ಕಲಬುರಗಿ:ಅತಿವೃಷ್ಟಿ ಮಳೆಯಿಂದ ತೊಗರಿ ಬೆಳೆ ಒಣಗುತ್ತಿದೆ ಜಂಟಿ ಸಮೀಕ್ಷೆ ಕೈಗೊಂಡು ಬರ ಪರಿಹಾರ ಕೊಡುವಂತೆ ಹಾಗೂ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಅಡಿಯಲ್ಲಿ ವಿಮೆ ಕಟ್ಟಿದ ರೈತರಿಗೆ ಮೋಸ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ರೈತರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿ,ಫಸಲ್ ಭೀಮಾ ಯೋಜನೆ ಅಡಿಯಲ್ಲಿ ವಿಮೆ ಕಟ್ಟಿದ ರೈತರು 1,88,000 ಜನ ರೈತರು ಜಿಲ್ಲೆಯಲ್ಲಿ ಒಟ್ಟು 161 ಕೋಟಿ ರೂ.ಗಳು ಜಮಾ ಆಗಿದೆ.ಕೇವಲ 91 ಕೋಟಿ ರೂ.ಗಳು ಮಾತ್ರ ಬಿಡುಗಡೆ ಮಾಡಿದೆ.ಇನ್ನೂ 115 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಫಸಲ್ ಭಿಮಾ ಯೋಜನೆ ಅಡಿಯಲ್ಲಿ ರೈತರಿಂದ ಅರ್ಜಿ ಸಲ್ಲಿಸಿದ ರೈತರ ಖಾತೆಗೆ ವಿಮೆ ಹಣ ಹಾಕಲಾಗದೇ ದಲ್ಲಾಳಿಗಳಿಗೆ ರೈತರನ್ನು ಕಡೆಗಣಿಸಿ ಮೋಸ ಮಾಡಿದ್ದು,ವಿಮೆ ಹಣದಿಂದ ವಂಚಿತರಾಗಿರುವ ರೈತರಿಗೆ ನ್ಯಾಯ ದೊರಕಿಸಬೇಕು ಯಾರದೋ ಗಂಟು ಯಲ್ಲಮ್ಮನ ಜಾತ್ರೆ ಮಾಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ತಪ್ಪಿತಸ್ಥ ಅಧಿಕಾರಿಗಳಿಗೆ ಅಮಾನತ್ತುಗೊಳಿಸಿ,ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು ಎಂದು ಅವರು ಆಗ್ರಹಿಸಿದರು.
ತಕ್ಷಣವೇ ಬೆಳೆ ನಷ್ಟ ಸಮೀಕ್ಷೆ ಮಾಡಿ ಪ್ರತಿ ಎಕರೆಗೆ ಆಣೆವಾರು ಪರಿಹಾರ ಘೋಷಿಸಿ ರೈತರ ಸಾಲ ಮನ್ನಾ ಮಾಡುವಂತೆ,ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಅತಿವೃಷ್ಟಿ ಹಾಗೂ ಬರಗಾಲ ಆವರಿಸಿದೆ. ಜೂನ್‍ನಲ್ಲಿ ಬಹಳ ವಿಳಂಬವಾಗಿ ಪ್ರಾರಂಭವಾದ ಮುಂಗಾರು ಜುಲೈ ಮಧ್ಯ ಭಾಗದಿಂದ ಇಲ್ಲಿಯವರೆಗೆ ಸತತ ಎರಡು ತಿಂಗಳುಗಳ ಕಾಲ ಮಳೆ ಬೀಳದೇ ರೈತರನ್ನು ಹಾಗೂ ಗ್ರಾಮೀಣ ಜನತೆಯನ್ನು ವಿಪರೀತ ಕಷ್ಟಕ್ಕೆ ಸಿಲುಕಿಸಿದ್ದು, ಏಕಕಾಲದಲ್ಲಿ ಜಿಲ್ಲೆಯ ಬಹುತೇಕ ಚಿಂಚೋಳಿ, ಚಿತ್ತಾಪುರ,ಸೇಡಂ ತಾಲ್ಲೂಕಿನ ಬಿತ್ತನೆ ಆಗಿದೆ. ಆದಾಗ್ಯೂ, ತೇವಾಂಶ ಕೊರತೆಯಿಂದ ಯಾವ ರೊಕ್ಕದ ಮಾಲು ಉದ್ದು,ಹೆಸರು,ಸೋಯಾಬಿನ್ ಇಳುವರಿ ಬರುತ್ತಿಲ್ಲ.ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ ಉಳಿದ ತಾಲ್ಲೂಕುಗಳಲ್ಲಿ ಕೆಲವು ಕಡೆ ಕೆಲವರು ರೈತರು ಬಿತ್ತನೆ ಮಾಡಲಾರದೇ ಹಾಗೇ ಉಳಿದುಹೋಗಿದೆ ಹೀಗಾಗಿ ಕೂಡಲೇ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತೊಗರಿ ನಾಡಿನ ಬರಗಾಲ ಪರಿಸ್ಥಿತಿ ಹೀಗಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಡೀ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ,ಸಮರೋಪಾದಿಯಲ್ಲಿ ಪರಿಹಾರ ಹಮ್ಮಿಕೊಳ್ಳಲು ಮೀನಾಮೇಷ ಎಣಿಸುತ್ತಿದೆ ಎಂದು ಟೀಕಿಸಿದ ಅವರು,ಬರಗಾಲ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿಗದಿ ಮಾಡಿರುವ ಮಾನದಂಡಗಳು ರಾಜ್ಯ ಸರ್ಕಾರದ ಕೈಕಟ್ಟಿ ಹಾಕಿದೆ ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಕರ್ನಾಟಕದ ಬರ ಪರಿಸ್ಥಿತಿ ತಮಗೆ ಏನೂ ಸಂಬಂಧವಿಲ್ಲ ಎಂಬಂತೆ ಮೋದಿ ಸರ್ಕಾರ ಹಾಗೂ ರಾಜ್ಯದ ಸಂಸದರು ವರ್ತಿಸುತ್ತಿದ್ದಾರೆ ಎಂದು ದೂರಿದರು.
