ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಯಕ್ಷಗಾನದಲ್ಲಿ ಜಾತಿ ನಿಂದನೆಗೆ ಬೀಳಲಿ ಕಡಿವಾಣ

ಬೆಂಗಳೂರು:ಎಚ್ಚರ, ಕಲಾವಿದರಿಗೆ ಬೇಕಿದೆ ಅರಿವು

ಜಾತಿ ಮತ್ತು ರಾಜಕೀಯ ನಿಂದನೆಗಾಗಿ ಇತ್ತೀಚೆಗೆ ಕೆಲವು ಕಲಾವಿದರ ಮೇಲೆ ಕೇಸು ದಾಖಲಾಗುವುದು, ಪತ್ರಿಕಾಗೋಷ್ಠಿಯಲ್ಲಿ ಖಂಡಿಸುವುದು,ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸುವ ಘಟನೆಗಳು ನಡೆಯುತ್ತಿವೆ. ಕೆಲ‌ ಸಂದರ್ಭದಲ್ಲಿ ಕಲೆ ಹಾಗೂ ಕಲಾವಿದರ ಮೇಲಿನ ಅಭಿಮಾನದಿಂದ ನಾನು ಕಲಾವಿದರಿಗೆ ಪರಿಹಾರದ ಸಲಹೆ ನೀಡಿದ್ದೂ ಇದೆ. ಹಾಗಿದ್ದರೂ ಮುಂದಿನ ದಿನಗಳಲ್ಲಿ ಜಾತಿ ನಿಂದನೆ, ವೈಯಕ್ತಿಕ ನಿಂದನೆ,ರಾಜಕೀಯ ನಿಂದನೆಗೆ ಇನ್ನಷ್ಟು ಬೆಲೆ ತೆರಬೇಕಾದ ಪರಿಸ್ಥಿತಿ ಬರಬಹುದು.

ದೇವಿ ಮಹಾತ್ಮೆ ಪ್ರಸಂಗ:
ಮಾಲಿನಿ ವಿವಾಹ ಸಂದರ್ಭ ವಧುವಿನ ಕಡೆಯಿಂದ ಪುರೋಹಿತರಾಗಿ ಬರುವ ಬಹುತೇಕ ಕಲಾವಿದರು ಆ ವಿಕಾರವಾಗಿ, ವಿಚಿತ್ರವಾಗಿ ನಟಿಸುತ್ತಾರೆ. ಅಂತೆಯೇ ದಕ್ಷಯಜ್ಞ ಪ್ರಸಂಗದಲ್ಲಿ ಬರುವ ಬ್ರಾಹ್ಮಣನ ಪಾತ್ರ, ವೃದ್ಧ ಬ್ರಾಹ್ಮಣನಿಗೆ ಎಳೆಯ ಪ್ರಾಯದ, ಅಂಗವೈಕಲ್ಯದ ಹೆಂಡತಿ, ಐದಾರು ಮಕ್ಕಳು. ಭೀಷ್ಮವಿಜಯದಲ್ಲಿ ಬರುವ ವೃದ್ಧ ಬ್ರಾಹ್ಮಣ, ಕಾರ್ತವೀರ್ಯಾರ್ಜುನದ ಪರಶುರಾಮನ ಸಹೋದರರು, ಸತ್ಯಹರಿಶ್ಚಂದ್ರ ಪ್ರಸಂಗದಲ್ಲಿ ಬರುವ ನೃತ್ಯಗಾತಿಯರು, ಬೇರೆ ಬೇರೆ ಪ್ರಸಂಗ, ಕ್ಷೇತ್ರ ಮಹಾತ್ಮೆಗಳಲ್ಲಿ ಬರುವ ಬೇರೆ ಬೇರೆ ಸಮುದಾಯವನ್ನು ಪ್ರತಿಬಿಂಬಿಸುವ ಪಾತ್ರಗಳನ್ನು ಗೌರವದಿಂದ ಮಾಡಬೇಕು. ಒಂದು ಸಮುದಾಯವನ್ನು ಅವಹೇಳನ ಮಾಡಲೆಂದೇ ಪಾತ್ರ ಮಾಡಿದಂತೆ ವೈರುಧ್ಯಗಳನ್ನು ಆವಾಹಿಸಿಕೊಳ್ಳುತ್ತಾರೆ. ಯಾವುದೇ ಸಮುದಾಯಕ್ಕೆ ನೋವಾಗುವಂತೆ, ಕೀಳಾಗಿ ಕಾಣುವಂತೆ ಬಿಂಬಿಸಬಾರದು. ಕ್ಷತ್ರಿಯ, ವೈಶ್ಯ, ಶೂದ್ರ, ಬ್ರಾಹ್ಮಣ ಇತ್ಯಾದಿ ವರ್ಣಾಶ್ರಮಗಳು ಆ ಕಾಲದ ನಡವಳಿಕೆಗಳು. ಅದು ಜಾತಿ ವ್ಯವಸ್ಥೆ ಅಲ್ಲ ಎನ್ನುವ ಪರಿಜ್ಞಾನ ಕಲಾವಿದನಿಗೆ ಇರಬೇಕು. ಈಗಿನ ಕಾಲದ ಜಾತಿ ವ್ಯವಸ್ಥೆಯಂತೆ ಪುರಾಣ ಕಾಲದ ಪದ್ಧತಿಗಳು ಅಲ್ಲ ಎನ್ನುವುದು ಸ್ಪಷ್ಟ ಇರಬೇಕು. ಅದನ್ನು ಈ ಕಾಲಕ್ಕೆ ಹೋಲಿಸುವುದೇ ಅಸಂಬದ್ಧ. ಯಾವುದೇ ಜಾತಿ ಮೇಲು ಅಥವಾ ಕೀಳು ಎಂಬ ಅಭಿದಾನ ಅಂಟಿಸಿಕೊಂಡಿಲ್ಲ. ಯಾವುದೋ ವ್ಯವಸ್ಥೆ ಒಂದು ಕಾಲದಲ್ಲಿ ಅಂತಹ ತಾರತಮ್ಯ ಮಾಡಿದ್ದಿರಬಹುದು. ಆದರೆ ಸಮಾಜ ಬದಲಾಗಿದೆ, ಕಾನೂನು ಬದಲಾಗಿದೆ. ಅಂತಹ ನಿರಾಕರಣೆ, ನಿಂದನೆ, ಭರ್ತ್ಸನೆ ಮಾಡಬಾರದು ಎಂಬ ನಿಯಮಾವಳಿ ಸಂವಿಧಾನಬದ್ಧವಾಗಿ ಬಂದಿರುವಾಗ ಒಂದು ಸಮುದಾಯದ ನಿಂದನೆ, ಟೀಕೆ, ಅಪಹಾಸ್ಯ ಅಗತ್ಯವೇ?

ಅಪಹಾಸ್ಯ ಸಲ್ಲ:
ಹಾಸ್ಯದ ಹೆಸರಿನಲ್ಲಿ ಅಪಹಾಸ್ಯ ಸಲ್ಲದು. ಕಲಾವಿದ ಹಾಸ್ಯ ರಸದ ಪ್ರತಿಪಾದನೆ ಮಾಡಬೇಕು. ಅಭಿವ್ಯಕ್ತಿ ಹಾಗೂ ಅಭಿನಯದ ಮೂಲಕವೂ ಹಾಸ್ಯವನ್ನು ಸುಧಾರಿಸಬಹುದು. ಅರ್ಥಗಾರಿಕೆಯಲ್ಲೂ ಚೌಕಟ್ಟು ಮೀರದೇ ಹಾಸ್ಯವನ್ನು ಉಣಬಡಿಸಬಹುದು. ನವರಸ ಪ್ರಧಾನವಾದ ಕಲೆಯಲ್ಲಿ ಹಾಸ್ಯವೂ ಒಂದು ವಿನಾ ಹಾಸ್ಯವೊಂದೇ ಅಲ್ಲ. ಹಾಗಾಗಿ ಹಾಸ್ಯಗಾರರಿಗೂ ಮಿತಿಗಳಿರುತ್ತವೆ. ಆ ಮಿತಿಯಲ್ಲೇ ಪ್ರಸ್ತುತ ಪಡಿಸಬೇಕಾಗುತ್ತದೆ. ಇತರ ಪಾತ್ರಗಳಿಗೆ ಹೋಲಿಸಿದರೆ ಒಂದು ಹಂತದವರೆಗೆ ಹಾಸ್ಯ ಪಾತ್ರಕ್ಕೆ ಸ್ವಾತಂತ್ರ್ಯ ಇದೆಯಾದರೂ ಅದು ಅಸಂಬದ್ಧಕ್ಕೆ ನೀಡಿದ ಪರವಾನಿಗೆ ಖಂಡಿತ ಅಲ್ಲ. ಸಮುದಾಯದ ನಿಂದನೆ ಹಾಗೂ ವೈಕಲ್ಯದ ನಿಂದನೆ ಎರಡೂ ಶಿಕ್ಷಾರ್ಹ ಅಪರಾಧ. ಜಾತಿ, ಧರ್ಮ, ವರ್ಣ ಇತ್ಯಾದಿ ನಾವು ಬಯಸಿ ಬರುವುದಲ್ಲ. ಅರ್ಜಿ ಹಾಕಿ ಪಡೆಯುವುದಲ್ಲ. ನಮಗೆ ಬೇಕಾದ್ದನ್ನು ಆರಿಸಿ ಕಡೆದು ಕೂರಿಸಿ ಸಿದ್ಧಪಡಿಸುವುದಲ್ಲ ಬೇಕಾಗಿದೆಯೇ?ಯಾವುದೇ ಸಮಯದಾಯವನ್ನು ಬಿಂಬಿಸುವ ಪಾತ್ರ ಇರಲಿ, ಇತರ ಪಾತ್ರವೇ ಆಗಲಿ ಅಲ್ಲಿ ಅಶ್ಲೀಲತೆಯ ಅಗತ್ಯವಿಲ್ಲ. ವರ್ತಮಾನದ ರಾಜಕೀಯ ಮಾತುಗಾರಿಕೆ ತುರುಕಬೇಕಾದ ಅನಿವಾರ್ಯ ಇಲ್ಲ. ಅಧ್ಯಯನ ಮಾಡಿದರೆ ಪುರಾಣದಲ್ಲಿ ಬೇಕಾದಷ್ಟು ವಿಷಯಗಳಿವೆ. ಪ್ರೇಕ್ಷಕರು ಅಂದಂದಿನ ಪತ್ರಿಕೆ ಓದಿ, ಟಿವಿ ನೋಡಿ, ಸಾಮಾಜಿಕ ಜಾಲತಾಣದಲ್ಲಿ ಈಜಾಡಿಯೇ ಯಕ್ಷಗಾನ ವೀಕ್ಷಣೆಗೆ ಬಂದಿರುತ್ತಾರೆ. ಹಾಗಿರುವಾಗ ಮತ್ತೆ ಮತ್ತೆ ಅದದೇ ಘಟನೆಗಳನ್ನು ಯಾವುದೋ ಒಂದು ಪಕ್ಷ, ವ್ಯಕ್ತಿಯ ಪರವಾಗಿ ಪೂಜೆ ಮಾಡಬೇಕಾದ ಅಗತ್ಯವಿಲ್ಲ. ಅದು ಪುರಾಣ ಪಾತ್ರಗಳ ಹೊಣೆಗಾರಿಕೆಯೂ ಅಲ್ಲ. ಪುರಾಣ ಪಾತ್ರಗಳು ನೀಡಬೇಕಾದ ಸಂದೇಶಗಳು ಏನು ಎಂಬುದು ಪ್ರಸಂಗದಲ್ಲಿ, ಹಿರಿಯ ಕಲಾವಿದರ ಮೂಲಕ ಮೊದಲೇ ನಿಘಂಟಾಗಿದೆ. ಅದನ್ನಷ್ಟೇ ಪ್ರಸ್ತುತ ಪಡಿಸಿದರೂ ಸಾಕು, ಅದರಲ್ಲಿ ಹೊಸತನ ತಂದರೂ ಸಾಕು. ಅಭಿಮಾನಿಗಳು ಇಷ್ಟಪಡುತ್ತಾರೆ ಎಂದು ಪಾತ್ರದಲ್ಲಿ ಅಶ್ಲೀಲತೆಯ ಸೋಂಕು ಅಂಟಿಸಿ, ಚೌಕಿಯಲ್ಲಿ, ಯಾವುದೋ ಊರಿನಲ್ಲಿ ನಡೆಯುವ ಘಟನೆಯನ್ನೇ ವಿವರಿಸಿ ವಿದ್ವಾಂಸನಾಗಬೇಕೆಂಬ ಹಪಹಪಿ ಬೇಡ. ದ್ವಂದ್ವಾರ್ಥದ ಅನಿವಾರ್ಯ ಕಲಾವಿದನಿಗೆ ಇರಬಹುದೇ ವಿನಾ ಪ್ರೇಕ್ಷಕರಿಗೆ ಅವಶ್ಯವಿಲ್ಲ.

