ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಮಾಜಕ್ಕೆ ಅಕ್ಕನ ಕೊಡುಗೆ ಅಪಾರ

ಶರಣ ಲೋಕದ ಸರಳ ಚೇತನ ಸ್ವರೂಪಿ,ಕಲ್ಯಾಣ ನಾಡಿನ ಧೀಮಂತ ಹೆಮ್ಮೆಯ ಸುಪುತ್ರಿ,ಸಂಘಟನೆ, ಹೋರಾಟ,ಬರವಣಿಗೆ ಹಾಗೂ ಶರಣ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜದ ಹಾಗೂ ಬಸವ ತತ್ವ ಸೇವೆಯನ್ನು ಗೈಯುತ್ತಾ,ಕರುನಾಡಿನ ಪ್ರಸಿದ್ಧ ಪ್ರವಚನಕಾರರು ಎಂದೆ ಚಿರಪರಿಚಿತರಾದ ಅಕ್ಕ ಅನ್ನಪೂರ್ಣ ತಾಯಿ ಯವರು ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ರಾಜ್ಯದ ಜನತೆಗೆ ಬರಸಿಡಿಲು ಬಡಿದಂತಾಗಿದೆ.
ಎಮ್ಮವರಿಗೆ ಸಾವಿಲ್ಲ,ಎಮ್ಮವರು ಸಾವನರಿಯರು,
ಸಾವೆಂಬುದು ಸಯವಲ್ಲ
ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ
ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ
ಕೂಡಲ ಸಂಗಮದೇವರ ಶರಣ ಸೊಡ್ಡಳ ಬಾಚರಸರು
ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ,
ಉಪಮಿಸಬಲ್ಲವರ ಕಾಣೆನು
ಎನ್ನುವಂತೆ…ಸಾವು ಎಲ್ಲರಿಗೂ ನಿಶ್ಚಿತ.
ಆದರೂ ಸಹ ಮಾತು ಮತ್ತು ಮನಸ್ಸು ಬಾರವಾಗಿದೆ,
ಬಸವ ತತ್ವ,ಬಸವ ನಾಡು ಬಡವಾಗಿದೆ.

ಸಮಾಜಕ್ಕೆ ಅದೆಷ್ಟೋ ಕೊಡುಗೆಗಳು ನೀಡಿದ ಅಕ್ಕನವರು:

ಸಮಾ ಸಮಾಜದ ಕನಸು ಕಂಡವರು ಸರ್ವರಿಗೂ ಲೇಸನ್ನೇ ಬಯಸಿದ ಮೇಧಾವಿ ಅಕ್ಕ,ಸಮಾತವಾದದ ಸಹಕಾರ ಮೂರ್ತಿ,ಜಗತ್ತಿನ ಶ್ರೇಯಸ್ಸು ಬಯಸಿದ ವಿಶ್ವ ದಾರ್ಶನಿಕ,ಜನಸಾಮಾನ್ಯರ ಆರಾಧ್ಯ ಗುರು, ನೂಂದು-ಬೆಂದವರ ಕರುಣಾಮಯಿ ಅಣ್ಣ ಬಸವಣ್ಣನವರ ತತ್ವಗಳನ್ನು ಪ್ರವಚನದ ಮೂಲಕ ದೇಶ-ವಿದೇಶಗಳಲ್ಲಿ ಪಸರಿಸಿದ ಮಹಾನ್ ಮಾತೆಯರಲ್ಲಿ ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣ ತಾಯಿ ಕೂಡ ಒಬ್ಬರಾಗಿದವರು.
ಅವರ ಅಗಲಿಕೆಯ ನೋವು ನಾಡಿಗೆ ತುಂಬಲಾಗಲಾರದಂತ ನಷ್ಟ.

ಸಾಮಾನ್ಯ ಕುಟುಂಬದಿಂದ ಬಂದು ಇಷ್ಟೊಂದು ಅಪರೂಪದ ಅಗಾಧವಾದ ಸಾಧನಾ ಸೇವೆ ಮಾಡಿದ ಅಕ್ಕನ ಶ್ರೇಯಸ್ಸು ಜಗದಗಲ.
