ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಆಂಧ್ರಪ್ರದೇಶದ ಗಡಿಯನ್ನು ಹೊಂದಿಕೊಂಡಿರುವ ಕೊಡಮಡಗು ಗ್ರಾಮ ಪಂಚಾಯಿತಿ ಮೂಲ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತವಾಗಿದೆ.
ಚರಂಡಿಗಳು ಕಸ ಮತ್ತು ಹೂಳು ತುಂಬಿಕೊಂಡಿದ್ದು, ನೀರು ನಿಂತಲ್ಲೆ ನಿಲ್ಲುತ್ತಿದೆ. ನೀರು ಮುಂದಕ್ಕೆ ಹರಿಯದೆ ದುರ್ವಾಸನೆ ಬೀರುತ್ತಿದೆ. ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕೊಡಮಡಗು ಗ್ರಾಮದಲ್ಲಿ ಚರಂಡಿಗಳನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡದೆ ಇರುವುದರಿಂದ ಮಳೆಗಾಲದಲ್ಲಿ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಮಳೆಯಾದರೆ ಚರಂಡಿ ನೀರು ರಸ್ತೆ ಮೇಲೆ ಹರಿಯಲು ಪ್ರಾರಂಭವಾಗುತ್ತದೆ. ಅವೈಜ್ಞಾನಿಕ ಚರಂಡಿಗಳ ನಿರ್ಮಾಣದಿಂದಾಗಿ ಎಲ್ಲೆಂದರಲ್ಲೆ ನೀರು ನಿಲ್ಲುವ ಮೂಲಕ ದುರ್ವಾಸನೆ ಶುರುವಾಗುತ್ತದೆ. ಇದು ಪ್ರತಿ ವರ್ಷ ಮರುಕಳಿಸುವ ಸಮಸ್ಯೆಯಾಗಿದ್ದರೂ ಗ್ರಾಮ ಪಂಚಾಯಿತಿ ಮಾತ್ರ ಮಳೆಗಾಲಕ್ಕೂ ಮುನ್ನ ಮುನ್ನಚ್ಚರಿಕೆ ಕ್ರಮವಾಗಿ ಚರಂಡಿ ಸ್ವಚ್ಛಗೊಳಿಸಲು ಮುಂದಾಗುವುದಿಲ್ಲ ಎಂದು ಗ್ರಾಮ ಪಂಚಾಯಿತಿ ನಿವಾಸಿಗಳು ಕಿಡಿ ಕಾಡಿದರು.
ಕಸ-ಹೂಳು:ಪಂಚಾಯಿತಿ ಚರಂಡಿಗಳು ಕಸ ಮತ್ತು ಹೂಳು ತುಂಬಿಕೊಂಡಿವೆ. ಪಂಚಾಯಿತಿ ಮುಖ್ಯ ಬೀದಿಗಳಲ್ಲಿ ಚರಂಡಿಗಳಂತೂ ಕಸದ ತೊಟ್ಟಿಗಳಾಗಿವೆ. ಇನ್ನೂ ಕೆಲ ಚರಂಡಿಗಳು ಹೂಳು ತುಂಬಿಕೊಂಡು ನೀರು ಮುಂದೆ ಹರಿಯದಂತೆ ಮುಚ್ಚಿಹೋಗಿವೆ. ಜೋರಾಗಿ ಮಳೆ ಬಂದಲ್ಲಿ ಚರಂಡಿಗಳು ತುಂಬಿಕೊಂಡು ರಸ್ತೆ ಮೇಲೆ ನೀರು ಹರಿಯುತ್ತದೆ. ಇನ್ನೂ ಕೆಲವಡೆ ವ್ಯವಸ್ಥಿತ ಚರಂಡಿಗಳೆ ಇಲ್ಲ.
ದುರ್ವಾಸನೆ:ಅಲ್ಲದೆ ಚರಂಡಿಗಳು ಹೂಳು ಮತ್ತು ಕಸ ತುಂಬಿಕೊಳ್ಳುತ್ತಿರುವುದರಿಂದ ನೀರು ಮುಂದೆ ಹರಿಯದೆ ನಿಂತಲ್ಲೆ ನಿಲ್ಲುತ್ತದೆ. ಇದರಿಂದಾಗಿ ದುರ್ವಾಸನೆ ದಿನೇ ದಿನೇ ಹೆಚ್ಚಾಗುತ್ತಿದ್ದು,ಚರಂಡಿ ಪಕ್ಕದಲ್ಲಿನ ಮನೆಗಳ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಪ್ರತಿ ತಿಂಗಳು ಹೂಳು ತೆಗೆಯುವುದಿಲ್ಲ. ಕೆಲವೊಮ್ಮೆ ಹೂಳು ಮತ್ತು ಕಸವನ್ನು ತೆಗೆದು ಕೂಡಲೇ ಸ್ಥಳಾಂತರಿಸದೆ, ವಾರಗಟ್ಟಲೆ ಮನೆ ಮುಂದಿನ ಚರಂಡಿ ಪಕ್ಕದಲ್ಲೆ ಬಿಡುತ್ತಾರೆ. ಇದರಿಂದ ತೀವ್ರ ಹಿಂಸೆಯಾಗುತ್ತದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ನಿವಾಸಿಗಳು.
