ಭಣಗುಟ್ಟುತ್ತಿರುವ ಮನೆ,ಮಂದಿರಗಳು ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ.
ಹೆಚ್ಚಿನ ಕುಟುಂಬಗಳಲ್ಲಿ ಗಂಡೋ-ಹೆಣ್ಣೋ ಎಂಬಂತೆ ಒಂದೇ ಮಗು.
ಎಲ್ಲರಿಗೂ ಬೆಂಗಳೂರಿನಲ್ಲಿ ಕೆಲಸ.
ಹೆಂಡತಿ, ಮಗುವಿನೊಂದಿಗೆ ಅಲ್ಲೇ ಸಂಸಾರ.
ದೊಡ್ಡ ಆಸ್ತಿ, ದೊಡ್ಡ ಮನೆ ನೋಡಿಕೊಂಡು 60-70 ದಾಟಿರುವ ವೃದ್ಧ ಅಪ್ಪ-ಅಮ್ಮಂದಿರು ಮಾತ್ರ ಹಳ್ಳಿಯಲ್ಲಿದ್ದಾರೆ.
ಅವರಿಗೆ ಕೂಡುವುದಿಲ್ಲ. ಕಲಸ ಮಾಡಲು ಶಕ್ತಿಯಿಲ್ಲ.
ಕೃಷಿ-ಬೇಸಾಯ, ತೋಟ, ಗದ್ದೆ ಎಲ್ಲಾ ಹಾಳು.
ತರಕಾರಿಗಳು ಬೆಳೆಯುತ್ತಿಲ್ಲ.
ಹಪ್ಪಳ-ಉಪ್ಪಿನಕಾಯಿ, ಗುಜ್ಜೆಗಟ್ಟಿ, ಮೂಡೆ ಮಾಡುವವರಿಲ್ಲ.
ಎಲ್ಲರೂ ಪೇಟೆಯಲ್ಲಿರುವ ಕಾರಣ, ಹಳ್ಳಿಯ ಶಾಲೆಗಳಲ್ಲಿ ಮಕ್ಕಳಿಲ್ಲ.
ದೈವ ಕೋಲ, ಮದುವೆ-ಉಪನಯನಕ್ಕೆ ಪುರ್ರೆಂದು ಎಲ್ಲರೂ ತಮ್ಮ ತಮ್ಮ ವಾಹನಗಳಲ್ಲಿ ಹಾರಿ ಬರುತ್ತಾರೆ. ಊಟ ಮಾಡಿ ಕೈ ತೊಳೆದು ತಿರುಗಿ ನೋಡಿದಾಗ ಮತ್ತೆ ಬೆಂಗಳೂರಿಗೆ ಹೊರಡಲು ಕಾರು ಸ್ಟಾರ್ಟ್ ಆಗಿದೆ.
ಹೆತ್ತ ಕರುಳಿಗೆ ಮಕ್ಕಳು,ಮೊಮ್ಮಕ್ಕಳೊಡನೆ ಸಮಯ ಕಳೆಯುವ, ಮುದ್ದಿಸುವ, ಆಲಿಂಗಿಸುವ ಅವಕಾಶವಿಲ್ಲ, ಉದ್ಯೋಗದಲ್ಲಿರುವ ಮಕ್ಕಳಿಗೆ ಸ್ವಲ್ಪವೂ ಸಮಯವಿಲ್ಲ.
ಹಳ್ಳಿಯ ಶಾಲೆಗಳಲ್ಲಿ ಸ್ಕೂಲ್ ಡೇ ಗೆ ಜನರಿಲ್ಲ. ರಾಮನವಮಿಯಾಗಲಿ, ದೇವಸ್ಥಾನಗಳ ಪೂಜೆಗಾಗಲೀ, ಸ್ವಾತಂತ್ರ್ಯ ದಿನಾಚರಣೆಯಾಗಲಿ, ಮೆರವಣಿಗೆ ಹೋಗಲು, ಆನಂದಿಸಲು ಹಳ್ಳಿಗಳಲ್ಲಿ ಜನರೂ ಇಲ್ಲ, ಮಕ್ಕಳೂ ಇಲ್ಲ.
ವೃದ್ಧ ಅಜ್ಜಂದಿರಿಗೆ ತಮ್ಮ ಕೆಲಸ ಕಾರ್ಯ ಮಾಡಲು, ನಡೆಯಲು ಆಗುವುದಿಲ್ಲ.
ಒಳ್ಳೆಯ ಡಾಕ್ಟರನ್ನು ನೋಡಿ, ಒಳ್ಳೆಯ ಚಿಕಿತ್ಸೆ ಪಡೆಯಿರಿ.. ಎಂದು ಸಾವಿರಗಟ್ಟಲೆ ಹಣ ಕಳಿಸುತ್ತಾರೆ ಬೆಂಗಳೂರಿನಲ್ಲಿ ಸಂಸಾರ ಹೂಡಿರುವ ಮಕ್ಕಳು, ಮೊಮ್ಮಕ್ಕಳು.
ಸಂಬಂಧಗಳನ್ನು, ಪ್ರೀತಿ-ವಾತ್ಸಲ್ಯಗಳನ್ನು ಮೀರಿದ ಔಷಧಿಯಿಲ್ಲ ಎಂದು ಇವರಿಗೆ ಅರ್ಥ ಮಾಡಿಸಿ, ತಿಳಿಸಿ ಹೇಳುವವರು ಯಾರು ಮತ್ತು ಹೇಗೆ..??
ಇನ್ನೊಂದೆಡೆ ವಯಸ್ಸು ಮೀರಿ ಮುದುಕರಾಗುತ್ತಿದ್ದರೂ.. ಹುಡುಗಿ ಸಿಗದೆ ಬಾಕಿ ಉಳಿದಿರುವ ಅಣ್ಣ-ತಮ್ಮಂದಿರ ಮಾನಸಿಕ ವ್ಯಥೆ, ಅವರಿಗಾಗಿ ಕೊರಗುತ್ತಿರುವ ತಂದೆ-ತಾಯಿಯರು.
ಮನೆಗೊಂದೇ ಮಗು ಸಾಕು ಎಂಬ ಸ್ವಾರ್ಥದಿಂದಾಗಿ
ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ, ಮಾವ, ಕಸಿನ್ಸ್, ಅತ್ತಿಗೆ, ಮೈದುನ ಎಂಬ ಸಂಬಂಧಗಳು ಇಲ್ಲವಾಗುತ್ತಿವೆ.
ಹಳ್ಳಿಗಳ, ಬ್ರಾಹ್ಮಣ ಸಮುದಾಯ
ಕುಸಿದು ಹೋಗುತ್ತಿದೆ.
ಹಣ ಗಳಿಸುವ ರೇಸ್ ನಲ್ಲಿ ಬೆಂಗಳೂರಿನಲ್ಲಿ ಹೆಣಗಾಡುತ್ತಿರುವ ಪೀಳಿಗೆಯವರೂ ಸುಖದಲ್ಲಿಲ್ಲ. ಅತ್ತ ಹಳ್ಳಿಗಳಲ್ಲಿ ಅವರ ತಂದೆ ತಾಯಿಗಳೂ ಸುಖದಲ್ಲಿಲ್ಲ.
ಇದಕ್ಕೆ ಪರಿಹಾರವೇನು?
ದಯವಿಟ್ಟು ಯೋಚಿಸಿ..
ಲೇಖಕರು: ಕುಮಾರ ಸುಬ್ರಹ್ಮಣ್ಯ, ಉಬರು.