ಯಾದಗಿರಿ : ಜಿಲ್ಲೆಯ 122 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಮನೆ-ಮನೆಗೆ ಭೇಟಿ ನೀಡಿ,ನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿ ನೀಡಿ,ಕೂಲಿ ಕೆಲಸ ಹಾಗೂ ವೈಯಕ್ತಿಕ ಕಾಮಗಾರಿಗಳ ಬೇಡಿಕೆಯನ್ನು ಜನರಿಂದ ಸಂಗ್ರಹಿಸುವ ನಿಮಿತ್ಯ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಶ್ರೀಮತಿ ಗರಿಮಾ ಪನ್ವಾರ್ ಅವರು ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ರಾಷ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿ ಕುರಿತು ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ ಕೈಗೊಂಡಿದ್ದು,ಈ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು, ಎಲ್ಲಾ ಸದಸ್ಯರು ಮತ್ತು ಗ್ರಾ.ಪಂ.ಸಿಬ್ಬಂದಿ ಭಾಗವಹಿಸಲಿದ್ದಾರೆ.
ಗ್ರಾಮದ ಪ್ರತಿ ವಾರ್ಡ್,ಮನೆ-ಮನೆ ಭೇಟಿ ನೀಡಿ, ಯೋಜನೆ ಮತ್ತು ಇತರೆ ಪ್ರಮುಖ ಕಾರ್ಯಕ್ರಮಗಳ ಕುರಿತು ಜನರಿಗೆ ಮಾಹಿತಿ ನೀಡಲಿದ್ದಾರೆ.ಜಾಗೃತಿ ವಾಹನದ ಮೂಲಕ ಗ್ರಾಮಸ್ಥರಿಗೆ ಮತ್ತು ಸ್ವ-ಸಹಾಯ ಸಂಘಗಳಿಗೆ ಸಿಗುವ ಸೌಲಭ್ಯಗಳು ಹಾಗೂ ಜಲ ಸಂಜೀವಿನಿ ಕಾರ್ಯಕ್ರಮದ ಮಹತ್ವ ಕುರಿತು ಒಂದು ತಿಂಗಳ ಕಾಲ ಪ್ರಚಾರ ಮಾಡಲಾಗುತ್ತದೆ.
ನರೇಗಾ ಯೋಜನೆಯಡಿ ದೊರೆಯುವ ಕೂಲಿ 316 ರೂ ಮೊತ್ತ,ಗಂಡು-ಹೆಣ್ಣಿಗೆ ಸಮಾನ ಕೂಲಿ,ಒಂದು ಕುಟುಂಬಕ್ಕೆ ವರ್ಷಕ್ಕೆ 100 ದಿನ ಕೂಲಿ ಖಾತರಿ ಹಾಗೂ ಒಂದು ದಿನ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ,ಕೆಲಸದ ಅವಧಿ, ಯೋಜನೆಯಡಿ ಸಿಗುವ ವೈಯಕ್ತಿಕ ಕಾಮಗಾರಿಗಳು,ಕೆಲಸದಲ್ಲಿ ಹಿರಿಯ ನಾಗರೀಕರಿಗೆ, ವಿಶೇಷಚೇತನರಿಗೆ ಶೇ.50ರಷ್ಟು ವಿನಾಯಿತಿ ಸೇರಿದಂತೆ ನರೇಗಾ ಯೋಜನೆಯಡಿ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಜನರಿಗೆ ತಿಳಿಸಿ,ಅಗತ್ಯವಾದ ಕಾಮಗಾರಿಗಳನ್ನು ಜನರಿಂದ ಹಾಗೂ ಕಾಮಗಾರಿ ಬೇಡಿಕೆ ಪಟ್ಟಿಗೆ ಮೂಲಕ ಸಂಗ್ರಹಸಲಾಗತ್ತದೆ.
ಗ್ರಾಮ ಸಭೆಗಳನ್ನು ಪಂಚಾಯತ ರಾಜ್ ಕಾಯ್ದೆಯ ನಿಯಮಾನುಸಾರ ನವೆಂಬರ್ 30 ರೊಳಗೆ ಪೂರ್ಣಗೊಳಿಸಿ,ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದುಕೊಳ್ಳಬೇಕು ಈ ಗ್ರಾಮ ಸಭೆಗಳಲ್ಲಿ ಜನಪ್ರತಿನಿಧಿಗಳು,ನರೇಗಾ ಯೋಜನೆ ಅನುಷ್ಟಾನ ಇಲಾಖೆ ಅಧಿಕಾರಿಗಳು,ತಾಂತ್ರಿಕ ಸಹಾಯಕರು(ಸಿವಿಲ್ ಕೃಷಿ,ತೋಟಗಾರಿಕೆ,ಅರಣ್ಯ, ರೇಷ್ಮೆ)ಕಡ್ಡಾಯವಾಗಿ ಭಾಗವಹಿಸಲಿದ್ದಾರೆ.
