ಬೆಂಗಳೂರು:ಆತ್ಮವಿಶ್ವಾಸವೇ ಮೈತಳೆದಂತೆ ಧೀಮಂತ ಹೆಜ್ಜೆಗಳಲ್ಲಿ ರಂಗವನ್ನು ಪ್ರವೇಶಿಸಿದ ನೃತ್ಯ ಕಲಾವಿದೆ ಭಾನುಪ್ರಿಯ ರಾಕೇಶ್ ‘ಮಾರ್ಗಂ’ ಸಂಪ್ರದಾಯದ ಕೃತಿಗಳ ಅರ್ಪಣೆಯಲ್ಲಿ ಹಸನ್ಮುಖದಿಂದ-ಅಂಗಶುದ್ಧ ನರ್ತನಕ್ಕೆ ತೊಡಗಿದ್ದು ಶುಭಾರಂಭಕ್ಕೆ ಮೆರುಗು ನೀಡಿತ್ತು.ಕಲಾವಿದೆಯ ನಿರಾಡಂಬರ ವೇಷಭೂಷಣ, ಸರಳವಾದ ರಂಗಮಂಚ ಆ ದಿನದ ನೃತ್ಯ ಕಾರ್ಯಕ್ರಮದ ವೈಶಿಷ್ಟ್ಯವಾಗಿ ಗಮನ ಸೆಳೆಯಿತು. ಕೆಲವೊಮ್ಮೆ ನೃತ್ಯವನ್ನು ಮರೆಸುವಷ್ಟು ಆಹಾರ್ಯ-ಅಲಂಕಾರ,ಹಿನ್ನಲೆಯ ರಂಗಸಜ್ಜಿಕೆಗಳ ಆಡಂಬರವೇಕೋ ಅನಗತ್ಯವೆನಿಸುತ್ತದೆ.ಗುರು ಇಂದಿರಾ ಕಡಾಂಬಿಯವರ ಬಳಿ ನುರಿತ ಅಭಿನಯದ ಪಟ್ಟುಗಳನ್ನು,ನೃತ್ತಗಳ ಹದವನ್ನು ಅತ್ಯಂತ ಪರಿಶ್ರಮದ ಅಭ್ಯಾಸದಿಂದ ಕಲಾವಿದೆ ರೂಢಿಸಿಕೊಂಡ ಚಹರೆಗಳು ಸುವ್ಯಕ್ತವಾಗುತ್ತಿದ್ದವು.
ಇತ್ತೀಚೆಗೆ ಜೆ.ಎಸ್.ಎಸ್.ಸಭಾಂಗಣದಲ್ಲಿ ಭಾನುಪ್ರಿಯ ‘ಮಾರ್ಗಂ’ ಅನುಕ್ರಮಣಿಕೆಯಲ್ಲಿ ತಾನು ಕಲಿತ ನೃತ್ಯಾವಳಿಗಳನ್ನು ಲವಲವಿಕೆಯಿಂದ ಅರ್ಪಿಸಿದಳು.ಸಾಂಪ್ರದಾಯಕ ‘ಗಣೇಶ ಕೌತ್ವಂ’-ನಿಂದ ಆರಂಭಗೊಂಡ ಪ್ರಸ್ತುತಿ ಪ್ರಥಮವಂದಿತ ಗಣಪನ ವಿಶೇಷತೆಯನ್ನು ಆತನ ವಿಶಿಷ್ಟ ಭಂಗಿಗಳನ್ನು ಸುಪ್ರಸನ್ನವಾಗಿ ಅಭಿವ್ಯಕ್ತಗೊಳಿಸಿ,ಕರಾರುವಕ್ಕಾದ ಹಸ್ತಮುದ್ರೆಗಳಲ್ಲಿ ತಿಶ್ರ ‘ಅಲರಿಪು’ ವಿನ ಆಂಗಿಕಾಭಿನಯವನ್ನು ಮುದವಾಗಿ ನಿರೂಪಿಸಿದಳು. ಆಕೆಯ ಖಚಿತ ಅಡವುಗಳು,ಹರಿತ ನೃತ್ತಗಳು ಆಪ್ತವೆನಿಸಿದವು.
