೀತ ರಾಜಕುಮಾರ್ ಅಭಿಮಾನಿಗಳು ಏರ್ಪಡಿಸಿದ್ದ ಡಾ.ಪುನೀತ್ ರಾಜಕುಮಾರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಪುನೀತ್ ರಾಜಕುಮಾರ್ ಅತ್ಯಂತ ಚಿಕ್ಕ ವಯಸ್ಸಿಗೇ ಚಿತ್ರರಂಗದಲ್ಲಿ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಅಪಾರ ಹೆಸರು ಗಳಿಸಿದರು. ಅವರು ಬಾಲನಟನಾಗಿ ನಟಿಸಿದ ಬೆಟ್ಟದ ಹೂ ಚಲನಚಿತ್ರಕ್ಕೆ ರಾಷ್ಟೀಯ ಪ್ರಶಸ್ತಿ ದೊರೆತಿದೆ. ಸುಮಾರು ನಲವತ್ತೈದಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ತಮ್ಮ ಅಮೋಘ ನಟನೆಯ ಮೂಲಕ ಕೋಟ್ಯಾಂತರ ಚಿತ್ರಪ್ರೇಮಿಗಳ ಮನಗೆದ್ದಿದ್ದಾರೆ.ಅವರ ಚಲನಚಿತ್ರಗಳು ಇಂದಿನ ಯುವಜನಾಂಗಕ್ಕೆ ಮಾರ್ಗದರ್ಶಿಯಾಗಿವೆ. ಅವರು ನಮ್ಮ ತಾಲ್ಲೂಕಿನ ಮೊಮ್ಮಗನಾಗಿರುವುದರಿಂದ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಕನ್ನಡ ನಾಡು-ನುಡಿ ಸೇವೆ ಹಾಗೂ ಸಮಾಜಸೇವಾ ಕ್ಷೇತ್ರದ ಸಾಧಕರೊಬ್ಬರಿಗೆ ಪ್ರತಿವರ್ಷವೂ ಪುನೀತ್ ಜನ್ಮ ದಿನದಂದು
ಕೆ. ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕಿನಲ್ಲಿ ಡಾ.ಪುನೀತ್ ಸಾಧಕ ಪ್ರಶಸ್ತಿ ನೀಡಬೇಕು ಎಂದವರು ಒತ್ತಾಯಿಸಿದರು. ಒಂದೇ ಕುಟುಂಬದ ಇಬ್ಬರಿಗೆ ರಾಜ್ಯದ ಪ್ರತಿಷ್ಟಿತ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ ದೊರಕಿರುವುದು ಸರ್ವಕಾಲಿಕ ದಾಖಲೆ. ಡಾ.ರಾಜಕುಮಾರ್ ಹಾಗೂ ಡಾ.ಪುನೀತ್ ರಾಜಕುಮಾರ್ ಈ ದಾಖಲೆಗೆ ಭಾಜನರಾಗಿದ್ದಾರೆ.
ಕನ್ನಡ ಭಾಷೆ ಬದುಕಿರುವವರೆಗೂ ಇವರಿಬ್ಬರೂ ಜನಮಾನಸದಲ್ಲಿ ಬದುಕಿರುತ್ತಾರೆ ಎಂದು ಡಾ.ಭೇರ್ಯ ರಾಮಕುಮಾರ್ ಬಣ್ಣಿಸಿದರು. ಡಾ.ಪುನೀತ್ ಕಷ್ಟದಲ್ಲಿ ನೊಂದವರ ಸೇವೆಗೆ ಮೀಸಲಿಟ್ಟಿದ್ದರು.ಪುನೀತ್ ಅಭಿಮಾನಿಗಳೂ ಸಹ ಬಡವರ, ದೀನದುರ್ಬಲರ ಸೇವೆಗೆ ಶ್ರಮಿಸಬೇಕು . ಆಗ ಮಾತ್ರ ಪುನೀತ್ ಅವರ ನೆನಪು ಚಿರಸ್ಥಾಯಿಯಾಗುತ್ತದೆ ಎಂದವರು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕನ್ನಡ ನಾಡು-ನುಡಿಸೇವೆಗಾಗಿ ಸಾಹಿತಿ ಡಾ.ಭೇರ್ಯ ರಾಮಕುಮಾರ್, ಹಿರಿಯ ನಾಗರೀಕರಾದ ರಮೇಶ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಸಂಘಟಕ ರಾಜು ಅವರನ್ನು ಶಾಸಕ ಸಾ.ರಾ.ಮಹೇಶ್ ಸನ್ಮಾನಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.