ಉತ್ತರ ಕರ್ನಾಟಕ ಅದರಲ್ಲೂ ಗದಗ ಜಿಲ್ಲೆ ಗದಗ ತಾಲ್ಲೂಕು ತಿಮ್ಮಾಪೂರ ಗ್ರಾಮದಲ್ಲಿ ಅತೀ ಹೆಚ್ಚು ಯರಿ ಭೂಮಿಯನ್ನು ಹೊಂದಿದ್ದು,
ದಿನಾಂಕ -11-01-2024 ರ ಗುರುವಾರ ಎಳ್ಳ ಅಮಾವಾಸ್ಯೆಯಂದು ಭೂಮಿಪೂಜೆ ನೆರವೇರಿಸುವರು.
ರೈತರ ಹಬ್ಬ ಎಳ್ಳು ಅಮಾವಾಸ್ಯೆ,ಇವತ್ತಿನ ದಿನ ಯಾವುದೇ ಜನಾಂಗವಿರಲಿ ಭೇದ ಭಾವವಿಲ್ಲದೇ, ಜಾತಿಭೇದವಿಲ್ಲದೇ ಆಚರಣೆ ಮಾಡುವ ಅನ್ನದಾತರ ಹಬ್ಬವಾಗಿದೆ.
ಈ ಅಮಾವಾಸ್ಯೆ ಐದಾರು ದಿನ ಇರುವಾಗಲೇ ಚಕ್ಕಡಿ ಶೃಂಗಾರ ಮಾಡುವದ್ದು ಹಾಗೂ ಎತ್ತನ್ನು ಶೃಂಗಾರಮಾಡುವದು ಪುರುಷರ ಹುಮ್ಮಸ್ಸಿನಲ್ಲಿದಾರೆ.
ಇನ್ನೂ ಮಹಿಳೆಯರು ಶೇಂಗಾ ಹೋಳಿಗೆ,ಎಳ್ಳು ಹೋಳಿಗೆ ಎಣ್ಣೆ ಹೋಳಿಗೆ,ಕರಿಗಡಬು,ಕರ್ಚಿಕಾಯಿ ಬಜ್ಜಿ,ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ,ಜೋಳದ ರೊಟ್ಟಿ, ಹಾಗೂ ಅಗಸಿಪುಡಿ,ಶೆಂಗಾಪುಡಿ,ಪುಟಾಣಿ, ಗುರೆಳ್ಳುಗಳ ಚೆಟ್ನಿ ಹಾಗೂ ಕೆಂಪಿಂಡಿ ತಯಾರು ಮಾಡುವ ಸಡಗರ ನೋಡಿದರೆ ಎಲ್ಲಾ ಮಕ್ಕಳಲ್ಲಿ ಖುಷಿನೂ ಖುಷಿ,ಅವತ್ತಿನ ದಿವಸ ತಮ್ಮ ತಮ್ಮ ದೂರದ ಸಂಬಂಧಿಕರನ್ನು ಹಾಗೂ ಸ್ನೇಹಿತರನ್ನು ಕರೆಯಿಸಿ ಪ್ರತಿಯೊಬ್ಬರು ಹೊಸ ಬಟ್ಟೆಯನ್ನು ಉಟ್ಟು ಎತ್ತಿನ ಬಂಡಿ ಹೂಡಿಕೊಂಡು ಅದರಲ್ಲಿ ಎತ್ತುಗಳಿಗೆ ಜುಲಾ ಹಾಕಿ ಕೊರಳಲ್ಲಿ ಗೆಜ್ಜೆಸರ ಕಟ್ಟಿ ಕೊಂಬುಗಳಿಗೆ ಕೋಡಣಸು,ಹಣೆ ಕಟ್ಟು ಹಾಕಿ ಶೃಂಗಾರಿಸಿರುವುದು ವಿಶೇಷವಾಗಿರುತ್ತದೆ.
ಬಂಡಿಗೆ ತರಹದ ಬಣ್ಣ ಹಚ್ಚಿ ಅಲಂಕಾರ ಮಾಡಿಕೊಂಡು ಹೊಸ ಗುಡಾರ ಕಟ್ಟಕೊಂಡು ದೊಡ್ಡದಾದ ಬುತ್ತಿಗಂಟು ಇಟಗೊಂಡು,ಜಿಲ್ ಜಿಲ್ ಎಂದು ಹೋಗುವ ಆ ದೃಶ್ಯ ನೋಡಿದರೆ ಗ್ರಾಮೀಣ ಸೊಗಡು ಎತ್ತಿ ತೋರಿಸುತ್ತದೆ.
ಈ ದೃಶ್ಯ ನೋಡಿದ್ರೆ ಯಾವುದೇ ವ್ಯಕ್ತಿಯಾಗಲಿ ಮನ ತುಂಬಿ ಖುಷಿಪಡುವುದಂತೂ ನೂರಕ್ಕೆ ನೂರು ಸತ್ಯ.
