ಸೊರಬ:ನಮ್ಮದು ವೈವಿದ್ಯತೆಯ ದೇಶ. ನಮ್ಮ ಸಂಪ್ರದಾಯ, ಹಬ್ಬ, ಆಚರಣೆಗಳಿಗೆ ಒಂದಲ್ಲ ಒಂದು ಮಹತ್ವವಿದೆ. ಅದೇ ರೀತಿ ರೈತಾಪಿ ವರ್ಗಕ್ಕೆ ಹಲವಾರು ಹಬ್ಬಗಳಿವೆ.ಆಧುನೀಕರಣದಿಂದಾಗಿ ಹಲವಾರು ಸಂಪ್ರದಾಯಗಳು ಮರೆಮಾಚಿದ್ದರೂ ಪ್ರಕೃತಿಯನ್ನು ರೈತಾಪಿ ವರ್ಗ ಆರಾಧಿಸುತ್ತಲೇ ಬರುತ್ತಿದೆ. ರೈತರ ಉಸಿರು ಮಣ್ಣು ಮತ್ತು ಜಾನುವಾರುಗಳು, ಮಣ್ಣೆತ್ತಿನ ಅಮವಾಸ್ಯೆ ಸಾಮಾನ್ಯ ಜನರಿಗೆ ವಿಶೇಷವಲ್ಲದಿದ್ದರೂ ರೈತರಿಗೆ ಮಹತ್ವದ್ದೇ. ಈ ನಿಟ್ಟಿನಲ್ಲಿ ಸೊರಬ ತಾಲೂಕಿನಾದ್ಯಂತ ಶುಕ್ರವಾರ ಮಣ್ಣೆತ್ತಿನ ಅಮವಾಸ್ಯೆ ಹಬ್ಬವನ್ನು ಹಲವರು ಸಂಭ‍್ರಮದಿಂದಲೇ ಆಚರಿಸಿದರು.
ಮಣ್ಣಿನಿಂದ ಮಾಡಿದ ಎತ್ತುಗಳಿಗೆ ಅಲಂಕರಿಸಿ, ಸಿಂಗರಿಸಿ ಪೂಜೆ ಸಲ್ಲಿಸಿ ಹಬ್ಬವನ್ನು ಆಚರಿಸಲಾಗುವುದು ಮುಂಗಾರು ಮಳೆ ಸಾಮಾನ್ಯವಾಗಿ ಗ್ರೀಷ್ಮ ಋತುವಿನ ಅಂತ್ಯಭಾಗ ಮತ್ತು ವರ್ಷ ಋತುವಿನ ಆರಂಭವಾದಾಗ, ಅಂದರೆ ಜೂನ್ ವೇಳೆಗೆ, ಪ್ರಾರಂಭವಾದಾಗ ಕೃಷಿ ಚಟುವಟಿಕೆಗಳು ಕೂಡಾ ಚುರುಕಾಗುತ್ತದೆ. ಪುನರ್ವಸು ಮಳೆ ಪ್ರಾರಂಭವಾಗುವ ಹೊತ್ತಿಗೆ ಬಿತ್ತನೆ ಆಗಿ, ನಾಟಿ ಕೂಡ ಮುಗಿದಿರುತ್ತದೆ, ಈ ಸಂಭ್ರಮವನ್ನು ಆಚರಿಸಲು ರೈತರು ಮಣ್ಣೆತ್ತಿನ ಅಮವಾಸ್ಯೆ ಆಚರಿಸುತ್ತಾರೆ.
