ಕಂದಾಯ ದಿನಾಚರಣೆ ಪ್ರಯುಕ್ತ ಅಗ್ನಿಹಾಳ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ
ಯಾದಗಿರಿ:ಸಾರ್ವಜನಿಕರೊಂದಿಗೆ ಬೆರೆತು ಕೆಲಸ ಮಾಡುವ ಇಲಾಖೆ ಹಾಗೂ ಸರ್ಕಾರದ ಮಾತೃ ಇಲಾಖೆಯು ಕಂದಾಯ ಇಲಾಖೆಯಾಗಿದ್ದು ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ.ಅವರು ಅಭಿಪ್ರಾಯಪಟ್ಟರು.
ಕಂದಾಯ ದಿನಾಚರಣೆ ಪ್ರಯುಕ್ತ ವಡಗೇರಾ ತಾಲೂಕಿನ ಅಗ್ನಿಹಾಳ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರಿಗೆ ನಿಗದಿತ ಸಮಯದಲ್ಲಿ ಸರ್ಕಾರದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯ ನಡೆಸುತ್ತಿದ್ದು ನಮ್ಮ ಜಿಲ್ಲೆ ಮೂರನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ನೇರವಾಗಿ ತಲುಪಿಸಲು ಪಹಣಿಗಳೊಂದಿಗೆ ಆಧಾರ್ ಜೋಡಣೆ ಕಾರ್ಯ ಆರಂಭಿಸಲಾಗಿದೆ.ಗ್ರಾಮ ಲೆಕ್ಕಿಗರು ಮನೆಮನೆಗೆ ತೆರಳಿ ಪಹಣಿ ಮತ್ತು ಆಧಾರ್ ಜೋಡಣೆ ಕಾರ್ಯ ಮಾಡುತ್ತಿದ್ದಾರೆ.ರೈತರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರಯೋಜನ ಪಡೆದುಕೊಳ್ಳಬೇಕು’ಎಂದು ಜಿಲ್ಲಾಧಿಕಾರಿ ನುಡಿದರು.
ಸರ್ಕಾರಿ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.ಸರ್ಕಾರಿ ಗೈರಾಣಿ ಭೂಮಿಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದರೆ ಆ ಭೂಮಿಯನ್ನು ವಶಕ್ಕೆ ಪಡೆಯುವ ಕಾರ್ಯ ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲಾಧಿಕಾರಿ ನುಡಿದರು.
ಸರ್ಕಾರವು ಲ್ಯಾಂಡ್ ಬೀಟ್ ನೂತನ ಯೋಜನೆಯನ್ನು ಜಾರಿ ಮಾಡಿದ್ದು ಸರ್ಕಾರಿ ಜಮೀನಿನ ಒತ್ತುವರಿ ತೆರವು ಮಾಡಿ ಅದರ ಭಾವಚಿತ್ರ ಮತ್ತು ಇನ್ನಿತರೆ ವಿವರಗಳನ್ನು ಲ್ಯಾಂಡ್ ಬೀಟ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ‘ಲ್ಯಾಂಡ್ ಬೀಟ್ ತಂತ್ರಾಂಶದ ಮೂಲಕ ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಎಲ್ಲಾ ಜಮೀನುಗಳಿಗೆ ಜಿಯೋ ಫೆನ್ಸಿಂಗ್ ಮಾಡುತ್ತಾರೆ. ಒತ್ತುವರಿ ಮಾಡಿದ್ದಲ್ಲಿ ಅಂತಹ ಆಸ್ತಿಗಳ ವಿವರ ಲಭ್ಯವಾಗುತ್ತದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿವಡಗೇರಾ ತಹಶೀಲ್ದಾರ ಶ್ರೀನಿವಾಸ ಚಾಪಲ್,ವಡಗೇರಾ ಠಾಣಾಧಿಕಾರಿ ಕು.ಜಯಶ್ರೀ ಹೊಡಲ್ ಸೇರಿದಂತೆ ಇನ್ನಿತರ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ:ಶಿವರಾಜ ಸಾಹುಕಾರ ವಡಗೇರಾ