ಅಕ್ಕ ಅನ್ನಪೂರ್ಣ ತಾಯಿ ಯವರ
ಜೀವನದಲ್ಲಿ ಅನುಭವಿಸಿದ ಯಾತನೆ ಹೇಳತೀರದು. ಆರೋಗ್ಯದ ಸಮಸ್ಯೆಯ
ಮಧ್ಯೆಯೂ ಬಸವಾದಿ ಶರಣರ ಬಗೆ
ಅಪಾರವಾದ ಅಭಿಮಾನ ಇಟ್ಟುಕೊಂಡು ಬಸವ ತತ್ವ ನಾಡಿನ ಉದ್ದಕ್ಕೂ ಪಸರಿಸಿ,ಈ ನಾಡಿನ
ಸೇವೆ ಮಾಡಿದ ಅಕ್ಕ,ಕರುನಾಡಿನ ಹೆಮ್ಮೆಯ ಮಗಳಾಗಿದಳು.

ಜೀವನ-ಶಿಕ್ಷಣ -ಹವ್ಯಾಸ -ಕಾಯಕ:
ಕರ್ನಾಟಕ ರಾಜ್ಯದ ಬೀದರ ನಗರದ ಹಾರೂರಗೇರಿ ಕಾಲೋನಿಯ ಶರಣ ಬಂಡೆಪ್ಪ ಹಂಗರಗಿ ಮತ್ತು ಶರಣೆ ಸೂಗಮ್ಮ ದಂಪತಿಗಳ ಮಗಳಾಗಿ ದಿನಾಂಕ
01 ಜೂನ್‌ 1963ರಂದು ಜನಿಸಿದರು.ಕನ್ನಡ ಸ್ನಾತಕ್ಕೋತ್ತರ ಪದವಿ,ಕಾನೂನು ಪದವೀಧರರಾಗಿದ್ದು.
ಓದು,ಬರಹ,ಸಂಗೀತ,ಸಮಾಜಮುಖಿ ಕೆಲಸದಲ್ಲಿ ಹೆಚ್ಚು ಆಸಕ್ತಿ ಇವರದಾಗಿತ್ತು ಇನ್ನು
ಕನ್ನಡತ್ವ,ಬಸವ ತತ್ವದ ಏಳಿಗೆಗಾಗಿಯೇ ಸದಾ ದುಡಿಯುವ ಮನಸ್ಸು,ಸಾಹಿತ್ಯ,ಸಮಾಜೋಧಾರ್ಮಿಕ ಸೇವೆಗಳ ಮೂಲಕ ಜಾತಿ,ವರ್ಗ,ವರ್ಣ, ಲಿಂಗಭೇದಗಳಿಲ್ಲದ ಸಮಸಮಾಜ ಕಟ್ಟಲು ಅಹರ್ನಿಶಿಯಾಗಿ ಶ್ರಮಿಸಿರುತ್ತಾರೆ .

ಸಾಹಿತ್ಯ ಸೇವೆ-ಸಾಹಿತ್ಯ ಕೃಷಿ :
ಸಾಹಿತ್ಯ ಕ್ಷೇತ್ರ ಅಂದರೆ ಅಕ್ಕನವರಿಗೆ ಬಹಳ ಅಚ್ಚುಮೆಚ್ಚು,ಸಾಹಿತ್ಯದ ವಿವಿಧ ಬಗೆಯ ಅನೇಕ ವಿಚಾರ-ವಿಷಯಗಳ ಮೇಲೆ ಉಪನ್ಯಾಸ ನೀಡಿದ್ದಾರೆ. ಮಹಿಳಾ ಕಾರ್ಯಕ್ರಮಗಳ ವಿಶೇಷ
ಗೋಷ್ಠಿಗಳಲ್ಲಿ ಉಪನ್ಯಾಸ ಸಹ ನೀಡಿರುವುದು ಇಲ್ಲಿ ಸ್ಮರಣೆ ಮಾಡಿಕೊಳ್ಳುವುದು ಅವಶ್ಯವಾಗಿದೆ.ಇನ್ನು ಕನ್ನಡ ಸಾಹಿತ್ಯ ಪರಿಷತ್,ಶರಣ ಸಾಹಿತ್ಯ ಪರಿಷತ್ ಅಲ್ಲದೇ ಇನ್ನಿತರ ಸಾಹಿತ್ಯ ಸೇವಾ ಸಂಸ್ಥೆಗಳ ಶ್ರೇಯಸ್ಸಿಗಾಗಿ ಹಗಲಿರುಳು ದುಡಿದಿದ್ದಾರೆ. ಇವುಗಳಲ್ಲದೆ ಸುಮಾರು ಹಲವು ಸೇವಾ ಸಂಸ್ಥೆಗಳ ಆಜೀವ ಸದಸ್ಯತ್ವ ಪಡೆದುಕೊಂಡಿದ್ದರು.