ಭದ್ರಾವತಿ:ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಅಂಗವಾಗಿ ಶುಕ್ರವಾರ ಸಂಜೆ ಮೇಣದ ಬತ್ತಿ ಮತ್ತು ಪಂಜು ಬೆಳಗುವ ಮೂಲಕ ಮತದಾರರಿಗೆ ಮತದಾನದ ಜಾಗೃತಿ ಮತ್ತು ಅರಿವು ಮೂಡಿಸುವ SVEEP (Systematic Voters Education and Electoral Particiapation ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರ ನಾಯಕ್ ನೇತೃತ್ವದಲ್ಲಿ ನಗರಸಭೆ ಆವರಣದಿಂದ ಮಾಧವಾಚಾರ್ ವೃತ್ತ ಹಾಗೂ ರಂಗಪ್ಪ ವೃತ್ತಗಳ ಮೂಲಕ ತಾಲ್ಲೂಕು ಕಚೇರಿ ರಸ್ತೆಯ ಮುಖಾಂತರ ಬಿ ಇ ಓ ಕಚೇರಿ ರಸ್ತೆ ಮೂಲಕ ಬಸವೇಶ್ವರ ವೃತ್ತದವರೆಗೆ ಮೇಣದ ಬತ್ತಿ ಹಾಗೂ ಪಂಜು ಬೆಳಗುವ ಮೂಲಕ ಜಾಥಾ ನಡೆಸಿ ಜಾಗೃತಿ ಮತ್ತು ಅರಿವು ಮೂಡಿಸಲಾಯಿತು.
ಜಾಥಾದಲ್ಲಿ ನಗರಸಭೆ ಕಂದಾಯಾಧಿಕಾರಿ ಎಂ ಎಸ್ ರಾಜ್ ಕುಮಾರ್ ಸೇರಿದಂತೆ ಹಿರಿಯ,ಕಿರಿಯ ಅಧಿಕಾರಿಗಳು,ಸಿಬ್ಬಂದಿಗಳು ಮತದಾನ ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ಸಾಗಿದರು. ತಹಶೀಲ್ದಾರ್ ಸುರೇಶ್ ಆಚಾರ್,ಪೌರಾಯುಕ್ತ ಎಂ. ಮನುಕುಮಾರ್ ಪಾಲ್ಗೊಂಡಿದ್ದರು.
ಪೊಲೀಸ್ ನಗರ ವೃತ್ತ ನಿರೀಕ್ಷಕ ಶಾಂತಿನಾಥ್ ಬಿ ಪರಪ್ಪರಪ್ಪರವರು ಮತದಾರರು ನಿರ್ಭಯವಾಗಿ, ತಮ್ಮ ಸಂವಿಧಾನಬದ್ದ ಹಕ್ಕನ್ನು ಚಲಾಯಿಸಲು ತಪ್ಪದೇ ಮೇ 10ರಂದು ಮತದಾನ ಮಾಡಬೇಕೆಂದು ಜನರಲ್ಲಿ ಅರಿವು ಮೂಡಿಸಿದರು.
ನಂತರ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನ ಪ್ರತಿಮೆ ಬಳಿ ದೀಪ ಬೆಳಗಿಸಿ ಚುನಾವಣಾಧಿಕಾರಿ ರವಿಚಂದ್ರನಾಯಕ್,ತಹಶೀಲ್ದಾರ್,ಪೌರಾಯುಕ್ತ ಎಂ.ಮನುಕುಮಾರ್ ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸುವ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಲಾವಿದ ಅಪರಂಜಿ ಶಿವರಾಜ್ ಮತ್ತು ಕಲಾವಿದರ ತಂಡ ಭರತನಾಟ್ಯ ಹಾಗೂ ಅಭಿನಯದ ಮೂಲಕ ಮತದಾನ ಜಾಗೃತಿ ಅಭಿಯಾನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.