ಮಂಗಳೂರು:ಪ್ರಾಚೀನ ಕಾಲದಿಂದಲೂ ಹರಿಕಥೆ ಹಾಗೂ ಯಕ್ಷಗಾನ ಕಲೆಗಳು ಜನಸಾಮಾನ್ಯರಿಗೂ ಆಧ್ಯಾತ್ಮ ವಿಚಾರ ಹಾಗೂ ಪುರಾಣ ಕಥೆಗಳ ತಿಳುವಳಿಕೆ ಹುಟ್ಟಿಸುವ ವಿಶಿಷ್ಟ ಕಲೆಯಾಗಿವೆ ಎಂದು ಉರ್ವ ಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ ಅಭಿಪ್ರಾಯಪಟ್ಟರು.
ಹರಿಕಥಾ ಪರಿಷತ್ ಮಂಗಳೂರು ಇದರ 14ನೇ ವಾರ್ಷಿಕೋತ್ಸವದಲ್ಲಿ ದೀಪ ಪ್ರಜ್ವಲನೆಗೈದು ಅವರು ಮಾತನಾಡಿದರು.
ಶುಭಾಶಂಸನೆಗೈದ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಮಾತನಾಡಿ, ಹರಿಕಥಾ ಕಲೆಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಪರಿಷತ್ತಿನ ಕಾರ್ಯ ಶ್ಲಾಘನೀಯ,ಇಂತಹ ಚಟುವಟಿಕೆಗಳಿಗೆ ಸರಕಾರದಿಂದ ಮತ್ತಷ್ಟು ಪ್ರೋತ್ಸಾಹ ಸಿಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಅವರು ಮಾತನಾಡಿ ಈ ಕಲೆಯ ಮೇಲೆ ಮಕ್ಕಳು ಆಸಕ್ತಿ ವಹಿಸುವ ನಿಟ್ಟಿನಲ್ಲಿ ಹೆತ್ತವರು ಪ್ರೇರೇಪಿಸಬೇಕು.ಈ ವರೆಗೆ ಪರಿಷತ್ತಿನ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದ ಎಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ಅವರು ಅಭಿವಂದಿಸಿದರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ,ರೋಟರಿ ಸಹಾಯಕ ಗವರ್ನರ್ ವಿಶ್ವನಾಥ್ ಶೆಟ್ಟಿ ತೀರ್ಥಹಳ್ಳಿ ಉದ್ಯಮಿ ಕೆ.ದಾಮೋದರ ರೈ,ಎಸ್.ಕೆ.ಜಿ. ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಜನರಲ್ ಮ್ಯಾನೇಜರ್ ಯಕ್ಷೇಶ್ವರ ಆಚಾರ್ಯ ಕೃಷ್ಣಾಪುರ,ಉದ್ಯಮಿ ಶೈಲೇಂದ್ರ,ಸ್ವರ್ಣ ಮಂಗಳೂರು ಭಾಗವಹಿಸಿ ಶುಭ ಕೋರಿದರು.
ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ದೇವಸ್ಥಾನದ ಕಾರ್ಯದರ್ಶಿ ಶ್ರೀಧರ ಮಣಿಯಾಣಿ,ಹರಿಕಥಾ ಪರಿಷತ್ ಉಪಾಧ್ಯಕ್ಷ ನಾರಾಯಣ್ ರಾವ್,ಶ್ರೀನಿವಾಸ್ ಭಟ್ ಕಣ್ವತೀರ್ಥ ಉಪಸ್ಥಿತರಿದ್ದರು.
ಹಿರಿಯ ಹರಿದಾಸ ಪ್ರವಚನಕಾರ ಯಜೇಶ್ ಹೊಸಬೆಟ್ಟು ಕಲಾಪೋಷಕ ರಘುರಾಮ್ ಭಟ್ ಕಣ್ವತೀರ್ಥ,ಹಾರ್ಮೋನಿಯಂ ಕೀಬೋರ್ಡ್ ವಾದಕ ಸತೀಶ್ ಸುರತ್ಕಲ್ ಅವರನ್ನು ಸಮ್ಮಾನಿಸಲಾಯಿತು. ಹರಿಕಥಾ ಪರಿಷತ್ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಸಂಚಾಲಕ ಸುಧಾಕರ ರಾವ್ ಪೇಜಾವರ್ ನಿರೂಪಿಸಿದರು.ಖಜಾಂಚಿ ಡಾ.ಎಸ್.ಪಿ.ಗುರುದಾಸ್ ವಂದಿಸಿದರು.ಶ್ರದ್ಧಾ ಗುರುದಾಸ್ ಅವರಿಂದ ‘ಏಕಲವ್ಯ’,ಬಳಿಕ ಶರತ್ ಶೆಟ್ಟಿ ಪಡುಪಳ್ಳಿ ಅವರಿಂದ ‘ಭಕ್ತ ಕುಂಬಾರ’ ಹರಿಕಥೆ ಜರಗಿತು.ರಮೇಶ ಹೆಬ್ಬಾರ್ ಮತ್ತು ಮಂಗಲ್ ದಾಸ್ ‘ಗುಲ್ವಾಡಿ ಹಿನ್ನೆಲೆಯಲ್ಲಿ ಸಹಕರಿಸಿದರು.
ವರದಿ:ಕೊಡಕ್ಕಲ್ ಶಿವಪ್ರಸಾದ್