ಪಾಠ ಕಲಿಯಬೇಕು:
ನಾವು ಇತಿಹಾಸದಿಂದ ಪಾಠ ಕಲಿಯಬೇಕು. ಬದುಕಿನಲ್ಲಿ ಪಾಠ ಕಲಿಯಲು ಶುಲ್ಕ ತೆರಬೇಕಿಲ್ಲ ಆದರೆ ಪಾಠ ಕಲಿಯದಿದ್ದರೆ ಶುಲ್ಕ ತೆರಬೇಕಾಗುತ್ತದೆ ಎನ್ನುವುದು ಸಟಿಕ ಸತ್ಯ. ಬಪ್ಪನಾಡು ಕ್ಷೇತ್ರ ಮಹಾತ್ಮೆಯಂತಹ ಪ್ರಸಂಗದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರು ಬಪ್ಪ ಪಾತ್ರವನ್ನು ಮಾಡಿದ್ದನ್ನು ಮುಸ್ಲಿಂ ಸಮುದಾಯದವರು ಖುದ್ದು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದು ಯಕ್ಷಗಾನದ ಇತಿಹಾಸದಲ್ಲಿ ಪಠ್ಯವಾಗಬೇಕಾದ ಘಟನೆ. ಅಂತೆಯೇ ಬೇರೆ ಬೇರೆ ಪ್ರಸಂಗದಲ್ಲಿ ಕೆಲವು ಕಲಾವಿದರು ನಿರ್ದಿಷ್ಟ ಸಮುದಾಯವನ್ನು ನಿಂದಿಸಿ ಕೋರ್ಟು ಮೆಟ್ಟಿಲೇರಬೇಕಾಗಿ ಬಂದುದು, ಪೊಲೀಸ್ ಠಾಣೆಗೆ ಅಲೆಯಬೇಕಾಗಿ ಬಂದುದೂ ಉದಾಹರಣೆಯಾಗಿ ಇದೆ. ಮುಜರಾಯಿ ಇಲಾಖೆಗೆ ಸಂಬಂಧ ಪಟ್ಟ ದೇವಸ್ಥಾನವೊಂದರ ಮೇಳದಲ್ಲಿ ನಿರ್ದಿಷ್ಟ ಸಮುದಾಯದವರು ಗೆಜ್ಜೆ ಕಟ್ಟುವಂತಿಲ್ಲ ಎಂಬ ಕಟ್ಟುಕಟ್ಟಳೆ ಹೇಳಿದಾಗ ನಡೆದ ಪ್ರತಿಭಟನೆ, ಕೇಸು,ನ್ಯಾಯಾಲಯದ ತೀರ್ಮಾನ ಎಲ್ಲವೂ ಅನೇಕರಿಗೆ ತಿಳಿದೇ ಇದೆ. ಇದೇ ರೀತಿ ಚೌಕಿಯಲ್ಲಿ ತರತಮ ನಡೆದಾಗ ಅನೇಕ ಕಲಾವಿದರು ಅವರದ್ದೇ ರೀತಿಯಲ್ಲಿ ಪ್ರತಿಭಟಿಸಿದ ಘಟನೆಗಳೂ ಅಲ್ಲೊಂದು ಇಲ್ಲೊಂದು ನಡೆದಿವೆ.