ಜಿಲ್ಲೆಯಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸುವಂತೆ,ಟ್ಯಾಂಕರ್ ನೀರಿನ ಮಾರಾಟದ ಮೇಲೆ ನಿಯಂತ್ರಣ ಸಾಧಿಸುವಂತೆ,ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಲ್ಬಣಗೊಳ್ಳುತ್ತಿದೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅವರು ಒತ್ತಾಯಿಸಿದರು.
ತಕ್ಷಣವೇ ಬಿಪಿಎಲ್,ಎಪಿಎಲ್ ತಾರತಮ್ಯ ಇಲ್ಲದೇ ಬರಗಾಲ ಪರಿಹಾರ ರೇಷನ್ ವಿತರಣೆಯಲ್ಲಿ ಹೆಚ್ಚುವರಿ ಆಹಾರ ಧಾನ್ಯ ಒದಗಿಸುವಂತೆ,ಆಹಾರ ಧಾನ್ಯಗಳ ಬೆಲೆ ಏರಿಕೆ ಮೇಲೆ ಕಡಿವಾಣ ವಿಧಿಸುವಂತೆ, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ವಹಿಸುವಂತೆ,ಮೇವು ಕುಂದು ಕೊರತೆ ಪರಿಹರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ,ಕೂಡಲೇ ಕೇಂದ್ರ ಸರ್ಕಾರವು ಎಲ್ಲಾ ರೈತರ,ಕೃಷಿ ಕೂಲಿಕಾರರ, ಗ್ರಾಮೀಣ ಮಹಿಳೆಯರ ಸಾಲ ಮನ್ನಾ ಹಾಗೂ ಬಡ್ಡಿ ಮನ್ನಾ ಮಾಡುವಂತೆ,ಎಲ್ಲಾ ರೀತಿಯ ಸಾಲ ವಸೂಲಾತಿಯನ್ನು ನಿಷೇಧಿಸಿ ಆದೇಶ ಹೊರಡಿಸುವಂತೆ ಅವರು ಆಗ್ರಹಿಸಿದರು.
ಉದ್ಯೋಗ ಖಾತರಿ ಯೋಜನೆಯ ಕೆಲಸದ ದಿನಗಳನ್ನು 200 ದಿನಕ್ಕೆ ಹೆಚ್ಚಿಸುವಂತೆ,ಬರಗಾಲದ ಕೂಲಿಯಾಗಿ 600ರೂ.ಗಳನ್ನು ಪಾವತಿಸುವಂತೆ, ರೈತರ, ಕೃಷಿ ಕೂಲಿಕಾರರ,ಗೇಣಿ ರೈತರ ಆತ್ಮಹತ್ಯೆ ತಡೆಗಟ್ಟಲು ಕೂಡಲೇ ಕ್ರಮ ವಹಿಸುವಂತೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬರಗಾಲ ಪರಿಹಾರ ಕ್ರಮಗಳನ್ನು ಯೋಜಿಸಲು ವಿಶೇಷ ಗ್ರಾಮ ಸಭೆಗಳನ್ನು ಮಾಡುವಂತೆ,ಗ್ರಾಮದಿಂದ ನಡೆಯುವ ಸಂಕಷ್ಟ ವಲಸೆಗೆ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು,ಜಿಲ್ಲಾಧಿಕಾರಿಗಳನ್ನು ಹೊಣೆ
ಮಾಡುವಂತೆ ಅವರು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಕಾಶ್ ಜಾನೆ,ಪದ್ಮಿನಿ ಕಿರಣಗಿ, ದಿಲೀಪಕುಮಾರ್,ರಾಯಪ್ಪ ಹುರಮುಂಜಿ, ರೇವಣಸಿದ್ಧ ಆಲಗೂಡ್,ಜಾಫರ್ ಖಾನಸಾಬ್, ಸಿದ್ದಾರ್ಥ ಠಾಕೂರ್,ಕ್ಷೇಮಲಿಂಗ ಭಂಕೂರ್, ಕಾವೇರಿ ಭಂಕೂರ್ ಮುಂತಾದವರು ಪಾಲ್ಗೊಂಡಿದ್ದರು.
ವರದಿ:ಅಪ್ಪಾರಾಯ ಬಡಿಗೇರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.