ಅನಂತರ- ‘ಮಾರ್ಗ’ದ ಪ್ರಮುಖಭಾಗ ‘ವರ್ಣ’- ಕಲಾವಿದರ ಪ್ರತಿಭೆ-ಸಾಮರ್ಥ್ಯ ಮತ್ತು ಪರಿಶ್ರಮಗಳಿಗೆ ಸವಾಲು ಒಡ್ಡುವ ದೀರ್ಘಬಂಧವಾಗಿದ್ದು, ತಾಳ-ಲಯಜ್ಞಾನಗಳನ್ನು ನಿಕಷಕ್ಕೊಡ್ಡುವ ಸಂಕೀರ್ಣ ನೃತ್ತಗಳನ್ನು ಒಳಗೊಂಡಿರುತ್ತದೆ ಹೀಗಾಗಿ ಕಲಾವಿದರ ಅಭಿನಯ ಮತ್ತು ಜತಿಗಳ ನಿರ್ವಹಣೆ ಎರಡೂ ಇಲ್ಲಿ ಸಮವಾಯಿಯಾಗಿ ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತವೆ.ಈ ಪರೀಕ್ಷೆಯಲ್ಲಿ ಭಾನುಪ್ರಿಯ ತನ್ನ ಭಾವಪೂರ್ಣ ಅಭಿನಯ ಮತ್ತು ಲವಲವಿಕೆಯ ವಿಶಿಷ್ಟ ನೃತ್ತಗಳಿಗೆ ಮೆಚ್ಚುಗೆಯನ್ನು ಪಡೆದಳು.
ತಂಜಾವೂರು ಸಹೋದರರು ರಚಿಸಿದ ಜನಪ್ರಿಯ ಪದವರ್ಣ,(ಆದಿತಾಳ-ತೋಡಿ ರಾಗ)
‘ಮೋಹ ಲಹಿರಿ ಕೊಂಡೇನ್ ಸ್ವಾಮಿ…’-ಎಂಬುದಾಗಿ ನಾಯಿಕಾ ಮನ್ನಾರ್ ಗುಡಿಯ ರಾಜಗೋಪಾಲ ಸ್ವಾಮಿಯಲ್ಲಿ ತನ್ನ ಹೃದಯದಾಳದ ಪ್ರೀತಿ-ಭಕ್ತಿಯನ್ನು ಭಾವುಕವಾಗಿ ತೋಡಿಕೊಳ್ಳುವ ಹೃದಯಂಗಮ ಕೃತಿ. ತಂಜಾವೂರು ರಾಜಾಸ್ಥಾನದ ನರ್ತಕಿ ಭಾವತುಂಬಿ ಮೈಮರೆತು ನರ್ತಿಸುವ ಸನ್ನಿವೇಶವನ್ನು ಕಲಾವಿದೆ ಭಾನುಪ್ರಿಯ ಪಾತ್ರದ ಪರಕಾಯ ಪ್ರವೇಶ ಮಾಡಿ ನೋಡುಗರ ಕಣ್ಮುಂದೆ ತಂದು ನೆಲೆಸಿದಳು.
ಸ್ವಾಮಿಯನ್ನು ಅದಮ್ಯವಾಗಿ ಹೃದಯದುಂಬಿ ಆರಾಧಿಸುವ ನಾಯಕಿ ಆತನ ಸಾನಿಧ್ಯಕ್ಕಾಗಿ,ಪ್ರೀತಿಯ ಕೃಪೆಗಾಗಿ ಹಂಬಲಿಸುತ್ತಿದ್ದಾಳೆ.ಆತನ ವಿಶೇಷ ಮಹಿಮೆ-ಗುಣಾವಳಿಗಳನ್ನು ಬಣ್ಣಿಸುತ್ತಾ ಸ್ತುತಿಸುವ ಆಕೆ,ಮದನನ ಬಾಣಗಳು ತನ್ನ ಮೈ ತುಂಬಾ ವಿರಹದ ವ್ಯಥೆ-ತಲ್ಲಣಗಳನ್ನು ಹರಡಿ ಇರಿಯುತ್ತಿವೆ ಎಂಬ ವಿಪ್ರಲಂಭ ಶೃಂಗಾರದ ಭಾವನೆಗಳನ್ನುಕಲಾವಿದೆ, ಭಾವಾತ್ಮಳಾಗಿ ತನ್ನೆದೆಯ ತೀವ್ರ ತಾಕಲಾಟಗಳನ್ನು ತನ್ನ ಪರಿಪಕ್ವ ಅಭಿನಯದಿಂದ ನೋಡುಗರ ಮನಮುಟ್ಟಿದಳು ತನ್ನೊಡಲ ಸಂಕಟವನ್ನು ಪೂರಕ ನೃತ್ತಗಳು-ಆಂಗಿಕಾಭಿನಯದಿಂದ ಅಭಿವ್ಯಕ್ತಗೊಳಿಸಿದಳು.