ಹನೂರು:ಚರಂಡಿ ತುಂಬಾ ಹೂಳು ತುಂಬಿಕೊಂಡು ಗಬ್ಬೆದ್ದು ದುರ್ವಾಸನೆ ಬೀರುವುದರ ಜೊತೆಗೆ ಸೊಳ್ಳೆ ಕ್ರಿಮಿಕೀಟಗಳ ವಾಸಸ್ಥಾನವಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಇಲ್ಲಿನ ನಿವಾಸಿಗಳು ವಾಸಿಸುವಂತಹ ಪರಿಸ್ಥಿತಿಯಾಗಿದ್ದು ಇದು ಗ್ರಾಮ ಪಂಚಾಯತ್ ಆಡಳಿತ ವ್ಯವಸ್ಥೆಯ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.
ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯತ್ ಗ್ರಾಮದ ರಸ್ತೆಯ 4ನೇ ವಾರ್ಡ್ ನ ಮನೆಗಳ ಮುಂದೆ ಮುಖ್ಯ ರಸ್ತೆಯಲ್ಲಿರುವ ಚರಂಡಿಗಳು ಸಂಪೂರ್ಣವಾಗಿ ಹೂಳು ತುಂಬಿಕೊಂಡು ಪ್ಲಾಸ್ಟಿಕ್ ತ್ಯಾಜ್ಯ ಕಸ ಕಟ್ಟಿಗಳಿಂದ ತುಂಬಿ ಕೊಳೆತು ಗಬ್ಬುನಾರುತ್ತಿದ್ದು ಗಿಡಗಳು ಬೆಳೆದು ನಿಂತಿದೆ.
ಚರಂಡಿಗಳಲ್ಲಿ ಸಂಪೂರ್ಣವಾಗಿ ಹೂಳು ತುಂಬಿಕೊಂಡಿರುವ ಪರಿಣಾಮ ಪ್ಲಾಸ್ಟಿಕ್ ತ್ಯಾಜ್ಯ ಕಸಕಡ್ಡಿಗಳು ಅಲ್ಲಿ ಕೊಳೆತು ಗಬ್ಬು ನಾರುವುದರ ಜೊತೆಗೆ ಸೊಳ್ಳೆ ಕ್ರಿಮಿ ಕೀಟಗಳು ಹೆಚ್ಚಾಗಿದೆ.ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೂ ವಾಸಿಸಲು ಕಿರಿಕಿರಿಯಾಗಿದ್ದು ಸಂಜೆಯಾಗುತ್ತಿದ್ದಂತೆ ಸೊಳ್ಳೆ ಕೀಟಗಳ ಕಾಟ ಹೆಚ್ಚಾಗತೊಡಗಿದೆ.
ಮನೆಯ ಮುಂದೆ ಗಬ್ಬೆದ್ದು ನಾರುತ್ತಿರುವ ಚರಂಡಿಯ ದುರ್ವಾಸನೆಗೆ ಮೂಗು ಮುಚ್ಚಿಕೊಂಡು ಸಂಜೆಯಾಗುತ್ತಿದ್ದಂತೆ ಸೊಳ್ಳೆ ಕ್ರಿಮಿ ಕೀಟಗಳ ಕಾಟದಿಂದ ದಿನಕಳೆಯುವ ಪರಿಸ್ಥಿತಿಯ ಜೊತೆಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳು ಹೆಚ್ಚಾಗಿದ್ದು ಇಂತಹ ಅನೈರ್ಮಲ್ಯ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ ಇಲ್ಲಿನ ಜನರ ಪರಿಸ್ಥಿತಿ.
ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಗ್ರಾಮ ಪಂಚಾಯತ್ ಪಿ.ಡಿ.ಒ ಆಡಳಿತ ವ್ಯವಸ್ಥೆಯು ಕಂಡೂ ಕಾಣದಂತೆ ಜಾಣ ಕುರುಡತನ ಮೆರೆಯುತ್ತಿರುವುದಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ.
ಈ ಬಗ್ಗೆ ಗ್ರಾಮ ಪಂ.ಅಧಿಕಾರಿಗಳ ಗಮನಕ್ಕೆ ತಿಳಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪ ಮಾಡಿದ್ದಾರೆ.ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಹೂಳು ತುಂಬಿಕೊಂಡು ಗಬ್ಬೆದ್ದು ಹೋಗಿರುವ ಚರಂಡಿ ಹೂಳು ತೆಗೆಸಿ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕಾಗಿದೆ.
ವರದಿ:ಉಸ್ಮಾನ್ ಖಾನ್