ಇಂಡಿ : ತಾಲೂಕಿನ ಸಾಲೋಟಗಿ ಗ್ರಾಮದ ಶಿವಯೋಗೀಶ್ವರ ಜಾತ್ರಾ ನಿಮಿತ್ತ ನೀರಾಟವಾಡುವ ವಿಶೇಷ ಜಲಜಾತ್ರೆ ಸೋಮವಾರ ರಾತ್ರಿ ಜರುಗಿತು. ಪ್ರತಿ ವರ್ಷ ದವನದ ಹುಣ್ಣಿಮೆಯಿಂದ ಅಕ್ಷಯ ತದಿಗೆ ಅಮಾವಾಸ್ಯೆವರೆಗೂ ನಡೆಯುವ ಶಿವಯೋಗೀಶ್ವರ ಜಾತ್ರೆಯಲ್ಲಿ ಅಪರೂಪದ ನೀರಾಟಕ್ಕೆ ವಿಶೇಷವಾದ ಸ್ಥಾನವಿದೆ. ಒಂದು ಬಿಂದಿಗೆಗೆ ಶ್ರೀಗಂಧದ ಕಟ್ಟಿಗೆ ಜಡಿದು ಒಳಗೆ ನೀರು ಹೋಗದಂತೆ ಮಾಡಲಾಗುತ್ತದೆ. ಅದರ ಮೇಲೆ ಇಡೀ ರಾತ್ರಿಯೆಲ್ಲ ಭಕ್ತರು, ಬಿಂದಿಗೆ ಹೊತ್ತು ನೀರು ತಂದು ಸುರಿಸುತ್ತಾರೆ. ಒಂದು ಹನಿ ನೀರು ಸಹ ಹೋಗಲು ಸ್ಥಳಾವಕಾಶವಿಲ್ಲದ ಬಿಂದಿಗೆಯಲ್ಲಿ ನೀರು ತುಂಬಿಸುವ ಹರಸಾಹಸ ಭಕ್ತ ಜನರಿಂದ ರಾತ್ರಿಯಿಡಿ ನಡೆಯುತ್ತದೆ. ನಿರಾಟಕ್ಕೆ ದೇವಸ್ಥಾನದ ಆವರಣದಲ್ಲಿಯೇ ಇರುವ ಎರಡು ಐತಿಹಾಸಿಕ ಬಾವಿಗಳಲ್ಲಿ ಬೋರ್ವೆಲ್ ಗಳಿಂದ ನೀರನ್ನು ತುಂಬಿಸಲಾಗುತ್ತದೆ. ಆ ಬಾವಿಗಳಿಂದ ನೀರು ತುಂಬಿಕೊಂಡು ಶಿವಯೋಗೀಶ್ವರ ನಾಮ ಜಪಿಸುತ್ತಾ ತಂದು ಸುರಿಸುತ್ತಾರೆ. ಆ ಬಿಂದಿಗೆಯಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣದ ಮೇಲೆ ಮುಂಬರುವ ದಿನಗಳಲ್ಲಿ ಮಳೆ-ಬೆಳೆ ನಿರ್ಧಾರವಾಗುತ್ತದೆ. ಬಿಂದಿಗೆ ಪೂರ್ತಿ ತುಂಬಿದರೆ ಊರಿಗೆ ಸುಕಾಲ ಇಲ್ಲದಿದ್ದರೆ ಮತ್ತೆ ಬರದ ಸಂಕಷ್ಟ ಎದುರಾಗುತ್ತದೆ ಎಂಬ ಗಾಢವಾದ ನಂಬಿಕೆ ಈ ಭಾಗದ ಜನರಲ್ಲಿದೆ. ಈ ಅಪರೂಪ ಸಂಪ್ರದಾಯದ ಜಲ ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿಯ ಅಪಾರ ಜನಸ್ತೋಮ ಆಗಮಿಸಿ ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ವರದಿ : ವಿಜಯಕುಮಾರ ಜಂಬಗಿ (ಇಂಡಿ)