ವಿವಿಧ ಪತ್ರಿಕೆಗಳಲ್ಲಿ ಲೇಖನ ಬರೆಯುವುದರ ಮೂಲಕ ಸಾಹಿತ್ಯ ಸೇವೆಗೈಯುವ ಕೆಲಸವನ್ನು ನಿರಂತರವಾಗಿ ಮಾಡುತ್ತ ಬಂದಿದ್ದಾರೆ.ರಾಷ್ಟ್ರೀಯ,ರಾಜ್ಯ,ಜಿಲ್ಲಾ ತಾಲೂಕು,ಹೋಬಳಿ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ವಿಶೇಷ ಉಪನ್ಯಾಸ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ.ಅಲ್ಲದೆ ಇವರಿಗೆ ಒಪ್ಪಿಸಿರುವ ಎಲ್ಲಾ ಕೆಲಸಗಳನ್ನು ಅತ್ಯಂತ ಭಕ್ತಿ-ಭಾವ ಶ್ರದ್ದೆಯಿಂದ ಮಾಡಿ ಜನಸಾಮಾನ್ಯರ ಹಾಗೂ ಸಾಹಿತಿಗಳ ಪ್ರೀತಿಗೆ ಪಾತ್ರರಾಗಿದ್ದರು.
ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡ ಇವರು ಸಮಯ ಸಿಕ್ಕಾಗ ತಮ್ಮ ಬರವಣಿಗೆಯನ್ನು ಹೆಚ್ಚಿಸಿಕೊಳ್ಳುವ ಕಾರ್ಯ ನಿರಂತರವಾಗಿ ಮಾಡುತ್ತಾ ಬಂದಿರುತ್ತಾರೆ.
ಇನ್ನು ಅಕ್ಕನವರ ಪ್ರಕಟಿತ ಸಾಹಿತ್ಯ (ಪ್ರವಚನಗಳ)ಕೃತಿಗಳು ಹೀಗಿವೆ-
ವಚನಕ್ಕೊಂದು ಕಥೆ,ಅನುಭವ ಮಂಟಪದಲ್ಲಿ ಸಿದ್ಧರಾಮ,ಸಂಸಾರದಲ್ಲಿ ಸದ್ಗತಿ,ಗುರು ಕರುಣೆ, ಅಕ್ಕನ ದರ್ಶನ,ಶ್ರಾವಣ ಸಂಪದ,ಜೀವನ ದರ್ಶನ, ನಿಷ್ಪತ್ತಿ,ಗುರುವಚನ ದೇವನೆಡೆಗೆ,ಶ್ರೀಗುರು ಬಸವೇಶ್ವರ ಪೂಜಾವ್ರತ, ವಚನ ಜೀವನ, ಸುಖ ಯಾವುದು ಬಸವಾಜ್ಞೆ, ಭಕ್ತ, ಇಷ್ಟಲಿಂಗ ಪೂಜೆ ವಿಧಾನ, ಬಸವಲಿಂಗ ಪ್ರಾರ್ಥನಾ ಹಾಗೂ ಭಕ್ತಿಗೀತೆಗಳು, ಮಹೇಶ ಸ್ಥಲ, ಬಸವ ಭಾವ, ಮಹಾಮಹಿಮ ಸಂಗನ ಬಸವಣ್ಣ (ನಾಟಕ).

