ಗುಂಡ್ಲುಪೇಟೆ:ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶದ ನಡುವೆ ಗುಂಡ್ಲುಪೇಟೆ ಪುರಸಭೆಯಲ್ಲಿ 70 ಲಕ್ಷದ ಉಳಿತಾಯದ ಬಜೆಟ್ ಮಂಡನೆಯಾಯಿತು.
ಪುರಸಭೆ ಸಭಾಂಗಣದಲ್ಲಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಹಾಗೂ ಪುರಸಭಾ ಆಡಳಿತಾಧಿಕಾರಿ ಶಿವಮೂರ್ತಿ ನೇತೃತ್ವದಲ್ಲಿ 2024–25 ನೇ ಸಾಲಿನ ಆಯವ್ಯಯ ಪ್ರಕಟಿಸಲಾಯಿತು.
ನೀರಿನ ಕರ,ಆಸ್ತಿ ತೆರಿಗೆ,ಪುರಸಭೆ ಒಡೆತನದ ವಾಣಿಜ್ಯ ಮಳಿಗೆಗಳ ಬಾಡಿಗೆ,ವ್ಯಾಪಾರ ಪರವಾನಗೆ,ಸಂತೆ ಶುಲ್ಕ ಮತ್ತಿತರ ಸ್ಥಳೀಯ ಆದಾಯ ಸಂಗ್ರಹಣೆ ಮೂಲಕ ಒಟ್ಟು 3.82 ಕೋಟಿ ಆದಾಯ ಸಂಗ್ರಹಣೆ ನಿರೀಕ್ಷೆ ಹೊಂದಲಾಗಿದೆ.
ಎಸ್ಎಫ್‌ಸಿ ಮುಕ್ತ ನಿಧಿ,1ಕೋಟಿ 15ಲಕ್ಷ ವೇತನ ಅನುದಾನ,2 ಕೋಟಿ 60 ಲಕ್ಷ ವಿದ್ಯುತ್,1ಕೋಟಿ ಕುಡಿಯುವ ನೀರಿಗಾಗಿ ಅನುದಾನ ಸೇರಿ ಹಾಗೂ 15 ನೇ ಹಣಕಾಸು ಯೋಜನೆಯಲ್ಲಿ 2 ಕೋಟಿ 75 ಲಕ್ಷ ಸೇರಿದಂತೆ ವಿವಿಧ ಅನುದಾನಗಳಿಗೆ 16 ಕೋಟಿ 56 ಲಕ್ಷ ನಿರೀಕ್ಷಿಸಲಾಗಿದೆ.
ಖರ್ಚಿನ ವಿವರಣೆಯನ್ನೂ ಆಯವ್ಯಯದಲ್ಲಿ ತೋರಿಸಲಾಗಿದ್ದು,ರಸ್ತೆ ಸುಧಾರಣೆ,ಚರಂಡಿ ದುರಸ್ತಿ,ಬೀದಿ ದೀಪ,ನೀರು ಸರಬರಾಜು,ಸ್ವಚ್ಛತೆ ನಿರ್ವಹಣೆ ಮತ್ತು ಹೊರಗುತ್ತಿಗೆ ನೌಕರರ ವೇತನ,ಜಾಹೀರಾತು,ಕಚೇರಿ ವೆಚ್ಚಗಳು ಇದರಲ್ಲಿ ಸೇರಿಕೊಂಡಿವೆ ರಸ್ತೆಗಳ ನಿರ್ಮಾಣ,ನೀರು ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ,ಘನತ್ಯಾಜ್ಯ ವಿಲೇವಾರಿ ಕಾಮಗಾರಿಗಾಗಿ ಹೆಚ್ಚುವರಿ ವಿಶೇಷ ಯಂತ್ರಗಳ ಖರೀದಿ,ಕಿರು ನೀರು ಸರಬರಾಜು ಘಟಕಗಳ ನಿರ್ಮಾಣ ಮತ್ತಿತರ ಕೆಲಸಗಳಿಗೆ ಹಣ ವ್ಯಯಿಸಲು ಉದ್ದೇಶಿಸಲಾಗಿದೆ.
ಪರಿಶಿಷ್ಟ ಜಾತಿ,ಪಂಗಡ,ಆರ್ಥಿಕ ಹಿಂದುಳಿದ ವರ್ಗ ಮತ್ತು ಅಂಗವಿಕಲ ಜನರ ಕಲ್ಯಾಣಕ್ಕಾಗಿ ಲಕ್ಷ,ಇತರ ಬಡ ಜನರಿಗೆ ವಿವಿಧ ಸೌಲಭ್ಯಕ್ಕಾಗಿ 27 ಲಕ್ಷದ 75 ಸಾವಿರ ಮೀಸಲಿಡಲಾಗಿದೆ.
ಪುರಸಭೆ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿ,ಹಿಂದಿನ ಬಿಜೆಪಿ ಸರ್ಕಾರದ ಸಿ.ಎಸ್.ನಿರಂಜನಕುಮಾರ್ ಅವಧಿಯಲ್ಲಿ ಪುರಸಭೆಗೆ 10 ಕೋಟಿ ವಿಶೇಷ ಅನುದಾನ ತಂದಿದ್ದರು. ಪ್ರಸ್ತುತ ಶಾಸಕ ಎಚ್.ಎಂ.ಗಣೇಶಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿರುವ ಹಿನ್ನೆಲೆ 25 ಕೋಟಿ ವಿಶೇಷ ಅನುದಾನ ತರಬೇಕು ಎಂದು ಒತ್ತಾಯಿಸಿ,ಪಟ್ಟಣ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಕೆ ಮಾಡಿರುವ ಲೈಟ್ ತುಂಬಾ ಕಳಪೆಯಾಗಿರುವ ಹಿನ್ನೆಲೆ ಕೆಟ್ಟುನಿಂತಿವೆ.ಆದ್ದರಿಂದ ಹೆದ್ದಾರಿ ಪ್ರಾಧಿಕಾರ ಕಾಯದೆ ವಾಹನ ಸವಾರರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪುರಸಭೆಯಿಂದಲೇ ಅವುಗಳನ್ನು ದುರಸ್ತಿ ಪಡಿಸಿ ನಿರ್ವಹಣೆ ಮಾಡಬೇಕು ಎಂದರು.
ಶವ ಸಾಗಿಸುವ ವಾಹನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಹೊಸದಾಗಿ ಜೆಸಿಬಿ ಖರೀದಿಸಬೇಕು.ಎಲ್ಲಾ ಸಮುದಾಯದವರಿಗೂ ಉಪಯುಕ್ತವಾಗುವಂತೆ ನಿರ್ಮಾಣ ಮಾಡಬೇಕು.ಎಸ್ ಸಿ,ಎಸ್ಟಿಗೆ 2 ಕೋಟಿ ಅನುದಾನ ಮೀಸಲಿರಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದನ,ಲ್ಯಾಪ್ ಟಾಪ್,ಮೆಡಿಕಲ್ ವಿತರಣೆಗೆ ಕ್ರಮ ವಹಿಸಬೇಕು.ಅಮೃತ್ ಯೋಜನೆಯಡಿ ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು,ಮಣ್ಣು ರಸ್ತೆಗೆ ಚಾಚಿನಿಂತು ಸವಾರರಿಗೆ ತೊಂದರೆಯಾಗುತ್ತಿದೆ.ಈ ಸಮಸ್ಯೆಗೆ ಶೀಘ್ರ ಮುಕ್ತಿ ನೀಡಬೇಕು ಜೊತೆಗೆ ಪಟ್ಟಣದಲ್ಲಿ ವ್ಯವಸ್ಥಿತವಾಗಿ ಪುಟ್ ಫಾತ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಪುರಸಭೆ ಸದಸ್ಯ ಅಣ್ಣಯ್ಯಸ್ವಾಮಿ ಮಾತನಾಡಿ, ಬಜೆಟ್‍ನಲ್ಲಿ ಎಸ್ ಸಿ,ಎಸ್ಟಿ ಹಾಗೂ ಪೌರ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಡಲು ಹೆಚ್ಚುವರಿ ಹಣ ಮೀಸಲಿರಿಸಬೇಕು,ವ್ಯವಸ್ಥಿಯತವಾಗಿ ಗ್ರಂಥಾಲಯ ನಿರ್ಮಿಸಿ,ಆಟೋ ಸ್ಟ್ಯಾಂಡ್ ಹಾಗೂ ಮಡಹಳ್ಳಿ ರಸ್ತೆಯ ಮಳಿಗೆಗಳಲ್ಲಿ ಸೂಕ್ತ ಫುಟ್ ಫಾತ್ ಮಾಡುವ ಜೊತೆಗೆ ಪಟ್ಟಣ ಸುಂದರವಾಗಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಪುರಸಭೆ ಸದಸ್ಯ ಎನ್.