ಪೊಳ್ಳು ವಾದ:
ಕಥೆಯಲ್ಲಿ ಹಾಗೆ ಇದೆ, ಕಥೆಗೆ ಬೇಕಾಗಿ ಹಾಗೆ ಮಾಡಲಾಗುತ್ತದೆ ಎಂಬ ವಾದದಲ್ಲೂ ಹುರುಳಿಲ್ಲ. ಕಥೆಯಲ್ಲಿ ಹಾಗಿದೆ, ಕವಿ ಹಾಗೆ ಬರೆದಿದ್ದಾರೆ ಎಂದು ವಾಕ್ ತೂಣೀರ ಬಿಡುವವರು ಪ್ರಸಂಗದ ತಮ್ಮ ಪಾತ್ರದ ಅಭಿವ್ಯಕ್ತಿಯ ಲ್ಲಿ ಕಥೆ ಹಾಗೂ ಕವಿಗೆ ನಿಷ್ಠರಾಗಿ ಪ್ರಸ್ತುತ ಪಡಿಸುತ್ತಾರೆ ಎನ್ನುವುದು ಕೂಡಾ ಮುಖ್ಯವಾಗುತ್ತದೆ. ಒಂದು ವರ್ಗವನ್ನು ನಿಂದಿಸುವಾಗ ಮಾತ್ರ ಪರಕಾಯ ಪ್ರವೇಶ ಮಾಡುವ ಪಾತ್ರಧಾರಿಗಳೂ ಇದ್ದಾರೆ. ಕಥೆ ಹಾಗೂ ಕವಿಯನ್ನೇ ಪ್ರಧಾನವಾಗಿಸುವುದಾದರೆ; ಕವಿ ಪ್ರಸಂಗವೊಂದರಲ್ಲಿ 350 ರಷ್ಟು ಪದ್ಯಗಳನ್ನು ರಚಿಸಿರುತ್ತಾರೆ. 125-175 ಪದ್ಯಗಳಲ್ಲಿ ಬೆಳಗು ಮಾಡಬಹುದು.ಕಾಲಮಿತಿಯಾದರೆ ಇನ್ನೂ ಕಡಿಮೆ ಹಾಡುಗಳಲ್ಲಿ ಪ್ರಸಂಗ ಮುಗಿಸಬಹುದು. ಆಗ ಅರೆ ಪ್ರತಿಶತ ಹಾಡುಗಳನ್ನು ಬಳಸಬೇಕಾಗುತ್ತದೆ. ಉಳಿದವುಗಳನ್ನು ಕೈ ಬಿಡಬೇಕಾಗುತ್ತದೆ. ಕಲಾವಿದರಿಗೆ ಅವಸರ ಇದ್ದರೆ, ಬೇಗ ಪ್ರಸಂಗ ಮುಗಿಸುವ ಅನಿವಾರ್ಯ ಇದ್ದರೆ ಪದ್ಯಗಳನ್ನು ಹಾರಿಸಲಾಗುತ್ತದೆ. ಕಡಿಮೆ ಸಂಖ್ಯೆಯ ಕಲಾವಿದರನ್ನು ಒಳಗೊಂಡ ಪ್ರದರ್ಶನವಾದರೆ ಪಾತ್ರಗಳನ್ನೇ ಕೈ ಬಿಡಲಾಗುತ್ತದೆ. ಇದು ಈಗ ಅಲ್ಲ. ಹಿಂದಿನಿಂದಲೂ ನಡೆದು ಬಂದ ರಂಗನಡೆಯ ಬದಲಾವಣೆ. ಹಾಗಾಗಿ ಕಥೆಗೆ ಬೇಕಾಗಿ, ಕವಿಯ ಪ್ರಸಂಗ ದ ಪದ್ಯಕ್ಕೆ ಬೇಕಾಗಿ ಎಂಬಂತಹ ನೇತ್ಯಾತ್ಮಕವಾದ ವಾದವನ್ನು ಮಂಡಿಸುವುದರಿಂದ ಕಲಾವಿದರ ಘನತೆಗೇ ಕುಂದುಂಟಾಗುತ್ತದೆ ವಿನಾ ಅನ್ಯವಲ್ಲ. ಕಲಾವಿದರ ಮೇಲಿನ ಅಭಿಮಾನ ಅಂತಹ ಸಮುದಾಯದವರಿಗೆ ಕಡಿಮೆಯಾಗುತ್ತದೆ. ಏಕೆಂದರೆ ಕಲೆಗೆ ಹೇಗೆ ಜಾತಿಯ ವ್ಯತ್ಯಾಸ ಇಲ್ಲವೋ ಕಲಾವಿದರನ್ನೂ ಸಮಾಜ ಹಾಗೇ ಪರಿಗಣಿಸುತ್ತದೆ. ತೀರಾ ಇತ್ತೀಚೆಗೆ ಕಲಾವಿದರ ಜಾತಿ ಅಭಿಮಾನ ತಂಡಗಳು ಹೆಚ್ಚಾದುದು ವಿನಾ ಹಿಂದಿನ ಕಾಲದಲ್ಲಿ ಇರಲಿಲ್ಲ. ಹಾಗಂತ ಒಂದು ಸಮುದಾಯದವರು ಇತರ ಸಮುದಾಯದವರನ್ನು ತುಳಿಯುವುದು ಇದ್ದೇ ಇತ್ತು. ಕಲೆ ಹಾಗೂ ಪ್ರತಿಭೆಯೇ ಅಂತಹ ತುಳಿಯುವಿಕೆಯನ್ನು ಹೊಸಕಿ ಹಾಕಿತ್ತು ಎಂದರೆ ತಪ್ಪಲ್ಲ. ಪ್ರತಿಭಾವಂತ ಕಲಾವಿದ ಎಂದು ಯಾವುದೇ ಸಮುದಾಯದವನಾದರೂ ಸಮಾಜ ಆತನನ್ನು ಸ್ವೀಕರಿಸಿದೆ.

ಕಡಿವಾಣ ಅಗತ್ಯ:
ಕಟೀಲು ಮೇಳಗಳಲ್ಲಿ ದೇವಿಮಹಾತ್ಮೆ ಪ್ರಸಂಗದಲ್ಲಿ ಅವಶ್ಯವಲ್ಲದ ಮಾಲಿನಿ ವಿವಾಹ ಸನ್ನಿವೇಶ ಕೈ ಬಿಡಲಾಗಿದೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಕೆಲವು ಸಮುದಾಯವನ್ನು ಬಿಂಬಿಸುವ ವೇಷಗಳನ್ನು ಕೈ ಬಿಡಲಾಗಿದೆ. ಸತ್ಯ ಹರಿಶ್ಚಂದ್ರ ಪ್ರಸಂಗದಲ್ಲಿ ಹರಿಶ್ಚಂದ್ರನ ಮುಂದೆ ಕುಣಿಯುವ ವರ್ಗದ ಹೆಸರನ್ನು ನೃತ್ಯಗಾತಿಯರು ಎಂದು ಬದಲಿಸಲಾಗಿದೆ. ಹಾಗೆಯೇ ಅನೇಕ ಪ್ರಸಂಗದ ಸಾಹಿತ್ಯದಲ್ಲಿ ಬರುವ ನಿಂದನಾತ್ಮಕ ಪದಗಳನ್ನು ಕೈ ಬಿಟ್ಟು ಹಾಡಲಾಗುತ್ತದೆ. ಯಾವುದೋ ಸಂದರ್ಭದಲ್ಲಿ ಕವಿ ಬರೆದಿದ್ದರೂ ಈಗಿನ ಕಾಲದಲ್ಲಿ ಅದನ್ನೇ ಪುನರಪಿ ಹೇಳುವುದು ಸರಿಯಲ್ಲ. ಆಗಿನ ಕಾಲದ ಕಾನೂನುಗಳಿಗೂ ಈಗಿನ ಮಾರ್ಪಾಟಾದ ಕಾನೂನಿಗೂ ಅಂತರವಿದೆ. ಆಗ ಯಕ್ಷಗಾನದ ಮೇಲೆ ಹಾಗೂ ಕಲಾವಿದರ ಮೇಲಿದ್ದ ಗೌರವದಿಂದಲೂ, ಕಲೆ ಎಂಬ ಅಭಿಮಾನದಿಂದಲೂ ಸಹಿಸಿರಬಹುದು. ದೂರು ದಾಖಲಿಸದೇ ಇದ್ದಿರಬಹುದು. ಈಗ ಹಾಗಲ್ಲ. ಸಾಮಾಜಿಕ ಜಾಲತಾಣಗಳಿಂದಾಗಿ ಭರಪೂರ ಸಾಕ್ಷ್ಯ ದೊರೆಯುತ್ತದೆ. ಕಲೆಯ ಮೇಲೆ ಅಭಿಮಾನವೇ ಇಲ್ಲದವರು ಎಲ್ಲೂ ಕುಳಿತು ಕೇಸು ದಾಖಲಿಸಲೂ ಸಾಧ್ಯವಿದೆ. ಕಲೆಯ ಮೇಲೆ ಅಭಿಮಾನ ಇದ್ದರೂ ಜಾತಿನಿಂದನೆ ಸಹಿಸಿಕೊಳ್ಳಲು ಸಾಧ್ಯವಾಗದೇ ಕೇಸು ದಾಖಲಿಸಲೂಬಹುದು. ಹಾಗಾಗಿ ಇಂತಹ ದೃಶ್ಯಗಳಿಗೆ, ಸಂಭಾಷಣೆಗಳಿಗೆ ಕಡಿವಾಣ ತೀರಾ ಅಗತ್ಯ.

