ಯಾದಗಿರಿ ತಾಲೂಕು:
ಸಕಾಲಕ್ಕೆ ಮಳೆ ಬಾರದೇ ಇರುವುದರಿಂದ ರೈತರು ಕೈಂಗಾಲಾಗಿದ್ದು, ಯಾದಗಿರಿ ತಾಲೂಕಿನ ಕಿಲ್ಲನಕೇರಾ ಗ್ರಾಮದಲ್ಲಿ ಮಳೆಗಾಗಿ ಮಕ್ಕಳಿಂದ ಕಪ್ಪೆಗಳ ಮದುವೆ ಮಾಡಿಸಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಮಕ್ಕಳು ಭುಜದ ಮೇಲೆ ಒಣಕ್ಕೆ ಒಂದಕ್ಕೆ ಜೋಡಿ ಕಪ್ಪೆಗಳನ್ನು ಕಟ್ಟಿಕೊಂಡು ಓಣಿಯಲ್ಲಿನ ಮನೆ ಮನೆಗೆ ತೆರಳಿ ಮೈಮೇಲೆ ನೀರು ಹಾಕಿಸಿಕೊಂಡು ಕುಣಿದು ಸಂಭ್ರಮಿಸಿದ್ದಾರೆ.
ಜೋಡಿ ಕಪ್ಪೆಗಳಿಗೆ ಮದುವೆ ಮಾಡಿದ ಬಳಿಕ ಒಣಕೆಗೆ ಬೇವಿನ ತಪ್ಪಲು ಕಟ್ಟಿ “ಉಯ್ಯೋ ಉಯ್ಯೋ ಮಳೆರಾಯ ದೋಣಿ ನೀರು ತಾರಯ್ಯ”, ಬಣ್ಣ ಕೊಡ್ತೀನಿ ಬಾ ಮಳೆರಾಯ, ಸುಣ್ಣ ಕೊಡ್ತೀನಿ ಮಳೆ ಸುರಿಯೋ ಮಳೆರಾಯ ಎಂದು ಬೇಡಿಕೊಂಡರು.
ಮುಂಗಾರು ಮಳೆ ಮುನಿಸಿಕೊಂಡ ಹಿನ್ನಲೆ ಮಳೆ ಬರುವಂತೆ ಈ ರೀತಿ ವಿಶಿಷ್ಟವಾಗಿ ಪ್ರಾರ್ಥಿಸುತ್ತಿದ್ದಾರೆ. ಸಕಾಲಕ್ಕೆ ಮಳೆಯಾಗದೇ ರೈತರು ನಿರೀಕ್ಷೆಯಂತೆ ಫಲ ಪಡೆಯದೇ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿದ್ದರಿಂದ ರೈತರು ಆಕಾಶಕ್ಕೆ ಮುಖ ಮಾಡಿ ಕುಳಿತಿದ್ದಾರೆ.
ಈ ಸಂದರ್ಭದಲ್ಲಿ ಮಕ್ಕಳಿಗೆ ಸಹಕಾರಿಯಾಗಿ ಗ್ರಾಮಸ್ಥರಾದ ಬಸಲಿಂಗಪ್ಪ ಹೊನ್ನಪ್ಪನ್ನೋರ್, ದೊಡ್ಡ ಚಿದಾನಂದ, ಶರಣಪ್ಪ ಆಶಪ್ಪನ್ನೋರ್,ಹಣಮಂತ ಹೊನ್ನಪ್ಪನ್ನೋರ್,ನಿಂಗಪ್ಪ,ಗುಂಜಲಪ್ಪ, ಹಾಗೂ ಮಕ್ಕಳಾದ ವಿನೋದ್, ಬಸವರಾಜ,ಅರುಣಕುಮಾರ,ಮಹೇಶ, ಧರ್ಮರಾಜ,ಗಜೇಂದ್ರ,ಆಂಜನೇಯ ಇನ್ನಿತರು ಇದ್ದರು.
ವರದಿ:ಶಿವರಾಜ ಸಾಹುಕಾರ ವಡಗೇರಾ
ಜಿಲ್ಲಾ ವರದಿಗಾರರು ಯಾದಗಿರಿ