ಇವರ ಸಂಪಾದಿತ ಕೃತಿಗಳು ಹೀಗಿವೆ-ಲಿಂಗಾಯತ ಧರ್ಮ ಗ್ರಂಥ,ಗುರುವಚನ,ಪ್ರಾರ್ಥನಾ ಹಾಗೂ ಇಷ್ಟಲಿಂಗ ಪೂಜಾ ವಿಧಾನ,ಬಸವ ಸಂಪದ ಭಾಗ-1, ಬಸವ ಸಂಪದ ಭಾಗ-2,ಚೆನ್ನ ಸಂಪದ,ಅಕ್ಕನ ಸಂಪದ,ಪ್ರಭು ಸಂಪದ,ಮಾಚಿದೇವ ಸಂಪದ,ಸಿದ್ಧ ಸಂಪದ, ಶರಣ ಸಂಪದ,ಬಸವಲಿಂಗ ಪ್ರಾರ್ಥನಾ, ಶಿವರಣೆಯರ ಸಂಪದ, ಬಸವ ಸಂದೇಶ, ಅಂಬಿಗರ ಚೌಡಯ್ಯ ಸಂಪದ, ಜನಪದರು ಕಂಡ ಶರಣರು.
ಹಾಗೂ ಇವರ ಧ್ವನಿ ಸುರುಳಿಗಳು-ಮಂತ್ರಘೋಷ, ಬಸವಲಿಂಗ ಪ್ರಾರ್ಥನಾ, ಪಾಮಾಂ ಶರಣುಬಸವ, ಮಂತ್ರಾನುಸಂಧಾನ, ಬಸವ ಸುಪ್ರಭಾತ, ಹೀಗೆ ಹಲಾವಾರು ಕೃತಿಗಳನ್ನು ನೀಡಿದ್ದಲ್ಲದೆ ಬಸವ ಸೇವಾ ಪ್ರತಿಷ್ಠಾನದ ಮೂಲಕ ವಿವಿಧ ವಿದ್ವಾಂಸರ ಸುಮಾರು 50ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಅಕ್ಷರ ಪ್ರೀತಿ ಮೆರೆಯುತ್ತಲೆ ಪುಸ್ತಕ ಸಂಸ್ಕೃತಿ ಬೆಳೆಸಿರುತ್ತಾರೆ. ಹಲವು ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ಸಮಾವೇಶಗಳ ರೂವಾರಿಗಳು.ಅಂತೆಯೇ ಬಸವಾದಿ ಶರಣರ ಆಶಯದಂತೆ ಸಮ ಸಮಾಜದ ಕನಸನ್ನು ಬಿತ್ತುವದು,ಮಕ್ಕಳಿಗೆ ಯುವಕರಿಗೆ,ಮಹಿಳೆಯರಿಗೆ ಶಿವಶರಣ ಪ್ರೇರಣಾತ್ಮಕ ವಿಚಾರಗಳನ್ನು ತುಂಬಿ,ತಮ್ಮ ಬದುಕನ್ನು ತಾವೆ ಕಟ್ಟಿಕೊಳ್ಳುವಂತೆ ಪ್ರೇರೇಪಿಸುವದು.ಬದುಕನ್ನು ಕಟ್ಟುವಲ್ಲಿ,ಸಮಾಜದಲ್ಲಿ ನನ್ನ ಬದುಕು ಹೇಗಿರಬೇಕೆನ್ನಲು ಬಸವಾದಿ ಶರಣರ ವಚನಗಳ ಸಂದೇಶಗಳನ್ನು ತಿಳಿಸುವದು.ಹಳ್ಳಿಗಳನ್ನು ಪ್ರೀತಿ ಸುವದು,ಸ್ವಚ್ಛತೆ,ಸಮೃದ್ಧ ತೆ ಇರಬೇಕು ಎನ್ನುವ ನೀತಿಗಳು ಇವರ ಸಾಹಿತ್ಯ ಕೃಷಿಯಲ್ಲಿ ನೋಡಬಹುದು.
ಹೀಗೆ ವಿವಿಧ ಬಗೆಯ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಲೋಕಾರ್ಪಣೆ ಮಾಡಿರುತ್ತಾರೆ ಈ ತನ್ಮೂಲಕ ಸಾಹಿತ್ಯ ಲೋಕಕ್ಕೆ ನಿಜವಾಗಿಯೂ ಸಲ್ಲಬೇಕಾದ ಗೌರವವನ್ನು ಸಲ್ಲಿಸಿದ ಹೆಗ್ಗಳಿಕೆ ಇವರದು.