ಕಾನೂನು ಕ್ರಮ:
ಭಾರತದಲ್ಲಿ, ಜಾತಿವಾದ ಮತ್ತು ಜಾತಿ ಟೀಕೆಗಳ ವಿರುದ್ಧದ ಕಾನೂನು ಕ್ರಮಗಳನ್ನು ಪ್ರಾಥಮಿಕವಾಗಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯಿದೆ, 1989 ಎಸ್‌ಸಿ/ಎಸ್‌ಟಿ ಕಾಯಿದೆ) ಮೂಲಕ ನಿಯಂತ್ರಿಸಲಾಗುತ್ತದೆ. ಈ ಕಾಯಿದೆಯು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ ಮತ್ತು ಅಪರಾಧಗಳಿಗೆ ದಂಡದ ನಿಬಂಧನೆಗಳನ್ನು ಹೊಂದಿದೆ.
ತಾರತಮ್ಯ, ಕಿರುಕುಳ, ಹಿಂಸೆ, ಬೆದರಿಕೆ, ದ್ವೇಷದ ಮಾತು ಶಿಕ್ಷಾರ್ಹ ಅಪರಾಧ. ಎಸ್‌ಸಿ/ಎಸ್‌ಟಿ ಕಾಯಿದೆಯಡಿಯಲ್ಲಿ ಸೆರೆವಾಸ (5 ವರ್ಷಗಳವರೆಗೆ), ಜೈಲು ಶಿಕ್ಷೆ ಮತ್ತು ದಂಡ ಎರಡೂ ಶಿಕ್ಷೆಗಳು ಸೇರಿವೆ. ಹೆಚ್ಚುವರಿಯಾಗಿ, ಭಾರತೀಯ ದಂಡ ಸಂಹಿತೆಯಲ್ಲಿ ಜಾತಿವಾದ ಮತ್ತು ಜಾತಿನಿಂದನೆಗೆ ಸಂಬಂಧಪಟ್ಟಂತೆ ಅಪರಾಧಗಳಿಗೂ ಶಿಕ್ಷೆ ಇದೆ. ಐಪಿಸಿ ಸೆಕ್ಷನ್ 153ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು), ಸೆಕ್ಷನ್ 503 (ಅಪರಾಧ ಬೆದರಿಕೆ). ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯಿದೆ 1955 ಮತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆಗಟ್ಟುವಿಕೆ) ನಿಯಮಗಳು ೧೯೯೫, ಜಾತಿವಾದ ಮತ್ತು ಜಾತಿ ಟೀಕೆಗೆ ಬಲಿಯಾದವರಿಗೆ ಕಾನೂನು ಆಶ್ರಯವನ್ನು ಒದಗಿಸುತ್ತದೆ. ಎಸ್‌ಸಿ/ಎಸ್‌ಟಿ ಕಾಯಿದೆಯನ್ನು ಹೊರತುಪಡಿಸಿ, ಭಾರತದಲ್ಲಿನ ಇತರ ಜಾತಿಗಳಿಗೆ ಕೂಡಾ ಕಾನೂನು ಆಯ್ಕೆಗಳನ್ನು ನೀಡಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 