ರಂಗವನ್ನು ಪೂರ್ಣ ಬಳಸಿಕೊಂಡವಳು ಅರೆಮಂಡಿ,ಮಂಡಿ ಅಡವುಗಳು, ಮನಮೋಹಕ ಕರಣಗಳು,ಆಕಾಶಚಾರಿ,ಪರಿಪೂರ್ಣ ಭಂಗಿಗಳ ಸಾತ್ವಿಕ ಸ್ಫುರಣೆಯಿಂದ ಪಾತ್ರದಲ್ಲಿ ಒಂದಾದಳು.ಸ್ವಾಮಿಯ ವಿವಿಧ ಸೇವೆಗಳಲ್ಲಿ ಧನ್ಯತೆ ಪಡೆಯುತ್ತಾ,ಕಣ್ಣು-ಹುಬ್ಬುಗಳ ಸನ್ನೆಯಲ್ಲಿಯೇ, ಆಂಗಿಕ ಚಲನೆಯಲ್ಲಿ ತನ್ನ ಇಂಗಿತವನ್ನು ಅರುಹುವಳು.ಲಜ್ಜೆ-ಶೃಂಗಾರ-ಮುನಿಸುಗಳ ಸಮ್ಮಿಶ್ರಭಾವಗಳ ಆವಾಹನೆಯಲ್ಲಿ ಆಕೆ ಪುಳಕಗೊಳ್ಳುವ ದೃಶ್ಯ ಮುದನೀಡಿತು.ಸ್ವಾಮಿಯ ಆಗಮನಕ್ಕಾಗಿ ತೋರುವ ಉತ್ಸಾಹದ ಸಿದ್ಧತೆ- ಉಯ್ಯಾಲೆ,ಗಿರಗಿಟ್ಟಲೆ,ಕೋಲಾಟದ ವಿವಿಧ ಕೇಳಿಗಳ ಸಂಭ್ರಮ,ನರ್ತಕಿಯ ಮುಖದ ಸ್ನಾಯುಗಳಲ್ಲಿ ಒಡಮೂಡುವ ಸಂತಸದ ಕಂಪನ,ಭಾವನಿಮಗ್ನತೆ ದೃಗ್ಗೋಚರವಾಗಿತ್ತು.ಧ್ಯಾನಸ್ಥ ಸ್ಥಿತಿಯ ಆಕೆಯ ನಿವೇದನೆ-ಅನುಸಂಧಾನದ ಭಾವ-ಭಂಗಿಗಳು ನೆನಪಿನಲ್ಲಿ ಉಳಿಯುವಂತಿದ್ದವು.ಕಲಾವಿದೆಯ ಹೆಜ್ಜೆಗಳಿಗೆ ಇಂಬಾಗಿ,ನೃತ್ಯಗುರು ಇಂದಿರಾ ಕಡಾಂಬಿ ಮತ್ತು ಸಂಧ್ಯಾ ಉಡುಪರ ನಟುವಾಂಗ ಹದವಾಗಿತ್ತು.
ಮುಂದೆ- ಲೋಕಧರ್ಮೀಯವಾದ ‘ಜಾವಳಿ’ಯನ್ನು ಕಲಾವಿದೆ ಅಷ್ಟೇ ಸೊಗಸಾದ ಅಭಿನಯದಿಂದ ಕಟ್ಟಿಕೊಟ್ಟಳು. ‘ಸ್ಮರ ಸುಂದರಾಗುನಿಕಿ ಸರಿ ಎವರೇ?’ – ಎಂದು ಪರಸ್ತ್ರೀಯರನ್ನು ಕಣ್ಣೆತ್ತಿ ನೋಡದ ತನ್ನ ಗಂಡನ ಬಗ್ಗೆ ಆತ್ಮವಿಶ್ವಾಸದಿಂದ ಹೆಮ್ಮೆಯ ಭಾವ ತಳೆದ ಸ್ವಾಧೀನಪತ್ತಿಕಾ ನಾಯಿಕ ಸುಮ್ಮಾನದಿಂದ ಸಖಿಯಲ್ಲಿ ಜಂಭದಿಂದ ಹೇಳಿಕೊಳ್ಳುವ ಭಾವ ಸಮರ್ಥವಾಗಿ ಮೂಡಿಬಂತು. ಶ್ರೀ ರಾಘವೇಂದ್ರ ಸ್ವಾಮಿಗಳ ರಚನೆ ’ಇಂದು ಎನಗೆ ಗೋವಿಂದ…’ ಶ್ರೀಕೃಷ್ಣನ ಸಾಹಸ-ವ್ಯಕ್ತಿತ್ವಗಳ ದೈವೀಕ ಚಿತ್ರಣ ಭಕ್ತಿಸಾಂದ್ರತೆಯಿಂದ ಹೊರಹೊಮ್ಮಿತು. ಷಣ್ಮುಖ ಸ್ತುತಿಯ ದಿವ್ಯವಾದ ‘ತಿಲ್ಲಾನ’ -ಅಚ್ಚುಕಟ್ಟಾದ ಜತಿಗಳ ಲೀಲೆಯನ್ನು ಪಸರಿಸುತ್ತ ಮಂಗಳಕರವಾಗಿ ಸಂಪನ್ನಗೊಂಡಿತು.
ಲೇಖಕರು:ವೈ.ಕೆ.ಸಂಧ್ಯಾ ಶರ್ಮ,ಬೆಂಗಳೂರು.