ಸಮಾಜಮುಖಿ ಸೇವೆ:ಈ ನಾಡಿನ ಪ್ರಖ್ಯಾತ ಬಸವತತ್ವ ಪ್ರಸಾರಕರಾದ ಪರಮ ಪೂಜ್ಯ ಶ್ರೀ ಅಕ್ಕನವರು ಅಪ್ಪಟ ಬಸವಾನುಯಾಯಿಗಳಾಗಿದ್ದವರು.ಸದಾ ಕಾಲ ಸಮಾಜ ಸೇವೆಯೇ-ಬಸವ ಸೇವೆ ಎಂದು ಬಾಳಿದವರು.ಬಸವತತ್ವ,ಶರಣ ತತ್ವ ಮತ್ತು ವಚನ ಸಾಹಿತ್ಯವನ್ನು ತಮ್ಮ ಬದುಕಿನ ಉಸಿರಾಗಿಸಿಕೊಂಡಿದವರು.
ಬಸವ ತತ್ವದ ಕಾರ್ಯಕ್ರಮಗಳ ಮೂಲಕ ಬಡವರ, ಅನಾಥ ಮಕ್ಕಳ ಸೇವೆ ಗೈದವರು ಅಕ್ಕನವರು.
ನಾಡಿನ ಉನ್ನತಿಗಾಗಿ ಹಗಲಿರುಳು ಕೆಲಸ ಮಾಡಿದವರು.ಎಲ್ಲರೊಂದಿಗೆ ಆತ್ಮೀಯತೆಯ ಅಕ್ಕರೆಯ ಮಾತುಗಳ ಮೂಲಕ ಜನಸಾಮಾನ್ಯರ ಒಲವು ಮತ್ತು ಸ್ನೇಹವನ್ನು ಸಂಪಾದಿಸಿದವರು. ಸಮಾಜದ ಕೆಳಸ್ತರದಲ್ಲಿ ಬದುಕುವ ಜನರ ಅಭಿವೃದ್ಧಿಗಾಗಿ ಸದಾ ಚಿಂತನೆ ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ಹಂಬಲಿಸುವ ಮನ ಇವರದಾಗಿತ್ತು ವಿನೂತನ ಹೊಸ ವಿಶೇಷ ಯೋಜನೆಗಳನ್ನು ಹಾಕಿಕೊಂಡು ನೊಂದವರ ಶ್ರೇಯಸ್ಸುಗಾಗಿ ಕೆಲಸ ಮಾಡಿ ಅವರ ಕಣ್ಣಿರು ಒರೆಸಿದವರು.ಬಸವ ತತ್ವವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಕೆಲಸ ನಿರಂತರವಾಗಿ ಮಾಡಿರುತ್ತಾರೆ.(ಬಸವ ತತ್ವವನ್ನು ಜನರ ಮನಸ್ಸುಗಳಿಗೆ ಮುಟ್ಟಿಸುವ ಕೆಲಸ )ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ನೀತಿಯ ಅಡಿಯಲ್ಲಿ ಅನೇಕ ಸಮಾಜದ ಸುಧಾರಣೆಗಾಗಿ ಜನ ಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಂಡು ಜನಪರ,ರೈತಪರ ಸೇವೆಯನ್ನು ಮಾಡಿರುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೇ,ಸೇವೆಯೇ ಶ್ರೇಷ್ಠ ಜೀವನವೆಂದು ತಿಳಿದಿದ್ದ ಮೆಧಾವಿ ಈ ಅಕ್ಕನವರು. ಹಾಗಾಗಿ ಕಿಂಕರ ಶಕ್ತಿಯ ಯಶಸ್ವಿ ದಿಕ್ಕಿನಲ್ಲಿ ದಾಪುಗಾಲು ಹಾಕಿ ಬಡವರ ಕಣ್ಣೀರಿನ ಹನಿಗಳನ್ನು ಒರೆಸುತ್ತ ಬಡವರ ಪಾಲಿನ ಆಶಾಕಿರಣ ಮೂರ್ತಿಯಾಗಿ ಈ ಕಲ್ಯಾಣ ನಾಡಿನಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಾ,ಮಿನುಗಿ ಇಂದು ಮರೆಯಾದವರು ಅಕ್ಕ ಅನ್ನಪೂರ್ಣ ಅಕ್ಕನವರು.