153ಎ, 295ಎ, 503, ಮತ್ತು 506 ದ್ವೇಷವನ್ನು ಉತ್ತೇಜಿಸುವುದು, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು, ಕ್ರಿಮಿನಲ್ ಬೆದರಿಕೆ ಮತ್ತು ಜಾತಿಯ ಹೆಸರಿನಲ್ಲಿ ಮಾಡಿದ ಅಪರಾಧಗಳಿಗೆ ಶಿಕ್ಷೆಯಂತಹ ಅಪರಾಧಗಳಿಗೆ ಶಿಕ್ಷೆ ಪ್ರಕಟಿಸಿದೆ. ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನದಂತಹ ಕೆಲವು ರಾಜ್ಯಗಳು ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳವನ್ನು ಪರಿಹರಿಸಲು ತಮ್ಮದೇ ಆದ ಕಾನೂನುಗಳನ್ನು ಜಾರಿಗೆ ತಂದಿವೆ.

ಸಮಾನತೆ ಕಾಯಿದೆ 2019 (ಕರಡು): ಜಾತಿಯ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವ ಗುರಿಯನ್ನು ಹೊಂದಿರುವ ಪ್ರಸ್ತಾವಿತ ಶಾಸನ. ಇದೆಲ್ಲಾ ಕಾರಣಗಳಿಂದ ಕಲಾವಿದರು ಎಚ್ಚರದಲ್ಲಿ ಇರುವ ಅವಶ್ಯವಿದೆ. ಮೇಳಗಳ ಸಂಚಾಲಕರು,ಯಜಮಾನರ, ವ್ಯವಸ್ಥಾಪಕರು, ಭಾಗವತರು ಗಮನಿಸಬೇಕಾದ ಅನಿವಾರ್ಯ ಇದೆ. ದಿನ ಇಂದು ಇದ್ದಂತೆ ನಾಳೆ ಇರುವುದಿಲ್ಲ. ಇಲ್ಲಿ ಬೇರೆ ಬೇರೆ ಪ್ರಸಂಗಗಳಲ್ಲಿ ಬರುವ ಬೇರೆ ಬೇರೆ ಪಾತ್ರಗಳ ಪ್ರತ್ಯೇಕ ಉಲ್ಲೇಖ ಮಾಡಿಲ್ಲ. ಇದು ಎಲ್ಲ ಜಾತಿ, ಎಲ್ಲ ಧರ್ಮಗಳ ನಿಂದನೆಗೂ ಕಡಿವಾಣ ಹಾಕಬೇಕಾದ ಅಗತ್ಯವನ್ನಷ್ಟೇ ಪ್ರತಿಪಾದಿಸುವ ಬೇಡಿಕೆ. ಪ್ರಸಂಗದ ಮೂಲಕ ಉತ್ತಮವಾದುದನ್ನೇ ನೀಡಿ ಎನ್ನುವ ಕಳಕಳಿ. ಕಾನೂನಿನ ಕುಣಿಕೆಗೆ ಬೀಳದಿರಿ ಎಂಬ ಬಿನ್ನಹ. ಸಮಾಜವನ್ನು ತಪ್ಪುದಾರಿಗೆ ಎಳೆಯಬೇಡಿ, ಮುಂದಿನ ಪೀಳಿಗೆಗೆ ಯಕ್ಷಗಾನ ಎಂದರೆ ಹೀಗೆ ಎಂಬ ಅಸಮರ್ಪಕ ಸಂದೇಶ ನೀಡುವಂತಾಗುವುದು ಬೇಡ ಎಂಬ ಪ್ರಾರ್ಥನೆ.

ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