ಹನೂರು:ಬೇಸಿಗೆ ಆರಂಭ ಹಿನ್ನಲೆ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರು ಅಭಾವ ಉಂಟಾಗಿದೆ ಹೀಗಾಗಿ ಅಗತ್ಯವಿರುವ ಕಡೆ 16 ಹೊಸ ಬೋರ್,4 ರೀಬೋರ್ ಕೊರೆಯಲು ಶೀಘ್ರದಲ್ಲೇ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಗಣ್ಯ ವ್ಯಕ್ತಗಳ ವಸತಿಗೃಹದಲ್ಲಿ ಕರೆಯಲಾಗಿದ್ದ ಜಲಜೀವನ್ ಮಿಷನ್ ಹಾಗೂ ತಾಲೂಕು ಪಂಚಾಯಿತಿ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಬಳಿಕ ಅವರು ಮಾತನಾಡಿದರು.
25ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಂಚಿನ ಗ್ರಾಮ, ಪೋಡುಗಳು ಒಳಗೊಂಡು ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿ ಅಂತರ್ಜಲ ಕುಸಿತವಾಗುತ್ತಿದ್ದು ನೀರಿನ ಅಭಾವ ಎದುರಾಗುತ್ತಿದೆ ಹೀಗಾಗಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಹೊಸ ಹಾಗೂ ಮರು ಬೋರ್ ಕೊರೆಯಿಸಲು ಶೀಘ್ರದಲ್ಲೇ ಪಾಯಿಂಟ್ ಗುರುತು ಮಾಡಬೇಕು.ಜೊತೆಗೆ ಜಿಪಿಎಸ್ ಅಳವಡಿಕೆ ಆಗಲಿ, ಬೋರ್ ಪಾಯಿಂಟ್ ವೇಳೆ ಆಯಾ ಗ್ರಾಮ ಪಂಚಾಯಿತಿ ಪಿಡಿಒ ಸ್ಥಳದಲ್ಲಿದ್ದು ಒಂದು ವಾರದ ಒಳಗೆ ಕ್ರಮವಹಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಇದಕ್ಕೂ ಮುನ್ನ ಶಾಸಕ ಎಂ.ಆರ್.ಮಂಜುನಾಥ್ ಅವರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಅಂಕಿ ಅಂಶಗಳ ಸಹಿತ ಮಾಹಿತಿ ಪಡೆದುಕೊಂಡು ಅಧಿಕಾರಿಗಳ ಜೊತೆ ತುರ್ತು ಪರಿಸ್ಥಿತಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು.
ಸಮೀಪದ ಖಾಸಗಿ ಜಮೀನಿನಲ್ಲಿ ಮೋಟಾರ್ ಅಳವಡಿಕೆ ನೀರು ಸರಬರಾಜು ಹಾಗೂ ತುರ್ತು ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಒದಗಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ವಸತಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಅಗತ್ಯ ಮೂಲ ಸೌಕರ್ಯ ಬಗ್ಗೆ ಸಮಸ್ಯೆಗಳು ಇದ್ದಲ್ಲಿ ನನ್ನ ಗಮನಕ್ಕೆ ತಂದು ಆಗಿರುವ ಕಾರ್ಯಗಳ ಬಗ್ಗೆ ದಾಖಲೆ ಸಹಿತ ಮಾಹಿತಿ ಒದಗಿಸಬೇಕು ಎಂದು ಇದೆ ವೇಳೆ ಹೇಳಿದರು.
ಸಭೆಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಎಇಇ ಹರೀಶ್,ತಾಲೂಕು ಪಂಚಾಯಿತಿ ಇಒ ಉಮೇಶ್ ಸೇರಿದಂತೆ ವಿವಿಧ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್