ಅಕ್ಕನವರ ಸಂಘಟನೆ:ಬಸವ ಸೇವಾ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾಮಠ ಟ್ರಸ್ಟ್ ಮೂಲಕ ಸಂಘಟನೆಗೆ ಒತ್ತು ಕೊಟ್ಟು ಸಮಾಜವನ್ನು ಒಗ್ಗುಡಿಸುವ ಕೆಲಸವನ್ನು ನಿರಂತರ ಮತ್ತು ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದವರು.ಈ ಮೂಲಕ ಬಸವ ತತ್ವವನ್ನು ಸರ್ವರಿಗೂ ತಲುಪುವಂತೆ ಮಾಡಿರುತ್ತಾರೆ.
ಈ ಜಗತ್ತಿನಲ್ಲಿ ಸೂರ್ಯ ಮತ್ತು ಚಂದ್ರರಿರುವವರೆಗೂ ಶಾಶ್ವತವಾಗಿ ಇರುವ ವಚನ ಸಾಹಿತ್ಯಕ್ಕೆ ಪಟ್ಟಕಟ್ಟುವ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದ ಶ್ರೇಯಸ್ಸು ಸಹ ಅಕ್ಕನವರಿಗೆ ಸಲ್ಲಬೇಕು.ತರುವ ಮೂಲಕ ಅದುವರೆಗೊ ಕೇವಲ ವ್ಯಕ್ತಿಗೆ ಪಟ್ಟಕಟ್ಟ ಬಹುದು ಎಂದು ತಿಳಿದ್ದಿದವರಿಗೆ ತತ್ತ್ವಕ್ಕೂ ಪಟ್ಟಾಭಿಷೇಕ ಮಾಡಬಹುದು ಎಂಬುದನ್ನು ಸಂಘಟನೆ ಮೂಲಕ ತೋರಿಸಿ ಕೊಟ್ಟ 21 ನೇ ಶತಮಾನದ ಧೀರ ಶರಣೆ ಅಕ್ಕನವರು.ಶ್ರಾವಣ ಮಾಸದಲ್ಲಿ ವಿಶೇಷ ಪ್ರವಚನ ಸೇರಿದಂತೆ ವಿವಿಧ ಕೆಲಸ ಕಾರ್ಯಗಳು ಯಶಸ್ವಿಯಾಗಿ ಮುನ್ನಡೆಸಿದ ಹಿರಿಮೆ ಇವರದು.
ಆಯೋಜನೆ,ಸಂಯೋಜನೆ,ಮುಖ್ಯಸ್ಥರಾಗಿ ಕಾರ್ಯಕ್ರಮಗಳ ಮಾಡುವುದರ ಮುಖಾಂತರ ಸೇವಾ ಚಟುವಟಿಕೆಗಳು ನಾಡಿನಾದ್ಯಂತ ಪಸರಿಸುವ ಕಾರ್ಯಗಳು ಪೂರ್ಣಗೊಳಿಸಿದವರು.
ಅಂದಹಾಗೆ ಈ ಎಲ್ಲಾ ನಿಸ್ವಾರ್ಥ ಸೇವೆ ಯಾವ ದಿಕ್ಕಿನಿಂದ ನೋಡಿದರೂ ಅಕ್ಕ ಪುಸ್ತುತ ಸಮಾಜಕ್ಕೆ ಅವಶ್ಯ ಮತ್ತು ಆಸ್ತಿ ಆಗಿದ್ದರು
ಎನ್ನುವುದಂತೂ ಸತ್ಯ.