ಪ್ರತಿ ವರ್ಷವೂ ಎಳ್ಳು ಅಮಾವಾಸ್ಯೆಯ ದಿನ ಅನ್ನದಾತರ ಆರಾಧ್ಯೆ ದೇವತೆಯಾದ ಭೂತಾಯಿಗೆ ಶೀಮಂತ ಕಾರ್ಯ ಮಾಡುವದು ಉತ್ತರ ಕರ್ನಾಟಕದ ರೈತರ ಪದ್ಧತಿಯಾಗಿದ್ದು ಹಿಂದಿನ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಈ ಹಬ್ಬವನ್ನು ಅತೀ ಅದ್ದೂರಿಯಾಗಿ ಆಚರಣೆ ಮಾಡುತ್ತ ಬಂದಿರುತ್ತದೆ, ಮುಂಗಾರು ಹೆಚ್ಚು ಮಳೆಗಾಲದಿಂದ ಕೂಡಿರುವದರಿಂದ ಹಿಂಗಾರು ಮನಸೂನ್ ಮಾರುತಗಳು ಹಿಂದೆ ಸರಿದು ಮಾಗಿಯ ಚಳಿಗಾಲದಲ್ಲಿ ಈ ಎಳ್ಳ ಅಮಾವಾಸ್ಯೆ ಬರುತ್ತದೆ ಪ್ರತಿಯೊಂದು ಹೊಲದಲ್ಲಿ ಭೂ ತಾಯಿ ಹಸಿರು ಮಡಿಯನ್ನುಟ್ಟು ಬಹು ಸುಂದರವಾಗಿ ಕಂಗೊಳಿಸುತ್ತಿರುತ್ತಾಳೆ ಇಂತಹ ಸುಸಂದರ್ಭದಲ್ಲಿ ಪ್ರತಿಯೊಬ್ಬ ರೈತರು ತಮ್ಮ ತಮ್ಮ ಹೊಲದಲ್ಲಿರುವ ಬನ್ನಿ ಮಹಾಂಕಾಳಿಗೆ ಪೂಜೆ ಮಾಡಿ ಅದರೊಂದಿಗೆ ಐದು ಕಲ್ಲುಗನ್ನು ಇಟ್ಟು ಅವುಗಳನ್ನು ಪಂಚಪಾಂಡವರೆಂದು ಹಾಗೂ ಅದರ ಹಿಂದೆ ಒಂದು ಕಲ್ಲನ್ನು ಇಟ್ಟು ಅದನ್ನು ಮಹಾಕಳ್ಳ ಎಂದು ಹೇಳುತ್ತಾ ಅವುಗಳಿಗೆಲ್ಲಾ ಪೂಜ್ಯತಾ ಭಾವದಿಂದ ವಿಭೂತಿ ಕುಂಕುಮ ಭಂಡಾರ ಹಚ್ಚಿ ಮತ್ತು ಸುಣ್ಣದಿಂದ ಮರಕ್ಕೆ ಐದು ಸುತ್ತು ಗೆರೆ ಬಳಿದು ಪೂಜಿಸಿ ಎಲ್ಲಾ ತರಹದ ಹೋಳಿಗೆ ರೊಟ್ಟಿ ಬದನೇಕಾಯಿಪಲ್ಲೆ,ಅನ್ನ ನೈವೇದ್ಯ ಹಿಡಿದು ಬೆಳೆದ ಬೆಳೆಗಳಿಗೆಲ್ಲಾ ಹೊಲದ ತುಂಬಾ “”ಹುಲ್ಲಿಲಿಗೋ ಚೇಲಾಮ್ಬ್ರಗೋ ಎಂದು ಘೋಷಣೆ ಕೂಗುತ್ತಾ ಚೆರಗ ಚೆಲ್ಲುವರು.””
ತದನಂತರ ಭೂತಾಯಿಗೆ ನಮಸ್ಕರಿಸಿ ಇಂದಿನ ವರ್ಷ ಹೇಗಾದರೂ ಆಗಲಿ ಮುಂದಿನ ವರ್ಷ ಚೊಲೋ ಮಳೆ ಬೆಳೆ ಬರುವ ಹಾಗೆ ಮಾಡು ತಾಯಿ ಎಂದು ಬೇಡಿಕೊಳ್ಳುವರು.
ಎಲ್ಲರೂ ಸೇರಿ ಖುಷಿಯಿಂದ ಸಾಮೂಹಿಕ ಭೋಜನ ಮಾಡುವದು ಈ ಹಬ್ಬದ ವಿಶೇಷತೆ ಈ ಸಮಯದಲ್ಲಿ ಯಾರಾದ್ರೂ ಹೊಲಕ್ಕೆ ಬಂದರೆ ಅವರಿಗೆ ಅಕ್ಕರೆಯಿಂದ ಊಟ ಭಡಿಸುವದು ತಾಯಂದಿರರ ಖುಷಿ.ಇನ್ನು ಹಿರಿಯರು ಹಾಗೂ ಮಹಿಳೆಯರು ಹೊಟ್ಟೆ ತುಂಬಾ ಭೋಜನ ಸ್ವೀಕರಿಸಿ,ಎಲೆ ಅಡಿಕೆ ಹಾಕಿಕೊಂಡು ಹೊಲವೆಲ್ಲಾ ಅಡ್ಡಾಡಿ ನೋಡಿ ಮರದ ಕೆಳೆಗೆ ವಿಶ್ರಾಂತಿ ತೆಗೆದುಕೊಂಡರೆ,ಮಕ್ಕಳು ಮತ್ತು ಯುವಕರು ತಮ್ಮ ಹಾಗೂ ಅವರಿವರ ಹೊಲದಲ್ಲಿ ಬೆಳೆದ ಕಡಲೆ ಕಿತ್ತು ತಿನ್ನುತ್ತಾ ಮಜಾ ಮಾಡುವುದರ ಮೂಲಕ ಹೊಸ ವರ್ಷದ ಮೊದಲ ಹಬ್ಬ ಆಚರಣೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಅವರು ಹೇಳಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.