ಭದ್ರಾವತಿ: ಭದ್ರಾ ಜಲಾಶಯದಿಂದ ನೀರು ಹರಿಸುವುದನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ವತಿಯಿಂದ ಸಮಿತಿಯ ಮುಖಂಡ ಮಂಜಪ್ಪ ಗೌಡ ಹಾಗೂ ರಾಜ್ಯ ರೈತ ಮುಖಂಡ ಕೆ ಟಿ ಗಂಗಾಧರ್ ನೇತೃತ್ವದಲ್ಲಿ ರೈತರು ಬಿ ಆರ್ ಪ್ರಾಜೆಕ್ಟ್ ನೀರಾವರಿ
ಇಲಾಖೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ವಾಡಿಕೆ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ 100ಕ್ಕೂ ಅಧಿಕ ತಾಲ್ಲೂಕುಗಳು ಬರಪೀಡಿತ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿವೆ. ದಾವಣಗೆರೆ ಜಿಲ್ಲೆಯಲ್ಲಿ 75,000ಕ್ಕೂ ಅಧಿಕ ಎಕರೆ ಹಾಗೂ ಶಿವಮೊಗ್ಗ- ಭದ್ರಾವತಿ, ಹೊಳೆಹೊನ್ನೂರು ಹಾಗು ತರೀಕೆರೆ ವ್ಯಾಪ್ತಿಯಲ್ಲಿ 80,000ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗಿದೆ. ವಾಡಿಕೆ ಮಳೆ ಕಡಿಮೆಯಾದ ಪರಿಣಾಮ ಬೇಸಿಗೆಯಲ್ಲಿ ನೀರಿನ ಕೊರತೆ ಸಂಭವಿಸಲಿದೆ. ಆದ್ದರಿಂದ ಭದ್ರಾ ಜಲಾಶಯದಿಂದ ನೀರು ಹರಿಸುವಿಕೆ ಕೂಡಲೇ ಸ್ಥಗಿತಗೊಳಿಸಬೇಕು.
ಭದ್ರಾ ಜಲಾಶಯದ ಎಡ ಮತ್ತು ಬಲದಂಡೆಯ ನಾಲೆಯಲ್ಲಿ ಆ.10 ರಿಂದ ನ.20 ರವರೆಗೆ 100 ದಿನಗಳ ಕಾಲ ನೀರು ಹರಿಸಲು ಸರ್ಕಾರ ತೀರ್ಮಾನಿಸಿದೆ. ಇದು ಅವೈಜ್ಞಾನಿಕವಾದುದು. ಈ ನಿಲುವಿನಿಂದ ಅಡಿಕೆ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭದ್ರಾ ಜಲಾಶಯದಲ್ಲಿ ಪ್ರಸ್ತುತ 40 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, ಅದರಲ್ಲಿ 13 ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ. ಇದರಲ್ಲಿ 7 ಟಿಎಂಸಿ ಕುಡಿಯುವ ನೀರಿಗೆ ಮೀಸಲಾಗಿರುತ್ತದೆ. ಇದೇ ರೀತಿ 100 ದಿನಗಳ ಕಾಲ ನೀರು ಹರಿಸಿದರೆ ಉಳಿದ 20 ಟಿಎಂಸಿ ಖಾಲಿಯಾಗಿ ಜಲಾಶಯದ ಒಡಲು ಸಂಪೂರ್ಣ ಬರಿದಾಗುತ್ತದೆ ಎಂದು ಹೋರಾಟ ನಿರತ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ಸಂಚಾಲಕ ಮಂಜಪ್ಪಗೌಡ ಅಧ್ಯಕ್ಷತೆಯಲ್ಲಿ ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ನೇತೃತ್ವವಹಿಸಿದ್ದು, ರೈತ ಮುಖಂಡ ಡಿ.ವಿ.ವೀರೇಶ್ ಸೇರಿದಂತೆ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.