ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಸಕಲ ಸಿದ್ದತೆ ಮಾಡಿಕೊಂಡು ಸುವ್ಯವಸ್ಥಿತವಾಗಿ ಶಾಂತಿಯುತವಾಗಿ ಜರುಗುವಂತೆ ಕ್ರಮ ವಹಿಸಿ:ಜಿಲ್ಲಾಧಿಕಾರಿ ಡಾ.ಸುಶೀಲ.ಬಿ.
ಯಾದಗಿರಿ:ಜೂನ್ 24 ರಿಂದ ಜುಲೈ 5 ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-3 ನಡೆಯಲಿದ್ದು, 5 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3728 ವಿದ್ಯಾರ್ಥಿಗಳು ಹಾಜರಾಗಲಿದ್ದು ಅಧಿಕಾರಿಗಳು ಪರೀಕ್ಷೆಗೆ ಎಲ್ಲಾ ಸಿದ್ದತೆ ಮಾಡಿಕೊಂಡು ಪರೀಕ್ಷೆಗಳು ಸುವ್ಯವಸ್ಥಿತವಾಗಿ,ಶಾಂತಿಯುತವಾಗಿ ಜರುಗುವಂತೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-3ರ ಪೂರ್ವಸಿದ್ದತಾ ಸಭೆ ನಡೆಸಿ ಅವರು ಮಾತನಾಡಿದರು.ಈ ಪರೀಕ್ಷಾ ಕೇಂದ್ರಗಳಿಗೆ ಒಟ್ಟು 98 ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಜೋಡಿಸಲಾಗಿದೆ.
ಯಾದಗಿರಿ ನಗರದ ನ್ಯೂ ಕನ್ನಡ ಪಿಯು ಕಾಲೇಜು, ಸಭಾ ಪಿಯು ಕಾಲೇಜು, ಶಹಾಪುರದ ಸರಕಾರಿ ಬಾಲಕರ ಪಿಯು ಕಾಲೇಜು, ಸುರಪುರದ ಸರಕಾರಿ ಪಿಯು ಕಾಲೇಜು, ಗುರುಮಿಠಕಲ್‌ನ ಬಾಲಕರ ಪಿಯು ಕಾಲೇಜು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಪರೀಕ್ಷೆಯ ನಿಯಮಾವಳಿಗಳಂತೆ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿಯ ಮಾಹಿತಿಗಳನ್ನು ಚಿತ್ರೀಕರಿಸುವುದು, ಚಿತ್ರೀಕರಿಸಲು ಪ್ರಯತ್ನಿಸುವುದು ಮತ್ತು ಸಮೂಹ ಮಾಧ್ಯಮಗಳಲ್ಲಿ,ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡುವುದು ಅಪರಾಧವಾಗಿರುತ್ತದೆ.ಒಂದು ವೇಳೆ ಕಂಡುಬಂದಲ್ಲಿ ಇಲಾಖಾ ಕ್ರಮದಂತೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದರು.ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶದಲ್ಲಿ ನಿಷೇಧಿತ ಪ್ರದೇಶ ಎಂದು ಜಿಲ್ಲಾಧಿಕಾರಿಯವರು ಸುತ್ತಲಿನ ಜೆರಾಕ್ಸ್, ಕಂಪ್ಯೂಟರ್ ಮಳಿಗೆಗಳನ್ನು ಮುಚ್ಚುವಂತೆ ಆದೇಶಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಸುರಕ್ಷತೆಗೆ ಪೊಲೀಸರು ಬಂದೋಬಸ್ತ್ ಗೆ ಸಮಯಕ್ಕಿಂತ ಮುಂಚಿತವಾಗಿಯೇ ತೆರಳಬೇಕು ಎಂದು ಸೂಚಿಸಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ವಾಟರ್ ಬಾಯ್‌ಗಳ ನೇಮಕವನ್ನು ರದ್ದುಪಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು ಕೊಠಡಿಗಳ ಅಂತರದಲ್ಲಿ ಕೊಠಡಿಯ ಹೊರಗೆ ವ್ಯವಸ್ಥೆ ಮಾಡಬೇಕು ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಪೋನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿಡಿಪಿಯು ಚನ್ನಬಸಪ್ಪ ಕುಳಗೇರಿ, ಜಿಲ್ಲಾ ಖಜಾನೆ ಅಧಿಕಾರಿ ಮಾಳಿಂಗರಾಯ ಸೇರಿದಂತೆ ಪರೀಕ್ಷೆಗೆ ಜವಾಬ್ದಾರಿ ವಹಿಸಿದ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಶಿವರಾಜ ಸಾಹುಕಾರ್ ವಡಗೇರಾ