ವಿಜಯಪುರ/ಇಂಡಿ : ಆಸ್ತಿ, ಅಧಿಕಾರ ಹಾಗೂ ಅಂತಸ್ತನ್ನು ಕಸಿದುಕೊಳ್ಳಬಹುದು ಆದರೆ ನಾವು ಪಡೆದಿರುವ ವಿದ್ಯೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ.ಅದಕ್ಕಾಗಿ ಮಕ್ಕಳಿಗೆ ಆತ್ಮವಿಶ್ವಾಸವನ್ನುಂಟು ಮಾಡುವ ಶಿಕ್ಷಣವನ್ನು ನೀಡಿರಿ ಎಂದು ಬರಗುಡಿ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಪಿ ಸಿ ಸಣ್ಣಾರ ಹೇಳಿದರು.
ಅವರು ಇಂಡಿ ಪಟ್ಟಣದ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿ ಶ್ರೀ ಬಸವರಾಜೇಂದ್ರ ಯುವಕ ಮಂಡಳಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 69ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ “ಶರಣರ ವಚನಗಳಲ್ಲಿ ಶಿಕ್ಷಣ” ಈ ವಿಷಯದ ಕುರಿತು ಮಾತನಾಡಿದರು.
ಮಕ್ಕಳಿಗೆ ಒಳ್ಳೆಯ ವಿದ್ಯೆ ಸಂಸ್ಕಾರ ಕೊಡಿಸುವುದು ಪಾಲಕರ ಆದ್ಯ ಕರ್ತವ್ಯವಾಗಿದ್ದಂತೆ, ಗುರುಗಳಾದವರು ಮಕ್ಕಳ ಅಜ್ಞಾನವನ್ನು ತಿದ್ದಿ ಸುಜ್ಞಾನಿಗಳನ್ನಾಗಿ ಮಾಡುವ ಜವಾಬ್ದಾರಿಯಾಗಿದೆ. ಹಿಂದಿನ ಗುರುಕುಲ ಶಿಕ್ಷಣ ಮಾಯವಾದಂತೆ ಇಂದಿನ ಶಿಕ್ಷಣ ವ್ಯವಸ್ಥೆ ಕಲುಷಿತವಾಗುತ್ತಾ ಹೊರಟಿದೆ.ಅದಕ್ಕಾಗಿ ಸಮಾಜದಲ್ಲಿರುವ ಎಲ್ಲ ವ್ಯಕ್ತಿಗಳು ಮಕ್ಕಳು ತಪ್ಪುಗಳನ್ನು ಮಾಡದಂತೆ ತಿಳುವಳಿಕೆ ನೀಡಬೇಕು. ವಿದ್ಯೆ ಸಂಸ್ಕಾರ ಕೊಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ನೈತಿಕ ಶಿಕ್ಷಣ ಹಾಗೂ ಜವಾಬ್ದಾರಿ ನಿರ್ವಹಿಸುವ ಕಲೆಯನ್ನು ಕಲಿಸಿಕೊಡಬೇಕು. ಇಂದು ಶಿಕ್ಷಣ ಅತಿ ಅವಶ್ಯವಾಗಿದ್ದು, ತಾನೂ ತೊಂದರೆಪಡದೇ ಇನ್ನೊಬ್ಬರಿಗೂ ತೊಂದರೆ ಕೊಡದೇ ಬದುಕುವುದೇ ನಿಜವಾದ ಶಿಕ್ಷಣ. ಧರ್ಮ ಮಾರ್ಗದಲ್ಲಿ ಶಿಕ್ಷಣ ನೀಡಬೇಕು ಅಂದಾಗ ಆತ್ಮವಿಶ್ವಾಸ ಮೂಡಲು ಸಾಧ್ಯ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಇಂಡಿ ಪಟ್ಟಣದ ಓಂಕಾರ ಆಶ್ರಮ ಸಿದ್ಧಾರೂಢ ಮಠದ ಸ್ವರೂಪಾನಂದ ಸ್ವಾಮಿಗಳು ಆಶೀರ್ವಚನ ನೀಡಿ, ಬದುಕುವ ಕಲೆಯನ್ನು ಕಲಿಯಬೇಕಾದರೆ ಶರಣರ ವಚನಗಳಲ್ಲಿಯ ಸಾರವನ್ನು ಅರಿತುಕೊಳ್ಳಬೇಕು. ಮನುಷ್ಯನ ಜೀವನದಲ್ಲಿ ತಪ್ಪುಗಳಾಗುವುದು ಸಹಜ.ಆದರೆ ಆ ತಪ್ಪುಗಳನ್ನು ಇನ್ನೊಮ್ಮೆ ನುಸುಳದಂತೆ ಎಚ್ಚರವಹಿಸಿ ನಡೆಯಬೇಕು ಎಂದು ಹೇಳಿದರು.
ಪಟ್ಟಣದ ಖ್ಯಾತ ಉದ್ದಿಮೆದಾರರಾದ ಡಿ ಆರ್ ಶಹ ಅಧ್ಯಕ್ಷತೆ ವಹಿಸಿದ್ದರು.ಡಾ.ಅನಿಲ ಮಲ್ಲಿಕಾರ್ಜುನ ವಾಲಿ ಅವರು ತಮ್ಮ ತಂದೆಯವರಾದ ಮಲ್ಲಿಕಾರ್ಜುನ ವಾಲಿ ಇವರ ಪುಣ್ಯ ಸ್ಮರಣೆ ನಿಮಿತ್ತ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದರು. ಇದೇ ಸಂದರ್ಭದಲ್ಲಿ ಇಂಡಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಘವೇಂದ್ರ ಕುಲಕರ್ಣಿ ಹಾಗೂ ಸಾವಿತ್ರಿಬಾಯಿ ಪುಲೆ ರಾಜ್ಯ ಪ್ರಶಸ್ತಿ ಪಡೆದ ಎಸ್ ಎಂ ಖಾಜಿ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸತ್ಸಂಗ ಸಮಿತಿಯ ಅಧ್ಯಕ್ಷ ಐ ಬಿ ಸುರಪುರ, ಎಂ ಜೆ ಪಾಟೀಲ,ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್ ವಿ ಪಾಟೀಲ,ಜಿ ಎಸ್ ವಾಲಿ,ಬಿ ಎಸ್ ಪಾಟೀಲ,ಹೆಚ್ ಎಸ್ ಯೆಳೆಗಾಂವ,ಹೂಗಾರ,ಸಿ ಎಂ ಉಪ್ಪಿನ,ಕೆ ಜಿ ನಾಟಿಕಾರ,ಎಸ್ ಎಸ್ ಈರನಕೇರಿ,ಜಯಶ್ರೀ ಪತ್ತಾರ ಉಪಸ್ಥಿತರಿದ್ದರು.
ವರದಿ. ಅರವಿಂದ್ ಕಾಂಬಳೆ