ಕಲಬುರಗಿ:ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ದೆಹಲಿಯಲ್ಲಿ ಅಧಿಕಾರಕ್ಕೆ ಬರುವಂತೆ ಆಶೀರ್ವದಿಸಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಮನವಿ ಮಾಡಿದರು.
ಚಿತ್ತಾಪುರ ತಾಲೂಕನ ಕರದಾಳ ಗ್ರಾಮದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭವಿಷ್ಯದ ನಾಯಕಎಂದು ಸಂಭೋದಿಸಿ ಪರಮೇಶ್ವರ ಮಾತು ಪ್ರಾರಂಭಿಸಿದ್ದು ವಿಶೇಷವೆನಿಸಿತು.
ಬಿಜೆಪಿ ಪಕ್ಷ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡಿಕೊಂಡು ಮತ ಕೇಳುತ್ತಿದೆ ಎಂದು ಆರೋಪಿಸಿದ ಗೃಹ ಸಚಿವರು,ಹಿಂದೂ ಧರ್ಮದ ಹೆಸರಿನಲ್ಲಿ ಮಾಡಬಾರದ ಕೆಲಸಗಳನ್ನೆಲ್ಲ ಮಾಡುತ್ತಿದ್ದಾರೆ.ನಾವು ಯಾರು ಹಿಂದೂಗಳು ಅಲ್ಲವೇ? ನಾವು ರಾಮನ ಭಕ್ತರಲ್ಲವೇ? ದೇವಾಲಯಕ್ಕೆ ಹೋಗುವುದಿಲ್ಲವೇ? ಧರ್ಮದ ಆಧಾರದ ಮೇಲೆ ಚುನಾವಣೆಗೆ ಬಂದವರಿಗೆ ಮತ ಹಾಕಬೇಡಿ ಎಂದು ಪರಮೇಶ್ವರ ಹೇಳಿದರು.
ಯುವಕರಿಗೆ ಉದ್ಯೋಗ ಕೊಡಲು ವಿಫಲರಾಗಿರುವ ಪ್ರಧಾನಿ ನರೇಂದ್ರ ಮೋದಿ ಪಕೋಡಾ ಮಾರಲು ಹೇಳಿದ್ದಾರೆ ರಾಜ್ಯದಲ್ಲಿ ಭೀಕರ ಬರಗಾಲವಿದ್ದು 18,171 ಕೋಟಿ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಸಚಿವರಾದ ಕೃಷ್ಣ ಭೈರಗೌಡ ಹಾಗೂ ಪ್ರಿಯಾಂಕ್ ಖರ್ಗೆ ಕೊನೆಗೆ ಸಿಎಂ ಹೋಗಿ ಬಂದರು ಆಗಲೂ ಪ್ರಯೋಜನವಾಗಲಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಕೇಂದ್ರದ ವಿರುದ್ದ ಸುಪ್ರಿಂ ಕೋರ್ಟ್ ಗೆ ಹೋಗಬೇಕಾಯಿತು.ಬರ ಪರಿಹಾರ ಬಿಡುಗಡೆ ಆಗ್ರಹಿಸಿ ರಾಜ್ಯ ಸರ್ಕಾರ ಕೇಂದ್ರದ ವಿರುದ್ದ ಕೇಸು ಹಾಕಿದ್ದು ಬಹುಶಃ ಇದೇ ಮೊದಲು.ಯಾವಾಗ ಕೋರ್ಟ್ ಛೀಮಾರಿ ಹಾಕಿತೋ ಆಗ 3474 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರ ಮನಸಿನಾಳದ ಮಾತುಗಳನ್ನು ನೀವೆಲ್ಲ ಕೇಳಿದ್ದೀರಿ.ಅವರು ಮಾತು ಕೇಳಿದಾಗ ನಮಗೆ ಕಣ್ಣಲ್ಲಿ ನೀರು ಬಂತು.ಕಳೆದ ಸಲ ಅವರನ್ನ ಸೋಲಿಸಿದ್ದೀರಿ.ಈ ಸಲ ಅವರಿಗೆ ಆಶೀರ್ವಾದ ಮಾಡಿ.ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಕಾಂಗ್ರೆಸ್ ಗೆಲ್ಲುವುದು ಕೂಡಾ ಅಷ್ಟೇ ಸತ್ಯ ಎಂದು ಪರಮೇಶ್ವರ ಹೇಳಿದರು.
ಚುನಾವಣೆ ನಂತರ ಐದು ಗ್ಯಾರಂಟಿಗಳನ್ನು ನಿಲ್ಲಿಸಿಬಿಡುತ್ತಾರೆ ಎಂದು ಬಿಜೆಪಿಯವರು ಸುಳ್ಳು ಹಬ್ಬಿಸುತ್ತಿದ್ದಾರೆ ಅವರ ಮಾತುಗಳನ್ನು ನಂಬಬೇಡಿ. ಯಾವುದೇ ಕಾರಣಕ್ಕೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಜನರು ಆರ್ಥಿಕ ಸಮಾನತೆ ಸಾಧಿಸುವುದು,ಮಹಿಳೆಯರು ಮುಖ್ಯವಾಹಿನಿಗೆ ಬರುವುದು ಬಿಜೆಪಿಯವರಿಗೆ ಬೇಕಿಲ್ಲ.ಹಾಗಾಗಿ,ಆರ್ಥಿಕ ಸಬಲೀಕರಣ ಸಾಧಿಸಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತ ಕಾಂಗ್ರೆಸ್ ಸರ್ಕಾರದ ಐದು ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ ಎಂದು ಟೀಕಿಸಿದರು.
ಕಳೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸೋಲು ಅನುಭವಿಸಿದ್ದರಿಂದ ಅಭಿವೃದ್ದಿಯಲ್ಲಿ ಕುಂಠಿತ ಕಂಡಿದ್ದು ಈ ಭಾಗ ದಶಕಗಳ ಕಾಲ ಹಿಂದೆ ಬಿದ್ದಿದೆ ಸಂಸದ ಉಮೇಶ ಜಾಧವ ಅಭಿವೃದ್ದಿ ಮಾಡುವಲ್ಲಿ ವಿಫಲರಾಗಿದ್ದರಿಂದ ಅವರ ವಿರುದ್ದ ಗೋ ಬ್ಯಾಕ್ ಅಭಿಯಾನ ಪ್ರಾರಂಭವಾಗಿದೆ. ಸಾರ್ವಜನಿಕರು ಕೇಳುವ ಅಭಿವೃದ್ದಿಯ ಲೆಕ್ಕ ಕೊಡಲು ಅವರು ವಿಫಲರಾಗಿದ್ದಾರೆ ಎಂದರು.
“ಉಮೇಶ ಜಾಧವನ ಒಂದೇ ಒಂದು ಸಾಧನೆ ಎಂದರೆ ಅದು ವಂದೇ ಭಾರತ್ ಟ್ರೇನ್ ಓಡಿಸಿರುವುದು.ವಂದೇ ಭಾರತ್ ಟ್ರೇನ್ ಓಡಿದ್ದು ಒಂದೇ ವಾರ ಮಾತ್ರ.ಈಗ ಮತ್ತೆ ಪ್ರಾರಂಭ ಮಾಡಿದ್ದಾರಂತೆ.ಈ ಜಾಧವ ಮೊದಲು ನಮ್ಮಲ್ಲೆ ಇದ್ದವರು ಓದಿದ್ದು,ಉದ್ಯೋಗ ಗಿಟ್ಟಿಸಿಕೊಂಡಿದ್ದು,ರಾಜಕೀಯ ನೆಲೆ ಕಂಡುಕೊಂಡಿದ್ದು, ಟಿಕೇಟ್ ಪಡೆದು ಗೆದ್ದಿದ್ದು ಕೂಡಾ ನಮ್ಮ ಕಾಂಗ್ರೆಸ್ ನಿಂದಲೇ.ಆದರೆ ಕಾಂಗ್ರೆಸ್ ಏನು ಮಾಡಿದ್ದು ಅಂತಾನೆ. ಇದು ಉಂಡ ತಟ್ಟೆಯಲ್ಲೇ ಹೊಲಸು ಮಾಡಿದಂತೆ” ಎಂದು ಖರ್ಗೆ ವ್ಯಂಗ್ಯವಾಡಿದರು.
ಗ್ಯಾರಂಟಿ ಯೋಜನೆಗಳ ಲಾಭ ಜಾಸ್ತಿ ಹೋಗುತ್ತಿರುವುದೇ ಮಹಿಳೆಯರಿಗಾಗಿ ಯಾಕೆಂದರೆ ನಮಗೆ ಮಹಿಳೆಯರ ಮೇಲೆ ಜಾಸ್ತಿ ವಿಶ್ವಾಸವಿದೆ, ಭರವಸೆ ಇದೆ. ಪುರುಷರಿಗೆ ಹಣ ಕೊಟ್ಟರೆ ವ್ಯರ್ಥ ಖರ್ಚು ಮಾಡುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.
ಆನೇಕಲ್ ಶಾಸಕ ಶಿವಣ್ಣ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ಸಾಲಿ,ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಮೂದ ಸಾಹೇಬ,ಕೆಪಿಸಿಸಿ ಸದಸ್ಯರು ನಾಗರೆಡ್ಡಿ ಪಾಟೀಲ,ಶಿವಾನಂದ ಪಾಟೀಲ,ರಮೇಶ ಮರಗೋಳ,ಅಲ್ಪಸಂಖ್ಯಾತ ಅಧ್ಯಕ್ಷರು ಮುಕ್ತಾರ್ ಪಟೇಲ್,ಶಿವರುದ್ದ ಬೇಣಿ ಪುರಸಭೆ ಸದಸ್ಯರು ಮಲ್ಲಿಕಾರ್ಜುನ ಕಳಗಿ,ಶರಣು ಡೋಣಗಾಂವ ಪುರಸಭೆ ಮಾಜಿ ಸದಸ್ಯರು ಜಫರ್ ರೂಲ್ ಹಸ್ಸನ್ ಮಾಜಿಪುರ ಸಭೆ ಅಧ್ಯಕ್ಷರು ಈರಪ್ಪ ಭೋವಿ ಸೇರಿದಂತೆ ಹಲವರಿದ್ದರು.
ವದರಿ ಮೊಹಮ್ಮದ್ ಅಲಿ ಚಿತ್ತಾಪುರ