ಬೆಳಗಾವಿ/ಅಥಣಿ:ದೇಶದ ರಾಜಕೀಯ ಚಿತ್ರಣ ಬದಲಾಯಿಸುವ ಶಕ್ತಿ ಸುಶಿಕ್ಷಿತ ಯುವಜನತೆಯಲ್ಲಿದೆ ಎಂದು ಅಥಣಿಯ ಕೆನರಾ ಬ್ಯಾಂಕ್ ನ ವ್ಯವಸ್ಥಾಪಕರಾದ ಸೈಯದ್ ಭಾಷಾ ಅವರು ಅಭಿಪ್ರಾಯಪಟ್ಟರು.ಕೆನರಾ ಬ್ಯಾಂಕ್ ಅಥಣಿ ಹಾಗೂ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದ ಹಾಗೂ ಐ ಕ್ಯೂ ಎಸ್ ಸಿ ಅಡಿಯಲ್ಲಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ “ವ್ಯಕ್ತಿಯ ಜೀವನದಲ್ಲಿ 18-22 ರ ವಯೋಮಾನವು ಬದುಕಿನ ಮಹತ್ತರ ಘಟ್ಟವಾಗಿದ್ದು, ಯುವಜನತೆ ಈ ಅವಧಿಯಲ್ಲಿ ಕಾಲಹರಣ ಮಾಡದೆ ಜ್ಞಾನಾರ್ಜನೆ ಪಡೆದು ಬದುಕನ್ನು ಸದೃಢವಾಗಿ ರೂಪಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಉಳಿತಾಯ ಮಾಡುವ ಮನೋಭಾವನೆಯನ್ನು ವಿದ್ಯಾರ್ಥಿ ದಿಸೆಯಿಂದಲೇ ಬೆಳೆಸಿಕೊಳ್ಳಬೇಕು.ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬ್ಯಾಂಕಿಂಗ್ ಪರೀಕ್ಷೆಗಳಿಗೆ ಪ್ರತ್ಯೇಕ ಕೋಚಿಂಗ್ ತೆಗೆದುಕೊಳ್ಳಬೇಕು.ದೈನಂದಿನ ವ್ಯವಹಾರದಲ್ಲಿ ಬ್ಯಾಂಕ್ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ.ಜತೆಗೆ ನಾವು ಸದೃಢರಾಗಿ,ನಮ್ಮ ಅವಲಂಬಿತರೂ ಸದೃಢರಾಗಿರಲೂ ವಿಮೆ ಮಾಡಿಸುವುದು ಉತ್ತಮ ಎಂದು ಹೇಳಿದರು.
ಬ್ಯಾಂಕ್ ಬಿಟ್ಟು ಲೇವಾದೇವಿದರಾರರ ಹತ್ತಿರ ಸಾಲ ಪಡೆಯಬಾರದು,ಬ್ಯಾಂಕ್‌ಗಳತ್ತ ದೃಢವಾದ ಹೆಜ್ಜೆಗಳನ್ನಿಡಬೇಕು.ಯುವ ಜನತೆ ಆರ್ಥಿಕ ಸಾಕ್ಷರತೆಯ ಮಹತ್ವವನ್ನು ಅರಿತುಕೊಂಡು ಪೋಷಕರು,ಸರ್ವಾಜನಿಕರಲ್ಲಿ ಅರಿವು ಮೂಡಿಸಬೇಕು.ಪ್ರತಿಯೊಬ್ಬರೂ ಪ್ರಧಾನಮಂತ್ರಿ ಸುರಕ್ಷಾ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶಿವಾನಂದ ಮಟ್ಟೆಪ್ಪನವರ ಅವರು ಅಳತೆ ಮೀರಿದ ಸಾಲದಿಂದ ಆರ್ಥಿಕ ದುಃಸ್ಥಿತಿ ಉಂಟಾಗುತ್ತದೆ,ಮಾನಸಿಕ ಆರೋಗ್ಯವೂ ಹದಗೆಡುತ್ತದೆ ಇಂತಹ ಸಮಸ್ಯೆ ತಪ್ಪಿಸಲು ವಿದ್ಯಾರ್ಥಿ ದೆಸೆಯಿಂದಲೇ ಉಳಿತಾಯ ಕುರಿತು ಅರಿವು ಸೇರಿದಂತೆ ಆರ್ಥಿಕ ಶಿಸ್ತು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕೆನರಾ ಬ್ಯಾಂಕ್ ಆಪ್ತ ಸಮಾಲೋಚಕರಾದ ಬಸವರಾಜ ಬೊಮ್ಮನಾಳ ಅವರು ಬ್ಯಾಂಕ್‌ನಲ್ಲಿ ಖಾತೆ ತೆರೆಯುವ ವಿಧಾನ,ಬ್ಯಾಂಕ್‌ನಲ್ಲಿರುವ ವಿವಿಧ ಖಾತೆಗಳು,ವಿವಿಧ ಠೇವಣಿಗಳು,ಚೆಕ್,ಚೆಕ್‌ನ ವಿಧಗಳು,ಡಿಡಿ,ಎಂ.ಟಿ,ಆರ್.ಟಿ.ಜಿ.ಎಸ್,ನೆಫ್ಟ್ ವಿವಿಧ ರೀತಿಯ ಸಾಲ ಸೌಲಭ್ಯಗಳು ಮುಂತಾದ ವಿಷಯಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ನಕಲಿ ನೋಟುಗಳನ್ನು ಕಂಡುಹಿಡಿಯುವುದು, ನೋಟ್ ಮುದ್ರಣ ಮಾಡುವ ಸ್ಥಳಗಳು,ನಾಣ್ಯಗಳನ್ನು ಮಿಂಟ್ ಮಾಡುವ ಸ್ಥಳಗಳ ಬಗ್ಗೆ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಆನಂದ ಲಗಳಿ ಮಾತನಾಡಿ,ಹುಟ್ಟಿನಿಂದ ಸಾಯುವವರೆಗೂ ಪ್ರತಿಯೊಬ್ಬರಿಗೂ ಹಣಕಾಸಿನ ಅವಶ್ಯಕತೆ ಇದೆ. ಬ್ಯಾಂಕ್‌ಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಆರ್ಥಿಕ ವ್ಯವಹಾರದೊಂದಿಗೆ ಸಾಮಾಜಿಕ ಜವಾಬ್ದಾರಿಯ ಕಾರ್ಯಗಳನ್ನು ನಿರ್ವಹಿಸುತ್ತಿವೆ.ಭಾರತೀಯ ರಿಸರ್ವ್‌ಬ್ಯಾಂಕ್ ವಿಶ್ವದಲ್ಲೆ ಪ್ರಸಿದ್ಧಿ ಪಡೆದ ಕೇಂದ್ರ ಬ್ಯಾಂಕ್ ಆಗಿದೆ.ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಬೇಕು ಎಂದರು.
ಬ್ಯಾಂಕ್‌ಗಳು ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಾಲೇಜಿನ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಹಾಜರಿದ್ದರು.
ವರದಿ-ಎಸ್.ವಿಶ್ವನಾಥ