ಈ ದಿನ ರೈತರು ಹೊಲಗದ್ದೆಗೆ ಹೋಗಿ, ಮಣ್ಣು ತಂದು ಆ ಮಣ್ಣಿನಿಂದ ಜೋಡಿ ಎತ್ತುಗಳನ್ನು ತಯಾರಿಸುತ್ತಾರೆ. ಅಧುನಿಕ ಭರಾಟೆಯಲ್ಲಿ ಮಾರುಕಟ್ಟೆಯಿಂದ ಮಣ್ಣಿನ ಎತ್ತುಗಳನ್ನು ಖರೀದಿಸಿ ತರುತ್ತಾರೆ. ನಂತರ ಮನೆಯಲ್ಲಿನ ದೇವರ ಮನೆಯಲ್ಲಿಟ್ಟು ಎತ್ತುಗಳಿಗೆ ಹೋಳಿಗೆ, ಸಿಹಿ ಕಡಬು ಇಟ್ಟು ಸಮರ್ಪಿಸಲಾಗುತ್ತದೆ. ನಂತರ ತಮ್ಮ ಜಮೀನಿನಲ್ಲಿ ಆ ಎತ್ತುಗಳನ್ನು ಇಟ್ಟು ಭೂತಾಯಿ ಹಾಗೂ ಎತ್ತುಗಳು ತಮ್ಮ ಬೆಳೆಯನ್ನು ರಕ್ಷಣೆ ಮಾಡಿ ಎಂದು ಬೇಡಿಕೊಳ್ಳುವುದು ವಾಡಿಕೆ. ಜೊತೆಗೆ ಮಣ್ಣಿನ ಆರಾಧನೆಯನ್ನು ಕೂಡ ಮಾಡಲಾಗುವುದು.
ಭೂಮಿಯಲ್ಲಿ ಹುಟ್ಟುವುದಾದರೆ ಭೂಮಿಯಲ್ಲಿ ಬೀಜ ಬಿತ್ತಲು, ಬಿತ್ತಿದ ಫಸಲು ಬಂದ ಮೇಲೆ ಧಾನ್ಯ ರೂಪದಿಂದ ನಾವು ಪಡೆಯಲು ಈ ವೃಷಭಗಳ ಸೇವೆ ಅತ್ಯಂತ ಅವಶ್ಯವಾಗಿದೆ. ಎತ್ತುಗಳು ಭಗವಾನ್ ಶಿವನ ವಾಹನವಾದ್ದರಿಂದ ಶಿವನು ನಂದೀಶನೆಂದೇ ಪ್ರಸಿದ್ಧನಾಗಿದ್ದಾನೆ. ಹೀಗೆ ಮಾನವನು ವೃಷಭಗಳಿಗೆ ಅತ್ಯಂತ ಕೃತಜ್ಞನಾಗಿದ್ದಾನೆ. ಪಂಚಭೂತಗಳಿಂತ ನಿರ್ಮಿತವಾದ ಈ ದೇಹವು ಪಂಚಭೂತಗಳಲ್ಲಿ ಒಂದಾದ ಭೂಮಿಯ ಅಂಶದಿಂದ ಕೂಡಿದೆ. ಭೂದೇವಿಯ ಪೂಜೆಯೂ ಮಣ್ಣೆತ್ತಿನ ಪೂಜೆಯಲ್ಲಿ ಅಡಗಿದೆ. ಈ ದಿವಸ ವಿಶೇಷ ಅಡುಗೆಯನ್ನು ಮಾಡಿ ಹರಿವಾಯುಗಳಿಗೆ ನಿವೇದಿಸಿ,ವೃಷಭಗಳಿಗೆ ನೈವೇದ್ಯ ಸಲ್ಲಿಸಿ ಊಟ ಮಾಡುವುದು ರೂಢಿಯಲ್ಲಿ ಬಂದಿದೆ.
-ಸಂದೀಪ ಯು.ಎಲ್.,ಪಬ್ಲಿಕ್ ನೆಕ್ಸ್ಟ್ ಸೊರಬ
“ಈ ಹಬ್ಬದಂದು ಮಣ್ಣಿನ ಜೋಡಿ ಎತ್ತುಗಳನ್ನು ಮಾಡಿ, ಅವುಗಳನ್ನುಮನೆಯ ದೇವರ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ.ಪುನರ್ವಸು ಮಳೆ ಪ್ರಾರಂಭವಾಗುವ ಹೊತ್ತಿಗೆ ಬಿತ್ತನೆ ಆಗಿ, ನಾಟಿ ಕೂಡ ಮುಗಿದಿರುತ್ತದೆ, ಉತ್ತಮ ಮಳೆ, ಬೆಳೆಯಾಗಿ ರೈತರ ಬದುಕು ಹಸನಾಗಿ ನಾಡಿಗೆ ಒಳಿತಾಗಲಿ ಎಂದು ರೈತರು ಮಣ್ಣೆತ್ತಿನ ಅಮವಾಸ್ಯೆ ಆಚರಿಸುತ್ತಾರೆ.
-ಶೈಲಜಾ ಶಿವಯೋಗಿ ಸ್ವಾಮಿ, ಗೃಹಿಣಿ