ಯಾದಗಿರಿ/ಸುರಪುರ : ಏಪ್ರಿಲ್ 06 ಗುರುವಾರದಂದು ಕೊಡೆಕಲ್ ನಲ್ಲಿ ನಡೆದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಕಲ್ಲುತೂರಾಟದ ಘಟನೆಗೆ ಸಂಬಂಧಿಸಿದಂತೆ ಸುರಪುರದಲ್ಲಿ ಹಾಲುಮತ ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೊಡೆಕಲ್ ನಲ್ಲಿ ನಡೆದಿರುವ ಘಟನೆ ರಾಜಕೀಯ ಪ್ರೇರಿತವಾಗಿದ್ದು ಸುಖಾ ಸುಮ್ಮನೆ ಹಾಲುಮತ ಸಮಾಜವನ್ನು ಗುರಿ ಮಾಡುತ್ತಿರುವುದು ತೀವ್ರ ಖಂಡನೀಯವಾಗಿದ್ದು ಕಾಂಗ್ರೆಸ್ ನವರು ಜಾತಿ ರಾಜಕಾರಣವನ್ನು ಬಿಟ್ಟು ನೀತಿ ರಾಜಕಾರಣವನ್ನು ಮಾಡಲಿ ಎಂದು ಬಿಜೆಪಿ ಯುವ ಮುಖಂಡ ರಂಗನಗೌಡ ಪಾಟೀಲ್ ದೇವಿಕೇರಿ ಹೇಳಿದರು.
ಸುರಪುರ ನಗರದ ಶಾಸಕರ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಖಾ ಸುಮ್ಮನೆ ಶಾಸಕ ರಾಜೂಗೌಡ ಹಾಗೂ ಬಬ್ಲೂಗೌಡರ ಹೆಸರು ಕೆಡಿಸಲು ಕಾಂಗ್ರೆಸ್ ನವರು ಪೂರ್ವ ನಿಯೋಜಿತ ಹುನ್ನಾರ ನಡೆಸಿದ್ದು, ಗಲಭೆ ನಡೆದ ಕ್ಷಣ ಸ್ಥಳೀಯವಾಗಿ ಶಾಸಕರು ಇರಲಿಲ್ಲ. ಜೊತೆಗೆ ಕಾಂಗ್ರೆಸ್ ಮುಖಂಡರು ಪ್ರಚೋದನಕಾರಿ ಹೇಳಿಕೆ ನೀಡಿ ಕುರುಬ ಸಮಾಜದ ಬಾಂಧವರನ್ನು ಗುರಿ ಮಾಡುತ್ತಿರುವುದು ಖಂಡನೀಯ ಎಂದರು.
ರಾಜುಗೌಡ್ರು ಶಾಸಕರಾದ ಮೇಲೆ 2018 ರಿಂದ 2023 ವರೆಗೆ ಹಾಲುಮತ ಸಮಾಜದ ಮಠಮಾನ್ಯಗಳಿಗೆ ಜೊತೆಗೆ ದೇವಸ್ಥಾನಗಳಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬುದನ್ನು ನಾವು ಬಹಿರಂಗ ಪಡಿಸುತ್ತೇವೆ, ಕಾಂಗ್ರೆಸ್ ನವರು ಸಾಧನೆ ಏನಾದರೂ ಇದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಯುವ ಮುಖಂಡ ಮಲ್ಲು ದಂಡೀನ್ ಮಾತನಾಡಿ ಕಾಂಗ್ರೆಸ್ ನವರು ಪ್ರಚೋದನಕಾರಿ ವಾತಾವರಣ ನಿರ್ಮಾಣ ಮಾಡಿದ್ದು, ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚಿ ವಿಷ ಬೀಜ ಬಿತ್ತುವ ಮೂಲಕ ಅಶಾಂತಿ ವಾತಾವರಣ ನಿರ್ಮಿಸಿದ್ದಾರೆ. ಶಾಸಕಡನಸ ರಾಜುಗೌಡ್ರು ಕುರುಬ ಸಮಾಜ ಸೇರಿದಂತೆ ಎಲ್ಲಾ ಸಮುದಾಯದವರಿಗೂ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಕೊಡೆಕಲ್ ನಡೆದ ಗಲಭೆಯಲ್ಲಿ ಕಾಂಗ್ರೆಸ್ನವರೆ ಕಲ್ಲು ಬೀಸಿದ್ದು ಸಾಕ್ಷಿ ಪುರಾವೆಗಳು ಲಭ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಯುವ ಮುಖಂಡ ಮಲ್ಲು ದಂಡಿನ, ರಂಗನಗೌಡ ದೇವಿಕೇರಿ, ವಿಜಯಕುಮಾರ್ ಮಂಗಿಹಾಳ, ಅಯ್ಯಪ್ಪ ಕುಂಬಾರಪೇಟ್, ಮಲ್ಲನಗೌಡ ದೇವಿಕೆರಿ, ಆದಪ್ಪ ಜಂಬಲದಿನ್ನಿ, ಬಸವರಾಜ ಕಂಬಳಿ, ಚಂದ್ರು ಎಲಿಗಾರ, ನಿಂಗೂ ಐಕೂರ್, ವೆಂಕಿ ಕೊಳ್ಳಿ ಸೇರಿದಂತೆ ಕುರುಬ ಸಮಾಜದ ಇತರರು ಇದ್ದರು.
ವರದಿ :ಶಿವರಾಜ ಸಾಹುಕಾರ