ಅಕ್ಕನವರಿಗೆ ಒಲಿದ ಗೌರವ/ಪ್ರಶಸ್ತಿಗಳು :
ವಿವಿಧ ಸಂಘ,ಸಂಸ್ಥೆ ಮಠಗಳು,ಬಸವಕೇಂದ್ರ,ಕನ್ನಡ ಸಾಹಿತ್ಯ ಪರಿಷತ್ತು,ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಅನೇಕ ಗೌರವ ಸನ್ಮಾನಗಳು ಸಂದಿವೆ. ಇನ್ನು ಇವರ ನಿಸ್ವಾರ್ಥ ಸೇವೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು,ಕದಳಿ ಮಹಿಳಾ ವೇದಿಕೆ ಮೈಸೂರು ಸಂಸ್ಥೆಯಿಂದ ಕದಳಿ ಶ್ರೀ ಪ್ರಶಸ್ತಿ( 2007), ಶ್ರೀ ಸಿದ್ದಗಂಗಾ ಪ್ರಶಸ್ತಿ,ಕನ್ನಡ ರಾಜ್ಯೋತ್ಸವ ಪ್ರಶಸ್ತಿ., ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಜರುಗಿದ ವಿಭಾಗ ಮಟ್ಟದ ಕದಳಿ ಸಮಾವೇಶದ ಸರ್ವಾಧ್ಯಕ್ಷತೆಯ ಗೌರವ(2008),ಹಳಕಟ್ಟಿ ವಚನೋತ್ಸವ ರಾಷ್ಟ್ರ ಮಟ್ಟದ ಏಳನೇ ಸಮ್ಮೇಳನ 2013ರ ಸರ್ವಾಧ್ಯಕ್ಷತೆ ಹಾಗೂ ಬೀದರ್‌ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷತೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿ ಪುರಸ್ಕಾರಗಳು ಇವರ ಸೇವಾ ಕೈಂಕರ್ಯಕ್ಕೆ ದೊರಕಿವೆ.

ಗೌರವ ನಮನ :
ನನ್ನಂತಹ ಕಿರಿಯವನಿಂದ ಹಿಡಿದು ವಯೋವೃದರಿಗೆ ಅಕ್ಕನವರ ಪ್ರವಚನವೆಂದರೆ ಅದೊಂದು ಬಾಯಾರಿ ಬಂದವನಿಗೆ ಕುಡಿಯಲು ಕೊಟ್ಟ ನೀರಿನಂತೆ. ಹಣ್ಣು ಹಣ್ಣಾದ ಮುದುಕನಿಗೆ ಹುರುಗೋಲು ಇದ್ದಂತೆ. ನೊಂದು ದುಃಖಿತರಾಗಿ ಬಂದವರಿಗೆ ಕಣ್ಣೆರು ಒರೆಸುವ ಕೈಗಳಂತೆ. ಸಮಾಜದಿಂದ ತಿರಸ್ಕಾರ ಗೊಂಡವರಿಗೆ ಅದೊಂದು ಭರವಸೆ ಅಪ್ಪುಗೆ ಇದ್ದಂತೆ. ಮಾನಸಿಕ ರೋಗಗಳಿಗೆ ಮದ್ದು ಇದ್ದಂತೆ. ಈಗ ತಾನೆ ಬೆಳೆಯುತ್ತಿರುವ ಬಳ್ಳಿಗೆ ಪಕ್ಕದಲ್ಲಿ ಆಸರೆಯಾಗಿ ಪಡೆಯಬಹುದಾದ ಹೆಮ್ಮೆರವಿದ್ದಂತೆ.ಹೀಗೆ ಒಂದಿಲ್ಲೊಂದು ವಿಷಯಗಳಿಂದ ರಾಜ್ಯ , ಹೊರ ರಾಜ್ಯ, ದೇಶ ಮತ್ತು ವಿದೇಶಗಳ ಅನೇಕ ಲಿಂಗಾಯತರ ಮತ್ತು ಬಸವತತ್ವ ಅನುಯಾಯಿಗಳ ಮನೆ ಮತ್ತು ಮನಸ್ಸುಗಳಿಗೆ ಅಕ್ಕನವರ ಪ್ರಚವನ , ಮಾತು ಅಂದರೆ ಅಷ್ಟು ಇಷ್ಟವಾಗಿತ್ತು.
