ತುಮಕೂರು ಜಿಲ್ಲೆಯ ಕುಣಿಗಲ್ ನ ನೂತನ ಶಾಸಕ ಡಾಕ್ಟರ್ ರಂಗನಾಥ್ ರವರು ತನ್ನನ್ನು ಕರ್ನಾಟಕ ವಿಧಾನಸಭೆಗೆ ಆಯ್ಕೆ ಮಾಡಿದ ತನ್ನ ಕ್ಷೇತ್ರದ ಮತದಾರರಿಗೆ ಪಟ್ಟಣದ ಗವಿಮಠ (ಗಿರಗೌಡನ ಪಾಳ್ಯ ಗೇಟ್) ಬಳಿ ಕೃತಜ್ಞತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಶಾಸಕ ರಂಗನಾಥ್ ರವರು ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ಸೋದರ ಸಂಬಂಧಿಯಾಗಿದ್ದು,ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಅವರ ವಿರುದ್ಧ 26,573 ಮತಗಳ ಅಂತರದಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದ್ದರು. ಈ ಮೂಲಕ ಎರಡನೇ ಬಾರಿಗೆ ಶಾಸಕರಾಗಿ ಚುನಾಯಿತರಾಗಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ರವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್.ಡಿ ರಂಗನಾಥ್ ರವರು “ಕ್ಷೇತ್ರದ ಮತದಾರರಿಗೆ ಈ ಐತಿಹಾಸಿಕ ಗೆಲುವನ್ನು ನೀಡಿದ್ದಕ್ಕೆ ಧನ್ಯವಾದಗಳು. ಭಾಗ್ಯಗಳ ಸರದಾರ ಸಿಎಂ ಸಿದ್ದರಾಮಯ್ಯನವರ ಗ್ಯಾರಂಟಿಗಳು ರಾಜ್ಯದ ಜನತೆಗೆ ತಲುಪುವುದು ಗ್ಯಾರಂಟಿ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಹಾಗೂ ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್ ಮಾತನಾಡಿ ಜಿಲ್ಲೆಯಲ್ಲಿ ಕುಣಿಗಲ್ ಅನ್ನು ಮಾದರಿ ತಾಲೂಕನ್ನಾಗಿ ಮಾರ್ಪಡಿಸುವುದು ನಮ್ಮ ಗುರಿ. ನಮ್ಮದೇ ಸರ್ಕಾರವಿದೆ ಹೀಗಾಗಿ ಕುಣಿಗಲ್ ಅಭಿವೃದ್ಧಿಯತ್ತ ಸಾಗಲಿದೆ ಎಂಬ ಆಶ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಪದ್ಮಪಾಪಣ್ಣ, ಕಾಂಗ್ರೆಸ್ ವಕ್ತಾರ ಎಂ.ವಿ ವಿಜಯ್ , ಮಾಜಿ ತಾಲೂಕು ಪಂಚಾಯಿತಿ ಸದಸ್ಯ ವಿಶ್ವನಾಥ್, ತಾಲೂಕು ಪಂಚಾಯಿತಿ ಸದಸ್ಯ ರಾಜಣ್ಣ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
-ಮನುಕುಮಾರ್