ಶಿವಮೊಗ್ಗ:ಅರ್ಜಿದಾರರಾದ ಡಿ.ಮುರಳಿ ಎಂಬುವವರು ಐ.ಸಿ.ಐ.ಸಿ ಲೋಂಬೋರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿ.,ಜಯಪುರ,ಮುಂಬೈ ಮತ್ತು ಶಿವಮೊಗ್ಗ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ವಾಹನ ವಿಮಾ ಪಾಲಿಸಿಯ ಪರಿಹಾರ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಅರ್ಜಿದಾರರ ಕೆ.ಎ-03-ಪಿ:6518 ಕಾರನ್ನು 2017 ರಲ್ಲಿ ಖರೀದಿಸಿದ್ದು ದಿ:15.08.2021 ರಂದು ಕಾರಿನ ಬಾನೆಟ್‍ನಲ್ಲಿ ಅನಿರಿಕ್ಷತವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಸುಟ್ಟುಹೋಗಿರುತ್ತದೆ.
ಈ ಸಂಬಂಧ ಐ.ಸಿ.ಐ.ಸಿ ಲೋಂಬೋರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ಸಂಪರ್ಕಿಸಿ ವಿಮಾ ಪರಿಹಾರ ಮೊತ್ತ ಸಂದಾಯ ಮಾಡುವಂತೆ ಕೋರಿರುತ್ತಾರೆ.ಆದರೆ ಕಂಪನಿಯವರು ವಾಹನಕ್ಕೆ ಉಂಟಾದ ಹಾನಿಗಳು ವಾಹನವನ್ನು ಸರಿಯಾದ ಸಮಯದಲ್ಲಿ ಸರ್ವೀಸಿಂಗ್ ಮಾಡಿಸಿರುವುದಿಲ್ಲ ಮತ್ತು ಸ್ಥಳೀಯ ಗ್ಯಾರೆಜ್‍ಗಳಲ್ಲಿ ಆಯಿಲ್ ಬದಲಾಯಿಸಿರುತ್ತಾರೆ.ಈ ಕಾರಣದಿಂದ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಪರಿಹಾರ ಮೊತ್ತ ನೀಡಲು ನಿರಾಕರಿಸಿರುತ್ತಾರೆ.ಆಯೋಗವು ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ,ಅರ್ಜಿದಾರರ ಸಾಕ್ಷ್ಯ ವಿಚಾರಣೆಯ ವಿವರ ಮತ್ತು ಹಾಜರುಪಡಿಸಲಾದ ದಾಖಲೆಗಳ ಆಧಾರದ ಮೇಲೆ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
ಎದುರುದಾರು ಅರ್ಜಿದಾರರಿಗೆ ರೂ.13,50,000 ಗಳನ್ನು ವಿಮಾ ಪರಿಹಾರ ಮೊತ್ತವನ್ನು ಲೀಗಲ್ ನೋಟೀಸ್ ನೀಡಿದ ದಿನಾಂಕದಿಂದ ಶೇ.9% ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸುವುದು ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ ಹಾಗೂ ರೂ.1,00,000/-ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ರೂ.10,000/-ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ,ಮಹಿಳಾ ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಜೂ.01 ರಂದು ಆದೇಶಿಸಿದೆ.
ವರದಿ:ಕೊಡಕ್ಕಲ್ ಶಿವಪ್ರಸಾದ್