ಪ್ರತಿನಿತ್ಯ ವಚನ ಓದು, ವಾರಕ್ಕೊಮ್ಮೆ ವಚನ ಪ್ರಾರ್ಥನೆ ಮತ್ತು ವಚನ ಚಿಂತನೆ, ವಿಧ್ಯಾರ್ಥಿಗಳಿಗಾಗಿ ಬಸವ ಭಾರತೀ ಶಿಬಿರ, ವರ್ಷ ಕೊಮ್ಮೆ ಅಭೂತಪೂರ್ವವಾದ ವಚನ ವಿಜಯೋತ್ಸವ ಇಂತಹ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಬಸವ ಸೇವೆಯನ್ನು ನಾಡಿನಾದ್ಯಂತ ಪ್ರಸಾರ ಮಾಡುತ್ತಾ ಮನೆಮಾತಾಗಿದ್ದರು.
ಶಿವಶರಣರ ವಾಣಿಯಂತೆ
ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ಮಾತನ್ನು ಸತ್ಯ ಮಾಡಿ ನಾಡಿನ ಸಮುದಾಯಕ್ಕೆ ತೋರಿಸಿಕೊಟ್ಟಿದ್ದರು. ಬಸವ ತತ್ವ ಮಾರ್ಗದಲ್ಲಿ ಸಾಗಿದ ಅಕ್ಕ,ನಮ್ಮೆಲ್ಲರ ಚೈತನ್ಯದ ಚಿಲುಮೆಯಾಗಿ, ಸ್ಪೂರ್ತಿಯ ಅಕ್ಕನಾಗಿ,ಕರುನಾಡಿನ ಹೆಮ್ಮೆಯ ಮಗಳಾಗಿ, ಇಡೀ ದೇಶವೇ ಮೆಚ್ಚುವಂತಹ ನಿಸ್ವಾರ್ಥ ಸೇವೆ ಸಲ್ಲಿಸಿ,
ಲಿಂಗಾಯತ ಧರ್ಮದ ಉರಿಯುವ ದೀಪವಾಗಿ, ಪ್ರಜ್ವಲಿಸಿ, ಸೃಷ್ಟಿಕರ್ತನಲ್ಲಿ
ಇದೀಗ ಬಯಲಿನಲ್ಲಿ ಬಯಲಾಗಿದ್ದು ಅಂತಿವ ದುಃಖ ತಂದಿದೆ.ಪೂಜ್ಯ ಅಕ್ಕ ಅನ್ನಪೂರ್ಣ ತಾಯಿಯವರ ಅಂತರಾತ್ಮಕ್ಕೆ ಭಕ್ತಿಯ ಗೌರವದ ನಮನಗಳು ಸಲ್ಲಿಸುತ್ತೇವೆ.

ಮತ್ತೆ ಹುಟ್ಟಿ ಬನ್ನಿ :
ಬಸವ ತತ್ವದ ಪ್ರಚಾರ ಪ್ರಸಾರಕ್ಕೆ ತಮ್ಮ ಜೀವನ ಮುಡಿಪಾಗಿಟ್ಟ ಮಾಹಾ ತಾಯಿಯವರು, ಬಸವ ಗಿರಿ ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾಮಠವನ್ನು ಹುಟ್ಟು ಹಾಕಿ ಬಸವ ಪ್ರಜ್ಞೆ ಜಾಗೃತಗೋಳಿಸಿದ ನಮ್ಮೆಲ್ಲರ ನೆಚ್ಚಿನ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿಯವರು ಲಿಂಗೈಕ್ಯರಾಗಿದ್ದು ತಡೆದುಕೊಳ್ಳಲಾಗದಂತಹ ದುಃಖ ತಂದಿದೆ.
ಅಕ್ಕಾ ಮತ್ತೆ ಹುಟ್ಟಿ ಬನ್ನಿ ನಿಮ್ಮಂತಹ ಜ್ಞಾನದ ಬೆಳಕು ಈ ಭೂಮಿಗೆ ಬೇಕಾಗಿದೆ.

-ಸಂಗಮೇಶ ಎನ್ ಜವಾದಿ,ಬೀದರ ಜಿಲ್ಲೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