ರೋಗದ ಭೀತಿ: ಒಂದೆಡೆ ಸಾರ್ವಜನಿಕ ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರಿಗೆ ಅನೇಕ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತಿದೆ. ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ವಾರಕ್ಕೊಮ್ಮೆಯಾದರೂ ಮನೆಯಲ್ಲಿನ ನೀರು ಬದಲಿಸಿಕೊಳ್ಳಿ, ಪರಿಸರ ರಕ್ಷಿಸಿ, ಎಂದೆಲ್ಲ ಹೇಳುತ್ತಿದೆ. ಆದರೆ ಇನ್ನೊಂದಡೆ ಪಂಚಾಯಿತಿ ಮಾತ್ರ ಗ್ರಾಮ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ರಸ್ತೆ, ಚರಂಡಿಗಳನ್ನು ಸ್ಚಚ್ಛವಾಗಿಡಬೇಕಾದ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಸೊಳ್ಳೆಗಳು ಹೆಚ್ಚಾಗುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿಯನಲ್ಲಿ ಜನರು ಕಾಲಕಳೆಯುತ್ತಿದ್ದಾರೆ.
ತೀವ್ರ ಮಳೆಯಾಗಿ ಸಾರ್ವಜನಿಕರು ತೊಂದರೆ ಅನುಭವಿಸುವ ಮುನ್ನ ಸಂಬಂಧಿಸಿದ ಗ್ರಾಮ ಪಂಚಾಯಿತಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂಜಾಗೃತ ಕ್ರಮವಾಗಿ ಚರಂಡಿಗಳ ಸ್ವಚ್ಛತೆಗೆ ಮುಂದಾಗಬೇಕಿದೆ. ಮಳೆಯಾದಾಗ ಚರಂಡಿಗಳು ತುಂಬಿಕೊಂಡು ದುರ್ವಾಸನೆ ಬೀರುವವರೆಗೂ ನಿರ್ಲಕ್ಷ್ಯ ವಹಿಸದೆ, ಕೂಡಲೇ ಚರಂಡಿಗಳಲ್ಲಿನ ಹೂಳು, ಕಸ ತೆಗೆಯುವ ಕೆಲಸ ಮಾಡಬೇಕು. ಕನಿಷ್ಠಪಕ್ಷ ಮಳೆಗಾಲದಲ್ಲಾದರೂ ಗ್ರಾಮ ಪಂಚಾಯಿತಿ ಚರಂಡಿಗಳನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಇದರಿಂದಾಗಿ ಜನರು ಸಾಂಕ್ರಾಮಿಕ ರೋಗದ ಭಯವಿಲ್ಲದೆ ಬದುಕಬಹುದಾಗಿದೆ.
ಗ್ರಾಮದಲ್ಲಿ ಚರಂಡಿಗಳ ನಿರ್ವಹಣೆ ಕೊರತೆ ಕಂಡು ಬರುತ್ತಿದೆ. ಗ್ರಾಮದ ಅನೇಕ ಚರಂಡಿಗಳು ಮುಚ್ಚಿ ಅದೆಷ್ಟೋ ತಿಂಗಳುಗಳೇ ಕಳೆದಿದ್ದರೂ ಹೂಳು, ಕಸ ತೆಗೆಯಲು ಪಂಚಾಯಿತಿ ಅಧಿಕಾರಿಗಳು ಮುಂದಾಗುತ್ತಿಲ್ಲ.
ಗ್ರಾಮದ ರಸ್ತೆಯಲ್ಲಿನ ಚರಂಡಿಗಳು ಸಂಪೂರ್ಣವಾಗಿ ಮುಚ್ಚಿಹೋಗಿವೆ. ವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಾಣ ಮಾಡದೆ ಇರುವುದರಿಂದ ನೀರು ಮುಂದಕ್ಕೆ ಹರಿಯುತ್ತಿಲ್ಲ. ಮಳೆಗಾಲ ಪ್ರಾರಂಭವಾಗುತ್ತಿದ್ದು, ಕೂಡಲೇ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಗ್ರಾಮ ಪಂಚಾಯಿತಿ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
-ಕರುನಾಡ ಕಂದ