ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕರದಂಟೂರು ಅಮೀನಗಡದಲ್ಲಿ ನೂರಾರು ವರ್ಷಗಳ ಹಿಂದೆ ನಿರ್ಮಾಣವಾದ ಶ್ರೀರಾಮ ದೇವರ ಮಂದಿರ ಕಾಣ ಸಿಗುತ್ತದೆ.
ಈ ದೇವಾಲಯದ ರಾಮ-ಸೀತೆ,ಲಕ್ಷ್ಮಣ ಮೂರ್ತಿಗಳು ಅಮೃತ ಶಿಲೆಗಳು ಆಗಿದ್ದು,ಉತ್ತರ ದಿಕ್ಕಿನಲ್ಲಿ ದೇವಾಲಯದ ನಿರ್ಮಾಣವಾಗಿದೆ.ದ್ವಾರ,ಮುಖ ಮಂಟಪ,ಗರ್ಭ ಗುಡಿ,ದೇವಾಲಯದ ಗರ್ಭಿಗುಡಿ ಬಲಗಡೆ ಆಂಜನೇಯ ಮೂರ್ತಿ,ಹಿಂಭಾಗ ಬಾವಿ ಇದ್ದು ಅದು ಈಗ ಬಳಕೆ ಇಲ್ಲ ಮುಚ್ಚಲಾಗಿದೆ. ಮತ್ತೊಂದು ವಿಶೇಷವೆಂದರೆ ರಾಮಮಂದಿರದ ಎದುರಗಡೆ ಗುಡ್ಡದ ಮೇಲೆ ದಕ್ಷಿಣ ಮುಖವಾಗಿ ಹನುಮಾನ್ ಮಂದಿರ ಕಾಣಿಸುತ್ತದೆ.
ದೇವಾಲಯದ ವಾಸ್ತು ಶಿಲ್ಪ ಕೆತ್ತನೆ ನೋಡಲಾಗಿ ಇದು ಮರಾಠರ ಕಾಲದಲ್ಲಿ ನಿರ್ಮಾಣ ಆಗಿದೆ.
ಆದಿಲ್ ಶಾಹಿಗಳ,ಮರಾಠರ ಆಡಳಿತಕ್ಕೆ ಒಳಪಟ್ಟಿದ್ದ
ಅಮೀನಗಡದಲ್ಲಿ ೧೮ ಮಠ,೧೮ ಭಾವಿಗಳು ಇರುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ.
ಅಮೀನಗಡದ ಸ್ಥಳೀಯರು ೧೭೫ ವರ್ಷಗಳ ಹಿಂದೆ ಶ್ರೀರಾಮ ಮಂದಿರಕ್ಕೆ ೧೮೪೯ರಲ್ಲಿ ಗುಡಿಗೆ ಕಳಸ ಭಕ್ತಿಯಿಂದ ಅರ್ಪಣೆ ಮಾಡಿರುವ ಬಗ್ಗೆ ‘ಬಿನ್ನಶರ್ತಿ(ಯಾವುದು ಕರಾರು ಇಲ್ಲದೇ)ಯಿಂದ ಭೀಮನಗೌಡ ಗುರುಸಂಗಪ್ಪ ಗೌಡ್ರ, ವ| ಶಿದ್ದಪ್ಪ ಮಲ್ಕಪ್ಪ ರಕ್ಕಸಗಿ,ಮಿತಿ ವೈಶ್ಯಾ,ಅವಧಿ ||೨|| ಶಕ ವರ್ಷ ೧೮೪೯ ಪ್ರಬುವನಾ ||ಸಂ|| ಎಂದು ಕಳಸದ ಮೇಲಿನ ದಾಖಲೆ ಬರಹ ಇದರ ಪ್ರಾಚೀನತೆ ಬಗೆಗಿನ ದಾಖಲೆ ಒದಗಿಸುತ್ತದೆ.
ಉತ್ತರಪ್ರದೇಶದಿಂದ ವ್ಯಾಪಾರಕ್ಕಾಗಿ ವಲಸೆ ಬಂದಿರುವ ಮಹರವಾಡಿ ಕುಟುಂಬಗಳು ಇಲ್ಲಿ ನೆಲೆಸಿ ನೂರಾರು ವರ್ಷಗಳ ಹಿಂದೆ ಈ ಮಂದಿರದಲ್ಲಿ ನೆಲೆಸಿ, ಶ್ರೀರಾಮನ ಪೂಜಿಸುವ ಕಾರ್ಯ ಆರಂಭಿಸಿರಬಹುದು.
ನೂರಾರು ವರ್ಷಗಳ ಹಿಂದೆ ಗೋವರ್ಧನ ಹೆಸರಿನ ವ್ಯಕ್ತಿಯ ಕುಟುಂಬ ಮತ್ತು ಇನ್ನೊಂದು ಕುಟುಂಬ ಇಲ್ಲಿ ನೂರಾರು ವರ್ಷಗಳ ಕಾಲ ಇಲ್ಲಿ ಮನೆ ತೋಟ ಮಾಡಿಕೊಂಡು ಹಲವಾರು ವರ್ಷಗಳ ಕಾಲ ವಾಸವಾಗಿದ್ದರು.
ಕಾಲಾಂತರದಲ್ಲಿ ಈ ಕುಟುಂಬಗಳು ಗುಳೇದಗುಡ್ಡ, ಇಳಕಲ್ ನಲ್ಲಿ ನೆಲೆಸಿದ್ದು,ವರ್ಷದಲ್ಲಿ ಒಂದೆರಡು ಬಾರಿ ಬಂದು ಪೂಜಾ ಕಾರ್ಯ ಪೊರೈಸಿ ಹೋಗುತ್ತಾರೆ. ದೇವಾಲಯದ ಪೂಜಾ ಕಾರ್ಯ ನೆರವೇರಿಸಲು ಉತ್ತರ ಪ್ರದೇಶ ಅರ್ಚಕ ಒಬ್ಬರನ್ನು ನೇಮಿಸಿದ್ದು ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ಐನೂರು ವರ್ಷಗಳ ನಂತರ ಅಯೋಧ್ಯದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ,ಪ್ರಾಣ ಪ್ರತಿಷ್ಠಾನದ ಸಂದರ್ಭದಲ್ಲಿ ಅಪರೂಪದ ಮರಾಠ ಕಾಲದ ರಾಮ ಮಂದಿರ ನೂರಾರು ವರ್ಷಗಳ ಹಿಂದೆ ಇಲ್ಲಿ ಶ್ರೀರಾಮ ದೇವಾಲಯ ನಿರ್ಮಾಣವಾಗಿರುವುದು ಸ್ಥಳೀಯ ರಾಮ ಭಕ್ತರಲ್ಲಿ ಸಂತಸ ಇಮ್ಮಡಿಗೊಳಿಸಿದೆ.
ಲೇಖನ:ಮಲ್ಲಿಕಾರ್ಜುನ ಸಜ್ಜನ,ಶೂಲೇಭಾವಿ