ಮಹಾತ್ಮಗಾಂಧಿ ನರೇಗಾ ಯೋಜನೆಯ 2024-25 ವಾರ್ಷಿಕ ಕ್ರಿಯಾ ಯೋಜನೆ ಒಟ್ಟು ವೆಚ್ಚದಲ್ಲಿ ಶೇ.60ರಷ್ಟು ಕೃಷಿ, ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಖರ್ಚು ಮಾಡಬೇಕು ವೈಯಕ್ತಿಕ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆ ಸರಳಗೊಳಿಸುವ ಉದ್ದೇಶದಿಂದ ಜಲ ಸಂಜೀವಿನಿ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಬಿಪಿಎಲ್ ಕುಟುಂಬ,ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ವಿಶೇಷಚೇತನರು ಸೇರಿದಂತೆ ಮಹಾತ್ಮಗಾಂಧಿ ನರೇಗಾ ಯೋಜನೆಯ ಅಧಿನಿಯಮದಲ್ಲಿ ಹೆಸರಿಸಿದ ಎಲ್ಲಾ ವರ್ಗದ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸಿ ಒಂದೇ ಬಾರಿಗೆ ಅನುಮೋದನೆ ಪಡೆದುಕೊಳ್ಳಲಿದೆ. ಯೋಜನೆಯಡಿ ಸೌಲಭ್ಯ ಪಡೆಯಲು ಅನುಮೋದನೆಗೊಂಡ ಕುಟುಂಬವು ಜೀವಿತಾವಧಿಯಲ್ಲಿ 5 ಲಕ್ಷ ರೂ.ಗಳ ವಿತಿಯೊಳಗೆ ತನಗೆ ಬೇಕಾದ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಜಲ ಸಂಜೀವಿನಿ ವಾರ್ಷಿಕ ಕ್ರಿಯಾ ಯೋಜನೆ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಲ ಸಂಜೀವಿನಿ ವಿಸ್ತೃತ ಯೋಜನಯನ್ನು ವೈಜ್ಞಾನಿಕ ಆಧಾರದ ಮೇಲೆ ಜೀಯೋ ಸ್ಪೇಷಿಯಲ್ ತಂತ್ರಜ್ಞಾನ ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳನ್ನು ಒಳಗೊಂಡ ವಿವರವಾದ ವೈಜ್ಞಾನಿಕ ಯೋಜನಾ ವರಧಿಯನ್ನು ತಯಾರಿಸಿ,ಅನುಷ್ಟಾನ ಮಾಡಲಾಗುತ್ತಿದೆ.ವಾರ್ಷಿಕ ಕ್ರಿಯಾ ಯೋಜನೆಯ ಒಟ್ಟು ಅಂದಾಜು ವೆಚ್ಚದಲ್ಲಿ ಕನಿಷ್ಟ ಶೇ.65ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಕಡ್ಡಾಯವಾಗಿ ಮಿಸಲಿಡಬೇಕು ಎಂದು ಆದೇಶಿಸಲಾಗಿದೆ.
ಕಾರ್ಮಿಕ ಆಯವ್ಯಯ ತಯಾರಿಕೆ ಕಾಲಮಿತಿ:ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪ್ರತಿ ಮನೆಗೂ ಭೇಟಿ ನೀಡಿ ಮನೆ ಮನೆ ಜಾಥಾ ಹಮ್ಮಿಕೊಂಡು ಯೋಜನೆಯ ಕುರಿತು ಮಾಹಿತಿ ನೀಡುವುದ ಹಾಗೂ ಚಟುವಟಿಕೆಗಳ ಮೂಲಕ ಗ್ರಾಮಸ್ಥರಿಗೆ ಹಾಗೂ ರೈತರಿಗೆ ಯೋಜನೆಯಡಿ ಸಿಗುವ ಸೌಲಭ್ಯಗಳು ಕುರಿತು ಅಕ್ಟೊಬರ್ 31 ರಂದು ಪ್ರಚಾರ ಆಂದೋಲನ ಕೈಗೊಳ್ಳವುದು ನವೆಂಬರ್ 30 ರೊಳಗೆ ರಂದು ಗ್ರಾಮ ಸಭೆಗಳನ್ನು ಆಯೋಜಿಸುವುದು ಮತ್ತು ಡಿಸೆಂಬರ್ 05 ರೊಳಗೆ ಗ್ರಾಮ ಪಂಚಾಯತಿ ಡಿಪಿ ಆರ್ ಮತ್ತು ವಾರ್ಷಿಕ ಕ್ರಿಯಾ ಯೋಜನೆಯನ್ನು ಸಲ್ಲಿಸುವುದು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಶ್ರೀಮತಿ ಗರಿಮಾ ಪನ್ವಾರ ಅವರು 2024-25ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸಲು ಜಿಲ್ಲೆಯ 122 ಗ್ರಾಮ ಪಂಚಾಯತಿಗಳಲ್ಲಿ ಮನೆ ಮನೆ ಜಾಥಾ ಕಾರ್ಯಕ್ರಮ ಮೂಲಕ ಗ್ರಾಮೀಣ ಜನರಿಗೆ ಸಿಗುವ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ನೀಡಿ, ಜನರಿಂದ ಕಾಮಗಾರಿಗಳ ಬೇಡಿಕೆಯನ್ನು ಪಡೆದು, ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳನ್ನು ಒಳಗೊಂಡ ವಿವರವಾದ ವೈಜ್ಞಾನಿಕ ವಾರ್ಷಿಕ ಕ್ರೀಯಾ ಯೋಜನೆ ತಯಾರಿಸಲಾಗುತ್ತದೆ.
ಬಲವಂತ್ ರಾಠೋಡ್,ಯೋಜನಾ ನಿರ್ದೇಶಕರು, ಹಾಗೂ ಮನರೇಗಾ ಯೋಜನೆಯ ನೋಡಲ್ ಅಧಿಕಾರಿ ಜಿಲ್ಲಾ ಪಂಚಾಯತ್ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸಲು “ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ” ಮೂಲಕ ಗ್ರಾಮೀಣ ಜನರಿಗೆ ಯೋಜನೆ ಬಗ್ಗೆ ಮಾಹಿತಿ ನೀಡಿ,ಜನರಿಂದ ಕಾಮಗಾರಿಗಳ ಬೇಡಿಕೆಯನ್ನು ಪಡೆದು,ವಾರ್ಷಿಕ ಕ್ರೀಯಾ ಯೋಜನೆಯನ್ನು ಸಿದ್ದಪಡಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.