ಕುಮಾರ್ ಮಾತನಾಡಿ, ಪುರಸಭೆಯ ಬಜೆಟ್ ಆಶಾದಾಯಕವಾಗಿದ್ದು, ದೂರದೃಷ್ಟಿಯಿಂದ ಕೂಡಿದೆ ಜೊತೆಗೆ ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿದೆ.ಕಳೆದ ಬಜೆಟ್ ನಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕೆ ಮನವಿ ಮಾಡಿದ ಹಿನ್ನೆಲೆ ಈ ಬಾರಿ ಅದಕ್ಕೆ ಅನುದಾನ ಮೀಸಲಿರಿಸಿರುವುದು ಜೊತೆಗೆ ಸ್ಮಶಾನ ಅಭಿವೃದ್ಧಿಗೆ ಹಣ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಪುರಸಭೆ ಸದಸ್ಯ ರಾಜಗೋಪಾಲ್ ಮಾತನಾಡಿ, 2024-25ನೇ ಸಾಲಿನ ಬಜೆಟ್ ಈ ಹಿಂದಿನಂತೆ ಪತ್ರಕರ್ತರಿಗೆ 10 ಲಕ್ಷ ಅನುದಾನ ಮೀಸಲಿರಿಸಬೇಕು. ಜೊತೆಗೆ ಪುರಸಭೆಯಿಂದ ನಿವೇಶನ ನೀಡಬೇಕೆಂದು ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಮಾತನಾಡಿ,ಶಾಸಕರು ಹಾಗೂ ಪುರಸಬೆ ಸದಸ್ಯರ ಸಂಪೂರ್ಣ ಸಹಕಾರದಿಂದ ವ್ಯವಸ್ಥಿತವಾಗಿ ಬಜೆಟ್ ಮಂಡಿಸಲಾಗಿದೆ.ಸಿಬ್ಬಂದಿ ವರ್ಗದವರು ಒತ್ತಡದ ನಡುವೆಯೂ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂದೆಯೂ ಸಹ ನೀರು,ಸ್ವಚ್ಛತೆ,ಬೀದಿ ದೀಪ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಪಟ್ಟಣದ ನಿವಾಸಿಗಳಿಗೆ ಸಮರ್ಪಕವಾಗಿ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಹಾಗೂ ಉಪಾಧ್ಯಕ್ಷ ದೀಪಿಕಾ ಅಶ್ವಿನ್,ಮಧುಸೂಧನ್,ಶಶಿಧರ್ ಪಿ.ದೀಪು,ಮಹಮ್ಮದ್ ಇಲಿಯಾಸ್,ನಾಗೇಶ್, ರಂಗಸ್ವಾಮಿ,ಶ್ರೀನಿವಾಸ್ ಕಣ್ಣಪ್ಪ,ಎಸ್.ಕುಮಾರ್, ಮಹದೇವಮ್ಮ,ನಿರ್ಮಲ,ಸಾಜಿದಾ ಬೇಗಂ,ಹೀನಾ ಕೌಸರ್,ವೀಣಾ ಮಂಜುನಾಥ್,ಅನ್ನಪೂರ್ಣ,ಆರೋಗ್ಯಾಧಿಕಾರಿ ಗೋಪಿ,ಪರಮೇಶ್ವರಪ್ಪ,ಕಂದಾಯ ಅಧಿಕಾರಿ ಸವಿತಾ, ಪರಿಸರ ಅಧಿಕಾರಿ ಮಹೇಶ್,ಚಿತ್ರ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ-ಗುಂಡ್ಲುಪೇಟೆ ಎಸ್.ಕುಮಾರ್