ಬಾಗಲಕೋಟೆ/ಗುಳೇದಗುಡ್ಡ:ಕನ್ನಡ ಸಾರಸ್ವತ ಲೋಕಕ್ಕೆ ಸಂಶೋಧನೆ,ವಿಮರ್ಶೆ,ಕವನ ಸಂಕಲನದಂತಹ ಹಲವಾರು ಕೃತಿಗಳನ್ನು ನೀಡಿರುವ ಡಾ.ರಾಜಶೇಖರ ಬಸುಪಟ್ಟದವರು ಈಗ ಬಯಲ ಬೆರಗು, ವಿವೇಕ ಚಿಂತಾಮಣಿ ಎಂಬ ಎರಡು ಮೌಲಿಕ ಕೃತಿಗಳನ್ನು ಕನ್ನಡಿಗರಿಗೆ ನೀಡುತ್ತಿದ್ದಾರೆ. ಬೇಂದ್ರೆಯವರಿಂದ ಪ್ರಶಂಸೆಗೊಳಗಾದ ಡಾ.ಎಸ್ ಎಸ್ ಬಸುಪಟ್ಟದರವರ ಪರಂಪರೆಯನ್ನು ಮುಂದುವರೆಸುತ್ತಿರುವ ಡಾ.ರಾಜಶೇಖರ ಬಸುಪಟ್ಟದರವರು ತಂದೆಯವರ ಹಾದಿಯಲ್ಲಿಯೇ ಮುನ್ನಡೆದಿದ್ದಾರೆ ಎಂದು ಧಾರವಾಡದ ಹಿರಿಯ ಸಾಹಿತಿ ಡಾ.ಸಂಗಮನಾಥ ಲೋಕಾಪೂರ ಹೇಳಿದರು.
ಅವರು ರವಿ, ರಜತ-ರಶ್ಮಿ ಪ್ರಕಾಶನ ವತಿಯಿಂದ ಭಾನುವಾರ ಭಂಡಾರಿ ಕಾಲೇಜಿನ ಸಾಂಸ್ಕೃತಿಕ ಭವನದಲ್ಲಿ ಡಾ.ರಾಜಶೇಖರ ಬಸುಪಟ್ಟದರವರ ಸೇವಾ ನಿವೃತ್ತಿ ಪ್ರಯುಕ್ತ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಬಯಲ ಬೆರಗು ಮತ್ತು ವಿವೇಕ ಚಿಂತಾಮಣಿ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬಯಲ ಬೆರಗು ಕೃತಿಯನ್ನು ಕುರಿತು ಮಾತನಾಡಿ, ವಿವೇಕ ಚಿಂತಾಮಣಿ ಅಮೂಲ್ಯ ಕೃತಿಯಾಗಿದೆ. ವಚನ ಚಿಂತನೆಗಳನ್ನು ಆಯ್ದುಕೊಂಡು ವಿಭಿನ್ನವಾದ ಹಾಗೂ ಸರಳ ಅರ್ಥದಲ್ಲಿ ಬಸುಪಟ್ಟದರವರು ಈ ಕೃತಿಯಲ್ಲಿ ಕಿರಿದರಲ್ಲಿ ಪಿರಿದರ್ಥವನ್ನು ಹಿಡಿದಿಟ್ಟಿದ್ದಾರೆ. ವಿವೇಕ ಚಿಂತಾಮಣಿ ಒಂದು ಉತ್ತಮ ಕೃತಿಯಾಗಿದೆ ಎಂದರು.
ಬಯಲ ಬೆರಗು ಕೃತಿಯ ಕುರಿತು ಮಾತನಾಡಿದ ಸಾಹಿತಿ ಡಾ.ಅಶೋಕ ನರೋಡೆ ಅವರು,ಬಯಲ ಬೆರಗು ವಿಮರ್ಶಾ ಲೇಖನಗಳ ಸಂಗ್ರಹವಾಗಿದ್ದು, ಸಂಶೋಧನಾತ್ಮಕ ಚಿಂತನೆಗಳನ್ನು ಒಳಗೊಂಡ ಅಪೂರ್ವ ಕೃತಿಯಾಗಿದೆ. ಈ ಕೃತಿ ಸಂಶೋಧನಾರ್ಥಿಗಳಿಗೆ ಮಾರ್ಗದರ್ಶಕವಾಗಿದೆ ಎಂದರು.
ಸ್ಥಳೀಯ ಶ್ರೀ ಗುರುಸಿದ್ಧೇಶ್ವರ ಬೃಹನ್ಮಠದ ಜ.ಶ್ರೀ ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ವೃತ್ತಿಯಿಂದ ನಿವೃತ್ತರಾಗಿದ್ದರೂ ಕೃತಿ ರಚನೆಯ ಪ್ರವೃತ್ತಿಯಲ್ಲಿ ನಿರಂತರವಾಗಿ ಮುನ್ನಡೆಯುತ್ತಿರುವ ಡಾ. ರಾಜಶೇಖರ ಬಸುಪಟ್ಟದರವರ ವಿಶ್ರಾಂತ ಜೀವನ ಸುಖ ಸಮೃದ್ಧವಾಗಲಿ ಎಂದು ಆಶೀರ್ವದಿಸಿದರು.
ಇಳಕಲ್ಲಿನ ಶ್ರೀ ಗುರುಮಹಾಂತ ಸ್ವಾಮಿಗಳು, ಶಿರೂರಿನ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಶ್ರೀ ಗುರುಬಸವ ಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಲೇಖಕ ಡಾ ರಾಜಶೇಖರ ಬಸುಪಟ್ಟದ ದಂಪತಿ, ಮಾಜಿಶಾಸಕ ರಾಜಶೇಖರ ಶೀಲವಂತ, ಡಾ.ವಿ.ಎ. ಬೆನಕನಾಳ, ಪ್ರೊ. ಚಂದ್ರಶೇಖರ ಹೆಗಡೆ, ಮಹಾದೇವ ನೀಲಕಂಠಮಠ, ಸಿದ್ದಲಿಂಗಪ್ಪ ಬರಗುಂಡಿ, ಗಣೇಶ ಶೀಲವಂತ, ಕಮಲಕಿಶೋರ ಮಾಲಪಾಣಿ, ಶಿವಾನಂದ ಸಿಂದಗಿ, ಶಿವಪುತ್ರಪ್ಪ ಹಟ್ಟಿ, ರಾಚಣ್ಣ ಕೆರೂರ, ಎಸ್.ಎಸ್.ನಾರಾ, ಬಸವರಾಜ ಚವಡಿ, ಸುರೇಶ ಸಾರಂಗಿ, ಶಂಕರ ಬಸುಪಟ್ಟದ ಸಂಗಮೇಶ ಚಿಕ್ಕಾಡಿ, ರವಿ ಬಸುಪಟ್ಟದ, ಶಂಕರ ಸನಪಾ,ಮೋಹನ ಕರನಂದಿ ಮತ್ತಿತರರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.